ಗುರುವಾರ , ಡಿಸೆಂಬರ್ 12, 2019
17 °C

ಅಚ್ಚಲು ಗ್ರಾಮದಲ್ಲಿ ಗಜಪಡೆ ಪ್ರತ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಚ್ಚಲು ಗ್ರಾಮದಲ್ಲಿ ಗಜಪಡೆ ಪ್ರತ್ಯಕ್ಷ

ಕನಕಪುರ: ಮಾಗಡಿ, ಆನೇಕಲ್‌ನಲ್ಲಿ ರಂಪಾಟ ಮಾಡಿದ್ದ ಆನೆಗಳು ಈಗ ತಾಲ್ಲೂಕಿನ ಅಚ್ಚಲು ಗ್ರಾಮದ ರೈತರ ಜಮೀನುಗಳ ಆಸು-ಪಾಸಿನಲ್ಲಿ ಕಾಣಿಸಿಕೊಂಡು, ರೈತರಲ್ಲಿ ಆತಂಕ ಮೂಡಿಸಿವೆ.ವರ್ಷದ ಆರಂಭದ ದಿನದಿಂದಲೇ ತಾಲ್ಲೂಕಿನ ಕಾಡಂಚಿನ ಗ್ರಾಮಗಳ ರೈತರನ್ನು ಕಾಡುತ್ತಿರುವ ಈ ಕಾಡಾನೆಗಳು, ಕೊಯ್ಲಾದ ಬೆಳೆಗಳನ್ನು ನಾಶ ಮಾಡುತ್ತಿವೆ. ಒಂದು ತಿಂಗಳಿನಿಂದ ಕಾಡು ಬಿಟ್ಟು, ನಾಡು ಸೇರಿರುವ ಗಜಪಡೆಗಳು ಭಾನುವಾರ ರಾತ್ರಿ ತಾಲ್ಲೂಕಿನ ದೊಡ್ಡಆಲಹಳ್ಳಿ , ದೊಡ್ಡಮರಳವಾಡಿ, ಸಾತನೂರು ಸೇರಿದಂತೆ ವಿವಿಧ ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಂಡಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಕಾಡಿಗೆ ಅಟ್ಟುವ ಪ್ರಯತ್ನ ಮಾಡಿದ್ದರೂ, ಅವುಗಳು ಮತ್ತೆ ಮತ್ತೆ ತಾಲ್ಲೂಕಿನ ಸಾತನೂರು, ಹೂಕುಂದ, ಅಚ್ಚಲು, ಸೊರೇಕಾಯಿದೊಡ್ಡಿ ಗ್ರಾಮಗಳಲ್ಲಿ ಕಾಣಿಸಿಕೊಂಡಿವೆ.`ಬೇಸಿಗೆ ಆರಂಭವಾಗಿದ್ದು, ಕಾಡಿನಲ್ಲಿ ನೀರು ಮತ್ತು ಆಹಾರದ ಕೊರತೆ ಉಂಟಾಗಿದೆ. ಹಾಗಾಗಿ ಆನೆಗಳು ಗ್ರಾಮಗಳತ್ತ ಮುಖಮಾಡಿವೆ. ಅಲ್ಲದೇ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕೂಡ ಆನೆಗಳು ಕಾಡು ತೊರೆಯಲು ಕಾರಣವಾಗಿದೆ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು~ ಎಂದು ರೈತರು ಹೇಳುತ್ತಾರೆ. ಅರಣ್ಯ ಸಚಿವ ಸಿ.ಪಿ. ಯೋಗೀಶ್ವರ್, ಕಾಡನೆಗಳ ದಾಳಿಗೆ ಶಾಶ್ವತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.  ಆದರೆ ಆ ಭರವಸೆ ಕೇವಲ ಕಾಗದದ ಮೇಲಷ್ಟೇ ಸೀಮಿತವಾಗಿದೆ ರೈತರು ಟೀಕಿಸಿದ್ದಾರೆ.ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೆ ಎಚೆತ್ತುಕೊಂಡು ಆನೆಗಳನ್ನು ಶಾಶ್ವತವಾಗಿ ಕಾಡಿಗೆ ಅಟ್ಟುವ ಕೆಲಸ ಮಾಡಬೇಕು. ಕಾಡಿನ ಆಸು-ಪಾಸಿನಲ್ಲಿರುವ ಜಮೀನಿನ ಬೆಳೆಗಳನ್ನು ರಕ್ಷಿಸಲು ಕಾಡಂಚಿನಲ್ಲಿ ಆಳವಾದ ಟ್ರಂಚ್‌ಗಳನ್ನು ನಿರ್ಮಿಸಿ ಆನೆಗಳು ಗ್ರಾಮಗಳಿಗೆ ನುಗ್ಗದಂತೆ ತಡಗಟ್ಟಬೇಕು. ಆನೆದಾಳಿಯಿಂದ ಬೆಳೆನಷ್ಟವಾಗಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)