ಶುಕ್ರವಾರ, ಫೆಬ್ರವರಿ 26, 2021
30 °C

ಅಜ್ಜಿಯರ 'ಐಸ್‌ಪೈಸ್'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಜ್ಜಿಯರ 'ಐಸ್‌ಪೈಸ್'

ಬೆಂಗಳೂರಿನ ಕೃಷ್ಣಕುಮಾರಿ ಎಸ್ಟೇಟ್‌ನ ಹುಲ್ಲು ಹಾಸಿನ ಮೇಲೆ ಕೈಯಲ್ಲಿ ನಾದಸ್ವರ ವಾದ್ಯಗಳ ಹಿಡಿದು ಹಾಡಿಗೆ ಹೆಜ್ಜೆ ಹಾಕುತ್ತಿದ್ದರು ರಂಗಾಯಣ ರಘು ಮತ್ತು ನೀತು. ಒಂದು ಕಡೆ ಬರಿ ಲಂಗೋಟಿ ತೊಟ್ಟ ಪುಟ್ಟ ಮಕ್ಕಳು ನೃತ್ಯ ನಿರ್ದೇಶಕ ಸದಾ ಹೇಳಿಕೊಟ್ಟ ಹೆಜ್ಜೆಗಳನ್ನು ಅನುಸರಿಸುತ್ತಿದ್ದರು.

ಆದರೆ ಎಲ್ಲರ ಗಮನ ಇದ್ದದ್ದು ಇನ್ನೂ ತಾರುಣ್ಯದ ಉತ್ಸಾಹದಲ್ಲಿ ಕುಣಿಯುತ್ತಿದ್ದ ಅಜ್ಜಿಯರ ಕಡೆಗೆ. 60ರಿಂದ 74 ವರ್ಷದ ವಯಸ್ಸಿನ ನಾಲ್ಕು ಮಂದಿ ನೃತ್ಯಗಾತಿಯರು ತಮಿಳುನಾಡಿನಿಂದ ಬಂದಿದ್ದವರು. ಎಂಜಿಆರ್, ಶಿವಾಜಿ ಗಣೇಶನ್ ಮುಂತಾದ ಹಳೆ ತಲೆಮಾರಿನ ನಟರ ಕಾಲದಿಂದಲೂ ಅವರು ನೃತ್ಯ ಕಲಾವಿದರಾಗಿ ಕಾಣಿಸಿಕೊಂಡವರು. ಈಗಲೂ ಅದೇ ಚೈತನ್ಯ. ದಣಿವೇ ಇಲ್ಲದಂತೆ ಕ್ಯಾಮೆರಾ ಮುಂದೆ ನರ್ತಿಸುವ ಅಜ್ಜಿಯರ ಉತ್ಸಾಹ ನಮ್ಮಂಥವರಲ್ಲಿ ನಾಚಿಕೆ ಮೂಡಿಸುತ್ತದೆ ಎಂದರು ರಂಗಾಯಣ ರಘು.ಅದು `ಐಸ್‌ಪೈಸ್' ಚಿತ್ರದ ಹಾಡಿನ ಚಿತ್ರೀಕರಣ ಸಂದರ್ಭ. ಹಿಂದಿನ ಕಾಲದಲ್ಲಿ ಊರಿಂದೂರಿಗೆ ತೆರಳಿ ತತ್ವ ಹೇಳುವವರನ್ನು ನೆನಪಿಸುವಂತಹ ಗೀತೆಯದು. ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಶಿವಸಾಯಿಕೃಷ್ಣ ಅವರಿಗೆ ಈಗಾಗಲೇ ಸಿನಿಮಾ ಗೆದ್ದಂಥ ಖುಷಿ! ಇದಕ್ಕೆ ರಂಗಾಯಣ ರಘು, ನೀತು ಮತ್ತು ಇತರ ಕಲಾವಿದರ ದುಪ್ಪಟ್ಟು ಸಹಕಾರವೇ ಕಾರಣವಂತೆ. ಶೇಕಡ 50ರಷ್ಟು ಭಾಗದ ಚಿತ್ರೀಕರಣ ಮುಗಿಸಿರುವ ಅವರು, ಮುಂದೆ ಕುಮಟಾ, ಮಂಗಳೂರು, ಕಾರವಾರದ ಪ್ರದೇಶಗಳಲ್ಲಿ ಚಿತ್ರೀಕರಣದ ಯೋಜನೆ ಹಮ್ಮಿಕೊಂಡಿದ್ದಾರೆ.ಚಿತ್ರಕಥೆ ಮತ್ತು ಚಿತ್ರೀಕರಣದ ಶೈಲಿಯಲ್ಲಿ ಇನ್ನಷ್ಟು ಸುಧಾರಣೆಯಾಗಬೇಕಿತ್ತು ಎನ್ನುವುದು ರಂಗಾಯಣ ರಘು ಅಭಿಪ್ರಾಯ. ತಿದ್ದುಪಡಿಯ ಕಾರ್ಯದಲ್ಲಿ ಅವರೂ ಭಾಗಿಯಾಗುತ್ತಿದ್ದಾರೆ. ಸಣ್ಣಪುಟ್ಟ ಸಮಸ್ಯೆಗಳಿದ್ದರೂ ಚಿತ್ರ ಚೆನ್ನಾಗಿ ಮೂಡಿಬರುತ್ತಿದೆ ಎಂಬ ಸಮಾಧಾನ ಅವರಲ್ಲಿತ್ತು. ನೀತು ಜೊತೆಗೆ ಅವರು ಎರಡು ಡುಯೆಟ್ ಹಾಡುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸಿನಿಮಾ ಆರಂಭದಲ್ಲಿ ಕುತೂಹಲ, ಬಳಿಕ ಅವಾಂತರದ ದರ್ಶನವಾಗಲಿದೆ ಎಂಬ ಸುಳಿವನ್ನು ನೀಡಿದರು. ಚಿತ್ರದಲ್ಲಿ ಮನೋವೈದ್ಯೆಯಾಗಿ ನೀತು ಕಾಣಿಸಿಕೊಳ್ಳುತ್ತಿದ್ದಾರೆ. ಕರ್ತವ್ಯದ ಮೇಲೆ ಅವರು ನಾಯಕನ ಮನೆಗೆ ತೆರಳುತ್ತಾರೆ. ಅಲ್ಲಿಂದ `ಕಣ್ಣಾಮುಚ್ಚಾಲೆ' ಆಟ ಶುರು.

ಮುಖ್ಯಪಾತ್ರವಾದರೂ ಅವರು ರಂಗಾಯಣ ರಘು ಅವರಿಗೆ ಜೋಡಿಯಾಗಿ ನಟಿಸುತ್ತಿಲ್ಲ. ಕಥೆಗೊಂದು ತಿರುವು ನೀಡುವ ಪಾತ್ರ ಅವರದ್ದಂತೆ. ನಿರ್ಮಾಪಕ ಸುರೇಶ್ ಮುತ್ತಪ್ಪ, ಕಾರ್ಯಕಾರಿ ನಿರ್ಮಾಪಕ ವಿಸಿಎನ್ ಮಂಜು ಸುದ್ದಿಗೋಷ್ಠಿಯಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.