ಅಜ್ಜನ ಜಾಡು ಹುಡುಕಿಬಂದ ಮರಿಮೊಮ್ಮಗ!

7

ಅಜ್ಜನ ಜಾಡು ಹುಡುಕಿಬಂದ ಮರಿಮೊಮ್ಮಗ!

Published:
Updated:
ಅಜ್ಜನ ಜಾಡು ಹುಡುಕಿಬಂದ ಮರಿಮೊಮ್ಮಗ!

ವಿಶ್ವವೇ ಹಳ್ಳಿಯಂತೆ ಭಾಸವಾಗುತ್ತಿರುವ, ಬದುಕನ್ನು ಹುಡುಕಿಕೊಂಡು ಊರು ತೊರೆದು ಮತ್ತೆಲ್ಲೋ ನೆಲೆಸುತ್ತಿರುವ ದಿನಗಳಿವು. ಇಂಥ ಸಂಕೀರ್ಣ ಸಂದರ್ಭದಲ್ಲಿ ನಮ್ಮ ಬೇರುಗಳೆಲ್ಲೊ? ಬಿಳಲುಗಳು ಇನ್ನೆಲ್ಲೊ? ಕಾಲಕ್ರಮೇಣ ಸಾಗಿಬಂದ ಹಾದಿಯೇ ಮಸುಕಾಗತೊಡಗುತ್ತದೆ. ಆದರೆ, ಅಮೆರಿಕಾದ ಯುವಕನೊಬ್ಬನಿಗೆ ತನ್ನ ಪೂರ್ವಜರ ಬೇರುಗಳನ್ನು ತಡಕಾಡುವ ತವಕ. ಆ ತುಡಿತದಲ್ಲಿ ಆತ ಬಂದು ಮುಟ್ಟಿದ್ದು ಕರ್ನಾಟಕಕ್ಕೆ...ಇದು ಅಚ್ಚರಿ. ಆದರೆ, ನಿಜ.

ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ದಂತವೈದ್ಯರಾಗಿರುವ ಆಲ್ಬರ್ಟೋಗೆ ವಂಶವೃಕ್ಷ, ವಂಶಾವಳಿ ಕುರಿತ ಸಂಗತಿಗಳಲ್ಲಿ ಆಸಕ್ತಿ, ಕುತೂಹಲ. ಹಾಗೆಯೇ ತಮ್ಮ ಪೂರ್ವಜರ ಬಗ್ಗೆ ತಿಳಿದುಕೊಳ್ಳುವ ಹಂಬಲ.ಕಳೆದ ಎರಡು ದಶಕಗಳಿಂದ ಹುಡುಕಾಟ ನಡೆಸಿದ್ದರು. ತನ್ನ ಪೂರ್ವಜರ ನೆಲೆ ಹುಡುಕಿ ಕೆಲವರ್ಷಗಳ ಹಿಂದೆ ಕ್ಯಾಲಿಫೋರ್ನಿಯಾದಿಂದ ಇಂಗ್ಲೆಂಡಿನ ಲೀಡನ್‌ಗೂ ಹೋಗಿ ಬಂದಿದ್ದರು. ಇಂಗ್ಲೆಂಡಿಗೆ ಹೋದ ತನ್ನ ಅಜ್ಜನ ಅಜ್ಜ ಒಬ್ಬ ಕಾದಂಬರಿಕಾರ, ಇತಿಹಾಸಕಾರ, ಲೇಖಕ, ಆಡಳಿತಗಾರನಾಗಿದ್ದ ಸಂಗತಿ ತಿಳಿಯಿತು.

 

`ಕನ್‌ಫೆಷನ್ಸ್ ಆಫ್ ಥಗ್~ ಕಾದಂಬರಿಯ ಮೂಲಕ ಹೆಸರುವಾಸಿಯಾಗಿದ್ದ ಮೆಡೋಸ್ ಟೇಲರ್ ತನ್ನ ಪೂರ್ವಜ ಎಂದು ತಿಳಿಯುತ್ತಿದ್ದಂತೆಯೇ ಆಲ್ಬರ್ಟೋ ಪುಳಕಿತರಾದರು. ಸಹಜವಾಗಿಯೇ ಮೆಡೋಸ್ ಬಗ್ಗೆ ತಿಳಿದುಕೊಳ್ಳುವ ಬಯಕೆ ಮೂಡಿತು. ಮೆಡೋಸ್ ಟೇಲರ್‌ನ `ಸ್ಟೋರಿ ಆಫ್ ಮೈ ಲೈಫ್~ ಆತ್ಮಕತೆ ಸಂಗ್ರಹಿಸಿ ಓದಿದರು. ಆ ಪುಸ್ತಕದಲ್ಲಿ ಅನಾವರಣಗೊಂಡ ವ್ಯಕ್ತಿತ್ವ ಆಲ್ಬರ್ಟೋನನ್ನು ಬೆರಗುಗೊಳಿಸಿತು.ಯಾರೀ ಟೇಲರ್?

ಉದ್ಯೋಗಾವಕಾಶ ಹುಡುಕಿ ಇಂಗ್ಲೆಂಡಿನಿಂದ ಹೊರಟ ಮೆಡೋಸ್ ಟೇಲರ್ ದೂರದ ಭಾರತದ ದಖನ್ ಪ್ರದೇಶದಲ್ಲಿ ಹೈದರಾಬಾದ್ ಅಸಫ್‌ಜಾಹಿ ಅರಸು ಮನೆತನದ ಆಳ್ವಿಕೆಯ ಸಂದರ್ಭದಲ್ಲಿ ಆಡಳಿತಗಾರನಾಗಿ ಬೆಳೆದು ನಿಂತ ಪರಿ ಅಚ್ಚರಿ ಮೂಡಿಸುವಂತಹದ್ದು.ಐತಿಹಾಸಿಕ ಕಾದಂಬರಿಗಳ ಮೂಲಕ ಭಾರತೀಯ ಸಂಸ್ಕೃತಿಯನ್ನು ಪಾಶ್ಚಿಮಾತ್ಯರಿಗೆ ಪರಿಚಯಿಸಿದ ಮೆಡೋಸ್ ಟೇಲರ್ (1808-76) ಲೇಖಕನಾಗಿ ಜನಪ್ರಿಯನಾಗಿದ್ದ. `ಕನ್‌ಫೆಷೆನ್ಸ್ ಆಫ್ ಥಗ್~ (ಠಕ್ಕನೊಬ್ಬನ ಆತ್ಮಚರಿತ್ರೆ) ಮೂಲಕ ಇಂಗ್ಲೆಂಡ್ ಮಾತ್ರವಲ್ಲದೇ ಯುರೋಪಿನಾದ್ಯಂತ ಹೆಸರುವಾಸಿಯಾಗಿದ್ದ.ಪ್ರಾಗೈತಿಹಾಸಿಕ ಶೋಧಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಮಹತ್ವದ ಕೆಲಸ ಮಾಡಿರುವ ಟೇಲರ್ ಇತಿಹಾಸಕಾರ, ಸಂಶೋಧಕನೂ ಆಗಿದ್ದ. ತನ್ನ ಹದಿನೈದನೇ ವಯಸ್ಸಿಗೆ ಕೆಲಸ ಹುಡುಕುತ್ತ ಭಾರತಕ್ಕೆ ಬಂದ ಆತ ಔರಂಗಾಬಾದ್‌ನಲ್ಲಿ ಕಾರಕೂನನಾಗಿ ವೃತ್ತಿ ಆರಂಭಿಸಿದ.

 

ನಂತರ ಪೊಲೀಸ್, ಮಿಲಿಟರಿ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿ ಕ್ಯಾಪ್ಟನ್-ಕರ್ನಲ್ ಹುದ್ದೆಯವರೆಗೆ ಪದೋನ್ನತಿ ಪಡೆದ. ಆಡಳಿತಗಾರನಾಗಿ ಟೇಲರ್ ಕೈಗೊಂಡ ಕ್ರಮಗಳು ಅವನನ್ನು ಜನಪ್ರಿಯವಾಗಿಸಿದವು. ಜನ ಸಂಜೆ ದೀಪ ಹಚ್ಚುವ ವೇಳೆ ಅವನ ಹೆಸರನ್ನು ಸ್ಮರಿಸುತ್ತಿದ್ದರು. `ಮೆಡೋಸ್ ಟೇಲರ್~ ಎಂದು ಕರೆಯಲು ಬಾರದ, ಕರೆಯಲಾಗದ ಜನರಿಗೆ ಟೇಲರ್ `ಮಹಾದೇವ ಬಾಬಾ~ ಆಗಿದ್ದ.ಸುರಪುರದಲ್ಲಿ ಟೇಲರ್!

`ಸುರಪುರ~ ಎಂದೊಡನೆ ನೆನಪಾಗುವುದು ಬ್ರಿಟಿಷರ ವಿರುದ್ಧ 1857ರಲ್ಲಿ ಸಿಡಿದೆದ್ದ ದೊರೆ ವೆಂಕಟಪ್ಪ ನಾಯಕ. ಈ ನಾಲ್ಕನೇ ವೆಂಕಟಪ್ಪ ನಾಯಕ ಏಳು ವರ್ಷದ ಹುಡುಗನಾಗಿದ್ದಾಗ ಟೇಲರ್ ಸುರಪುರಕ್ಕೆ ಬಂದ.ಟೇಲರ್ ಸುರಪುರಕ್ಕೆ ಬರುವುದಕ್ಕೆ ಕಾರಣವಾದದ್ದು ಸಂಸ್ಥಾನವು ಹೈದರಾಬಾದ್ ನಿಜಾಂರಿಗೆ ನೀಡಬೇಕಾಗಿದ್ದ ಬಾಕಿ ಹಣ ವಸೂಲಿ ಮಾಡುವುದು ಮತ್ತು ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದ ಗೊಂದಲ. ಟೇಲರ್‌ಗಿಂತ ಮೊದಲು ಸುರಪುರಕ್ಕೆ ಬಂದಿದ್ದ ಕ್ಯಾಪ್ಟನ್ ಗ್ರಿಸ್ಲೆ ಎಂಬ ಬ್ರಿಟಿಷ್ ಅಧಿಕಾರಿ ವಿರೋಧ ಎದುರಿಸಲಾಗದೆ ಪಲಾಯನ ಮಾಡಿದ್ದ.ವೆಂಕಟಪ್ಪನಾಯಕನ ತಂದೆ ಕೃಷ್ಣಪ್ಪನಾಯಕನು ಅಕಾಲಮೃತ್ಯುವಿಗೆ ಈಡಾಗಿದ್ದರಿಂದ ಸಿಂಹಾಸನ ಖಾಲಿಯಾಗಿತ್ತು. ರಾಣಿ ಈಶ್ವರಮ್ಮನಿಗೆ ಗಂಡುಮಗು ಹುಟ್ಟುವ ಮುನ್ನವೇ ಕೃಷ್ಣಪ್ಪ ನಾಯಕರು ತನ್ನ ಸಹೋದರ ಪಿಡ್ಡನಾಯಕನ ಮಗನನ್ನು ಯುವರಾಜನನ್ನಾಗಿ ಘೋಷಿಸಿದ್ದರು. ಯುವರಾಜನನ್ನೇ ರಾಜನನ್ನಾಗಿ ಮಾಡಬೇಕು ಎಂಬುದು ಪಿಡ್ಡನಾಯಕರ ಬಯಕೆಯಾಗಿತ್ತು.ಆದರೆ, ರಾಣಿ ಈಶ್ವರಮ್ಮ ತನ್ನ ಕುಟುಂಬಕ್ಕೇ ಅಧಿಕಾರ ನೀಡಬೇಕು ಎಂದು ಬಯಸುತ್ತಿದ್ದರು. ಇಡೀ ರಾಜ್ಯ ಎರಡು ಬಣಗಳಾಗಿ ಒಡೆದು ಹೋಗಿದ್ದ ಸಂದರ್ಭದಲ್ಲಿ ಟೇಲರ್ ಸುರಪುರಕ್ಕೆ ಬಂದಿದ್ದ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸುವುದು ಸುಲಭ ಸಾಧ್ಯವಾಗಿರಲಿಲ್ಲ.ಆದರೆ, ಸೌಜನ್ಯ, ಸಂಯಮ ಮತ್ತು ತೂಕದ ನಿರ್ಧಾರದಿಂದ ವರ್ತಿಸಿದ ಟೇಲರ್ ಸಾಹೇಬ ಏಳು ವರ್ಷದ ಮಗು ವೆಂಕಟಪ್ಪ ನಾಯಕನನ್ನು ಸಿಂಹಾಸನದ ಮೇಲೆ ಕೂಡಿಸುವಲ್ಲಿ ಯಶಸ್ವಿಯಾದ. ಇದರಿಂದಾಗಿ ಉಭಯ ಪಂಗಡಗಳ `ಗುರಿ~ ರಾಜ ಮತ್ತು ಟೇಲರ್ ಕಡೆಗೆ ತಿರುಗಿತು. ದಸರಾ ಮೆರವಣಿಗೆಯಲ್ಲಿ ಮತ್ತು ದರ್ಬಾರಿನಲ್ಲಿ ದಾಳಿ ನಡೆಯುವ ಮುನ್ಸೂಚನೆ ಅರಿತ ಟೇಲರ್ ಅದನ್ನು ಯಶಸ್ವಿಯಾಗಿ ನಿವಾರಿಸಿದ.ಹೀಗೆ ಸುರಪುರದಲ್ಲಿ ಇದ್ದ ಆರಂಭದ ದಿನಗಳನ್ನು ಆತಂಕದಲ್ಲಿಯೇ ಕಳೆಯಬೇಕಾಯಿತು. ಅಂತಹ ದಿನಗಳಲ್ಲಿಯೇ ಟೇಲರ್ ತನ್ನ ನಿವಾಸ (ಮಂಜಿಲ್) ನಿರ್ಮಾಣಕ್ಕೆ ಮುಂದಾದ. ಪಟ್ಟಣದಿಂದ ದೂರ ಮತ್ತು ಎತ್ತರದಲ್ಲಿ ಇರುವ ಬೆಟ್ಟದ ನಡುವೆ 1844ರಲ್ಲಿ ಮಂಜಿಲ್ ಪೂರ್ಣಗೊಳಿಸಿದ.ಸುರಪುರದಲ್ಲಿ ಟೇಲರ್ ಇದ್ದ 12 ವರ್ಷಗಳ ಪೈಕಿ ದ್ವಿತೀಯಾರ್ಧದಲ್ಲಿ ಬಹುತೇಕ ದಿನಗಳು ಅಭಿವೃದ್ಧಿಪರ, ನೆಮ್ಮದಿಯ ದಿನಗಳಾಗಿದ್ದವು. ರಾಜಾ ವೆಂಕಟಪ್ಪ ನಾಯಕನಿಗೆ ಆತ್ಮೀಯನಾಗಿದ್ದ ಟೇಲರ್‌ನು ರಾಜನಿಗೆ ಶಸ್ತ್ರ ಮತ್ತು ಶಾಸ್ತ್ರ ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರ ದೊರೆಯುವಂತೆ ನೋಡಿಕೊಂಡ.ದೊರೆ ನಾಲ್ವಡಿ ವೆಂಕಟಪ್ಪ ನಾಯಕರು ಟೇಲರ್‌ನನ್ನು `ಅಪ್ಪ~ ಎಂದೇ ಪ್ರೀತಿಯಿಂದ ಕರೆಯುತ್ತಿದ್ದರು. ಟೇಲರ್ ಪಟ್ಟಣದಿಂದ ನಿರ್ಗಮಿಸುವುದನ್ನು ತನ್ನಿಂದ ನೋಡಲಾಗುವುದಿಲ್ಲ ಎಂದು ಅರಸು ಬೇರೆ ಕಡೆಗೆ ಹೋಗಲು ಮನಸ್ಸು ಮಾಡಿದ್ದರು. ಈ ಎಲ್ಲ ವಿವರಗಳನ್ನು ಟೇಲರ್ ತನ್ನ ಆತ್ಮಕಥೆಯಲ್ಲಿ ಸೇರಿಸಿದ್ದಾನೆ.ಅದಾದ ಸರಿ ಸುಮಾರು ನೂರೈವತ್ತು ವರ್ಷಗಳ ನಂತರ. ಮೆಡೋಸ್ ಟೇಲರ್‌ನ ವಂಶಸ್ಥ (ಮೊಮ್ಮಗನ ಮೊಮ್ಮಗ) ಅಲ್ಬರ್ಟೊ ಟೇಲರ್, ಇಂಟರ್‌ನೆಟ್‌ನಲ್ಲಿ ಹುಡುಕುವಾಗ, ಸುರಪುರದಲ್ಲಿನ `ಟೇಲರ್ ಮಂಜಿಲ್~ ಕುರಿತು `ಡೆಕ್ಕನ್ ಹೆರಾಲ್ಡ್~ನ `ಸ್ಪೆಕ್ಟ್ರಮ್~ ಪುರವಣಿಯಲ್ಲಿ ಪ್ರಕಟವಾದ ಲೇಖನದ ಲಿಂಕ್ ದೊರಕಿತು.

 

(ಅದು `ಪ್ರಜಾವಾಣಿ~ಯ `ಕರ್ನಾಟಕ ದರ್ಶನ~ ಪುರವಣಿಯಲ್ಲಿ ಪ್ರಕಟವಾಗಿದ್ದ ಲೇಖನದ ಅನುವಾದ). ಅದನ್ನು ಓದಿ ಆಲ್ಬರ್ಟೋಗೆ ಎಲ್ಲಿಲ್ಲದ ಖುಷಿ ಯಾಯಿತು. ಅದೇ ಹೊತ್ತಿಗೆ ಸುರಪುರ ಸಂಸ್ಥಾನದ ಕುರಿತು ಸಂಶೋಧನೆ ನಡೆಸುತ್ತಿರುವ, ಕಲೆ-ಇತಿಹಾಸದಲ್ಲಿ ಆಸಕ್ತಿ ಇರುವ, ಸದ್ಯ ಆಸ್ಟ್ರೇಲಿಯಾದ ನಿವಾಸಿ ಆಗಿರುವ ಸುಪ್ರತಿಕ್ ಮುಖರ್ಜಿ,  `ಟೇಲರ್ ವಂಶಕ್ಕೆ ಸೇರಿದವರು ಇದ್ದರೆ ಪ್ರತಿಕ್ರಿಯಿಸಿ~ ಎಂದು ಮಾಡಿದ್ದ ಮನವಿಯ ಎಳೆಯೂ ದೊರೆಯಿತು.ಸುಪ್ರತಿಕ್ ಜೊತೆಗೆ ಚರ್ಚಿಸಿ ಭಾರತದಲ್ಲಿ ಮೆಡೋಸ್ ಟೇಲರ್ ಕೆಲಸ ಮಾಡಿದ ಕಡೆಗಳಲ್ಲಿ ಓಡಾಡಿ, ಮಾಹಿತಿ ಸಂಗ್ರಹಿಸಲು ಆಲ್ಬರ್ಟೋ ನಿರ್ಧರಿಸಿದರು. ಸುರಪುರ ಸಂಸ್ಥಾನದ ಬಗ್ಗೆ ಅಭಿಮಾನ, ಆಸಕ್ತಿ ಇರುವ ಭಾಸ್ಕರರಾವ್ ಮುಡಬೂಳ ಅವರನ್ನು ಸಂಪರ್ಕಿಸಿದ ಸುಪ್ರತಿಕ್ ಮುಖರ್ಜಿಯು ಆಲ್ಬರ್ಟೋ ಟೇಲರ್ ಸುರಪುರಕ್ಕೆ ಭೇಟಿ ನೀಡಬಯಸುವ ಬಗ್ಗೆ ವಿವರಿಸಿದರು.ಆಲ್ಬರ್ಟೊ ಭಾರತಕ್ಕೆ ಬಂದಾಗ ಎಲ್ಲೆಲ್ಲಿಗೆ ಕರೆದೊಯ್ಯಬೇಕು ಎಂಬ ಚರ್ಚೆ ನಡೆದಾಗ ಮೆಡೋಸ್ ಟೇಲರ್ ಭಾರತದಲ್ಲಿ ಇದ್ದ ದಿನಗಳಲ್ಲಿ ಕೆಲಸ ಮಾಡಿದ, ಆಸಕ್ತಿ ತೋರಿಸಿದ ಪ್ರದೇಶಗಳನ್ನು ತೋರಿಸುವುದು ಒಳಿತು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಅದರಂತೆ, ಹೈದರಾಬಾದ್, ಬೀದರ್, ಗುಲ್ಬರ್ಗ, ಸುರಪುರ, ಲಿಂಗಸುಗೂರು, ಹಂಪಿಗಳಿಗೆ ಹೋಗುವಂತೆ ಪ್ರವಾಸ ರೂಪಿಸಲಾಯಿತು.ಮಾರ್ಚ್ 3ರಂದು ದೆಹಲಿ ಮೂಲಕ ಹೈದರಾಬಾದ್‌ಗೆ ಬಂದ ಆಲ್ಬರ್ಟೋಗೆ ಸಾಲಾರ್‌ಜಂಗ್ ಮ್ಯೂಸಿಯಂನಲ್ಲಿ ಏರ್ಪಡಿಸಿದ್ದ ಪುಟ್ಟ ಸಮಾರಂಭದಲ್ಲಿ ಟೇಲರ್‌ನ `ಪ್ರಾಗೈತಿಹಾಸಿಕ ಶೋಧ~ಗಳ ಬಗ್ಗೆ ಮಾಹಿತಿ ನೀಡಲಾಯಿತು. ಮರುದಿನ ಬೆಳಿಗ್ಗೆ ಹೈದರಾಬಾದ್‌ನಿಂದ ಹೊರಟ ಆಲ್ಬರ್ಟೋ ಬೀದರ್‌ಗೆ ಬಂದರು.ಮೆಡೋಸ್ ಟೇಲರ್‌ನಿಗೂ ಬೀದರಿಗೂ ಅವಿನಾಭಾವ ಸಂಬಂಧ. ಮೆಡೋಸ್ ಟೇಲರ್‌ನ ಎರಡು ನೂರನೇ ಹುಟ್ಟುಹಬ್ಬದ ಸಂದರ್ಭದಲ್ಲಿ (2008 ಸೆಪ್ಟೆಂಬರ್ 25) ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯು ಬೀದರ್‌ನಲ್ಲಿ ವಿಚಾರ ಸಂಕಿರಣ ಏರ್ಪಡಿಸಿತ್ತು.

 

ಆಗ ವಾರ್ತಾ ಇಲಾಖೆಯ ನಿರ್ದೇಶಕರಾಗಿದ್ದ ವಿಶುಕುಮಾರ್ ಅವರ ಆಸಕ್ತಿಯಿಂದಾಗಿ ವಿಚಾರ ಸಂಕಿರಣದಲ್ಲಿ ಮಂಡಿಸಲಾದ ಪ್ರಬಂಧಗಳನ್ನು `ಮಹಾದೇವ ಬಾಬಾ ಮೆಡೋಸ್ ಟೇಲರ್~ ಎಂದು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿತ್ತು. ಈ ಎಲ್ಲ ವಿವರಗಳನ್ನು ಕೇಳುವಾಗ ಆಲ್ಬರ್ಟೋ ಕ್ಷಣಕಾಲ ಭಾವೋದ್ವೇಗಕ್ಕೆ ಒಳಗಾದರು.`ಭಾರತದ ಜನ ಮೆಡೋಸ್ ಟೇಲರ್‌ನನ್ನು ಮರೆತಿರಬಹುದು ಎಂದುಕೊಂಡಿದ್ದೆ. ನೂರೈವತ್ತು ವರ್ಷಗಳ ಹಿಂದೆ ಬದುಕಿದ್ದ ವ್ಯಕ್ತಿಯನ್ನು ಯಾರು ತಾನೆ ನೆನಪಿಡಲು ಸಾಧ್ಯ? ಆದರೆ, ನನ್ನ ಪೂರ್ವಜನನ್ನು ಆತ ಮಾಡಿದ ಒಳ್ಳೆಯ ಕೆಲಸಗಳಿಗಾಗಿ ನೆನಪಿಟ್ಟು ಸ್ಮರಿಸುತ್ತಿರುವುದು ನನ್ನ ಅಚ್ಚರಿ ಮತ್ತು ಖುಷಿಗೆ ಕಾರಣವಾಯಿತು.ಟೇಲರ್ ಬಗ್ಗೆ ನಾನು ಕೂಡ ಏನನ್ನಾದರೂ ಮಾಡಬೇಕು ಅನ್ನಿಸುತ್ತಿದೆ~ ಎಂದು ಪ್ರತಿಕ್ರಿಯಿಸಿದ ಆಲ್ಬರ್ಟೋ ನಂತರ ಬೀದರ್‌ನ ಪ್ರಮುಖ ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡಿದರು. ಬಹಮನಿ ಅರಸರ ಕೋಟೆ, ಸೋಲಹ್ ಕಂಬ ಮಸೀದಿ, ಮಹಮೂದ್ ಗಾವಾನ್ ಮದರಸಾಗಳನ್ನು ನೋಡಿ ಸಂತಸ ವ್ಯಕ್ತಪಡಿಸಿದ ಆಲ್ಬರ್ಟೋ ರಂಗೀನ್ ಮಹಲ್‌ನಲ್ಲಿ ಕಪ್ಪುಶಿಲೆ  ಕೊರೆದು ಕಪ್ಪೆಚಿಪ್ಪು ಕೂಡಿಸಿದ ಅದ್ಭುತ ನೋಡಿ ಬೆರಗಾದರು.ಭಾರತದ ಎಲ್ಲ ಅನುಭವ ದಾಖಲಿಸುವುದಾಗಿ ತಿಳಿಸಿದ ಆಲ್ಬರ್ಟೋ ನಂತರ ಗುಲ್ಬರ್ಗ ಮಾರ್ಗವಾಗಿ ಸುರಪುರಕ್ಕೆ ಹೋದರು. ಅಲ್ಲಿ ದೊರೆತ ಸ್ವಾಗತ ಅದ್ಭುತವಾಗಿತ್ತು. ಹವಾನಿಯಂತ್ರಿತ ಖಾಸಗಿ ಹೋಟೆಲ್‌ನಲ್ಲಿ ಉಳಿಸುವ ಇರಾದೆ ಆಯೋಜಕರಿಗಿದ್ದರೂ ಸರ್ಕಾರಿ ಅತಿಥಿಗೃಹವಾದ `ಟೇಲರ್ ಮಂಜಿಲ್~ನಲ್ಲಿ ಉಳಿದುಕೊಂಡರು.ಸುರಪುರದಲ್ಲಿನ ಅರಮನೆ, ಟೇಲರ್ ರಿಪೇರಿ ಮಾಡಿಸಿ ಬೋಟಿಂಗ್ ಆರಂಭಿಸಿದ್ದ ಬೋನಾಳ ಕೆರೆಗೆ ಭೇಟಿ ನೀಡಿದರು. ಮರುದಿನ ಮೆಡೋಸ್ ಟೇಲರ್‌ನ ಪತ್ನಿ ಮೇರಿ ಟೇಲರ್‌ಳ ಸಮಾಧಿ ಇರುವ ಲಿಂಗಸುಗೂರಿಗೆ ಹೋಗಿ ಗೌರವ ನಮನ ಸಲ್ಲಿಸಿದರು. ಅಲ್ಲಿಂದ ಹಂಪಿಗೆ ಹೋದ ಆಲ್ಬರ್ಟೋ `ಟೇಲರ್ ಮಂಜಿಲ್~ನಲ್ಲಿಯೇ ಮತ್ತಷ್ಟು ಕಾಲ ಕಳೆಯಲು ಬಯಸಿ ಭೇಟಿ ನೀಡಬೇಕಾಗಿದ್ದ ಬಾದಾಮಿ, ಪಟ್ಟದಕಲ್ಲು, ಬಿಜಾಪುರದ ಪ್ರವಾಸವನ್ನು ರದ್ದುಗೊಳಿಸಿದರು.ಐದು ದಿನಗಳ ಕಾಲ ತಮ್ಮ ಮುತ್ತಜ್ಜ ಮೆಡೋಸ್ ಕೆಲಸ ಮಾಡಿದ, ಜನಮನ್ನಣೆ ಗಳಿಸಿದ ಪ್ರದೇಶಗಳಲ್ಲಿ ಓಡಾಡಿ ಧನ್ಯತಾಭಾವ ಅನುಭವಿಸಿದ್ದ ಆಲ್ಬರ್ಟೋ ಮರಳಿ ಕ್ಯಾಲಿಫೋರ್ನಿಯಾಗೆ ಹೊರಟು ನಿಂತಾಗ ಅವರ ಕಣ್ಣಾಲಿಗಳು ತುಂಬಿ ಬಂದಿದ್ದವು. ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲಾಗದೆ ಹನಿಯೊಡೆದು ನೆಲ ಕಂಡಿತು. ಅದು ಬಿದ್ದದ್ದು ಟೇಲರ್ ಮಂಜಿಲ್ ಕಟ್ಟಡದ ಮುಂಭಾಗದಲ್ಲಿ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry