ಅಗ್ರ ಶ್ರೇಯಾಂಕಿತ ಬಾಲಾಜಿಗೆ ಆಘಾತ

7
ಐಟಿಎಫ್: ಡಬಲ್ಸ್‌ನಲ್ಲಿ ಫೈನಲ್‌ಗೆ ಭಾರತದ ಅಜಯ್-ಅಶ್ವಿನ್

ಅಗ್ರ ಶ್ರೇಯಾಂಕಿತ ಬಾಲಾಜಿಗೆ ಆಘಾತ

Published:
Updated:

ಧಾರವಾಡ: ಅಗ್ರ ಶ್ರೇಯಾಂಕಿತ ಬಾಲಾಜಿ ಶ್ರೀರಾಮ್‌ಗೆ ಆಘಾತ ನೀಡಿದ ಜರ್ಮನಿಯ ಟಾಸ್ಟನ್ ವಿಟೊಸ್ಕಾ ಇಲ್ಲಿನ ರಾಜಾಧ್ಯಕ್ಷ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಧಾರವಾಡ ಓಪನ್ ಪುರುಷರ ಐಟಿಎಫ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.ಗುರುವಾರ ನಡೆದ ಕ್ವಾರ್ಟರ್ ಫೈನಲ್‌ನ ರೋಚಕ ಹಣಾಹಣಿಯಲ್ಲಿ ಟಾರ್ಸ್ಟನ್ 6-4, 5-7, 7-5 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ತಮಿಳುನಾಡಿನ ಬಾಲಾಜಿ ಶ್ರೀರಾಮ್‌ಗೆ ಮನೆಯ ಹಾದಿ ತೋರಿಸಿದರು. 2 ಗಂಟೆ 15 ನಿಮಿಷಗಳ ಕಾಲ ಪ್ರೇಕ್ಷಕರು ಉಸಿರು ಬಿಗಿಹಿಡಿದು ಪಂದ್ಯ ನೋಡುವಂತಾಯಿತು.ಸಮಬಲದ ಹೋರಾಟದಿಂದ ಕೂಡಿದ್ದ ಮೊದಲ ಸೆಟ್ ಅನ್ನು ಟಾರ್ಸ್ಟನ್ ತಮ್ಮದಾಗಿಸಿಕೊಂಡರು. ನಿಜವಾದ ಹೋರಾಟ ನಡೆದದ್ದು ಉಳಿದೆರಡು ಸೆಟ್‌ಗಳಲ್ಲಿ. ಎರಡನೇ ಸೆಟ್‌ನ ಆರಂಭದಿಂದಲೂ ತಲಾ ಒಂದೊಂದು ಗೇಮ್ ತಮ್ಮದಾಗಿಸಿಕೊಂಡು ಬಂದ ಉಭಯ ಆಟಗಾರರು ಹತ್ತನೇ ಗೇಮ್ ಅಂತ್ಯಕ್ಕೆ 5-5ರಿಂದ ಸಮಬಲ ಸಾಧಿಸಿದ್ದರು. ಹನ್ನೊಂದನೇ ಗೇಮ್‌ನಲ್ಲಿ ಬಾಲಾಜಿಯ ಸರ್ವ್‌ಗಳಿಗೆ ಉತ್ತರಿಸಲು ತಡಕಾಡಿದ ಟಾರ್ಸ್ಟನ್ ಸಿಟ್ಟಿನಿಂದ ಕುಕ್ಕಿದ ಚೆಂಡು ಅಂಕಣದಿಂದ ಆಚೆಗೆ ಹೋಯಿತು. ಮುಂದಿನ ಗೇಮ್‌ನಲ್ಲಿ  ಬಾಲಾಜಿ ಸೆಟ್ ತಮ್ಮದಾಗಿಸಿಕೊಂಡರು.ಮತ್ತೊಂದು ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಸನಮ್ ಸಿಂಗ್ 6-4, 6-4ರಿಂದ ಕೊಲಿನ್ ವ್ಯಾನ್ ಬೀಮ್‌ರನ್ನು  ಬಗ್ಗುಬಡಿದರು. ಮೊದಲ ಸೆಟ್‌ನ ಏಳನೇ ಗೇಮ್‌ನಲ್ಲಿ ಸನಮ್‌ರ ಸರ್ವ್ ತುಂಡರಿಸುವ ಮೂಲಕ ಕೊಲಿನ್ ಪ್ರತಿರೋಧ ತೋರಿದರಾದರೂ ಗೆಲುವಿಗೆ ಅದು ಸಾಕಾಗಲಿಲ್ಲ. ಮುಂದಿನ ಗೇಮ್‌ನಲ್ಲೇ ಸ್ಕೋರ್ ಸಮನಾಗಿಸಿದ ಸನಮ್ ಮತ್ತೆ ತಪ್ಪೆಸಗಲಿಲ್ಲ. 1 ಗಂಟೆ 45 ನಿಮಿಷಗಳ ಹೋರಾಟದ ನಡುವೆಯೂ ಪಂದ್ಯ ತಮ್ಮದಾಗಿಸಿಕೊಳ್ಳುವ ಮೂಲಕ ಹರಿಯಾಣದ ಯುವಕ ಪ್ರಶಸ್ತಿಯ ಸನಿಹಕ್ಕೆ ಸಾಗಿದರು.ಅಚ್ಚರಿಯ ಪ್ರದರ್ಶನ ಮುಂದುವರಿಸಿದ ತಮಿಳುನಾಡಿನ ರಾಮ್‌ಕುಮಾರ್ ರಾಮನಾಥನ್ 6-4, 6-7 (1), 6-1ರಲ್ಲಿ ಅರ್ಜುನ್ ಖಡೆ ಅವರನ್ನು ಮಣಿಸಿದರು. ಮೂರನೇ ಶ್ರೇಯಾಂಕದ ತಮಿಳುನಾಡು ಆಟಗಾರ ಆರ್. ರಂಜಿತ್ 6-3, 6-2ರಿಂದ ಐದನೇ ಶ್ರೇಯಾಂಕದ ಎನ್. ಪ್ರಶಾಂತ್ ವಿರುದ್ಧ ಸುಲಭ ಗೆಲುವು ದಾಖಲಿಸಿದರು.ದಾವಣಗೆರೆ ಓಪನ್‌ನ ಸೆಮಿಫೈನಲ್‌ನಲ್ಲಿ ನಿರಾಸೆ ಅನುಭವಿಸಿದ್ದ ಟಾರ್ಸ್ಟನ್ ಈ ಟೂರ್ನಿಯ ಸೆಮಿಫೈನಲ್‌ನಲ್ಲಿ ರಾಮ್‌ಕುಮಾರ್ ಅವರನ್ನು ಎದುರಿಸಲಿದ್ದಾರೆ. ಮತ್ತೊಮ್ಮೆ ಪ್ರಶಸ್ತಿ ಎತ್ತಿಹಿಡಿಯುವ ಕನಸಿನಲ್ಲಿರುವ ಸನಮ್ ಆರ್. ರಂಜಿತ್ ವಿರುದ್ಧ ಸೆಣೆಸಲಿದ್ದಾರೆ.ಡಬಲ್ಸ್: ಫೈನಲ್‌ಗೆ ಭಾರತದ ಜೋಡಿ: ಡಬಲ್ಸ್ ವಿಭಾಗದಲ್ಲಿ ಭಾರತದ ಅಜಯ್ ಸೆಲ್ವರಾಜ್ ಹಾಗೂ ಅಶ್ವಿನ್ ವಿಜಯರಾಘವನ್ ಜೋಡಿ ಫೈನಲ್ ಪ್ರವೇಶಿಸಿದೆ. ಸೆಮಿಫೈನಲ್‌ನಲ್ಲಿ ಈ ಜೋಡಿಯು 6-3, 7-5 ರಲ್ಲಿ ಎರಡನೇ ಶ್ರೇಯಾಂಕದ ಸೆರ್ಗೈ ಕ್ರೊಟಿಯೊಕ್ ಹಾಗೂ ಲುಕಾ ಮಾರ್ಗರೊಲಿ ಅವರಿಗೆ ಆಘಾತ ನೀಡಿತು.ಮತ್ತೊಂದು ಸೆಮಿಫೈನಲ್‌ನಲ್ಲಿ ಅಮೆರಿಕಾದ ಅಮೃತ್ ನರಸಿಂಹನ್-ಮೈಕಲ್ ಶಬಾಜ್ ಜೋಡಿ 6-3, 6-2ರಿಂದ ಫರೀಜ್ ಮಹಮ್ಮದ್ ಹಾಗೂ ವಿಘ್ನೇಶ್ ಅವರನ್ನು ಮಣಿಸಿ ಫೈನಲ್‌ಗೆ ಮುನ್ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry