ಅಚ್ಚರಿ, ಬೆರಗು ಮೂಡಿಸಿದ ವಿದ್ಯಾರ್ಥಿಗಳು

7

ಅಚ್ಚರಿ, ಬೆರಗು ಮೂಡಿಸಿದ ವಿದ್ಯಾರ್ಥಿಗಳು

Published:
Updated:

ಚಿಕ್ಕಬಳ್ಳಾಪುರ: ನೀರಿನ ಕಾರಂಜಿಯಲ್ಲಿ ಪುಟಿಯುತ್ತಿದ್ದ ಚೆಂಡು, ನೀರು ಹರಿದ ಕೂಡಲೇ ಹೊತ್ತಿಕೊಳ್ಳುತ್ತಿದ್ದ ದೀಪ, ಗೋಬರ್‌ಗ್ಯಾಸ್‌ನಿಂದ ಹೊತ್ತಿಕೊಳ್ಳುತ್ತಿದ್ದ ಜ್ವಾಲೆ, ಗಣಿತದ ಬಗೆಬಗೆಯ ಫಾರ್ಮುಲಾಗಳು ಮತ್ತು ಕ್ಲಿಷ್ಟಕರ ಅಂಕಿಅಂಶಗಳು....ಹೀಗೆ ಒಂದೆಲ್ಲ-ಎರಡಲ್ಲ, ಹಲವು ಬಗೆಯ ಪ್ರಯೋಗ ಮತ್ತು ಪ್ರಾತ್ಯಕ್ಷಿಕೆಗಳನ್ನು ಏಕಕಾಲಕ್ಕೆ ಪ್ರದರ್ಶಿಸಲಾಗುತಿತ್ತು. ಇದೆನ್ನೆಲ್ಲ ಸೂಕ್ಷ್ಮವಾಗಿ ನೋಡುತ್ತಿದ್ದವರು ಅಚ್ಚರಿ ವ್ಯಕ್ತಪಡಿಸಿದರೆ, ಈ ಎಲ್ಲ ಪ್ರಯೋಗಗಳಿಗೆ ಕಾರಣಗಳೇನೂ ಎಂಬುದನ್ನು ವಿವರಿಸಲು ವಿದ್ಯಾರ್ಥಿಗಳು ಉತ್ಸುಕತೆಯಲ್ಲಿದ್ದರು.ನಗರದ ಸರ್ ಎಂ.ವಿ.ಸ್ಮಾರಕ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ವಿಜ್ಞಾನ ವಸ್ತುಪ್ರದರ್ಶನವು ಅಚ್ಚರಿ, ಬೆರಗು, ತಾಂತ್ರಿಕತೆ, ಪ್ರತಿಭೆ, ಉತ್ಸಾಹ ಮುಂತಾದವು ಗಳಿಗೆ ಅವಕಾಶ ಮಾಡಿಕೊಟ್ಟಿತು. ಎಂಜಿನಿಯ ರಿಂಗ್ ಪದವೀಧರರಿಗಿಂತ ತಾವೇನೂ ಕಮ್ಮಿ ಎಂಬಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಲವು ವಿಷಯಗಳ ಕುರಿತು ಪ್ರಾತ್ಯಕ್ಷಿಕೆಯನ್ನು ಸಾದರಪಡಿಸಿದರು. ಕಡಿಮೆ ವೆಚ್ಚದಲ್ಲಿ ತಂತ್ರಜ್ಞಾನವನ್ನು ಹೇಗೆ ಬಳಕೆ ಮಾಡಬಹುದು ಎಂಬುದರ ಕುರಿತು ವಿವರಣೆ ನೀಡಿದರು.ಶಾಲಾ ಕೊಠಡಿಗಳಲ್ಲಿ ಮತ್ತು ಆವರಣದಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ ವಸ್ತು ಪ್ರದರ್ಶನ ವೀಕ್ಷಿಸಲು ನಗರದ ವಿವಿಧ ಶಾಲೆ ಗಳಿಂದಲೂ ವಿದ್ಯಾರ್ಥಿಗಳು ಆಗಮಿಸಿದ್ದರು. ಬೇರೆ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಪ್ರಾತ್ಯಕ್ಷಿಕೆ ಸ್ಥಳದತ್ತ ಬಂದು ಸ್ವಲ್ಪ ಹೊತ್ತು ನಿಂತರೆ ಸಾಕು, ಪ್ರಾತ್ಯಕ್ಷಿಕೆಯನ್ನು ಸಿದ್ಧಪಡಿಸಿದ ವಿದ್ಯಾರ್ಥಿಗಳು ವಿವರಣೆ ನೀಡಲು ಆರಂಭಿಸುತ್ತಿದ್ದರು. ಗಣಿತ, ವಿಜ್ಞಾನ, ಆರೋಗ್ಯ, ಭೂಗೋಳ, ವಿದ್ಯುತ್ ಉತ್ಪಾದನೆ, ಪರಿಸರ ಅಧ್ಯಯನ ಮುಂತದ ವಿಷಯಗಳನ್ನು ಆಧರಿಸಿದ ಹಲವು ಪ್ರಾತ್ಯಕ್ಷಿಕೆಯನ್ನು ಅಲ್ಲಿ ಸಿದ್ಧಪಡಿಸಲಾಗಿತ್ತು.ಭಾರತಿ ಪ್ರೌಢಶಾಲೆಯ ಮೃದುಲಾ ಅವರು ಗಣಿತದ ಬಗ್ಗೆ ವಿವರಣೆ ನೀಡಿದರು. ವಿವಿಧ ಕೋನಗಳು ಮತ್ತು ಆಕಾರಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ ಅವರು ಗಣಿತ ವಿಷಯದ ಮಹತ್ವವನ್ನು ವಿವರಿಸಿದರು. ನೀರಿನ ಕಾರಂಜಿಯಲ್ಲಿ ಪುಟ್ಟದಾದ ಚೆಂಡು ಪುಟಿಯುತ್ತಿರುವ ಬಗ್ಗೆ ವಿವರಣೆ ನೀಡಿದ ವಿದ್ಯಾರ್ಥಿಗಳಾದ ನರೇಂದ್ರ ಮತ್ತು ಮಂಜುನಾಥ್, `ನೀರಿನ ರಭಸ ಮತ್ತು ವೇಗದಿಂದ ಚೆಂಡು ಪುಟಿಯುತ್ತದೆ. ಪ್ರಚನ್ನಶಕ್ತಿಯ ನೆರವಿನಿಂದ ಇದನ್ನು ಸಾದರಪಡಿಸಿದ್ದೇವೆ~ ಎಂದರು.ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿನಿಯರಾದ ಭಾನುಶ್ರೀ ಮತ್ತು ರಮ್ಯಶ್ರೀ ಅವರು ವಿದ್ಯುತ್ ಉತ್ಪಾದನೆ ಕುರಿತು ಮಾಹಿತಿ ನೀಡಿದರು. ಗೋಬರ್‌ಗ್ಯಾಸ್‌ನಿಂದ ಜ್ವಾಲೆಯನ್ನು ಹೊತ್ತಿಸಬಹುದು ಎಂಬುದರ ಕುರಿತು ಸರ್ ಎಂ.ವಿ. ಸ್ಮಾರಕ ಶಾಲೆಯ ಮೇಘಶ್ರೀ ಮತ್ತು ಸಂಜಯ್‌ಕುಮಾರ್ ವಿವರಣೆ ನೀಡಿದರು. ಭಾರತಿ ಪ್ರೌಢಶಾಲೆಯ ಮಾಲಾ ಅವರು ಹಬೆ ಉತ್ಪನ್ನದ ಕುರಿತು ಮಾಹಿತಿ ನೀಡಿದರು. ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿನಿಯರಾದ ನಾಡಿಯ ಮತ್ತು ರುಹುಮಾ ಅವರು ಪೌಷ್ಠಿಕಾಂಶವುಳ್ಳ ಆಹಾರದ ಮಹತ್ವವನ್ನು ವಿವರಿಸಿದರು.ಪೆರೇಸಂದ್ರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ವೈ.ವಿ.ಶ್ರೀನಿವಾಸ್ ಮತ್ತು ಎ.ಮಹೇಶ್ ಬಾಬು ಅವರು ನೀರಿನಿಂದ ವಿದ್ಯುತ್ ಉತ್ಪನ್ನ ಮಾಡುವುದರ ಬಗ್ಗೆ ಮಾಹಿತಿ ನೀಡಿದರೆ, ಅದೇ ರೀತಿಯ ಪ್ರಾತ್ಯಕ್ಷಿಕೆಯನ್ನು ಹಿಗ್ಗನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮನೋಜ್‌ಕುಮಾರ್ ಸಾದರಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry