ಗುರುವಾರ , ನವೆಂಬರ್ 14, 2019
22 °C

ಅಗ್ನಿ-2 ಯಶಸ್ವಿ ಉಡಾವಣೆ

Published:
Updated:
ಅಗ್ನಿ-2 ಯಶಸ್ವಿ ಉಡಾವಣೆ

ಭುವನೇಶ್ವರ: ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯದ ಅಗ್ನಿ- 2 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಒಡಿಶಾದ ಕರಾವಳಿ ಜಿಲ್ಲೆ ಭದ್ರಕ್‌ನಲ್ಲಿರುವ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ಕೇಂದ್ರದಲ್ಲಿ ಭಾನುವಾರ ಯಶಸ್ವಿಯಾಗಿ ನಡೆಯಿತು.ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ 20 ಮೀಟರ್ ಉದ್ದದ ದೂರಗಾಮಿ ಅಣ್ವಸ್ತ್ರ ಕ್ಷಿಪಣಿಯನ್ನು ಬೆಳಿಗ್ಗೆ 10.15 ನಿಮಿಷಕ್ಕೆ ಉಡಾವಣಾ ನೆಲೆಯಿಂದ ಹಾರಿಬಿಡಲಾಯಿತು. ಡಿಆರ್‌ಡಿಒದ ವಿಜ್ಞಾನಿಗಳ ತಾಂತ್ರಿಕ ಸಹಯೋಗದಲ್ಲಿ ಭಾರತೀಯ ಸೇನೆ ಅಗ್ನಿ 2 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿ ನಡೆಸಿತು ಎಂದು ಡಿಆರ್‌ಡಿಒ ಉನ್ನತ ಮೂಲಗಳು ತಿಳಿಸಿವೆ.ಕ್ಷಿಪಣಿಯು ಬಂಗಾಳ ಕೊಲ್ಲಿಯಲ್ಲಿ ಬಿಳುವುದಕ್ಕೂ ಮುನ್ನ ನಿಗದಿಪಡಿಸಿದ್ದ ಮಾರ್ಗದಲ್ಲಿ ಕ್ರಮಿಸಲು 9 ನಿಮಿಷ ತೆಗೆದುಕೊಂಡಿತು.

`ಕ್ಷಿಪಣಿ ಕ್ರಮಿಸುವ ಮಾರ್ಗವನ್ನು ಸೂಕ್ಷ್ಮವಾದ ರೆಡಾರ್‌ಗಳು, ದ್ಯುತಿ ವಿದ್ಯುತ್ ಸಾಧನ (ಎಲೆಕ್ಟ್ರೊ ಆಪ್ಟಿಕ್ ಇನ್‌ಸ್ಟ್ರುಮೆಂಟ್) ಮತ್ತು ಒಡಿಶಾದ ಕರಾವಳಿಯಲ್ಲಿ ಒಂದಕ್ಕೂ ಹೆಚ್ಚು ಸ್ಥಳಗಳಲ್ಲಿನ ದೂರಸ್ಥಮಾಪಕ ವೀಕ್ಷಣಾ ಕೇಂದ್ರಗಳಲ್ಲಿ ವೀಕ್ಷಿಸಲಾಯಿತು' ಎಂದು ತಿಳಿಸಿವೆ.ಒಂದು ಸಾವಿರ ಕೆ.ಜಿ ಸಾಮರ್ಥ್ಯದ ಸಾಂಪ್ರದಾಯಿಕ ಮತ್ತು ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಅಗ್ನಿ-2 ಕ್ಷಿಪಣಿಯು 2,000ದಿಂದ 3,000 ಕಿ.ಮೀ ದೂರದಲ್ಲಿ ನಿಗದಿತ ಗುರಿಯನ್ನು ನಾಶಪಡಿಸಬಲ್ಲದು. ಅಗ್ನಿ 2 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಈ ಹಿಂದೆ ಹಲವು ಬಾರಿ ಯಶಸ್ವಿಯಾಗಿ ಮಾಡಲಾಗಿದೆ. ಈಗಾಗಲೇ ಇದನ್ನು ಭಾರತೀಯ ಸೇನೆಗೆ ಸೇರಿಸಲಾಗಿದೆ. ಭಾನುವಾರ ನಡೆದ ಪರೀಕ್ಷೆ ಎಂದಿನಂತೆ ನಡೆಯುವ ಪರೀಕ್ಷೆಯ ಒಂದು ಭಾಗ ಎಂದು ಹೇಳಿದೆ.ಮುನ್ನೆಚ್ಚರಿಕೆ ಕ್ರಮವಾಗಿ ಭದ್ರಕ್,  ಬಾಲಾಸೋರ್ ವ್ಯಾಪ್ತಿಯ ಸಮುದ್ರ ಪ್ರದೇಶದಲ್ಲಿ ಮೀನುಗಾರರು ಸಮುದ್ರಕ್ಕೆ ತೆರಳದಂತೆ ತಿಳಿಸಲಾಗಿತ್ತು.

ಪ್ರತಿಕ್ರಿಯಿಸಿ (+)