ಮಂಗಳವಾರ, ಆಗಸ್ಟ್ 20, 2019
27 °C

`ಅಗ್ರಿ ಟೆಕ್ ಪೋರ್ಟಲ್' ವೆಬ್‌ಸೈಟ್ ಶೀಘ್ರ

Published:
Updated:

ಬೆಂಗಳೂರು: ರಾಜ್ಯದ ರೈತರ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯ `ಅಗ್ರಿ ಟೆಕ್ ಪೋರ್ಟಲ್' ಎಂಬ ವೆಬ್‌ಸೈಟನ್ನು ಸದ್ಯದಲ್ಲೇ ಪ್ರಾರಂಭಿಸಲಿದೆ ಎಂದು ವಿಶ್ವವಿದ್ಯಾಲಯದ ವಿಸ್ತರಣಾ ವಿಭಾಗದ ನಿರ್ದೇಶಕ ಡಾ.ಎನ್.ನಾಗರಾಜ್ ತಿಳಿಸಿದರು.ಸೋಮವಾರ ಸುದ್ದಿಗೋಷ್ಠಿ ನಂತರ `ಪ್ರಜಾವಾಣಿ'ಯೊಂದಿಗೆ ಮಾತನಾಡಿ, ಆಹಾರ ಧಾನ್ಯ, ಹಣ್ಣು ತರಕಾರಿ ಸೇರಿದಂತೆ ಎಲ್ಲ ರೀತಿಯ ಬೆಳೆಗಳ ಬಗ್ಗೆ ಪೂರ್ಣ ಮಾಹಿತಿಯನ್ನು ಈ ವೆಬ್‌ಸೈಟ್‌ನಲ್ಲಿ ಪಡೆಯಬಹುದು ಎಂದರು.ಯಾವ ಕಾಲದಲ್ಲಿ ಯಾವ ಬೆಳೆ ಬೆಳೆದರೆ ಲಾಭದಾಯಕ, ಅವುಗಳಿಗೆ ಬರುವ ರೋಗಗಳು ಮತ್ತು ಲಕ್ಷಣಗಳು, ಯಾವ ಬೆಳೆಗೆ ಯಾವ ಮಾರುಕಟ್ಟೆಯಲ್ಲಿ ಎಷ್ಟು ಬೇಡಿಕೆ ಮತ್ತು ಬೆಲೆ ಇದೆ ಹಾಗೂ ವಾತಾವರಣದ ಬಗ್ಗೆಯೂ ಸಂಪೂರ್ಣವಾದ ಮಾಹಿತಿ ಈ ವೆಬ್‌ಸೈಟ್‌ನಲ್ಲಿ ದೊರೆಯಲಿದೆ.ಅಷ್ಟೆ ಅಲ್ಲದೆ ರೋಗ ತಗುಲಿದ ಬೆಳೆಯ ಚಿತ್ರ ಹಾಗೂ ಅದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ರೈತರು ತಮ್ಮ ಮೊಬೈಲ್‌ಗಳಿಂದಲೇ ಈ ವೆಬ್‌ಸೈಟ್‌ಗೆ ಕಳುಹಿಸಬಹುದು. ಅದನ್ನು ವಿದ್ಯಾಲಯದ ಸಂಶೋಧನಾ ವಿಭಾಗದ ವಿಜ್ಞಾನಿಗಳು ಪರಿಶೀಲಿಸಿ, ಪರಿಹಾರವನ್ನು ಸೂಚಿಸುತ್ತಾರೆ. ಇದರಿಂದ ಅತಿ ಶೀಘ್ರವಾಗಿ ರೈತರ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದು ವಿವರಿಸಿದರು.     ಅಂದಾಜು 8 ರಿಂದ 10 ಕೋಟಿ ವೆಚ್ಚದಲ್ಲಿ ವೆಬ್‌ಸೈಟನ್ನು ಪ್ರಾರಂಭಿಸಲಾಗುತ್ತಿದ್ದು, ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಇಲ್ಲಿ ಮಾಹಿತಿ ಲಭ್ಯವಾಗಲಿದೆ. ಸದ್ಯಕ್ಕೆ ಬೆಳೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕಲೆಹಾಕುವ ಕಾರ್ಯ ನಡೆಯುತ್ತಿದೆ.

 

ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ನಾರಾಯಣ ಗೌಡ, ರಾಜ್ಯದಲ್ಲಿ ಸಮಗ್ರ ಕೃಷಿಗೆ ಹೆಚ್ಚಿನ ಒತ್ತು ನೀಡುವ ಹಾಗೂ ನೂತನ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಕೃಷಿಕರಿಗೆ ತಲುಪಿಸುವ ದೃಷ್ಟಿಯಿಂದ ಅಕ್ಟೋಬರ್ 23 ರಿಂದ 25ರ ವರೆಗೆ ಬೆಂಗಳೂರಿನಲ್ಲಿ `ಕೃಷಿ ವಿಜ್ಞಾನ ಕೇಂದ್ರಗಳ ರಾಷ್ಟ್ರೀಯ ಸಮಾವೇಶ'ವನ್ನು ಏರ್ಪಡಿಸಲಾಗಿದೆ ಎಂದರು.ದೇಶದ 634 ಕೃಷಿ ವಿಜ್ಞಾನ ಕೇಂದ್ರಗಳ ತಂತ್ರಜ್ಞಾನವನ್ನು ಇಲ್ಲಿ ಪರಿಚಯಿಸಲಾಗುವುದು. ಕಡಿಮೆ ಭೂಮಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಹೇಗೆ ಕೃಷಿ ಮಾಡಬಹುದು ಎಂಬುದರ ಬಗ್ಗೆ ನಗರದ ಜನರಿಗೆ ಮಾಹಿತಿ ನೀಡುವ ಸಲುವಾಗಿ ನಗರದಲ್ಲಿ ನವೆಂಬರ್ 3 ರಿಂದ 5ರ ವರೆಗೆ `ಅರ್ಬನ್ ಕೃಷಿ ಮೇಳ'ವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ನ. 7 ರಿಂದ 11ರ ವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಕೃಷಿ ಮೇಳಕ್ಕೆ ಭಾರತದ 20 ಸಮಕಾಲೀನ ರಾಷ್ಟ್ರಗಳನ್ನು ಆಹ್ವಾನಿಸಲಾಗಿದ್ದು, ಅಲ್ಲಿನ ತಂತ್ರಜ್ಞಾನ, ಕೃಷಿ ಉಪಕರಣಗಳನ್ನು ಇಲ್ಲಿ ಪ್ರದರ್ಶಿಸಲಾಗುವುದು. 2014 ಫೆಬ್ರುವರಿಯಲ್ಲಿ ಜಾಗತಿಕ ಕೃಷಿಕರ ಸಮಾವೇಶ ಹಾಗೂ ಮೇ ತಿಂಗಳಿನಲ್ಲಿ ಹಲಸಿನ ಅಂತರ ರಾಷ್ಟ್ರೀಯ ಮೇಳವನ್ನು ಏರ್ಪಡಿಸಲಾಗಿದೆ ಎಂದರು.ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕೋಟ್ಯಧಿಪತಿ ಕಾರ್ಯಕ್ರಮದ ಮಾದರಿಯಲ್ಲೇ ಕೃಷಿ ಕಾರ್ಯಕ್ರಮವನ್ನು ಪ್ರಾರಂಭಿಸಲು ಕೃಷಿ ವಿಶ್ವವಿದ್ಯಾಲಯ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮಕ್ಕೆ ತಗುಲುವ ವೆಚ್ಚ ಹಾಗೂ ಯಾವ ರೀತಿ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂಬುದರ ಬಗ್ಗೆ ಚರ್ಚಿಸಲಾಗುತ್ತಿದೆ.

- ಡಾ.ಕೆ.ನಾರಾಯಣ ಗೌಡ, ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಕುಲಪತಿ.

Post Comments (+)