ಬುಧವಾರ, ಜೂನ್ 16, 2021
22 °C

ಅಚ್ಚರಿ ಹುಟ್ಟಿಸಿದ ಮೆಹಫೂಜ್ ಅಲಿಖಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರು ತಿಂಗಳಿನಿಂದ ಸಿಬಿಐ ಅಧಿಕಾರಿಗಳಿಗೂ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ಬಳ್ಳಾರಿ ಗಣಿಧಣಿಯ ಬಲಗೈ ಬಂಟ ಮೆಹಫೂಜ್ ಅಲಿಖಾನ್ ಅಡಗಿಕೊಂಡಿದ್ದ ತಾಣ ಯಾವುದು?

- ಈ ಪ್ರಶ್ನೆಗೆ ಆತನ ಶರಣಾಗತಿಯ ಬಳಿಕವೂ ಉತ್ತರ ಸಿಕ್ಕಿಲ್ಲ. ಶುಕ್ರವಾರ ಬೆಳಿಗ್ಗೆ ಏಕಾಏಕಿ ನ್ಯಾಯಾಲಯಕ್ಕೆ ಶರಣಾಗಿರುವ ಅಲಿಖಾನ್ ಸಿಬಿಐ ಅಧಿಕಾರಿಗಳೇ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾನೆ.ಹೀಗೆ ಅಚ್ಚರಿ ಹುಟ್ಟುಹಾಕಿದ ಅಲಿಖಾನ್, ಕಂಪ್ಲಿ ಶಾಸಕ ಸುರೇಶ್‌ಬಾಬು ಅವರ ಸ್ನೇಹಿತ. ಎಂಜಿನಿಯರಿಂಗ್ ಶಿಕ್ಷಣದ ವೇಳೆ ಸಹಪಾಠಿಯಾಗಿದ್ದ ಈತನನ್ನು ಜನಾರ್ದನ ರೆಡ್ಡಿ ಅವರಿಗೆ ಪರಿಚಯಿಸಿದ್ದು ಸುರೇಶ್‌ಬಾಬು. ಕೆಲಕಾಲ ಆಪ್ತ ಸಹಾಯಕನಂತಿದ್ದ ಖಾನ್, ಕೆಲವೇ ದಿನಗಳಲ್ಲಿ ರೆಡ್ಡಿಯ ಅತಿ ನಂಬುಗೆಯ ವ್ಯಕ್ತಿಯಾಗಿದ್ದ. ಹೀಗಾಗಿಯೇ ಅವರ ಸಮಸ್ತ ವ್ಯವಹಾರಗಳನ್ನು ಬಲ್ಲವನೂ ಆಗಿದ್ದ.ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಜನಾರ್ದನ ರೆಡ್ಡಿ ಅವರನ್ನು ಸಿಬಿಐ ಅಧಿಕಾರಿಗಳು ಕಳೆದ ಸೆಪ್ಟೆಂಬರ್ 5ರಂದು ಬಂಧಿಸಿದ್ದರು. ನಂತರ ದಿಢೀರನೆ ಅಲಿಖಾನ್ ನಾಪತ್ತೆಯಾಗಿದ್ದ. ಆತನನ್ನು ಪತ್ತೆಹಚ್ಚಿಕೊಡುವಂತೆ ಸಿಬಿಐ, ಕರ್ನಾಟಕ ಮತ್ತು ಆಂಧ್ರಪ್ರದೇಶ ಪೊಲೀಸರಿಗೆ ಮನವಿ ಮಾಡಿತ್ತು. ಸ್ವತಃ ಸಿಬಿಐ ಅಧಿಕಾರಿಗಳೇ ಈತನ ಪತ್ತೆಗೆ ನಿರಂತರ ಪ್ರಯತ್ನ ನಡೆಸಿದ್ದರು. ಆದರೆ, ಯಾವ ಪ್ರಯತ್ನವೂ ಫಲ ಕೊಟ್ಟಿರಲಿಲ್ಲ.ಅಲಿಖಾನ್ ದುಬೈಗೆ ತೆರಳಿದ್ದಾನೆ ಎಂಬ ಮಾಹಿತಿ ಬೆನ್ನುಹತ್ತಿದ ಸಿಬಿಐ ಅಧಿಕಾರಿಗಳು ಅಲ್ಲಿಗೂ ಹೋಗಿ ಬರಿಗೈಲಿ ಮರಳಿದ್ದರು. ಇದಾದ ಬೆನ್ನಲ್ಲೇ ಈತ ಪಶ್ಚಿಮ ಬಂಗಾಳದಲ್ಲಿ ಅಡಗಿಕೊಂಡಿದ್ದಾನೆ ಎಂಬ ಮಾಹಿತಿ ತನಿಖಾ ತಂಡವನ್ನು ತಲುಪಿತ್ತು. ಅಲ್ಲಿಗೆ ತೆರಳಿದ್ದ ಸಿಬಿಐ ಪೊಲೀಸರು, ಹಲವೆಡೆ ಪರಿಶೀಲನೆ ನಡೆಸಿದ್ದರು. ಇದೆಲ್ಲದರ ನಡುವೆಯೇ ಅಲಿಖಾನ್ ಜೀವಂತವಾಗಿ ಉಳಿದಿರುವ ಬಗ್ಗೆಯೇ ಅನುಮಾನ ವ್ಯಕ್ತವಾಗಿತ್ತು. ಈ ಬಗ್ಗೆಯೂ ಬಳ್ಳಾರಿಯಿಂದ ಬೆಂಗಳೂರಿನವರೆಗೆ ತರಹೇವಾರಿ ವದಂತಿಗಳು ಹಬ್ಬಿದ್ದವು.ಆದರೆ ಎಲ್ಲ ವದಂತಿಗಳೂ ನಾಚುವಂತೆ ಆತ ಶುಕ್ರವಾರ ಬೆಳಿಗ್ಗೆ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಎಂ.ಅಂಗಡಿ ಅವರ ಎದುರು ಶರಣಾದ. ಹೀಗೆ ಆರು ತಿಂಗಳ ಕಾಲ ತನ್ನ ಜಾಡು ಸಿಗದಂತೆ ಅಡಗಿಕೊಂಡಿದ್ದ ವ್ಯಕ್ತಿ ದಿಢೀರನೆ ಶರಣಾಗಲು ಕಾರಣ ಏನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.ಕರ್ನಾಟಕದಲ್ಲೇ ಇದ್ದನೇ?:
ಅಲಿಖಾನ್ ರಾಜ್ಯವನ್ನು ತೊರೆದು ಹೊರಕ್ಕೆ ಹೋಗಿರಲಿಲ್ಲ. ಆತನ ಪತ್ನಿ ಗರ್ಭಿಣಿಯಾಗಿದ್ದ ಹಿನ್ನೆಲೆಯಲ್ಲಿ ಬಳ್ಳಾರಿಯ ಸುತ್ತಮುತ್ತವೇ ಉಳಿದುಕೊಂಡಿದ್ದ. ಹರಪನಹಳ್ಳಿ ಸಮೀಪ ಅಡಗಿಕೊಂಡಿರುವ ಬಗ್ಗೆ ಸಿಬಿಐ ಅಧಿಕಾರಿಗಳಿಗೆ ಇತ್ತೀಚೆಗೆ ಮಾಹಿತಿ ಲಭ್ಯವಾಗಿತ್ತು. ಸಿಬಿಐ ಬಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಖಚಿತವಾದ ಹಿನ್ನೆಲೆಯಲ್ಲೇ ಈತ ದಿಢೀರ್ ಶರಣಾದ ಎನ್ನುತ್ತದೆ ಒಂದು ಮೂಲ.ಇನ್ನೊಂದು ಮೂಲದ ಪ್ರಕಾರ, ಅಲಿಖಾನ್ ನಾಪತ್ತೆಯೇ ಜನಾರ್ದನ ರೆಡ್ಡಿಗೆ ಕಾನೂನು ಹೋರಾಟದಲ್ಲಿ ಹಿನ್ನಡೆ ಆಗುವುದಕ್ಕೆ ಕಾರಣ ಎಂಬ ಭಾವನೆ ರೆಡ್ಡಿ ಪಾಳೆಯದಲ್ಲಿ ಮೂಡಿತ್ತು. ಅಲಿಖಾನ್ ಶರಣಾದರೆ ರೆಡ್ಡಿಗೆ ಅನುಕೂಲಕರ ವಾತಾವರಣ ನಿರ್ಮಾಣ ಆಗಬಹುದು ಎಂಬ ಊಹೆಯ ಮೇಲೆ ಆತನನ್ನು ಮನವೊಲಿಸಿ ಕರೆತರಲಾಗಿತ್ತು.ತನಿಖೆಗೆ ವೇಗ: ಖಾನ್ ಶರಣಾಗತಿಯೊಂದಿಗೆ ಜನಾರ್ದನ ರೆಡ್ಡಿ ವಿರುದ್ಧದ ತನಿಖೆಗೆ ಮಹತ್ವದ ತಿರುವು ದೊರೆತಿದೆ. ರೆಡ್ಡಿ ಪಾಳೆಯದ ಸಮಸ್ತ ವ್ಯವಹಾರಗಳ ಮಾಹಿತಿಯನ್ನು ಹೊರತೆಗೆಯುವುದು ಈಗ ಸಿಬಿಐಗೆ ಸುಲಭವಾಗುವ ಸಾಧ್ಯತೆ ಇದೆ.ಈತನ ಮನೆಯಿಂದ ವಶಪಡಿಸಿಕೊಂಡಿದ್ದ ಎಂಟು ಲ್ಯಾಪ್‌ಟಾಪ್‌ಗಳಲ್ಲಿದ್ದ ಮಾಹಿತಿಯನ್ನು ಜೋಡಿಸುವಲ್ಲಿ ಈತನ ಲಭ್ಯತೆ ಅನುಕೂಲವಾಗಲಿದೆ. ಅಷ್ಟೇ ಅಲ್ಲದೇ, ಜನಾರ್ದನ ರೆಡ್ಡಿ ಮತ್ತು ಅವರ ಸಹಚರರ ಹೆಸರಿನಲ್ಲಿ ವಿವಿಧ ದೇಶಗಳಲ್ಲಿ ಮಾಡಿರುವ ಹೂಡಿಕೆಯ ಪತ್ತೆಗೂ ನೆರವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.