ಸೋಮವಾರ, ಮೇ 16, 2022
28 °C

ಅಚ್ಚರಿಗೊಳಿಸುವ ವಿಶೇಷಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ವಿಶ್ವದ ದೊಡ್ಡ ಕ್ರಿಕೆಟ್ ಹಬ್ಬವು ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಊಟದ ರಸದೂಟವನ್ನು ನೀಡುತ್ತಲೇ ಬಂದಿದೆ. ಸೋಲು-ಗೆಲುವು ಮರೆತು ಆಟದ ಮೇಲಿನ ಪ್ರೀತಿಯಿಂದ ನೋಡುವವರಿಗೆ ವಿಶ್ವಕಪ್ ಎಂದೂ ನೀರಸವೆನಿಸಿಲ್ಲ.ಅದರಲ್ಲಿಯೂ ಅಂಕಿ-ಅಂಶಗಳ ಲೆಕ್ಕಾಚಾರದಲ್ಲಿ ಸಾಧನೆಯನ್ನು ಅಳೆಯುವಂಥ ಈ ಕ್ರೀಡೆಯು ಅಚ್ಚರಿಗೊಳಿಸುವ ವಿಶೇಷಗಳನ್ನು ತನ್ನ ಒಡಲಲ್ಲಿ ತುಂಬಿಟ್ಟುಕೊಂಡಿದೆ. ಈಗಲೂ ಅಂಥ ಆಸಕ್ತಿಕರ ಅಂಕಿ-ಅಂಶಗಳು ಬೆರಗಾಗುವಂತೆ ಮಾಡುತ್ತವೆ. ಅಂಥ ಕೆಲವು ವಿಶಿಷ್ಟವಾದ ಅಂಕಿಗಳ ಲೆಕ್ಕಾಚಾರವನ್ನು ಇಲ್ಲಿ ಸಂಗ್ರಹಿಸಿ ಇಡಲಾಗಿದೆ.* ವಿಶ್ವಕಪ್‌ನಲ್ಲಿ ಆಡುವ ಮೂಲಕವೇ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಚೊಚ್ಚಲ ಪಂದ್ಯದಲ್ಲಿಯೇ ಅರ್ಧ ಶತಕ ಹಾಗೂ ಅದಕ್ಕೂ ಹೆಚ್ಚು ರನ್ ಗಳಿಸಿದ ಶ್ರೇಯ ಪಡೆದ ಆರು ಕ್ರಿಕೆಟಿಗರ ಹೆಸರುಗಳು ಇತಿಹಾಸದ ಪುಟಗಳಲ್ಲಿ ಅಚ್ಚಾಗಿವೆ. ಜಿಂಬಾಬ್ವೆಯ ಆ್ಯಂಡಿ ಫ್ಲವರ್ (115* ರನ್) ಶ್ರೀಲಂಕಾ ವಿರುದ್ಧ (ನ್ಯೂ ಪ್ಲೇಮೌತ್, 23ನೇ ಫೆಬ್ರುವರಿ 1992), ಭಾರತದ ನವಜೋತ್ ಸಿಂಗ್ ಸಿದ್ದು (73) ಆಸ್ಟ್ರೇಲಿಯಾ ಎದುರು (ಚೆನ್ನೈ, 9ನೇ ಅಕ್ಟೋಬರ್ 1987), ಜಿಂಬಾಬ್ವೆಯ ಡಂಕನ್ ಫ್ಲೆಚರ್ (69*) ಆಸ್ಟ್ರೇಲಿಯಾ ವಿರುದ್ಧ (ನಾಟಿಂಗ್‌ಹ್ಯಾಮ್, 9ನೇ ಜೂನ್ 1983), ಕೀನ್ಯಾದ ಸ್ಟೀವ್ ಟಿಕೊಲೊ (65) ಭಾರತದ ಎದುರು (ಕಟಕ್, 18ನೇ ಫೆಬ್ರುವರಿ 1996), ಶ್ರೀಲಂಕಾದ ವೆಟ್ಟಿಮುನಿ (53*) ಆಸ್ಟ್ರೇಲಿಯಾ ವಿರುದ್ಧ (ಓವಲ್, 11ನೇ ಜೂನ್ 1975) ಹಾಗೂ ವೆಸ್ಟ್ ಇಂಡೀಸ್‌ನ ಸಿಮಾನ್ಸ್ (50) ಪಾಕಿಸ್ತಾನದ ಎದುರು (ಲಾಹೋರ್, 16ನೇ ಅಕ್ಟೋಬರ್ 1987) ಇಂಥದೊಂದು ಸಾಧನೆಯ ಶ್ರೇಯಕ್ಕೆ ಪಾತ್ರರಾಗಿದ್ದರು.* ಸಚಿನ್ ತೆಂಡೂಲ್ಕರ್ (673) ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ (659) ಅವರು ಮಾತ್ರ ಒಂದೇ ವಿಶ್ವಕಪ್‌ನಲ್ಲಿ ಒಟ್ಟಾರೆ ಆರುನೂರಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆಯ ಪಟ್ಟಿಯಲ್ಲಿದ್ದಾರೆ. 2003ರಲ್ಲಿ ಸಚಿನ್ ಹಾಗೂ 2007ರಲ್ಲಿ ಹೇಡನ್ ಇಂಥದೊಂದು ಮೈಲಿಗಲ್ಲು ದಾಟಿ ನಿಂತಿದ್ದರು. ಒಂದೇ ವಿಶ್ವಕಪ್‌ನಲ್ಲಿ 500 ಹಾಗೂ ಅದಕ್ಕೂ ಅಧಿಕ ರನ್ ಕಲೆಹಾಕಿದ್ದು ಶ್ರೀಲಂಕಾದ ಮಾಹೇಲ ಜಯವರ್ಧನೆ (548; 2007ರಲ್ಲಿ), ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (539; 2007ರಲ್ಲಿ), ಸಚಿನ್ (523; 1996ರಲ್ಲಿ) ಮಾತ್ರ. ಎರಡು ಬಾರಿ ಐದನೂರಕ್ಕೂ ಹೆಚ್ಚು ರನ್ ಗಳಿಸಿದ್ದು ತೆಂಡೂಲ್ಕರ್. 2007ರ ವಿಶ್ವಕಪ್‌ನಲ್ಲಿ ಹೇಡನ್, ಜಯವರ್ಧನೆ ಹಾಗೂ ಪಾಂಟಿಂಗ್ ಅವರು ವೈಯಕ್ತಿಕವಾಗಿ ಐದನೂರಕ್ಕೂ ಅಧಿಕ ರನ್ ಕಲೆಹಾಕಿದ್ದು ವಿಶೇಷ. ಅದೇ ವಿಶ್ವಕಪ್‌ನಲ್ಲಿ ಒಂದೇ ದೇಶದ ಇಬ್ಬರು ಬ್ಯಾಟ್ಸ್‌ಮನ್‌ಗಳು ಇಂಥ ಸಾಧನೆ ಮಾಡಿದ್ದಕ್ಕೆ ಸಾಕ್ಷಿಯಾಗಿತ್ತು. ಆಸ್ಟ್ರೇಲಿಯಾದ ಹೇಡನ್ ಮತ್ತು ಪಾಂಟಿಂಗ್ ಆ ಟೂರ್ನಿಯಲ್ಲಿ ಅಬ್ಬರಿಸಿದ್ದರು.* ತಂಡದ ನಾಯಕರಾಗಿದ್ದುಕೊಂಡು ವಿಶ್ವಕಪ್‌ನಲ್ಲಿ ಹೆಚ್ಚು ಶತಕ ಗಳಿಸಿದ ದಾಖಲೆಯು ಭಾರತದ ಸೌರ ವ್ ಗಂಗೂಲಿ ಹಾಗೂ ಕಾಂಗರೂಗಳ ನಾಡಿನ ಪಾಂಟಿಂಗ್ ಹೆಸರಲ್ಲಿದೆ. ಇವರಿಬ್ಬರೂ ತಲಾ ಮೂರು ಬಾರಿ ಶತಕದ ಶ್ರೇಯ ಪಡೆದಿದ್ದಾರೆ. ಗಂಗೂಲಿ ಅವರು ನಮೀಬಿಯಾ ವಿರುದ್ಧ (112* ರನ್; ಪೀಟರ್‌ಮಾರಿಸ್‌ಬಗ್; 23ನೇ ಫೆಬ್ರುವರಿ 2003), ಕೀನ್ಯಾ ಎದುರು (107*; ಕೇಪ್ ಟೌನ್, 7ನೇ ಮಾರ್ಚ್ 2003 ಹಾಗೂ ಕಿನ್ಯಾ ವಿರುದ್ಧ (111*; ಡರ್ಬನ್, 20ನೇ ಮಾರ್ಚ್ 2003) ಶತಕ ಗಳಿಸಿ ಮಿಂಚಿದ್ದರು. ಪಾಂಟಿಂಗ್ ಅವರು ಶ್ರೀಲಂಕಾ ವಿರುದ್ಧ (114; ಸೆಂಚೂರಿಯನ್, 7ನೇ ಫೆ. 2003), ಭಾರತದ ಎದುರು (140*; ಜೋಹಾನ್ಸ್‌ಬರ್ಗ್, 23 ಮಾರ್ಚ್ 2003) ಹಾಗೂ ಸ್ಕಾಟ್ಲೆಂಡ್ ವಿರುದ್ಧ (113; ಬ್ಯಾಸೆಟ್ಟರ್, 14ನೇ ಮಾರ್ಚ್ 2007)  ನೂರು ರನ್‌ಗಳ ಸಂಭ್ರಮ ಪಡೆದಿದ್ದರು.* ‘ದಾದಾ’ ಖ್ಯಾತಿಯ ಗಂಗೂಲಿ ಅವರು ನಾಯಕರ ಜವಾಬ್ದಾರಿಯನ್ನು ಹೊತ್ತುಕೊಂಡು ಆಡಿಯೇ ಒಂದೇ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಸಾಧನೆ ಮಾಡಿದ್ದಾರೆ. 2003ಲ್ಲಿ ವಿಶ್ವದ ಅತಿದೊಡ್ಡ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಆಡಿದ್ದಾಗ ಮೂರು ಪಂದ್ಯಗಳಲ್ಲಿ ನೂರು ರನ್‌ಗಳ ಗಡಿದಾಟಿ ಬೆಳೆದು ನಿಂತಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.