ಅಜೇಯ ಪಟ್ಟದೊಂದಿಗೆ ಫೈನಲ್‌ಗೆ ಭಾರತ

7

ಅಜೇಯ ಪಟ್ಟದೊಂದಿಗೆ ಫೈನಲ್‌ಗೆ ಭಾರತ

Published:
Updated:

ನವದೆಹಲಿ: `ಕರ್ನಾಟಕದ ಕಲಿ~ ರಘುನಾಥ್ ಶುಕ್ರವಾರ ರಾತ್ರಿ ಪ್ರದರ್ಶಿಸಿದ ಮಿಂಚಿನ ಡ್ರ್ಯಾಗ್ ಫ್ಲಿಕ್ ಜೊತೆಗೆ ಒಲಿಂಪಿಕ್ ಹಾಕಿ ಅರ್ಹತಾ ಟೂರ್ನಿಯ ಫೈನಲ್ ಆಡುವ ಪೊಲೆಂಡ್ ಕನಸು ನುಚ್ಚುನೂರಾಯಿತು. ಶುಕ್ರವಾರ ರಾತ್ರಿ ಭಾರತದ ಹಾಕಿ ಅಭಿಮಾನಿಗಳ ಸಂಭ್ರಮ ಗರಿ ಬಿಚ್ಚಿದ ಹಕ್ಕಿಯಂತೆ ಹಾರಾಡಿತು! ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಲೀಗ್ ಸುತ್ತಿನ ಕೊನೆಯ ಪಂದ್ಯದಲ್ಲಿ 4-2ರಿಂದ ಪೊಲೆಂಡ್ ತಂಡವನ್ನು ಸೋಲಿಸಿದ ಭರತ್ ಚೆಟ್ರಿ ಬಳಗ ಸಂಪೂರ್ಣ 15 ಪಾಯಿಂಟ್‌ಗಳೊಂದಿಗೆ ಅಜೇಯವಾಗುಳಿದು ಫೈನಲ್‌ಗೆ ನಡೆಯಿತು.ಭಾನುವಾರ ರಾತ್ರಿ ನಡೆಯುವ ಟೂರ್ನಿಯ ಫೈನಲ್‌ನಲ್ಲಿ ಭಾರತದ ಪುರುಷರ ತಂಡವು ಫ್ರಾನ್ಸ್ ತಂಡವನ್ನು ಎದುರಿಸಲಿದೆ. ಗೆಲುವು ಅಥವಾ ಡ್ರಾ ಮಾಡಿಕೊಂಡರೆ ಪೊಲೆಂಡ್‌ಗೆ ದ್ವಿತೀಯ ಸ್ಥಾನ ಪಡೆದು ಫೈನಲ್‌ನಲ್ಲಿ ಆಡುವ ಅವಕಾಶ ಸಿಗುತ್ತಿತ್ತು. ತೀವ್ರ ಹೋರಾಟ ನಡೆಸಿದ ಪೊಲೆಂಡ್ ಪ್ರಥಮಾರ್ಧದಲ್ಲಿ 1-1 ಮತ್ತು ಎರಡನೇ ಅವಧಿಯ ಒಂದು ಹಂತದಲ್ಲಿ 2-2ರ ಸಮಬಲ ಸಾಧಿಸಿಬಿಟ್ಟಿತ್ತು.ಆದರೆ, 65ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ರಘುನಾಥ್ ರಾಮಚಂದ್ರ ಒಕ್ಕಲಿಗ ಮಾಡಿದ ಡ್ರ್ಯಾಗ್ ಫ್ಲಿಕ್‌ನಲ್ಲಿ ತಂಡಕ್ಕೆ ಮೂರನೇ ಗೋಲು ಒಲಿಯಿತು. ನಂತರ ಕೊನೆಯ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅನ್ನೂ ಗೋಲಿನಲ್ಲಿ ಪರಿವರ್ತಿಸುವಲ್ಲಿ ಸಂದೀಪ್ ಸಿಂಗ್ ಸಫಲರಾದರು. ಇದರೊಂದಿಗೆ ಅವರು ಟೂರ್ನಿಯಲ್ಲಿ 11ನೇ ಗೋಲನ್ನು ತಮ್ಮ ಖಾತೆಗೆ ಸೇರಿಸಿಕೊಂಡರು. ಭಾರತ ತನಗೆ ಸಿಕ್ಕ ಒಟ್ಟು ಒಂಬತ್ತು ಪೆನಾಲ್ಟಿ ಕಾರ್ನರ್‌ಗಳಲ್ಲಿ ಗೋಲು ಮಾಡಿದ್ದು ಬರೀ ಎರಡರಲ್ಲಿ ಮಾತ್ರ.

ಸಮಬಲದ ಹೋರಾಟ: ಈ ಅವಧಿಯ ಶೇ 69ರಷ್ಟು ಸಮಯ ಚೆಂಡು ಭಾರತದ ಹಿಡಿತದಲ್ಲಿಯೇ ಇತ್ತು. 35 ನಿಮಿಷಗಳಲ್ಲಿ 14 ಬಾರಿ ಗೋಲುಪೆಟ್ಟಿಗೆಯತ್ತ ಚೆಂಡನ್ನು ಹೊಡೆದರೂ ಗುರಿ ಮುಟ್ಟಲಿಲ್ಲ. ಆದರೆ ಆತಿಥೇಯರ ದಾಳಿಯನ್ನು ಸಮರ್ಥವಾಗಿ ಮೆಟ್ಟಿ ನಿಂತ ಪೊಲೆಂಡ್ ಆಟಗಾರರು, ನಾಲ್ಕು ಬಾರಿ ಮಾತ್ರ ಭಾರತದ ಡಿ ವಲಯದಲ್ಲಿ ಚೆಂಡನ್ನು ತಂದಿದ್ದರು.ದಾಳಿಯನ್ನು ಸಮರ್ಥವಾಗಿ ತಡೆದ ಪೊಲೆಂಡ್ ಆಟಗಾರರು, ಭಾರತದ ರಕ್ಷಣಾಕೋಟೆಯನ್ನೂ ಬೇಧಿಸುವಲ್ಲಿ ಒಂದು ಹಂತದಲ್ಲಿ ಸಫಲರಾಗಿದ್ದರು. ಈ ಅವಧಿಯಲ್ಲಿ ತನಗೆ ಸಿಕ್ಕ ಏಕೈಕ ಪೆನಾಲ್ಟಿ ಕಾರ್ನರ್ ಅನ್ನು ಗೋಲಿನಲ್ಲಿ ಪರಿವರ್ತಿಸಿತು.13ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಹೂಟೆಕ್ ಸೈಮನ್ ಡಿಫ್ಲೆಕ್ಟ್ ಮಾಡಿದ ಚೆಂಡನ್ನು ಸ್ವಲ್ಪ ತಡವಾಗಿ ಹಿಟ್ ಮಾಡಿದ ಟೊಮೆಜ್ ಡಟ್ಕಿವಿಕ್ಚ್ ಭಾರತದ ಗೋಲ್ ಕೀಪರ್ ಭರತ್‌ಚೆಟ್ರಿ ಮತ್ತು ಮೂವರು ಡಿಫೆಂಡರ್‌ಗಳನ್ನು  ವಂಚಿಸಿ ಗೋಲುಪೆಟ್ಟಿಗೆಗೆ ಚೆಂಡನ್ನು ಸೇರಿಸಿದರು.ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಭಾರತದ ವಿರುದ್ಧ 0-1ರ ಲೀಡ್ ಪಡೆದ ಪೊಲೆಂಡ್ ನಂತರ ಭಾರತದ ಆಟಗಾರರ ದಾಳಿಯನ್ನು ತಡೆಯಲು ತೀವ್ರ ಹೋರಾಟ ನಡೆಸಿತು. ಭಾರತದ ಡ್ರ್ಯಾಗ್ ಫ್ಲಿಕ್ ತಜ್ಞರು ಮೂರು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಿನಲ್ಲಿ ಪರಿವರ್ತಿಸುವಲ್ಲಿ ವಿಫಲವಾಗಿದ್ದರು. ಪೊಲೆಂಡ್‌ನ ಗೋಲ್‌ಕೀಪರ್ ಚೈಲಾ ಮೆರಿಯಾಜ್ ಚುರುಕಿನ ಪ್ರದರ್ಶನ ನೀಡಿದರು. ಆದರೆ 26ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಮಿಂಚಿದ ಸಂದೀಪ್ ಸಿಂಗ್ ಡ್ರ್ಯಾಗ್ ಫ್ಲಿಕ್ ಮೂಲಕ ಗೋಲು ಗಳಿಸಿದರು. ಇದಕ್ಕೂ ಮುನ್ನ ಬಿರುಸಿನ ಆಟಕ್ಕಿಳಿದಿದ್ದ ಪೊಲೆಂಡ್ ನಾಯಕ ಡರ್ಲಾಜ್ ರಚಾವಸ್ಕಿ (24ನಿ) ಹಸಿರು ಕಾರ್ಡ್ ದರ್ಶನ ಪಡೆದರು. 34ನೇ ನಿಮಿಷದಲ್ಲಿ ಟೊಮೆಜಾ ಗೋರ್ನಿ, ಮಿಡ್‌ಫೀಲ್ಡರ್ ಮನಪ್ರೀತ್‌ಸಿಂಗ್ ಬೀಳಲು ಕಾರಣವಾಗಿ ಹಸಿರು ಕಾರ್ಡ್ ಪಡೆದು ಹೊರ ನಡೆದರು.59ನೇ ನಿಮಿಷದಲ್ಲಿ ಸರವಣಜೀತ್‌ಸಿಂಗ್ ಕೊಟ್ಟ ಪಾಸ್ ಅನ್ನು ಶಿವೇಂದ್ರಸಿಂಗ್ ಗೋಲಿನತ್ತ ನಿರ್ದೇಶಿಸಿದ್ದು ಸಫಲವಾಯಿತು. ಇದಕ್ಕೂ ಮುನ್ನ ನಾಲ್ಕು ಬಾರಿ ಶಿವೇಂದ್ರ ಈ ರೀತಿ ಮಾಡುವಲ್ಲಿ ವಿಫಲರಾಗಿದ್ದರು. ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬಳಸಿಕೊಂಡ ಪೊಲೆಂಡ್‌ನ ಮಿರಾಸ್ಲೋವ್ ಜಸ್ಜೇಕ್ ಗೋಲು ಹೊಡೆದು, 2-2ರ ಸಮಬಲ ಸಾಧಿಸಿದರು. ಅಂಪೈರ್ ಜೊತೆಗೆ ವಾಗ್ವಾದಕ್ಕಿಳಿದ ಸಂದೀಪ್‌ಸಿಂಗ್ ಹಸಿರು ಕಾರ್ಡ್ ಪಡೆದು ಹೊರಗೆ ಕುಳಿತುಕೊಂಡರು. 2ನಿಮಿಷಗಳ ನಂತರ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ರಘುನಾಥ್ ಪೊಲೆಂಡ್ ಕನಸನ್ನು ನುಚ್ಚುನೂರು ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry