ಅಜೀರ್ಣಕ್ಕೆ ಚೂರ್ಣ

7

ಅಜೀರ್ಣಕ್ಕೆ ಚೂರ್ಣ

Published:
Updated:

ಬೆಳಿಗ್ಗೆ, ಸಂಜೆ ವಾಕಿಂಗ್ ಮಾಡುವುದೂ ವಾಸ್ತು ಪ್ರಕಾರ ಇದ್ರೆ ಒಳಿತೇನೊ. ದಿಕ್ಕು ಬದಲಿಸಿದ್ದೇ ತಪ್ಪಾಯ್ತೇನೊ. ದಿಗ್ಗೇಡಿ ವಿಶ್ವ ಧಿಗ್ಗನೆ ಎದುರಿಗೆ ವಕ್ಕರಿಸಿ ಬಿಟ್ಟ.‘ತಯಾರಿ ಜೋರಾ ಸಾ ......? ಕೊಶ್ಚನಿಸಿದ.

‘ಯಾವುದರ ತಯಾರಿ ವಿಶ್ವಾ?

 ವರ್ಲ್ಡ್ ಕಪ್ ಕ್ರಿಕೆಟ್‌ಗಾದ್ರೆ ಸೆಟ್ ರೆಡಿಯಾಗಿದೆ. ಚಾನೆಲ್ ಚಕಮಕಿ ಏಪ್ರಿಲ್ ಎರಡರ ತನಕವೂ ಮುಂದುವರಿಯುತ್ತೆ’.

‘ಅಯ್ಯೋ ..... ಅದಲ್ಲಾ ಸಾ ..... ವಿಶ್ವ ಕನ್ನಡ ಸಮ್ಮೇಳನದ ತಯಾರಿ ಜೋರಾ ಅಂತ ಕೇಳ್ದೆ ಸಾ ..... ನಾನಂತೂ ಫುಲ್ ಖುಷ್. ಕನ್ನಡ ಜೈಹೋ!’‘ಬೆಂಗಳೂರಿನ ಕನ್ನಡ ಸಾಹಿತ್ಯ ಸಮ್ಮೇಳನದ ಹ್ಯಾಂಗೋವರ್‌ನಲ್ಲಿರೋವಾಗ್ಲೇ ಬೆಳಗಾವಿಯ ವಿಶ್ವಕನ್ನಡ ಸಮ್ಮೇಳನದಲ್ಲಿ ದಿಂಡಿಮ ಬಾರಿಸೋ ಭಾಗ್ಯ ಬಂತಲ್ಲೋ. ಅಲ್ಲಿ ಲಿಬರ್ಟಿ ಮಾದರಿಯ ಭುವನೇಶ್ವರಿ ಪ್ರತಿಮೆ. ಇಲ್ಲಿ ಯಾರ ಮೂರ್ತಿ ನಿಲ್ಲಿಸ್ತಾರೋ?’‘ಹಿಹ್ಹಿ ...... ಅದೆಲ್ಲಾ ನಂಗೊತ್ತಿಲ್ಲ ಸಾ ..... ಅಖಿಲ ಭಾರತ ಮಟ್ಟದ ಸಮಾವೇಶಕ್ಕೆ 25 ಕೋಟಿ ರೂ. ಅನುದಾನ. ಇದಂತೂ ವರ್ಲ್ಡ್ ವೈಡ್. ನೂರು ಕೋಟಿ ದಾಟೋ ಅನುಮಾನ, ನೀವೇನಂತೀರಿ ಸಾ?’

‘ಅಲ್ವೋ ವಿಶ್ವಾ, ಲಿಬರ್ಟಿ ಸ್ಟ್ಯಾಚ್ಯು ಎತ್ತರ 111 ಅಡಿ. ಹೈದರಾಬಾದಿನ ಬುದ್ಧ ಪ್ರತಿಮೆ ಎತ್ತರ 72 ಅಡಿ. ಕನ್ನಡ ಭುವನೇಶ್ವರಿಯ ಹೈಟ್ ಎಷ್ಟೊ?’ ಬೇಕೆಂದೇ ಚುಚ್ಚಿದೆ.‘ಕನ್ನಡದ ಬಗ್ಗೆ ಲಘುವಾಗಿ ಮಾತಾಡ್ಬೇಡಿ ಸಾ ..... ಮರಾಠಿ ಕಿಡಿಗೇಡಿಗಳು ಜಾಕ್‌ಪಾಟ್ ಹೊಡೆದೋರಂಗೆ ರಂಪ ಮಾಡಿದ್ರೆ ಕಷ್ಟ ಸಾ, ಅವರ ಪ್ರತಾಪ, ಪ್ರಲಾಪ ಸ್ಕೂಪ್‌ಗಳಿಗೆಲ್ಲ ಸ್ಕೋಪ್ ಸಿಗಬಾರ್ದು ಸಾ’‘ವ್ಹಾವ್ಹಾ ವಿಶ್ವಾ , ಬುದ್ದು ಆಗಿದ್ದವ ಈಗೀಗ ಬುದ್ಧ ಆಗೋ ಲಕ್ಷಣ ಕಾಣಿಸ್ತಾ ಇದೆ. ಕೊರೆಯುವ ಸಾಹಿತಿಗಳೇ ಬೇರೆ. ಬರೆಯುವ ಸಾಹಿತಿಗಳೇ ಬೇರೆ. ಜಿಹ್ವಾ ಚಾಪಲ್ಯಕ್ಕೆ ಬೇಲಿ, ಬ್ರೇಕು ಬೇಕು.ಯು ಆರ್ ರೈಟ್. ಅಂದ್ಹಾಗೆ ನೀನೂ ಒಬ್ಬ ರೈಟರ್. ಪ್ರಶಸ್ತಿಯ ಫೈಟರ್. ಬೆಳಗಾವಿಯಲ್ಲಿ ಸಿಡಿಸಲು ಯಾವ ಬಾಂಬ್ ಸಿದ್ಧಮಾಡಿಕೊಂಡಿದ್ದೀಯೋ?’

‘ಅದನ್ನೇ ಹೇಳ್‌ಬೇಕೂಂತ ಇದ್ದೆ ಸಾ. ಜಿಹ್ವಾ ಚಾಪಲ್ಯ ಅಂದ್ರೆ ನಾಲಗೆಯ ರುಚಿ ಅಲ್ವಾಸಾ? ಅದೇ ವಿಷಯದ ಗಪದ್ಯ ರೆಡಿ ಇದೆ ಸಾ’.‘ವ್ಹಾ ವ್ಹಾ ಅಂತೂ ಗಡಿನಾಡಿನಲ್ಲಿ ಗಡಿ ಬಿಡಿ, ಭಾನ್‌ಗಡಿಗೆ ನೀನಂತೂ ರೆಡಿ ಅಂತಾಯ್ತು. ವಿಶ್ವಕಪ್ ಕ್ರಿಕೆಟ್‌ನಲ್ಲಿ ಇಂಡಿಯನ್ ಟೀಮ್ ಗೆಲ್ಬೇಕು. ವಿಶ್ವ ಕನ್ನಡ ಸಮ್ಮೇಳನದಲ್ಲಿ ವಿಶ್ವನ ಡ್ರೀಮ್ ಗೆಲ್ಬೇಕು. ಅಂದ್ಹಾಗೆ, ಹೃದ್ಯವಾಗಿದೆಯೇನಪಾ ನಿನ್ನ ಗಪದ್ಯ? ಸ್ಯಾಂಪಲ್, ನೆಟ್ ಪ್ರಾಕ್ಟೀಸ್ ಇಲ್ಲೇ ನಡೀಲಿ ಸದ್ಯ.’‘ಥ್ಯಾಂಕ್ಸ್ ಸಾ, ರಿಹರ್ಸಲ್ ಆಯಾಸ್ ಎಲ್ಲಾ ರಿಕವರ್ ಆಗ್ಬಿಡ್ತು ಸಾ. ಕೇಳೋ ಕಿವಿ ಸಿಗೋದು ಕವಿಯ ಲಕ್ ಸಾ. 50 ರೂ. ಶುಲ್ಕ ನೀಡಿ ಸೀಟ್ ಬುಕ್ ಮಾಡಿದ್ದು ಸಾರ್ಥಕ ಆಯ್ತು ಸಾ.’ ವಿಶ್ವನದ್ದು ಸಂತೃಪ್ತ ಭಾವ. ಬುದ್ಧಿಯದ್ದೇ ಅಭಾವ.

ಬಿಸಿಲು ಏರುತ್ತಿದೆ. ನನ್ನ ಬಿ.ಪಿ. ಕೂಡ. ಹಾಗಂತ ಈ ಪಾಪಿ ಎದ್ರೆ ಕೋಪಿ. ಆದರೆ ಕವಿ ಬದ್ಲು ಕಪಿ ಆದ್ರೆ ಕಷ್ಟ.

‘ಹಾಡಿ ಬಿಡು ವಿಶ್ವಾ, ಅಲೆ ಅಲೆಯಾಗಿ ತೇಲಿ ಬರಲಿ ಕಾವ್ಯ ಧಾರೆ’.ಪುಸಲಾಯಿಸಿ ಪಾರಾಗೋ ಪ್ಲಾನು ನನ್ನದು.

‘ಬೆಳಗಾವಿಯ ಕಂದಾ

ಗೋಕಾಕದ ಕರದಂಟು

 ಶೇಂಗಾ ಹೋಳಿಗಿ,

 ಗೋದಿ ಹುಗ್ಗಿ, ಸಜಕದ ಸಿಹಿ,

 ಜಿಲೇಬಿ, ರೊಟ್ಟಿ, ಎಣಗಾಯಿ,

 ಪುಂಡಿ ಪಲ್ಲೆ, ಗುರೆಳ್ಳು ಚಟ್ನಿ .....’‘ಸ್ಟಾಪ್ ಸ್ಟಾಪ್! ಮೆನು ಕಾರ್ಡ್ ಕಂಠ ಪಾಠ ಮಾಡಿದ್ದಿಯೇನೋ ಮರಿ? ಅಲ್ವೋ  ವಿಶ್ವದ ಕನ್ನಡ ಕಂಠೀರವರ ಸಮ್ಮೇಳನದಲ್ಲಿ ಬರೇ ಉತ್ತರ ಕರ್ನಾಟಕದವರ ತಿನಿಸು ತರವೇ ತರಳಾ?’

‘ಅದೆ ಸಾ...  ಹಹ್ಹ! ಕೇಳಿ

ಬೆಸ್ಟ್ ಗ್ಲೋಬಲ್ ಲಿಸ್ಟ್

ಬರ್ಗರ್, ಫಿಜ್ಜಾ, ಫ್ರೈಸ್,

 ಸ್ಯಾಂಡ್‌ವಿಚ್, ಕುಲ್ಚಾ ನಾನ್,

 ಪನ್ನೀರ್ ಟಿಕ್ಕಾ, ಕಡಾಯಿ,

 ಚಿಕನ್ ಮೊಗಲಾಯಿ,

 ಗಿಂಟುಟ್, ಉಪ್ಪಿಟ್, ಉಬ್ಬಟ್, ಫಟಾಫಟ್ .....’‘ಸ್ಟಾಪ್ ದಿಸ್ ನಾನ್‌ಸೆನ್ಸ್! ಪ್ರಾಸ ಅತ್ಯಂತ ತ್ರಾಸ ..... ಅಲ್ವೊ ವಿಶ್ವಾ, ಸಾಹಿತ್ಯ ಅಂದ್ರೆ ತಾಂಬೂಲ ಸಾಹಿತ್ಯ, ಭೋಜನ ಸಾಹಿತ್ಯ ಅಲ್ಲಪಾ’‘ಮತ್ತಿನ್ನೇನು ಸಾ? ಜಿಹ್ವಾ ಚಾಪಲ್ಯಕ್ಕೆ ಇಷ್ಟೆಲ್ಲ ಪಲ್ಯ ಬೇಡ್ವಾ ಸಾ? ಗಪದ್ಯದ ಚರಣ ಪೂರ್ಣ ಆಗಿಲ್ಲ. ಅಜೀರ್ಣ ಆದ್ರೆ ಚೂರ್ಣ ಇದ್ದೇ ಇದೆಯಲ್ಲ ಸಾ. ಪುಸ್ತಕ ಮೇಳ, ಊಟದ ಫಳಾರ ಬಾಯ್ತುಂಬ ತಾಂಬೂಲ ಇದ್ದು ಬಿಟ್ರೆ ಸಮ್ಮೇಳನ ಸೂಪರ್ ಸಕ್ಸೆಸ್‌ಫುಲ್. ವಿಶ್ವ ಕಪ್ ಕ್ರಿಕೆಟ್‌ನಲ್ಲಿ ಸಚಿನ್ ಸೆಂಚುರಿಯ ಪರಾಕ್ರಮ. ವಿಶ್ವ ಕನ್ನಡ ಸಮ್ಮೇಳನದಲ್ಲಿ ಭೂರಿ ಭೋಜನದ ಘಮ ಘಮ. ರೈಟ್!‘ನೋ ಫೈಟ್. ಗುಡ್ ಬೈ, ಗುಡ್‌ಲಕ್’

ಎಕ್ಸಿಕ್ಯೂಟಿವ್ ಶೆಫ್ - ಅದೇ ಸ್ಟಾರ್ ಬಾಣಸಿಗ ಕವಿಗೆ ಕೈಮುಗಿದು ರಸ್ತೆಗಿಳಿದೆ. ನನ್ನ ಬಿ.ಪಿ. ಸಹ ಇಳಿಯಿತು.

ಆರೂರು ಲಕ್ಷ್ಮಣ್ ಶೇಟ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry