ಬುಧವಾರ, ಮೇ 18, 2022
27 °C
ಕೃಷ್ಣಾ ಮೇಲ್ದಂಡೆ ಯೋಜನೆ: ಉನ್ನತಾಧಿಕಾರದ ನೀರಾವರಿ ಸಲಹೆ ಸಮಿತಿ

ಅಚ್ಚುಕಟ್ಟು ಪ್ರದೇಶದ ಶಾಸಕರು ಕೇವಲ ಆಹ್ವಾನಿತರು!

ಪ್ರಜಾವಾಣಿ ವಾರ್ತೆ/ಚಿದಂಬರಪ್ರಸಾದ Updated:

ಅಕ್ಷರ ಗಾತ್ರ : | |

ಅಚ್ಚುಕಟ್ಟು ಪ್ರದೇಶದ ಶಾಸಕರು ಕೇವಲ ಆಹ್ವಾನಿತರು!

ಯಾದಗಿರಿ: ನಾರಾಯಣಪುರದ ಬಸವಸಾಗರ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ನೀರು ಹರಿಸುವ ನಿರ್ಧಾರ ಕೈಗೊಳ್ಳುವುದಕ್ಕಾಗಿಯೇ ನೀರಾವರಿ ಸಲಹಾ ಸಮಿತಿ ರಚಿಸಲಾಗಿದ್ದು, ಕಳೆದ ಎಂಟು ವರ್ಷಗಳಿಂದ ಅಚ್ಚುಕಟ್ಟು ಪ್ರದೇಶದ ಶಾಸಕರಿಗೇ ಈ ಸಮಿತಿ ಸದಸ್ಯತ್ವ ಇಲ್ಲವಾಗಿದೆ!1989 ರಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶಕ್ಕಾಗಿ ನೀರಾವರಿ ಸಲಹಾ ಸಮಿತಿ ರಚಿಸಲಾಯಿತು. ಅಚ್ಚುಕಟ್ಟು ಪ್ರದೇಶಕ್ಕೆ ಸಂಬಂಧಪಟ್ಟ ನೀರಿನ ವ್ಯವಸ್ಥೆ ನಿಯಂತ್ರಿಸುವಲ್ಲಿ ಉನ್ನತ ಅಧಿಕಾರವುಳ್ಳ ಸಮಿತಿ ಇದಾಗಿದೆ.ಪ್ರತಿ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಸಭೆ ಸೇರಿ, ಎಲ್ಲಿಂದ ಎಲ್ಲಿಯವರೆಗೆ ಕಾಲುವೆಗೆ ನೀರು ಹರಿಸಬೇಕು ಎನ್ನುವ ನಿರ್ಧಾರ ಕೈಗೊಳ್ಳುತ್ತದೆ. ಅಲ್ಲದೇ ಜಲಾಶಯದಲ್ಲಿ ಸಂಗ್ರಹವಿರುವ ನೀರಿನ ಪ್ರಮಾಣವನ್ನು ಅವಲೋಕಿಸಿ, ಯಾವ ಬೆಳೆ ಬೆಳೆಯಬೇಕು ಎಂದು ಸೂಚಿಸುವ ಅಧಿಕಾರವೂ ಸಮಿತಿಗೆ ಇದೆ.ಆದರೆ ಅಚ್ಚುಕಟ್ಟು ಪ್ರದೇಶದ ರೈತರು, ಜನರ ಪ್ರತಿನಿಧಿಗಳಾಗಿರುವ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೇ ಈ ಸಮಿತಿಯ ಸದಸ್ಯತ್ವ ನೀಡಿಲ್ಲ. ಅವರು ಕೇವಲ ವಿಶೇಷ ಆಹ್ವಾನಿತರಾಗಿದ್ದು, ಸಭೆಯ ನೋಟೀಸ್‌ಗಳನ್ನೂ ಅವರಿಗೆ ಕಳುಹಿಸುವುದಿಲ್ಲ. ಆಸಕ್ತಿ ಇದ್ದರೆ ಶಾಸಕರೇ ಸಭೆಯಲ್ಲಿ ಭಾಗವಹಿಸಬಹುದು ಎಂದು ಹೇಳಲಾಗುತ್ತಿದೆ.ಮೊದಲಿನಿಂದಲೂ ನೀರಾವರಿಗೆ ಒಳಪಡುವ ಕ್ಷೇತ್ರ ವ್ಯಾಪ್ತಿಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರಿಗೆ ಸಲಹಾ ಸಮಿತಿ ಸಭೆಯ ಸದಸ್ಯತ್ವ ನೀಡಲಾಗಿತ್ತು. ಆದರೆ ಎಂಟು ವರ್ಷಗಳಿಂದ ಶಾಸಕರಿಗೆ ಸದಸ್ಯತ್ವ ನೀಡಲಾಗಿಲ್ಲ. ಆಯಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಶಾಸಕರು, ಸಂಸದರು ಅಲ್ಲಿನ ಜನರ ನೋವುಗಳನ್ನು ಬಲ್ಲವರಾಗಿದ್ದು, ಅವರಿಗೇ ಸದಸ್ಯತ್ವ ನೀಡದಿದ್ದರೆ ಹೇಗೆ ಎಂದು ಶಾಸಕ ಗುರುಪಾಟೀಲ ಸಿರವಾಳ ಪ್ರಶ್ನಿಸುತ್ತಾರೆ.ಸಲಹಾ ಸಮಿತಿ ಸದಸ್ಯತ್ವ ನೀಡುವಂತೆ ಒತ್ತಾಯಿಸುತ್ತಿದ್ದರೂ, ಅಂತಹ ಯಾವುದೇ ಪ್ರಯತ್ನ ಇದುವರೆಗೆ ಮಾಡಿಲ್ಲ. ನಾರಾಯಣಪುರ ಜಲಾಶಯ ಇರುವ ಯಾದಗಿರಿ ಜಿಲ್ಲೆಯ ಯಾವೊಬ್ಬ ಶಾಸಕರಿಗೂ ಸಲಹಾ ಸಮಿತಿ ಸದಸ್ಯತ್ವ ಇಲ್ಲದೇ ಇರುವುದು ಸರಿಯಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.ನೀರಾವರಿ ಸಲಹಾ ಸಮಿತಿಯಲ್ಲಿ ಶಾಸಕರಿಗೆ ಸದಸ್ಯತ್ವ ರದ್ದುಪಡಿಸಲಾಗಿದೆ. ಕೇವಲ ರೈತ ಪ್ರತಿನಿಧಿಗಳು, ಅಧಿಕಾರಿಗಳನ್ನು ಒಳಗೊಂಡ ನೀರಾವರಿ ಸಲಹಾ ಸಮಿತಿಯಿಂದ ರೈತರ ಬವಣೆಯನ್ನು ನಿವಾರಿಸಲು ಸಾಧ್ಯವೇ ಇಲ್ಲ ಎನ್ನುವುದು ಬಿಎಸ್ಸಾರ್ ಕಾಂಗ್ರೆಸ್ ಮುಖಂಡ ಶಂಕ್ರಣ್ಣ ವಣಿಕ್ಯಾಳ ಅಭಿಪ್ರಾಯ.ನೆಪ ಮಾತ್ರಕ್ಕೆ ಸಭೆ: ವರ್ಷದಲ್ಲಿ ಮೂರು ಬಾರಿ ಮಾತ್ರ ಈ ಸಮಿತಿ ಸಭೆ ಕರೆಯಲಾಗುತ್ತದೆ. ಆಲಮಟ್ಟಿ ಮತ್ತು ಜಿಲ್ಲೆಯ ಭೀಮರಾಯನಗುಡಿಯಲ್ಲಿ ಸಭೆ ಕರೆಯಲಾಗುತ್ತಿತ್ತು.ಆದರೆ ಸಭೆಯಲ್ಲಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ವಾಸ್ತವ ಸ್ಥಿತಿಯ ಬಗ್ಗೆ ಗಂಭೀರ ಚರ್ಚೆ ಆಗುತ್ತಲೇ ಇಲ್ಲ. ಜಲಾಶಯದ ನೀರಿನ ಮಟ್ಟ, ನೀರು ಹರಿಸುವ ಮತ್ತು ಸ್ಥಗಿತಗೊಳಿಸುವ ದಿನಾಂಕ ಹಾಗೂ ಬೆಳೆ ಪದ್ಧತಿ ಉಲ್ಲಂಘಿಸುವ ಬಗ್ಗೆ ಮಾತ್ರ ಸಭೆಯಲ್ಲಿ ಮೂರು ಸಾಲಿನ ನಿರ್ಣಯ ಕೈಗೊಳ್ಳಲಾಗುತ್ತದೆ. ಕೇವಲ 10 ರಿಂದ 15 ನಿಮಿಷದಲ್ಲಿಯೇ ಸಭೆ ಮುಗಿದು ಹೋಗುತ್ತದೆ.ಇದರಿಂದಾಗಿ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲು ಅವಕಾಶವೇ ಇಲ್ಲದಂತಾಗಿದ್ದು, ಕೇವಲ ಕಾಟಾಚಾರದ ಸಭೆ ನಡೆಸಿದಂತಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ) ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ದೂರುತ್ತಾರೆ.ಸಮಿತಿಯಲ್ಲಿ ಅರ್ಹರಿಗೆ ಸದಸ್ಯತ್ವ ನೀಡಬೇಕು. ರೈತ ಮುಖಂಡರು, ರೈತರು, ನೀರಾವರಿ ತಜ್ಞರು, ಜನಪ್ರತಿನಿಧಿಗಳು ಜೊತೆಗೆ ಸಂಬಂಧಿಸಿದ ನಿಗಮ ಎಂಜಿನಿಯರ್‌ಗಳು ಇದ್ದರೆ ನಿಜವಾದ ಚರ್ಚೆಗಳು ನಡೆಯಲು ಸಾಧ್ಯ.ಕೇವಲ ಅಧಿಕಾರಿಗಳು ಓದುವ ಮೂರು ಸಾಲಿನ ನಿರ್ಣಯಕ್ಕೆ ಒಪ್ಪಿಗೆ ನೀಡುವ ಸಭೆ ಆಗುತ್ತಿರುವುದು ಸರಿಯಲ್ಲ. ಇದರಿಂದ ರೈತರ ಸಮಸ್ಯೆಗಳೂ ಪರಿಹಾರ ಆಗುವುದಿಲ್ಲ ಎಂದು ಹೇಳುತ್ತಾರೆ.ನಾಲ್ಕು ಜಿಲ್ಲೆಗಳಿಗೆ ನೀರಾವರಿ: ವಿಜಾಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕಿಂತಲೂ ನಾರಾಯಣಪುರ ಜಲಾಶಯದಿಂದಲೇ ಹೆಚ್ಚಿನ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ.ಆಲಮಟ್ಟಿಯಲ್ಲಿ ನೀರಿನ ಸಂಗ್ರಹ ಮಾಡಲಾಗುತ್ತಿದ್ದು, ನಾರಾಯಣಪುರ ಜಲಾಶಯದಿಂದ ಕಾಲುವೆ ನೀರು ಹರಿಸಲಾಗುತ್ತದೆ. ನಾರಾಯಣಪುರ ಜಲಾಶಯದಿಂದ ವಿಜಾಪುರ, ಯಾದಗಿರಿ, ಗುಲ್ಬರ್ಗ ಹಾಗೂ ರಾಯಚೂರು ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.ಹೀಗಾಗಿ ನಾರಾಯಣಪುರ ಜಲಾಶಯದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯನ್ನು ಹೊಂದಿರುವ ನಾಲ್ಕೂ ಜಿಲ್ಲೆಗಳ ಶಾಸಕರಿಗೆ ಸದಸ್ಯತ್ವ ನೀಡಬೇಕು ಎನ್ನುವ ಬೇಡಿಕೆ ಹಲವಾರು ವರ್ಷಗಳಿಂದ ಕೇಳಿ ಬರುತ್ತಲೇ ಇದೆ.ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರೇ, ಶಾಸಕರಿಗೂ ಸದಸ್ಯತ್ವ ನೀಡುವಂತೆ ಒತ್ತಾಯ ಮಾಡಿದ್ದರು.ಜನಪ್ರತಿನಿಧಿಗಳಿಗೆ ಸದಸ್ಯತ್ವ: ಸರ್ಕಾರಕ್ಕೆ ಪ್ರಸ್ತಾವನೆ?

ಯಾದಗಿರಿ:
ನೀರಾವರಿ ಸಲಹಾ ಸಮಿತಿ ಸದಸ್ಯರನ್ನಾಗಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರನ್ನು ನೇಮಕ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದ್ದಾರೆ.ಒಂದೆರಡು ದಿನಗಳಲ್ಲಿ ಸರ್ಕಾರದಿಂದ ಇದಕ್ಕೆ ಅನುಮೋದನೆ ಸಿಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಸದಸ್ಯತ್ವಕ್ಕಾಗಿ ಒತ್ತಾಯಿಸಿದ್ದ ಎಂ.ಬಿ. ಪಾಟೀಲರೇ ಇದೀಗ ಜಲಸಂಪನ್ಮೂಲ ಸಚಿವರಾಗಿದ್ದು, ಈ ಪ್ರದೇಶಗಳ ಶಾಸಕರಿಗೆ ಸದಸ್ಯತ್ವ ನೀಡುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂಬ ಆಶಾಭಾವನೆ ಮೂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.