ಅಜಾದ್ ನಗರ: ಮೂಲ ಸೌಕರ್ಯದಿಂದ ದೂರ

7

ಅಜಾದ್ ನಗರ: ಮೂಲ ಸೌಕರ್ಯದಿಂದ ದೂರ

Published:
Updated:

ಕೋಲಾರ: ನಗರದಿಂದ ಸಿಡಿದು ಹೊರ ಬಿದ್ದ ಚೂರಿನಂತೆ ಕಾಣುವ, 35ನೇ ವಾರ್ಡಿಗೆ ಸೇರಿದ ಆಜಾದ್‌ನಗರದಲ್ಲಿ ಮೂಲಸೌಕರ್ಯಗಳೂ ದೂರವೇ ಉಳಿದಿವೆ.ಈ ಪ್ರದೇಶವನ್ನು ನಗರಸಭೆಯಲ್ಲಿ ಪ್ರತಿನಿಧಿಸುವ ಸದಸ್ಯೆ ನಾಜಿಯಾ ಅಧ್ಯಕ್ಷೆಯಾದರೂ ಪ್ರಯೋಜನವಿಲ್ಲದಂತಾಗಿದೆ ಎಂಬ ಅಸಮಾಧಾನ, ಶೋಕದಲ್ಲಿ ಇಲ್ಲಿನ ಬಹುತೇಕ ಬಡ ಕೂಲಿ ಕಾರ್ಮಿಕ ಜನ ದಿನ ನೂಕುತ್ತಿದ್ದಾರೆ.

 

ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ಫೆ.17ರಂದು ನಗರಸಭೆ ಆವರಣದಲ್ಲಿ ನಡೆಸಿದ ಧರಣಿ-ಪ್ರತಿಭಟನೆಯಿಂದ ಇನ್ನೂ ಪ್ರಯೋಜನವಾಗಿಲ್ಲ. ಆಜಾದ್ ನಗರ ನಗರಸಭೆ ಪಾಲಿಗೆ ಇದ್ದೂ ಇಲ್ಲದಂತಾಗಿದೆ ಎಂದು ಇಲ್ಲಿನ ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ.ಕೋಲಾರ-ಚಿಕ್ಕಬಳ್ಳಾಪುರ ರಸ್ತೆಯ ಅರಹಳ್ಳಿ ಕ್ರಾಸ್ ಮೂಲಕ ಹೋದರೆ ಆಜಾದ್ ನಗರ ಕೋಡಿಕಣ್ಣೂರು ಕೆರೆಯ ಪಶ್ಚಿಮ ದಿಕ್ಕಿನ ತುದಿಯಲ್ಲಿರುವುದು ಕಾಣುತ್ತದೆ. ಅಲ್ಲಿ ಕುಡಿಯುವ ನೀರಿನ ಸಮಸ್ಯೆಯೇ ಹೆಚ್ಚು.500ಕ್ಕೂ ಹೆಚ್ಚು ಜನರಿರುವ ಅಲ್ಲಿ 2 ಕೊಳವೆಬಾವಿಗಳಿವೆ. ಒಂದು ಕೆಲಸ ಮಾಡುತ್ತಿಲ್ಲ. ಮತ್ತೊಂದರಲ್ಲಿ ನೀರಿಲ್ಲ. ಈ ಸಮಸ್ಯೆ ಪರಿಹರಿಸಲೆಂದೇ ಹಲವು ತಿಂಗಳ ಹಿಂದೆಯೇ ಹೊಸ ಕೊಳವೆಬಾವಿ ಕೊರೆಯಲಾಗಿದೆ. ಆದರೆ ಅದಕ್ಕೆ ಪಂಪ್-ಮೋಟರ್ ಭಾಗ್ಯ ಇನ್ನೂ ದಕ್ಕಿಲ್ಲ. ಇಲ್ಲಿ ಒಂದು ಮಸೀದಿ ಇದೆ. ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯೂ ಇದೆ.ಕೊಳವೆಬಾವಿ ಮೂಲಕ ಬರವ ನೀರು ಸಂಗ್ರಹಣೆಗೆಂದು ಕೆರೆಯ ಹಳ್ಳದ ತುದಿಯಲ್ಲೆ ಸಾರ್ವಜನಿಕ ನಲ್ಲಿ ಹಾಕಲಾಗಿದೆ. ಅಲ್ಲಿ ಅರ್ಧ, ಮುಕ್ಕಾಲು ಗಂಟೆಯಷ್ಟೆ ಸಣ್ಣಗೆ ಬರುವ ನೀರು ಯಾರಿಗೂ ಸಾಕಾಗುವುದಿಲ್ಲ. ಅದಕ್ಕೂ ಜಗಳವಾಡುವುದು ಅನಿವಾರ್ಯ. ನಗರಸಭೆ ಪೂರೈಸುವ ಟ್ಯಾಂಕರ್ ನೀರು ಕೂಡ ಸಾಲದಾಗಿದೆ. ನಿಯಮಿತವಾಗಿ ಟ್ಯಾಂಕರ್ ಬರುವುದಿಲ್ಲ. ಹೀಗಾಗಿ ಅಲ್ಲಿನ ಜನ ಹತ್ತಾರು ದಿನಗಳಿಂದ ನೀರಿಗಾಗಿ ಪರದಾಡುತ್ತಿದ್ದಾರೆ.ಒಳಚರಂಡಿ ಇಲ್ಲ: ಈ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ವಿಪರ್ಯಾಸವೆಂದರೆ, ನಾಲ್ಕು ವರ್ಷದ ಹಿಂದೆಯೇ ಇಲ್ಲಿ ಒಳಚರಂಡಿ ನಿರ್ಮಿಸಲು ಹಣ ಬಿಡುಗಡೆಯಾಗಿದೆ. ಆ ನಿಟ್ಟಿನಲ್ಲಿ ಪೈಪ್ ಕೂಡ ತಂದಿಡಲಾಗಿತ್ತು. ಆದರೆ  ಈಗ, ನಗರದಲ್ಲಿ ಬೇರೆ ಕಡೆ ನಡೆಯುತ್ತಿರುವ ಯೋಜನೆಗಳಿಗೆ ಅಗತ್ಯ ಬಿದ್ದಾಗ ಈ ಪೈಪ್‌ಗಳನ್ನು ನಗರಸಭೆಯವರು ಸಾಗಿಸುತ್ತಿದ್ದಾರೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.ರಸ್ತೆ ಬದಿ ತೆರೆದ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಕಸ ತುಂಬಿಕೊಂಡಿದೆ. ಕೆಲವು ರಸ್ತೆಗಳಲ್ಲಿ ಚರಂಡಿಯಿಂದ ಕಸ ತೆಗೆದು ಪಕ್ಕದಲ್ಲೆ ಹಾಕಲಾಗಿದೆ. ಕಾರ್ಯನಿರತ ಕೊಳವೆಬಾವಿ ಮತ್ತು ಪ್ಯಾನಲ್‌ಬೋರ್ಡ್ ಸಮೀಪವೇ ಕಸದ ರಾಶಿ ಹಲವು ತಿಂಗಳಿಂದ ಇದೆ. ವಿಲೇವಾರಿ ಮಾಡಲು ಯಾರೂ ಬಂದಿಲ್ಲ ಎಂಬುದು ನಿವಾಸಿಗಳ ದೂರು.ಕತ್ತಲು: ವಿದ್ಯುತ್ ದೀಪದ ವ್ಯವಸ್ಥೆಯೂ ಈ ನಗರದಲ್ಲಿ ಸಮರ್ಪಕವಾಗಿಲ್ಲ. ರಸ್ತೆಗಳಲ್ಲಿ ದೀಪದ ಕಂಬಗಳನ್ನು ಅಗತ್ಯವಿರುವಷ್ಟು ಅಳವಡಿಸದಿರುವುದರಿಂದ ನಿತ್ಯವೂ ರಾತ್ರಿ ಕಾಡಿನ ಕತ್ತಲಲ್ಲಿರುವಂಥ ಅನಿವಾರ್ಯ ಸೃಷ್ಟಿಯಾಗಿದೆ. ಹಾವುಗಳ ಕಾಟವೂ ಹೆಚ್ಚಿದೆ. ಸಂಜೆಯಾದ ಬಳಿಕ ಮಕ್ಕಳು, ಮಹಿಳೆಯರು ಧೈರ್ಯವಾಗಿ ಓಡಾಡಲು ಇಲ್ಲಿ ಸಾಧ್ಯವಿಲ್ಲ ಎಂಬುದು ನಿವಾಸಿ ಗೌಸ್‌ಪೀರ್ ಅವರ ಅಸಹಾಯ ನುಡಿ.ಮತ್ತೆ ಧರಣಿ: ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಧರಣಿ ನಡೆಸಿದಾಗ, ಮಂಗಳವಾರ ಪರಿಶೀಲನೆಗೆ ಬರುವುದಾಗಿ ಅಧ್ಯಕ್ಷೆ ನಾಜಿಯಾ ಭರವಸೆ ನೀಡಿದ್ದಾರೆ. ನಾವು ಮಂಗಳವಾರದವರೆಗೂ ಕಾಯುತ್ತೇವೆ. ಅವರು ಬರದಿದ್ದರೆ ಮತ್ತೆ ಗುರುವಾರ ನಗರಸಭೆ ಆವರಣದಲ್ಲಿ ಧರಣಿ ನಡೆಸಲು ನಿರ್ಧರಿಸಿದ್ದೇವೆ ಎಂದು ನಿವಾಸಿಗಳು ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ್ದ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry