ಅಜ್ಜನ ಜಲ ಸೇವೆಗೆ ಅಡ್ಡಿಯಾಗದ ಬಡತನ

7

ಅಜ್ಜನ ಜಲ ಸೇವೆಗೆ ಅಡ್ಡಿಯಾಗದ ಬಡತನ

Published:
Updated:

ವಿಜಾಪುರ: ವಾಸ ರಸ್ತೆಯ ಪಕ್ಕದ ಶೆಡ್‌ನಲ್ಲಿ. ಓದಿದ್ದು ಎರಡನೇ ತರಗತಿ. ಜೀವನ ನಿರ್ವಹಣೆಗೆ ಮಕ್ಕಳ ದುಡಿಮೆಯೇ ಆಸರೆ. ಹವ್ಯಾಸ ಸಮಾಜ ಸೇವೆ!ಇದು ಇಲ್ಲಿಯ ರೈಲು ನಿಲ್ದಾಣ ಹತ್ತಿರದ ಗುರುಲಿಂಗಪ್ಪ ರುದ್ರಪ್ಪ ಲಾಯದಗುಂದಿ (72) ಅವರ ಸಂಕ್ಷಿಪ್ತ ಪರಿಚಯ.ಈ ಅಜ್ಜನ ಬಗ್ಗೆ ಇಷ್ಟು ಹೇಳಿದರೆ ಸಾಲದು. ಇರಲೊಂದು ಸೂರು ಇಲ್ಲ. ಇಲ್ಲಿಯ ರೈಲು ನಿಲ್ದಾಣ ರಸ್ತೆಯ ಕಂದಕದ ಪಕ್ಕದಲ್ಲಿ ಎರಡು ಕೊಠಡಿಗಳ ಪುಟ್ಟದೊಂದು ಶೆಡ್ ಹಾಕಿಕೊಂಡು ವಾಸವಾಗಿದ್ದಾರೆ. ಮಕ್ಕಳು ಕೂಲಿ ಮಾಡಿ ಹಣ ತರದಿದ್ದರೆ ಒಲೆ ಉರಿಯುವುದಿಲ್ಲ. ಆದರೂ, ಈ ಅಜ್ಜನ ಸಮಾಜ ಸೇವೆಯ ಹುಮ್ಮಸ್ಸು ನಿಂತಿಲ್ಲ. ಈ ಸಮಾಜ ಸೇವೆಗೆ ಅಜ್ಜ ಆಯ್ದುಕೊಂಡಿದ್ದು ನೀರು ದಾನದ ಕೆಲಸವನ್ನ.ನೀವು ರೈಲು ನಿಲ್ದಾಣಕ್ಕೆ ಹೋಗುತ್ತಿರುತ್ತೀರಿ. ಮೇಲ್ಸೇತುವೆಯ ಎಡಬದಿಯ ರಸ್ತೆಯ ಪಕ್ಕ ಶೆಡ್‌ವೊಂದರ ಎದುರು ಮಡಿಕೆಯೊಂದಿಗೆ ಕುಳಿತಿರುವ ಅಜ್ಜ, `ನೀರ್ ಬೇಕೆನ್ರೀ ನೀರ... ಬರ‌್ರಿ.. ಬರ‌್ರೀ... ತಣ್ಣಾನ ನೀರು ಕುಡ್ದ ಹೋಗ್ರಿ...~ ಎಂದು ಕೂಗುತ್ತಿರುತ್ತಾರೆ. ನೀವು ನಿಂತರೆ ನಿಮ್ಮಲ್ಲಿಗೆ ಓಡಿ ಬಂದು ನೀರು ತುಂಬಿದ ತಂಬಿಗೆಯನ್ನು ನಿಮ್ಮೆದುರಿಗೆ ಹಿಡಿಯುತ್ತಾರೆ. `ಕುಡಿಯಿರಿ ಸಾಹೇಬ್ರ. ತಂಪ್ ಆದಾವು~ ಎಂಬ ಆತನ ಪ್ರೀತಿಗೆ ಮನಸೋತು ನೀರು ಕುಡಿಯುತ್ತೀರಿ...`ನಮ್ಮೂರು ಗುಳೇದಗುಡ್ಡ. ವಿಜಾಪುರಕ್ಕ ಬಂದು 30 ವರ್ಷ ಆತು. ಜನ್ರಿಗೆ ಉಪಕಾರ ಮಾಡಿದ್ರ ಪುಣ್ಯ ಬರತೈತಿ ಅಂತ ಮಹಾತ್ಮರು ಹೇಳ್ಯಾರ. ಆ ಮೋಕ್ಷ ಪಡ್ಯಾಕ ಈ ಸೇವಾ ಮಾಡಾಕ ಹತ್ತೀನಿ~ ಎಂದು ಫಂಡರಪೂರ ವಿಠ್ಠಲನ ಮಾಲೆ (ಸಂತ) ಧರಿಸಿರುವ ಗುರುಲಿಂಗಪ್ಪ ಮುಗ್ದವಾಗಿ ಹೇಳುತ್ತಾರೆ.ವಾರಕ್ಕೊಮ್ಮೆ ಬರುವ ನಲ್ಲಿಯ ನೀರಿನ ಜೊತೆಗೆ ರೈಲು ನಿಲ್ದಾಣದಿಂದ ನಿತ್ಯ ನೀರು ಹೊತ್ತು ತಂದು ಜನರಿಗೆ ಉಚಿತವಾಗಿ ಪೂರೈಸುತ್ತಾರೆ ಈ ಅಜ್ಜ.`ಹೆಂಡ್ತಿ, ಮಕ್ಕಳು, ಮೊಮ್ಮಕ್ಕಳ ಸಹಕಾರ ಭಾಳ್ ಐತ್ರಿ. ಅವ್ರೆ ಸಹ ನೀರು ತಂದು ಇಡ್ತಾರ. ಒಂದಿಪ್ಪತ್ತು ಪ್ಲಾಸ್ಟಿಕ್ ಕೊಡಾ ಅದಾವ. ನಮ್ಮ ಸೇವಾ ಮೆಚ್ಚಿ ಪುಣ್ಯಾತ್ಮರು ಪಟ್ಟಿ ಹಾಕಿ 800 ರೂಪಾಯಿ ಕೊಟ್ಟು ದೊಡ್ಡ ಬ್ಯಾರಲ್ ಕೊಡಿಸ್ಯಾರ. ಮುಂಜಾನೆ ನೀರು ತಂದಿಟ್ಕೊತ್ತೀವಿ. ಸಂಜೆ 6ರ ಮಟಾ ನೀರು ಕೊಡ್ತೀನಿ~ ಎಂದು ಅಜ್ಜ ತನ್ನ ನಿತ್ಯದ ಚಟುವಟಿಕೆಯನ್ನು ವಿವರಿಸುತ್ತಾರೆ.`ಈ ರಸ್ತೆಯಲ್ಲಿ ಸಂಚರಿಸುವ ಅಟೋ ರಿಕ್ಷಾದವರು, ನಗರ ಸಾರಿಗೆ ಬಸ್ ಚಾಲಕರು ನಿಲ್ಲಿಸಿ ನೀರು ಕುಡಿದು ಹೋಗುತ್ತಾರೆ. ಬಿಸಿಲಿಗೆ ಬಾಯಾರಿ ಬರುವ ಜನರ ದಾಹ ತಣಿಸುವ ಈ ಅಜ್ಜನದು ನಿಸ್ವಾರ್ಥ ಸೇವೆ~ ಎಂದು ಸಮಾಜ ಸೇವಕ ದಾನೇಶ ಅವಟಿ ಬಣ್ಣಿಸಿದರು.`ಈ ಅಜ್ಜನ ಸೇವೆ ಕೇವಲ ನೀರಿಗಷ್ಟೇ ಸೀಮಿತ ಅಲ್ಲ. ರೈಲು ನಿಲ್ದಾಣ ಎದುರಿಗೆ ಇರುವ ಸರ್ಕಾರಿ ಪ್ರಾಥಮಿಕ ಶಾಲೆ ನಂ.23ಕ್ಕೆ ಕಟ್ಟಡ, ಕಂಪೌಂಡ್ ನಿರ್ಮಿಸುವಲ್ಲಿಯೂ ಈತ ಪ್ರಮುಖ ಪಾತ್ರ ವಹಿಸಿದ್ದಾನೆ. ಈ ಶಾಲೆಗೆ ಯಾರೇ ಅಧಿಕಾರಿಗಳು ಬಂದರೂ ಈ ಅಜ್ಜ ಅವರ ಕಾಲು ಹಿಡಿದುಕೊಂಡು ಶಾಲಾ ಕಟ್ಟಡ, ಕಂಪೌಂಡ್ ಗೋಡೆ ನಿರ್ಮಿಸುವಂತೆ ಗೋಗರೆಯುತ್ತಿದ್ದ.ಈತನ ವಿನೂತನ ಕೋರಿಕೆಗೆ ಮನಸೋತು ಅಧಿಕಾರಿಗಳು ಈ ಶಾಲೆಗೆ ಸೌಲಭ್ಯ ಕಲ್ಪಿಸುವುದರ ಜೊತೆಗೆ ಅದರ ಎಸ್‌ಡಿಎಂಸಿ ಅಧ್ಯಕ್ಷನನ್ನಾಗಿಯೂ ಈ ಅಜ್ಜನನ್ನೇ ನೇಮಿಸಿದ್ದರು. ಕಟ್ಟಡ ಕಟ್ಟುವಾಗ ಉಚಿತವಾಗಿ ನೀರು ಹೊಡೆದ. ಜನ-ದನ ಮಾಡಿದ ಹೊಸನ್ನು ಈತನೇ ಸ್ವಚ್ಛಗೊಳಿಸುತ್ತಿದ್ದ. ಈಗಲೂ ಅಷ್ಟೇ~ ಎಂದು ದಾನೇಶ ಸ್ಮರಿಸುತ್ತಾರೆ.`ಸಾಲಿ ಅಂದ್ರ ದೇವರ ಮನಿ ಇದ್ದಂಗ. ಎಲ್ಲಾರೂ ಸೇವಾ ಮಾಡಬೇಕ್ರಿ ಸಾಹೇಬ್ರ~ ಎನ್ನುತ್ತ ಗುರುಲಿಂಗಪ್ಪ ನೀರಿನ `ದಾಸೋಹ~ದಲ್ಲಿ ತೊಡಗಿದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry