ಭಾನುವಾರ, ನವೆಂಬರ್ 17, 2019
29 °C

ಅಚ್ಚರಿಗಳ ಸ್ವರ್ಗ `ಜುಕೊ'

Published:
Updated:

ನಾಗಾಲ್ಯಾಂಡ್ ಮತ್ತು ಮಣಿಪುರ ಪ್ರಕೃತಿ ಮಾತೆಯ ಮೊಲೆ ಹಾಲನ್ನು ಮೊಗೆ ಮೊಗೆದು ಕುಡಿದಿರುವ ಮಕ್ಕಳು. ಈ ಎರಡು ರಾಜ್ಯಗಳ ಗಡಿ ಪ್ರದೇಶದಲ್ಲಿ ಸಿಗುವ `ಜುಕೊ ಕಣಿವೆ'ಯ ಅಂದ ಚೆಂದ ಅವರ್ಣನೀಯ. ವಿಶ್ವದ ಅತ್ಯಂತ ಮನಮೋಹಕ ಕಣಿವೆಗಳ ಸಾಲಿನಲ್ಲಿ `ಜುಕೊ ಕಣಿವೆ'ಯೂ ಒಂದು.ಗಿರಿ, ಕಂದಕಗಳನ್ನು ಹೊಂದಿರುವ ಕಾನನದ `ಜುಕೊ ಕಣಿವೆ'ಯನ್ನು ಪ್ರಕೃತಿಮಾತೆ ಅತೀವ ಶ್ರದ್ಧೆಯಿಂದ ನಿರ್ಮಿಸಿದ್ದಾಳೆ. ಈ ಕಣಿವೆಯ ಹವಾಮಾನ ಚಳಿ, ಮಳೆ, ಬೇಸಿಗೆಯ ಋತುವಿಲಾಸಕ್ಕೆ ಅನುಗುಣವಾಗಿ ಬದಲಾಗುತ್ತದೆ. ಋತುಮಾನಕ್ಕೆ ಅನುಗುಣವಾಗಿ ಅರಳುವ ಹೂವುಗಳು ಕಣಿವೆಯ ಸೌಂದರ್ಯದ ಲಾಲಿತ್ಯಕ್ಕೆ ಪ್ರಭಾವಳಿ ಇದ್ದಂತೆ. ಕಣಿವೆಯ ನಡುವೆ ತಂಪಾದ ನೀರಿನ ಸೆಲೆಯ ಹರಿವು ಇರುವುದರಿಂದ ಈ ಕಣಿವೆಗೆ `ಜುಕೊ ಕಣಿವೆ' ಎನ್ನುವ ಹೆಸರು ಬಂದಿದೆಯಂತೆ. `ಜು' ಎಂದರೆ ನೀರು, `ಕೊ' ಎಂದರೆ ತಂಪು ಎನ್ನುವ ಅರ್ಥ.ಸಮುದ್ರ ಮಟ್ಟದಿಂದ 2438 ಮೀಟರ್ ಎತ್ತರದಲ್ಲಿರುವ `ಜುಕೊ' ಬದುಕಿನ ಬಗೆಗಿನ ಉತ್ಸಾಹವನ್ನು ಉಕ್ಕಿಸುವ ನೆಲೆ. ಈ ಪರಿಸರ ನಾನಾ ಬಗೆಯ ಪ್ರಾಣಿ, ಪಕ್ಷಿಗಳ ನೆಲೆವೀಡು ಕೂಡ. ಕಣಿವೆಯ ಹಿಂಬದಿಯಲ್ಲಿರುವ `ಜೆಪ್ಪು ಗಿರಿ' ಕಣಿವೆ ಪರಿಸರದ ಗಲ್ಲಕ್ಕೆ ಕಪ್ಪು ಕಾಡಿಗೆ ಚುಕ್ಕಿ ಇಟ್ಟಂತಿದೆ.ಜುಲೈನಿಂದ ಸೆಪ್ಟೆಂಬರ್ ಜುಕೊ ಕಣಿವೆಯಲ್ಲಿ ವಿಹರಿಸಲು ಸೂಕ್ತ ಸಮಯ. ಪ್ರಕೃತಿ ಪ್ರಿಯರ ಜತೆಗೆ ಸಾಹಸ ಪ್ರಿಯಯರಿಗೂ ಈ ಕಣಿವೆ ನೆಚ್ಚಿನ ತಾಣ. ನಸುಕಿನ ಇಬ್ಬನಿಯಲ್ಲಿ ಸೂರ್ಯನ ಕೆಂಬಣ್ಣ ಮೂಡುವಾಗ, ಬಿಸಿಲಿಗೆ ಪ್ರಾಯ ಮೂಡಿದಾಗ, ಸಂಜೆಯ ಗೋಧೂಳಿಯಲ್ಲಿ- ಅವಧಿ ಅವಧಿಗೂ ಕಣಿವೆಯ ಹವಾಮಾನದ ಕಣ್ಣುಗಳು ಬದಲಾಗುತ್ತದೆ. ಬೆಳಿಗ್ಗೆ 10 ಗಂಟೆವರೆಗೂ ಕಣಿವೆಯಲ್ಲಿ ಹಿಮ ಸುರಿಯುತ್ತದೆ.ರೈಲ್ವೆ ಮಾರ್ಗವಾಗಿ ಸಾಗುವುದಾದರೆ ದಿಮ್‌ಪುರ ರೈಲ್ವೆ ನಿಲ್ದಾಣದಲ್ಲಿ ಇಳಿಯಬೇಕು. ಬೊಕೊ, ಕೊಹಿಮಾ ಮಾರ್ಗವಾಗಿ ಮಿಸ್ವಿಮಾ ಹಳ್ಳಿ ಹಾದು ಕಣಿವೆ ಮುಟ್ಟಬೇಕು. ಮಿಸ್ವಿಮಾ ಹಳ್ಳಿಗೆ ನಾಗಾಲ್ಯಾಂಡ್‌ನ ರಾಜ್ಯ ಸಾರಿಗೆ ಮತ್ತು ಟ್ಯಾಕ್ಸಿ ಸೌಲಭ್ಯವಿದೆ. ನಾಗಾಲ್ಯಾಂಡ್ ರಾಜಧಾನಿ ಕೊಹಿಮಾದಿಂದ ದಿಮ್‌ಪುರಕ್ಕೆ 74 ಕಿಲೋ ಮೀಟರ್ ಹಾದಿ.

ಪ್ರತಿಕ್ರಿಯಿಸಿ (+)