ಅಜಯ್‌ಗೆ ಸೋಲು

7
ಬ್ಯಾಡ್ಮಿಂಟನ್‌: ಭಾರತದ ಸವಾಲು ಅಂತ್ಯ

ಅಜಯ್‌ಗೆ ಸೋಲು

Published:
Updated:

ಚಾಂಗ್‌ಜೌ, ಚೀನಾ (ಪಿಟಿಐ): ಭಾರತದ ಅಜಯ್‌ ಜಯರಾಮ್‌ ಮತ್ತು ಆನಂದ್‌ ಪವಾರ್‌ ಚೀನಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೋತು ಹೊರಬಿದ್ದರು.

ಒಲಿಂಪಿಕ್‌ ಸ್ಪೋರ್ಟ್ಸ್ ಸೆಂಟರ್‌ ಕ್ಸಿನ್‌ಚೆಂಗ್‌ ಜಿಮ್ನಾಶಿಯಂನ ಕೋರ್ಟ್‌ನಲ್ಲಿ ಗುರುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಅಜಯ್‌ 14–21, 21–23 ರಲ್ಲಿ ಚೀನಾದ ಯುಕುನ್‌ ಚೆನ್‌ ಕೈಯಲ್ಲಿ ಪರಾಭವಗೊಂಡರು.ವಿಶ್ವ ರ್‍್ಯಾಂಕ್‌ನಲ್ಲಿ 24ನೇ ಸ್ಥಾನದಲ್ಲಿರುವ ಅಜಯ್‌ ತನಗಿಂತ ಕೆಳಗಿನ ರ್‍್ಯಾಂಕ್‌ (30) ಹೊಂದಿರುವ ಎದುರಾಳಿಯ ವಿರುದ್ಧ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾದರು. 36 ನಿಮಿಷಗಳ ಹೋರಾಟದ ಬಳಿಕ ಚೆನ್‌ ಗೆಲುವು ತಮ್ಮದಾಗಿಸಿಕೊಂಡರು.ಇತ್ತೀಚೆಗೆ ನಡೆದ ಇಂಡಿಯನ್‌ ಬ್ಯಾಡ್ಮಿಂಟನ್‌ ಲೀಗ್‌ ಟೂರ್ನಿಯಲ್ಲಿ ಅತ್ಯುತ್ತಮ ಆಟ ತೋರಿದ್ದ ಅಜಯ್‌ಗೆ ಅದೇ ರೀತಿಯ ಪ್ರದರ್ಶನ ನೀಡಲು ಆಗಲಿಲ್ಲ. ಭಾರತದ ಇನ್ನೊಬ್ಬ ಆಟಗಾರ ಆನಂದ್‌ ಪವಾರ್‌ ಎರಡನೇ ಸುತ್ತಿನಲ್ಲಿ ಸೋಲು ಅನುಭವಿಸಿದರು. ಅವರು 21–12, 14–21, 16–21 ರಲ್ಲಿ ಜಪಾನ್‌ನ ಶೊ ಸಸಾಕಿ ಎದುರು ಪರಾಭವಗೊಂಡರು.ಈ ಪಂದ್ಯ 55 ನಿಮಿಷಗಳ ಕಾಲ ನಡೆಯಿತು. 27ರ ಹರೆಯದ ಆನಂದ್‌ ಮೊದಲ ಗೇಮ್‌ಅನ್ನು ಸುಲಭದಲ್ಲಿ ಗೆದ್ದುಕೊಂಡರು. ವಿಶ್ವ ರ್‍್ಯಾಂಕ್‌ನಲ್ಲಿ 37ನೇ ಸ್ಥಾನದಲ್ಲಿರುವ ಭಾರತದ ಆಟಗಾರ ಬಳಿಕ ಪಂದ್ಯದ ಮೇಲಿನ ಹಿಡಿತ ಕೈಬಿಟ್ಟರು. 22 ನೇ ರ್‍್ಯಾಂಕ್‌ನ ಆಟಗಾರ ಸಸಾಕಿ ಎರಡನೇ ಗೇಮ್‌ನ ಆರಂಭದಲ್ಲೇ 8–0 ಮೇಲುಗೈ ಪಡೆದರು. ಆ ಮುನ್ನಡೆಯನ್ನು ಕೊನೆಯವರೆಗೂ ಕಾಪಾಡಿಕೊಂಡು ಪಂದ್ಯದಲ್ಲಿ ಸಮಬಲ ಸಾಧಿಸಿದರು.

ನಿರ್ಣಾಯಕ ಗೇಮ್‌ನ ಆರಂಭದಲ್ಲಿ ತುರುಸಿನ ಪೈಪೋಟಿ ಕಂಡುಬಂತು. ಜಪಾನ್‌ನ ಆಟಗಾರ  ಒಂದು ಹಂತದಲ್ಲಿ 11–10 ರಲ್ಲಿ ಅಲ್ಪ ಮುನ್ನಡೆ ಸಾಧಿಸಿದ್ದರು. ಆ ಬಳಿಕ ಸತತ ಏಳು ಪಾಯಿಂಟ್‌ ಕಲೆಹಾಕಿ ಆನಂದ್‌ ಮೇಲೆ ಒತ್ತಡ ಹೇರಿ ಪಂದ್ಯ ಗೆದ್ದುಕೊಂಡರು. ಇವರಿಬ್ಬರು ಸೋಲು ಅನುಭವಿಸಿದ ಕಾರಣ ಟೂರ್ನಿಯಲ್ಲಿ ಭಾರತದ ಸವಾಲು ಕೊನೆಗೊಂಡಿದೆ. ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಯಾರೂ ಪಾಲ್ಗೊಂಡಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry