ಅಜ್ಜಾವರ: ಗ್ರಾ.ಪಂ ಕಚೇರಿಗೆ ಗ್ರ್ರಾಮಸ್ಥರ ಮುತ್ತಿಗೆ

ಶನಿವಾರ, ಜೂಲೈ 20, 2019
22 °C

ಅಜ್ಜಾವರ: ಗ್ರಾ.ಪಂ ಕಚೇರಿಗೆ ಗ್ರ್ರಾಮಸ್ಥರ ಮುತ್ತಿಗೆ

Published:
Updated:

ಸುಳ್ಯ: ಅಜ್ಜಾವರ ಗ್ರಾಮದ ಮೇನಾಲದಲ್ಲಿ ವ್ಯಕ್ತಿಯೊಬ್ಬರು ಮದ್ಯದಂಗಡಿ ತೆರೆಯಲು ಪ್ರಯತ್ನಿಸುತ್ತಿದ್ದು, ಅದಕ್ಕೆ ಅನುಮುತಿ ನೀಡಬಾರದು ಎಂದು ಮದ್ಯಮುಕ್ತ ಗ್ರಾಮ ಹೋರಾಟ ಸಮಿತಿ, ಸ್ತ್ರೀ ಶಕ್ತಿ ಸಂಘಟನೆ ಮತ್ತು ಸ್ವಸಹಾಯ ಸಂಘಗಳ ಕಾರ್ಯಕರ್ತರು ಗುರುವಾರ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಗುರುವಾರ ಅಜ್ಜಾವರ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಸಭಾಂಗಣದಲ್ಲಿ ನಡೆಯುತ್ತಿದ್ದು, ಹೊರಗೆ ಮದ್ಯಮುಕ್ತ ಗ್ರಾಮ ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.ಕಳೆದ ವಾರ ನಡೆದ ಗ್ರಾಮ ಸಭೆಯಲ್ಲಿ ಗ್ರಾಮದಲ್ಲಿ ಮದ್ಯದ ಅಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ನಿರ್ಣಯ ಕೈಗೊಂಡಿದ್ದರೂ ಪಂಚಾಯಿತಿ ಆಡಳಿತ ಅಂಗಡಿಗೆ ಪರವಾನಿಗೆ ನೀಡುವ ಯತ್ನ ನಡೆಸಿದೆ. ಅದಕ್ಕೆ ಬೇಕಾದ ಕಟ್ಟಡ ನವೀಕರಣ ಕಾರ್ಯ ಕೂಡಾ ನಡೆದಿದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಮಹೇಶ್ ಕುಮಾರ್ ಮೇನಾಲ ಆರೋಪಿಸಿದರು.ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರುಣಾಕರ ಅಡ್ಪಂಗಾಯ, ಗ್ರಾಮ ಸಭೆಯಲ್ಲಿ ಮದ್ಯದಂಗಡಿಗೆ ಅನುಮತಿ ನೀಡುವುದಿಲ್ಲ ಎಂದು ನಿರ್ಣಯ ಕೈಗೊಳ್ಳಲಾಗಿದೆ. ಮೇನಾಲದಲ್ಲಿ ರವೀಂದ್ರನಾಥ ರೈ ಎಂಬವರು ನಡೆಸುತ್ತಿದ್ದ ಕೋಳಿ ಫಾರಂ ಕಟ್ಟಡವನ್ನು ದುರಸ್ತಿ ಮಾಡಲು  ಪರವಾನಿಗೆ ಕೋರಿ ಅರ್ಜಿ ಹಾಕಿದ್ದರು. ಆದರೆ ಅಲ್ಲಿ ಮದ್ಯದಂಗಡಿ ತೆರೆಯಲಾಗುತ್ತದೆ ಎಂದು ವದಂತಿ ಹರಡಿತು. ಈ ಹಿನ್ನೆಲೆಯಲ್ಲಿ ಯಾವ ಉದ್ದೇಶಕ್ಕೆ ದುರಸ್ತಿ ಮಾಡಲಾಗುತ್ತಿದೆ ಎಂದು ಸ್ಪಷ್ಟೀಕರಣ ಕೇಳಿ ಬಳಿಕ ಪರವಾನಗಿ ನೀಡಲು ಬಾಕಿ ಇಟ್ಟಿದ್ದೆವು. ಇನ್ನೂ ಪರವಾನಗಿ ನೀಡಿಲ್ಲ. ಕೇವಲ ರಾಜಕೀಯ ಉದ್ದೇಶದಿಂದ ವೃಥಾ ಆರೋಪ ಮಾಡಲಾಗುತ್ತಿದೆ ಎಂದು ಟೀಕಿಸಿದರು.ಇಂದು ಪಂಚಾಯಿತಿ ಸಾಮಾನ್ಯ ಸಭೆ ನಡೆಯುತ್ತದೆ ಎಂದು ತಿಳಿದು ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಅದಕ್ಕೂ ಯಾವುದೇ ಅನುಮತಿ ಪಡೆದಿಲ್ಲ ಎಂದು ಅವರು ದೂರಿದರು.ಸಭೆ ಬಳಿಕ ಮಾತುಕತೆ ನಡೆದು ಗ್ರಾಮದಲ್ಲಿ ಮದ್ಯದಂಗಡಿಗೆ ಪರವಾನಿಗೆ ನೀಡವುದಿಲ್ಲ. ಈಗಾಗಲೇ ಅನಧಿಕೃತವಾಗಿ ಕೆಲವು ಅಂಗಡಿಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದ್ದು, ಈ ಕುರಿತು ಅಬಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ನಿರ್ಣಯಿಸಲಾಯಿತು. ಚಿದಾನಂದ, ದಾಮೋದರ, ಸತೀಶ, ದಯಾನಂದ ಮತ್ತಿತರರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry