ಗುರುವಾರ , ಮೇ 28, 2020
27 °C

ಅಚಲ ನಿಲುವು ತಳೆದಿರುವ ಆಸ್ಟ್ರೇಲಿಯಾದೊಂದಿಗೆ ಕೃಷ್ಣ ಸಂಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್ (ಪಿಟಿಐ): ಭಾರತ ಪ್ರಗತಿಯ ಹಾದಿಯಲ್ಲಿದೆ, ಅದಕ್ಕೆ ಭಾರಿ ಪ್ರಮಾಣದಲ್ಲಿ ಇಂಧನದ ಅಗತ್ಯವಿದೆ. ಇದನ್ನು ನೋಡಿಕೊಂಡು ಭಾರತಕ್ಕೆ ಯುರೇನಿಯಂ ಮಾರುವುದಿಲ್ಲ ಎಂಬ ತನ್ನ ನೀತಿಯನ್ನು ಕೈಬಿಡಬೇಕು  ಎಂದು ವಿದೇಶಾಂಗ ವ್ಯವಹಾರ ಸಚಿವ ಎಸ್. ಎಂ. ಕೃಷ್ಣ ಅವರು ಆಸ್ಟ್ರೇಲಿಯಾವನ್ನು ಒತ್ತಾಯಿಸಿದ್ದಾರೆ.ಮೂರು ದಿನಗಳ ಆಸ್ಟ್ರೇಲಿಯಾ ಭೇಟಿಗಾಗಿ ಬುಧವಾರ ಇಲ್ಲಿಗೆ ಆಗಮಿಸಿದ ಅವರು ಸಂಪನ್ಮೂಲ, ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಮಾರ್ಟಿನ್ ಫರ್ಗುಸನ್ ಅವರನ್ನು ಭೇಟಿ ಮಾಡಿದಾಗ ಆಸ್ಟ್ರೇಲಿಯಾದಿಂದ ಯುರೇನಿಯಂ ಪಡೆದುಕೊಳ್ಳುವ ಭಾರತದ ದೀರ್ಘ ಕಾಲದ ಬಯಕೆಯನ್ನು ಪುನರುಚ್ಚರಿಸಿದರು.ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ (ಎನ್‌ಪಿಟಿ) ಸಹಿ ಹಾಕಿರದ ದೇಶಗಳಿಗೆ ಯುರೇನಿಯಂ ಮಾರಾಟ ಮಾಡುವುದಿಲ್ಲ ಎಂಬುದು ಆಸ್ಟ್ರೇಲಿಯಾದ ಆಡಳಿತಾರೂಢ ಲೇಬರ್ ಪಕ್ಷದ ನಿಲುವಾಗಿದ್ದು, ಸರ್ಕಾರ ಈಗಲೂ ಈ ನಿಲುವಿಗೇ ಅಂಟಿಕೊಂಡಿದೆ. ‘ಭಾರತಕ್ಕೆ ಯುರೇನಿಯಂ ರಫ್ತು ಮಾಡುವ ವಿಚಾರದಲ್ಲಿ ಸರ್ಕಾರದ ನೀತಿ ಸ್ಪಷ್ಟವಾಗಿದೆ. ಎನ್‌ಪಿಟಿಗೆ ಸಹಿ ಹಾಕಿದ ಮತ್ತು ಆಸ್ಟ್ರೇಲಿಯಾದೊಂದಿಗೆ ಒಪ್ಪಂದ ಮಾಡಿಕೊಂಡ ದೇಶಗಳಿಗೆ ಮಾತ್ರ ಯುರೇನಿಯಂ ಪೂರೈಸಲಾಗುವುದು.ಇದು ಭಾರತಕ್ಕೆ ಅನ್ವಯವಾಗುವಂತೆ ರೂಪಿಸಿದ ನೀತಿಯಲ್ಲ, ಬದಲಿಗೆ ಇದು ಇತರ ಎಲ್ಲಾ ದೇಶಗಳಿಗೂ ಅನ್ವಯಿಸುತ್ತದೆ’ ಎಂದು ಮಾತುಕತೆಯ ಬಳಿಕ ಫರ್ಗುಸನ್ ಹೇಳಿದರು ಎಂದು ಆಸ್ಟ್ರೇಲಿಯಾದ ‘ಅಸೋಸಿಯೇಟೆಡ್ ಪ್ರೆಸ್’ ವರದಿ ಮಾಡಿದೆ.‘ನಾವು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಂಬಂಧಗಳ ಬಗ್ಗೆ ಚರ್ಚಿಸಿದ್ದೇವೆ. ಇಂಧನ ವಿಚಾರ ಇದರಲ್ಲಿ ಮುಖ್ಯವಾಗಿತ್ತು. ಕಳೆದ ಕೆಲವು ವರ್ಷಗಳಿಂದ ದೇಶ ಭಾರಿ ಪ್ರಗತಿ ಸಾಧಿಸುತ್ತಿದ್ದು, ಇಂಧನದ ಅಗತ್ಯವೂ ಹೆಚ್ಚುತ್ತಿದೆ. ಹೀಗಾಗಿ ಯುರೇನಿಯಂ, ಕಲ್ಲಿದ್ದಲು ಮತ್ತು ಇತರ ಇಂಧನ ಮೂಲಗಳನ್ನು ಹೊಂದಿರುವ ರಾಷ್ಟ್ರಗಳೊಂದಿಗೆ ನಾವು ಸಹಭಾಗಿತ್ವ ಸಾಧಿಸಿ ಅವುಗಳನ್ನು ಪಡೆದುಕೊಳ್ಳಲು ಯತ್ನಿಸುತ್ತಿದ್ದೇವೆ’ ಎಂದು ಕೃಷ್ಣ ಅವರು ಬಳಿಕ ಪತ್ರಕರ್ತರಿಗೆ ತಿಳಿಸಿದರು.ಈ ಚರ್ಚೆಯ ಸಂದರ್ಭದಲ್ಲಿ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಹೈಕಮಿಷನರ್ ಸುಜಾತಾ ಸಿಂಗ್, ವಿದೇಶಾಂಗ ಕಾರ್ಯದರ್ಶಿ ವಿಜಯಲತಾ ರೆಡ್ಡಿ, ಭಾರತದಲ್ಲಿರುವ ಆಸ್ಟ್ರೇಲಿಯಾದ ಹೈಕಮಿಷನರ್ ಪೀಟರ್ ವರ್ಗೀಸ್ ಹಾಜರಿದ್ದರು.ಮಾತುಕತೆಯ ವೇಳೆ ಆಸ್ಟ್ರೇಲಿಯಾದ ಕಲ್ಲಿದ್ದಲು ಮತ್ತು ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಭಾರತೀಯ ಕಂಪೆನಿಗಳಿಗೆ ಆಹ್ವಾನ ನೀಡಲಾಯಿತು, ಜತೆಗೆ ಭಾರತಕ್ಕೆ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಸುವ ಭರವಸೆ ನೀಡಲಾಯಿತು. ಭಾರತದಲ್ಲಿನ ಮೂಲಭೂತ ಸೌಕರ್ಯ ಯೋಜನೆಗಳಲ್ಲಿ ಹಣ ಹೂಡಲು ಸಹ ಆಸ್ಟ್ರೇಲಿಯಾ ಆಸಕ್ತಿ ತೋರಿಸಿತು ಎಂದು ಅಧಿಕಾರಿಗಳು ತಿಳಿಸಿದರು.ಗುರುವಾರ ನಡೆಯಲಿರುವ ಏಳನೇ ವಿದೇಶಾಂಗ ಸಚಿವರ ಮಟ್ಟದ ಸಂಬಂಧ ಸುಧಾರಣಾ ಸಭೆಯಲ್ಲಿ ಕೃಷ್ಣ ಅವರು ತಮ್ಮ ಸಹವರ್ತಿ ಕೆವಿನ್ ರುಡ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.ಇದೇ ಸಂದರ್ಭದಲ್ಲಿ ಸುಮಾರು 5 ಲಕ್ಷದಷ್ಟು ಸಂಖ್ಯೆಯಲ್ಲಿರುವ ಭಾರತೀಯರ ಸುರಕ್ಷತೆಯ ಬಗ್ಗೆಯೂ ಕೃಷ್ಣ ಅವರು ಆಸ್ಟ್ರೇಲಿಯಾದ ಗಮನ ಸೆಳೆಯಲಿದ್ದಾರೆ. ಅವರು ಪ್ರಧಾನಿ ಜೂಲಿಯಾ ಗಿಲಾರ್ಡ್ ಅವರನ್ನೂ ಭೇಟಿ ಮಾಡುವ ನಿರೀಕ್ಷೆ ಇದೆ. ಶುಕ್ರವಾರ ಅವರು ಭಾರತಕ್ಕೆ ಹಿಂದಿರುಗಲಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.