ಶುಕ್ರವಾರ, ಮೇ 14, 2021
21 °C

ಅಜ್ಜನನ್ನೂ ಪ್ರೀತಿಸಿ!

ಎಂ.ಡಿ.ಸೂರ್ಯಕಾಂತ Updated:

ಅಕ್ಷರ ಗಾತ್ರ : | |

ಪ್ಪ ಹಾಗೂ ಅವನ ಮಕ್ಕಳನ್ನು ಪೋಷಿಸಿದ ಹಿರಿಯ ಜೀವಿ ಅಜ್ಜನನ್ನು ನಾವಿಂದು ಮರೆಯುತ್ತಿದ್ದೇವೆ. ಅಪ್ಪನ ದಿನ ಆಚರಿಸುವ ಮಕ್ಕಳು, ಈ ದಿನ ಹಿರಿಯಪ್ಪನನ್ನು ಸ್ವಲ್ಪ ಹೊತ್ತಾದರೂ ನೆನಪಿಸಿಕೊಳ್ಳಬೇಕು ಎಂದು ಕೋರುವುದೇ ಈ ಲೇಖನದ ಉದ್ದೇಶ.



`ಅಪ್ಪಂದಿರ ದಿನಾಚರಣೆ' ಹತ್ತಿರವಾಗುತ್ತಿದ್ದಂತೆ ಅಪ್ಪನಿಗೆ ಇಷ್ಟದ ಉಡುಗೊರೆ ನೀಡುವ, ಒಳ್ಳೆ ಹೋಟೇಲ್‌ನಲ್ಲಿ ಊಟ, ಕೇಕ್ ಕಟ್ ಮಾಡುವ ಸಿದ್ಧತೆ ಮಕ್ಕಳಲ್ಲಿ ಸಹಜ. ಅಪ್ಪನನ್ನು ಹಾಗೂ ಆ ಅಪ್ಪನ ಮಕ್ಕಳನ್ನು ಪೋಷಿಸಿ, ದೊಡ್ಡವರನ್ನಾಗಿ ಮಾಡಿದ ಹಿರಿಯ ಜೀವಿ ಅಜ್ಜನನ್ನು ಬಹುತೇಕರು ಮರೆಯುತ್ತಿದ್ದಾರೆ.

ಮಕ್ಕಳನ್ನು ಬೆಳೆಸುವಲ್ಲಿ ಅಪಾರ ಅನುಭವ ಹೊಂದಿರುವ ಇವರು, ಮೊಮ್ಮಕ್ಕಳ ಜೀವನ ಉತ್ತಮವಾಗಿ ರೂಪುಗೊಳ್ಳುವಲ್ಲಿ ವಿಶೇಷ ಪಾತ್ರ ವಹಿಸುತ್ತಾರೆ. ಅವರ ಬಾಲ್ಯಾವಸ್ಥೆ ಮತ್ತು ಹದಿಹರೆಯದಲ್ಲಿ ಅಪ್ಪ-ಅಮ್ಮನಿಗಿಂತ ಹೆಚ್ಚು ಜವಾಬ್ದಾರಿ, ಅಸಾಧಾರಣ ಪ್ರೀತಿಯಿಂದ ಬೆಳೆಸುತ್ತಾರೆ.

 





ಹಿರಿಯಪ್ಪನ ಅಂತರಾಳ...

`ನಮಗಿರುವ ಒಬ್ಬನೇ ಮಗ ಮತ್ತು ಮದುವೆಯಾದ ಮೊಮ್ಮಗ ವಿದೇಶದಲ್ಲಿದ್ದಾರೆ. ನಾನು ಪತ್ನಿ ಜೊತೆ ಇಲ್ಲಿದ್ದೇನೆ. ಮೊಮ್ಮಗನ ನೆನಪು ಸದಾ ಬರುತ್ತದೆ. ಆದರೆ ಆತ ನಮ್ಮನ್ನು ಮಾತನಾಡಿಸುವುದು ಬಹಳ ಅಪರೂಪ.

ನಾವಾಗಿಯೇ ಅವನನ್ನು ಮಾತನಾಡಿಸಬೇಕು. ಇಂಟರ್ ನೆಟ್ ಮೂಲಕ ಮಾತನಾಡಿಸುವ ಜ್ಞಾನ ನಮಗಿಲ್ಲ. ನಮ್ಮ ಆರೋಗ್ಯ, ಇತರ ಸಹಾಯಕ್ಕೆ ಪರರನ್ನು ಅವಲಂಬಿಸಬೇಕು. ಹೀಗಾಗಿ ನಮ್ಮಿಬ್ಬರಿಗೆ ಒಂಟಿತನ ಕಾಡುತ್ತಿದೆ' ಎನ್ನುತ್ತಾರೆ 85 ವರ್ಷದ ಅಜ್ಜ.


`ನನ್ನ ಕೈಯ್ಯಲ್ಲಿ ಬೆಳೆದ ಐವರು ಮೊಮ್ಮಕ್ಕಳಿದ್ದಾರೆ. ಅವರಲ್ಲಿ ಕೆಲವರಿಗೆ ಮದುವೆಯಾಗಿದೆ. ನಮ್ಮ ಮನಸ್ಸು ಅವರಿಗೆ ಅರ್ಥವಾಗದು. ಯಾವಾಗಲೂ ಭಿನ್ನಾಭಿಪ್ರಾಯ. ನಮ್ಮ ಮಾತು, ವರ್ತನೆ, ಸಲಹೆ ಅವರಿಗೆ ಹಳೆಯದು.

`ನಿಮಗ್ಯಾಕೆ ನಮ್ಮ ವಿಷಯ' ಎಂದು ಎದುರುತ್ತರ. ನಾವು ನಿರ್ಲಕ್ಷಿತರು ಅನಿಸುತ್ತಿದೆ' ಎಂಬುದು ಹಿರಿ ಅಜ್ಜನ ಮಾತು.

`ನನ್ನ ಮಗ ಮತ್ತು ಪತ್ನಿ ಇತ್ತೀಚೆಗೆ ತೀರಿಕೊಂಡರು. ನಮ್ಮವರೆಂದು ಹೇಳಿಕೊಳ್ಳಲು ಮೊಮ್ಮಗ, ಮೊಮ್ಮಗಳು ದೂರದ ಪೂನಾದಲ್ಲಿ ಕೆಲಸದಲ್ಲಿದ್ದಾರೆ.


ನಮ್ಮೂರಲ್ಲಿರುವ ಮನೆ, ಜಮೀನು, ದನ ಕರು ನೋಡಿಕೊಳ್ಳಲು ನಾನಿಲ್ಲೇ ಇರಬೇಕು. ಎಲ್ಲ ಬಿಟ್ಟು ಬನ್ನಿ ಎಂದು ಮೊಮ್ಮಕ್ಕಳ ಒತ್ತಡ. ಮೊಮ್ಮಕ್ಕಳ ಜೊತೆಗಿರಲು ನನಗಿಷ್ಟ.

ಆದರೆ ದೊಡ್ಡ ನಗರದ, ಸಂಸ್ಕೃತಿ, ಸಂಪ್ರದಾಯ ನನಗಾಗದು. ಇಲ್ಲಿರುವ ಸ್ನೇಹಿತರು, ಸಂಬಂಧಿಕರನ್ನು ಬಿಟ್ಟುಹೋಗಲು ನನಗಿಷ್ಟವಿಲ್ಲ' ಎಂಬುದು ಹಳ್ಳಿಯ ಅಜ್ಜನ ಪ್ರತಿಕ್ರಿಯೆ.

ಮಗು ಈ ಜಗತ್ತಿಗೆ ಕಾಲಿಟ್ಟಾಗ ಸ್ವೀಕರಿಸಿ ತುತ್ತು ಮಾಡಿ ಉಣಿಸಿ ಬೆಚ್ಚನೆಯ ಅಪ್ಪುಗೆಯಲ್ಲಿ ಲಾಲಿ ಹೇಳಿ ಮಲಗಿಸುವವಳು ಅಜ್ಜಿ. ಆದರೆ ಮಗು ಒಂದು ವರ್ಷ ತಲುಪಿ, ತಪ್ಪು ಹೆಜ್ಜೆ ಇಟ್ಟು ನಡೆಯಲು ಪ್ರಯತ್ನಿಸುವಾಗ ಕೈಗೆ ಆಸರೆಯಾಗಿ ನಡೆಸುವವನು ಅಜ್ಜ. ಮನೆಯಲ್ಲಿ ಮೊಮ್ಮಕ್ಕಳ ಕಾಳಜಿ ಅಜ್ಜಿಗೆ ಸೀಮಿತವಾದರೆ, ಮನೆಯ ಹೊರಗೆಲ್ಲ ತಿರುಗಾಡಿಸಿ, ನರ್ಸರಿಯಿಂದ ಪ್ರೌಢಶಾಲೆವರೆಗೆ ಜೊತೆಗಿರುವವ ಸಾಮಾನ್ಯವಾಗಿ ಈ ಹಿರಿ ಅಪ್ಪನೇ.



ಈಗಿನ ಉದ್ಯೋಗಸ್ಥ, ವಿಭಕ್ತ ಕುಟುಂಬದ ದಂಪತಿಗೆ ಮಕ್ಕಳ ಕಾಳಜಿಗೆ ಸಮಯವಿಲ್ಲ. ದಿನದ 8ರಿಂದ 12 ಗಂಟೆ ಮನೆಯಿಂದ ಹೊರಗಿರುತ್ತಾರೆ. ಇವರ ಅನುಪಸ್ಥಿತಿಯಲ್ಲಿ ಮಕ್ಕಳ ಕಾಳಜಿ ಅಜ್ಜ ಅಜ್ಜಿಯಿಂದಲೇ.



ಅಜ್ಜ ಅಪ್ಪನಿಗಿಂತ ಭಿನ್ನ

ಮನಃಶಾಸ್ತ್ರಜ್ಞರ ಪ್ರಕಾರ, ತಂದೆಗಿಂತ ಹೆಚ್ಚಾಗಿ ಅಜ್ಜಂದಿರು ಮಕ್ಕಳನ್ನು ಪ್ರೀತಿಸುತ್ತಾರೆ. ಈ ಮಾತಿಗೆ, ಮಕ್ಕಳನ್ನು ಪ್ರೀತಿಸದ ತಂದೆ ಇರಬಹುದು, ಆದರೆ ಅಜ್ಜನಿಲ್ಲ ಎಂಬ ಗಾದೆ ಸಾಕ್ಷಿ. ಅಪ್ಪ ಶಿಸ್ತು ಕಲಿಸುವ ಪ್ರಯತ್ನದಲ್ಲಿ ಮಕ್ಕಳಿಗೆ ಬೈಗುಳ, ಏಟು ಕೊಡುವುದು ಸಾಮಾನ್ಯ.

ಅಜ್ಜ ಮಕ್ಕಳಿಗೆ ರಕ್ಷಣೆಯ ದೇವದೂತ. ತಂದೆ ಸಿಟ್ಟಿನಲ್ಲಿದ್ದಾಗ ಅಥವಾ ನಿರ್ಲಕ್ಷಿಸಿದಾಗ ಮಕ್ಕಳು ಸಾಂತ್ವನಕ್ಕಾಗಿ ಮೊರೆ ಹೋಗುವುದು ಅಜ್ಜನಲ್ಲಿಗೆ. ತಂದೆ ಹಾಗೂ ಮಕ್ಕಳ ಬಾಂಧವ್ಯ ಗಂಭೀರ. ಅಜ್ಜ ಮೊಮ್ಮಕ್ಕಳದು ನಿರಾತಂಕ, ಅನನ್ಯ. ಮಕ್ಕಳಿಗೆ ಅಜ್ಜನ ಮನೆ ಆತ್ಮೀಯ ಸಂಗಾತಿಯ ತಾಣ.

ಅಜ್ಜ-ಮೊಮ್ಮಕ್ಕಳ ಮನ ಹಲವಾರು ರೀತಿಯಲ್ಲಿ ಸಮ. ಇವರ ಮಧ್ಯೆ ಸ್ಪರ್ಧೆ ಇರದು. ಊಟ ತಿಂಡಿ ಬಯಕೆಗಳು ಸಾಮಾನ್ಯವಾಗಿ ಒಂದೇ. ಹೀಗಾಗಿ ಸಂಬಂಧ ಹೆಚ್ಚು ಗಾಢ. ಹೆತ್ತವರ ತಪ್ಪನ್ನು ಗುರುತಿಸಿ, ಅವರಿಗೆ ಬುದ್ಧಿ ಹೇಳಲು ಸರಿಯಾದ ವ್ಯಕ್ತಿ ಅಜ್ಜ. ಮಕ್ಕಳು ಪ್ರವಾಸ ಬಯಸುವುದು ಹೆಚ್ಚಾಗಿ ಅಜ್ಜನ ಜೊತೆಗೆ.



ಮೊಮ್ಮಕ್ಕಳೇ ಹೀಗೆ ಮಾಡಿ

ನಿಮ್ಮ ತಂದೆಯನ್ನು ಮಾತನಾಡಿಸುವ ಹಾಗೆ ಈ ಹಿರಿಯಪ್ಪನನ್ನೂ ಆಗಾಗ ಮಾತನಾಡಿಸಿ. ಆತ್ಮೀಯವಾಗಿ ಸ್ವಲ್ಪ ಸಮಯ ಅವರ ಜೊತೆ ಕಳೆಯಿರಿ. ಆರೋಗ್ಯ ವಿಚಾರಿಸಿ. ಚಿಕಿತ್ಸೆ ಕೊಡಿಸಲು ಸಹಾಯ ಮಾಡಿ. ನೀವು ನೀಡುವ ಸಾವಿರ ರೂಪಾಯಿಗಿಂತ ನಿಮ್ಮ ಒಂದೆರಡು ಸವಿ ಮಾತುಗಳೇ ಅವರಿಗೆ ಇಷ್ಟ.

ಅವರ ದಿನನಿತ್ಯದ ಚಟುವಟಿಕೆ , ಹವ್ಯಾಸಕ್ಕೆ ಪ್ರೋತ್ಸಾಹ ಕೊಡಿ. ಅವರ ಇಷ್ಟದ ಉಡುಗೊರೆ, ತಿಂಡಿಯನ್ನು ತಂದು ಕೊಡಿ. ಅವುಗಳನ್ನು ಅವರು ಬಯಸುತ್ತಾರೆ. ದೂರದ ಊರಲ್ಲಿ ಇದ್ದರೆ, ಆಗಾಗ ನಿಮ್ಮ ಫೋಟೊ ಕಳುಹಿಸಿಕೊಡಿ. ದೂರವಾಣಿ ಮೂಲಕ ಸಂಪರ್ಕದಲ್ಲಿರಿ.

ಸಾಧ್ಯವಾದರೆ ಪ್ರವಾಸಕ್ಕೆ ಕರೆದುಕೊಂಡು ಹೋಗಿ.ಹಿರಿಯರ ಕೆಲವು ಅನುಚಿತ ವರ್ತನೆಗೆ ನಿರಾಶೆ, ಗಂಭೀರ ಪ್ರತಿಕ್ರಿಯೆ ಬೇಡ. `ಈ ಮುದುಕನಿಗೆ ಎಲ್ಲವೂ ಬೇಕು, ಸುಮ್ಮನೆ ಕೂತ್ಕೋಬಾರದೆ' ಎಂಬ ಟೀಕೆ ಮಾಡದಿರಿ.



ಕ್ಷೀಣಗೊಂಡ ನೆನಪಿನ ಶಕ್ತಿ, ಪೌಷ್ಟಿಕಾಂಶ ಹಾಗೂ ಅಂಗಾಂಗಗಳಿಗೆ ರಕ್ತ ಸಂಚಾರದ ಕೊರತೆ ಇವರ ಅಂತಹ ವರ್ತನೆಗೆ ಕಾರಣ. ಸಹನೆ, ಸೌಮ್ಯದಿಂದ ಅವರ ವರ್ತನೆಯ ಬಗ್ಗೆ ತಿಳಿಹೇಳಿ. ಮುದಿ ಎಲೆ ಜೊತೆ ಚಿಗುರೆಲೆ ಹೊಂದಿಕೊಂಡು ಆಸರೆ ಆಗಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.