ಶುಕ್ರವಾರ, ನವೆಂಬರ್ 15, 2019
20 °C
ಕಿಂಗ್ಸ್ ಇಲೆವೆನ್‌ಗೆ ನಿರಾಸೆ; ಮಿಂಚಿದ ಹನುಮ ವಿಹಾರಿ

ಅಗ್ರಸ್ಥಾನದಲ್ಲಿ ಸನ್‌ರೈಸರ್ಸ್ ಹೈದರಾಬಾದ್

Published:
Updated:
ಅಗ್ರಸ್ಥಾನದಲ್ಲಿ ಸನ್‌ರೈಸರ್ಸ್ ಹೈದರಾಬಾದ್

ಹೈದರಾಬಾದ್ (ಪಿಟಿಐ): ಕಿಂಗ್ಸ್ ಇಲೆವೆನ್ ಪಂಜಾಬ್ ನೀಡಿದ್ದ ಸಾಧಾರಣ ಮೊತ್ತದ ಗುರಿಯನ್ನು ಸುಲಭವಾಗಿ ಮುಟ್ಟಿದ  ಸನ್‌ರೈಸರ್ಸ್ ಹೈದರಾಬಾದ್ ತಂಡದವರು ಐಪಿಎಲ್ ಟ್ವೆಂಟಿ-20 ಟೂರ್ನಿಯ ಪಂದ್ಯದಲ್ಲಿ ಶುಕ್ರವಾರ ಐದು ವಿಕೆಟ್‌ಗಳ ಗೆಲುವು ಪಡೆದರು. ಈ ಮೂಲಕ ಸನ್‌ರೈಸರ್ಸ್ ಹತ್ತು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆ್ಯಡಮ್ ಗಿಲ್‌ಕ್ರಿಸ್ಟ್ ನೇತೃತ್ವದ ಕಿಂಗ್ಸ್ ಇಲೆವೆನ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 123 ರನ್ ಪೇರಿಸಿತು. ಈ ಗುರಿಯನ್ನು ಸನ್‌ರೈಸರ್ಸ್ 18.5 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಮುಟ್ಟಿತು.ಗುರಿ ಬೆನ್ನಟ್ಟುವ ಹಾದಿಯ ಆರಂಭದಲ್ಲಿ ಸನ್‌ರೈಸರ್ಸ್ ಕ್ವಿಂಟನ್ ಡಿ ಕಾಕ್ (0) ಅವರನ್ನು ಬೇಗನೆ ಕಳೆದುಕೊಂಡಿತು. ಆದರೆ, ಹನುಮ ವಿಹಾರಿ (46, 39ಎಸೆತ, 5ಬೌಂಡರಿ) ತಂಡಕ್ಕೆ ಚೇತರಿಕೆ ನೀಡಿದರೆ, ತಿಸ್ಸಾರ ಪೆರೆರಾ (ಔಟಾಗದೆ 23, 11ಎಸೆತ, 3ಸಿಕ್ಸರ್) ತಂಡವನ್ನು ಗೆಲುವಿನ ದಡ ಸೇರಿಸಿದರು.ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕಿಂಗ್ಸ್ ಇಲೆವೆನ್ ಪರ ಯಾರೂ ಛಲದ ಆಟವಾಡಲಿಲ್ಲ. 26 ರನ್ ಗಳಿಸಿದ ಗಿಲ್‌ಕ್ರಿಸ್ಟ್ `ಗರಿಷ್ಠ ಸ್ಕೋರರ್' ಎನಿಸಿಕೊಂಡರು. ಪಿಯೂಷ್ ಚಾವ್ಲಾ (23) ಮತ್ತು ಡೇವಿಡ್ ಹಸ್ಸಿ (22) ಮಾತ್ರ 20ರ ಗಡಿ ದಾಟಿದರು. ಸನ್‌ರೈಸರ್ಸ್ ಪರ ಕರಣ್ ಶರ್ಮ (19ಕ್ಕೆ 2), ಇಶಾಂತ್ ಶರ್ಮ (29ಕ್ಕೆ 2) ಮತ್ತು ಅಮಿತ್ ಮಿಶ್ರಾ (29ಕ್ಕೆ 2) ಪ್ರಭಾವಿ ದಾಳಿ ನಡೆಸಿದರು.ಕಿಂಗ್ಸ್ ಇಲೆವೆನ್ ಆರಂಭದಲ್ಲಿ ಆಘಾತ ಅನುಭವಿಸಿದರೂ ಅಲ್ಪ ಚೇತರಿಸಿಕೊಂಡಿತಲ್ಲದೆ, 14ನೇ ಓವರ್‌ನ ಕೊನೆಗೆ ಮೂರು ವಿಕೆಟ್‌ಗೆ 88 ರನ್ ಗಳಿಸಿತ್ತು. ಗಿಲ್‌ಕ್ರಿಸ್ಟ್ ಬಳಗ ಸುಲಭವಾಗಿ 140 ರನ್‌ಗಳ ಗಡಿ ದಾಟುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ 15ನೇ ಓವರ್ ಬಳಿಕ ಒಂದೊಂದೇ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಇದರಿಂದ ಕೊನೆಯ ಓವರ್‌ಗಳಲ್ಲಿ ರನ್‌ವೇಗ ಹೆಚ್ಚಿಸಲು ಆಗಲಿಲ್ಲ.

ಪ್ರತಿಕ್ರಿಯಿಸಿ (+)