ಶನಿವಾರ, ಆಗಸ್ಟ್ 24, 2019
23 °C

ಅಗ್ರಜನ ಒಡ್ಡೋಲಗ

Published:
Updated:

ಚಿತ್ರ ನಿರ್ಮಾಣದ ಆರಂಭದಲ್ಲಿ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಬರುವ ನಿರ್ಮಾಪಕರು ಚಿತ್ರದ ಅಂತಿಮ ಹಂತದ ವೇಳೆಗೆ ಡಕೋಟಾ ಅಂಬಾಸಿಡರ್ ಕಾರಿನಲ್ಲಿ ಇಳಿಯುತ್ತಾರೆ! ನಟ ಜಗ್ಗೇಶ್‌ರ ಈ ಮಾತು ಚಿತ್ರ ನಿರ್ಮಾಣದ ಸವಾಲುಗಳನ್ನು ಪ್ರತಿಫಲಿಸಿತ್ತು.ಚಿತ್ರ ನಿರ್ಮಾಣದ ಸಿಹಿಕಹಿಯ ಅನುಭವಗಳನ್ನು ಹೇಳುತ್ತಲೇ ನಿರ್ಮಾಪಕರಿಂದ ತಮಗಾದ ಎರಡು ಚೆಕ್‌ಬೌನ್ಸ್ ಪ್ರಸಂಗಗಳನ್ನು ಅವರು ನೆನಪು ಮಾಡಿಕೊಂಡರು. ಆದರೆ ನಿರ್ಮಾಪಕ ಗೋವರ್ಧನ್, ಆರಂಭದಲ್ಲಿಯೇ ತಮ್ಮ ಕಾಲ್‌ಶೀಟ್‌ಗೆ ಕಾಸನ್ನು ಕೊಟ್ಟರು ಎನ್ನುತ್ತ `ಅಗ್ರಜ' ಚಿತ್ರದ ಬಗ್ಗೆ ಮಾತು ಹೊರಳಿಸಿದರು ಜಗ್ಗೇಶ್.`ಅಗ್ರಜ'ನ ಚಿತ್ರೀಕರಣ ಪೂರ್ಣಗೊಂಡಿದ್ದು ತಾಂತ್ರಿಕ ಕೆಲಸಗಳು ನಡೆಯುತ್ತಿವೆ. `ಅಗ್ರಜ' ಚಿತ್ರದ ಕಥೆ ಹೊತ್ತು ಜಗ್ಗೇಶ್‌ರ ಮನೆಯಂಗಳಕ್ಕೆ ಗೋವರ್ಧನ್ ತೆರಳಿದಾಗ, `ಅವರಿಂದಲೂ ನನಗೆ ಚೆಕ್‌ಬೌನ್ಸೆ?' ಎನ್ನುವ ಅನುಮಾನ ಜಗ್ಗೇಶರನ್ನು ಕಾಡಿತ್ತಂತೆ. ಆದರೆ, ಗೋವರ್ಧನ್ ಮೊದಲ ಕಂತಿನಲ್ಲೇ 25 ಲಕ್ಷ ರೂಪಾಯಿ ಕೊಟ್ಟು ಅವರ ಅನುಮಾನಕ್ಕೆ ತೆರೆ ಎಳೆದರಂತೆ.ಚಿತ್ರೀಕರಣದ ವೇಳೆಯಲ್ಲೂ ಯಾವ ಕುಂದು ಕೊರತೆ ಬಾರದ ರೀತಿ ನಿರ್ಮಾಪಕರು ನೋಡಿಕೊಂಡರಂತೆ.

`ಪಂಚಿಂಗ್ ಡೈಲಾಗುಗಳು ಚಿತ್ರದ ವಿಶೇಷ. ನಮ್ಮದು ಸಂದೇಶಾತ್ಮಕ ಚಿತ್ರವಾದರೂ ಪೇಲವ ಸಂಭಾಷಣೆಗಳಿಗೆ ಇಲ್ಲಿ ಜಾಗವಿಲ್ಲ' ಎಂದು ಸಂಭಾಷಣೆಕಾರ ಸಂತೋಷ್ ಹೇಳಿದರು.ಪ್ರಾಮಾಣಿಕತೆ ಹಾಗೂ ಸ್ವಾರ್ಥರಹಿತವಾಗಿ ರಾಷ್ಟ್ರ-ಸಮಾಜದ ಹಿತಕ್ಕೆ ಬದುಕುವವನೇ `ಅಗ್ರಜ' ಎನ್ನುವ ಸಂದೇಶ ಚಿತ್ರದಲ್ಲಿದೆಯಂತೆ. ಮೊದಲ ಬಾರಿ ಆ್ಯಕ್ಷನ್ ಕಟ್ ಹೇಳುತ್ತಿರುವ ಶ್ರೀನಂದನ್ ಸಹ ನಿರ್ಮಾಪಕರ ಹೂಡಿಕೆಯ ಹುಮ್ಮಸ್ಸನ್ನು ಮೆಚ್ಚಿದರು. ನಂದನ್‌ರಾಜ್ ಸಂಗೀತ ನೀಡಿರುವ ಚಿತ್ರಕ್ಕೆ ತಂಗಾಳಿ ನಾಗರಾಜ್ ಸಾಹಿತ್ಯ ಬರೆದಿದ್ದಾರೆ.ಸಿನಿಮಾ ತಂತ್ರಜ್ಞರಾಗಿದ್ದ ಗೋವರ್ಧನ್ ಮೊದಲ ಬಾರಿಗೆ `ಅಗ್ರಜ'ನಿಗೆ ಹಣ ಹೂಡುವ ಮೂಲಕ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ದರ್ಶನ್‌ರಿಗೆ `ಅಗ್ರಜ'ನಲ್ಲಿ ಗೌರವಪೂರ್ವಕ ಪಾತ್ರ. ನಾಯಕಿಯರಾಗಿ ಪೂರ್ಣಿಮಾ, ಕಾಮನಾ ಜೇಠ್ಮಲಾನಿ, ಹಾರ್ದಿಕಾ ಶೆಟ್ಟಿ ನಟಿಸಿದ್ದು, ಪೂರ್ಣಿಮಾ ಹಾಜರಿದ್ದರು.

Post Comments (+)