ಅಜ್ಞಾತ ಜಲಪಾತದ ಬೆನ್ನುಹತ್ತಿ!

ಬುಧವಾರ, ಜೂಲೈ 24, 2019
24 °C

ಅಜ್ಞಾತ ಜಲಪಾತದ ಬೆನ್ನುಹತ್ತಿ!

Published:
Updated:

ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಅಜ್ಞಾತ ಜಲಪಾತಗಳು ಎಷ್ಟೆಷ್ಟೋ? ಕುದುರೆಮುಖ-ಕಾರ್ಕಳ ರಸ್ತೆ ಬದಿಯಲ್ಲಿ ಕಾಣ ಸಿಗುವವು ಕೆಲವಾದರೆ, ಇನ್ನೂ ವನದ ಗರ್ಭದಲ್ಲೇ ಅಡಗಿರುವವು ಹಲವಾರು. ಅಂತಹ ನಿಗೂಢ ಜಲಪಾವೊಂದನ್ನು ಪತ್ತೆ ಮಾಡಿದ ಪ್ರಸಂಗ ಇದು.ಎಂದಿನಂತೆ ಕಳಸದ ವಿಜಯ ಹೋಟೆಲ್‌ನಲ್ಲಿ ಕಳೆದ ಶನಿವಾರ ಸಂಜೆಯ ಹರಟೆಯಲ್ಲಿ ತೊಡಗಿದ್ದಾಗ ಗೆಳೆಯರು `ಭಾನುವಾರ ಎಲ್ಲಿಗಾದ್ರೂ ಹೋಗೋಣ...” ಎಂದು ಆಹ್ವಾನ ನೀಡಿದ್ದೇ ತಡ ನಾವೆಲ್ಲರೂ ಹನುಮನ ಗುಂಡಿ, ಗಂಗಾಮೂಲದಂತಹ ತಾಣಗಳ ಹೆಸರು ಹೇಳಿ ಆಗಿತ್ತು.  ~ಅ್ಲ್ಲಲೆಲ್ಲಾ ಬರೀ ಜಂಗುಳಿ ಇರುತ್ತೆ. ಕುದುರೆಮುಖ ನ್ಯಾಷನಲ್ ಪಾರ್ಕಿನಲ್ಲಿ ರಸ್ತೆ ಬದಿ ಒಂದು ಜಲಪಾತದ ಶಬ್ದ ಕೇಳಿಸುತ್ತೆ. ಅದನ್ನು ಹುಡುಕೋಕೆ ಹೋಗಣ. ಮಜಾ ಇರುತ್ತೆ~ ಎಂದ ಮತ್ತೊಬ್ಬ ಗೆಳೆಯ ಪ್ರೇಮ್.     ಮಾರನೇ ಬೆಳಿಗ್ಗೆ ಕಳಸದಿಂದ ಕುದುರೆಮುಖದ ಮೂಲಕ ಎಸ್.ಕೆ.ಬಾರ್ಡರ್ ತಲುಪಿದೆವು. ಅಲ್ಲಿಂದ  ಮೂರ‌್ನಾಲ್ಕು ಕಿಲೋಮೀಟರ್ ಮುಂದಕ್ಕೆ ಸಾಗಿದರೂ ಯಾವುದೇ ಜಲಪಾತದ ಸುಳಿವು ಸಿಗಲಿಲ್ಲ. ಕಾರು ಚಲಾಯಿಸುತ್ತಿದ್ದ ಸುನೀಲ `ಇಲ್ಲಿ ಫಾಲ್ಸೂ ಇಲ್ಲ ಎಂಥದೂ ಇಲ್ಲ~ ಎಂದು ಸಿಟ್ಟಾಗಿದ್ದ.ಇನ್ನೂ ಅರ್ಧ ಕಿಲೋ ಮೀಟರ್ ಚಲಿಸಿದಂತೆ ಪ್ರೇಮ್ `ಕಾರು ನಿಲ್ಲಿಸು. ಇಲ್ಲೇ ಬಲಗಡೆ ನೀರಿನ ಶಬ್ದ ಕೇಳ್ತಾ ಇದೆ~ ಎಂದ. ಕಾರಿನಿಂದ ಕೆಳಗಿಳಿದು ಸ್ವಲ್ಪ ದೂರ ಹೆಜ್ಜೆ ಹಾಕಿದಾಗ ಬಲಗಡೆಯ ಕಣಿವೆಯಲ್ಲಿ ಸುಮಾರು 200 ಮೀಟರ್ ದೂರದಲ್ಲಿ ನೀರಿನ ಹರಿವು ಕಾಣಿಸಿತು. ~ಇಲ್ಲೇ ಕಾಡೊಳಗೆ ಹೋದ್ರೆ ಜಲಪಾತ ಸಿಗಬಹುದು, ಬನ್ನಿ~ ಎಂದ ಸತೀಶ.ಇಳಿಜಾರಾದ ಕಾಡಿನಲ್ಲಿ ಜಾರುತ್ತಾ ಬೀಳುತ್ತಾ ಸಾಗುತ್ತಿದ್ದರೆ ಕತ್ತಲ ಗವಿ ಹೊಕ್ಕಂತಾಗಿತ್ತು. ವಾಟೆ ಕೋಲು ಹಿಡಿದು ಇಳಿಯುತ್ತಿದ್ದರೆ ದಾರಿಯಲ್ಲೆಲ್ಲಾ ದಾಲ್ಚಿನಿ ಪರಿಮಳ. 15 ನಿಮಿಷ ಇಳಿದವರಿಗೆ ಒಂದು ನದಿಯ ದರ್ಶನವಾಯಿತು. ಜಲಪಾತದ ಶಬ್ದ ಇನ್ನಷ್ಟು ಹತ್ತಿರವಾಗಿತ್ತು.ಹಳ್ಳವು ಹಾಗೇ ಸಾಗಿ ಸುಮಾರು 60 ಅಡಿ ಎತ್ತರದ ಬೃಹತ್ ಗಾತ್ರದ ಬಂಡೆಯ ಮೇಲಿನಿಂದ ಕೆಳಗೆ ಧುಮುಕುತ್ತಿತ್ತು. ಜಲಪಾತ ಹುಡುಕಲು ಹೊರಟವರು ಜಲಪಾತದ ಮೇಲ್ಭಾಗಕ್ಕೆ ಬಂದಿದ್ದೆವು! ಅತ್ಯಂತ ಜಾರುವಿಕೆಯ ಸ್ಥಿತಿಯಲ್ಲಿದ್ದ ಬಂಡೆಯ ಮೇಲೆ ಮಲಗಿ ಜಲಪಾತವನ್ನು ಮೇಲ್ಭಾಗದಿಂದ ವೀಕ್ಷಿಸಿದಾಗ ಅದರ ಸುಂದರ ರೂಪ ಕಾಣುತ್ತಿತ್ತು. ~ಛೇ, ನಾವು ಕೆಳಗಿನಿಂದ ಬರಬೇಕಿತ್ತು. ಜಲಪಾತ ಕೆಳಗಿನಿಂದ ಚೆನ್ನಾಗಿ ಕಾಣಿಸುತ್ತಿತ್ತೇನೋ...~ ಎಂದು ವಿಶು ಪೇಚಾಡಿದ.ಸರಿ, ಕೆಳಗೆ ಇಳಿಯಬಹುದೇ ಎಂದು ಕಣ್ಣು ಹಾಯಿಸಿದರೆ ಸುತ್ತಲೂ ಸುಮಾರು 150ಅಡಿ ಎತ್ತರದ ಬಂಡೆಗಳ ಸಾಲು. ಬೇಸಿಗೆಯಲ್ಲೂ ಪಾಚಿ ಕಟ್ಟಿದ್ದ ಬಂಡೆಯ ಹತ್ತಿರ ಸಾಗಿದರೆ ಅಪಾಯ ಎಂದು ಮರಳಿ ಹೊರಡಲು ಸಿದ್ಧರಾದೆವು. ಹೊರಡಲು ಮನಸ್ಸಿಲ್ಲದ ಪ್ರೇಮ್ `ಆ ಕಡೆಯಿಂದ ಇಳಿದರೆ ಜಲಪಾತದ ಬುಡಕ್ಕೆ ಬರಬಹುದು~ ಎಂದ. ~ಅಲ್ಲಿಂದ ಇಳಿದರೆ ನಾವು ಮನೆಗೆ ವಾಪಸ್ ಹೋಗೋ ಆಸೆ ಬಿಡಬೇಕು~ ಎಂದ ಸುನೀಲ. ಮರಳಿ ರಸ್ತೆಯ ಕಡೆಗೆ ಹೊರಟೆವು.ರಸ್ತೆಯಲ್ಲಿ ಹಾಗೇ ಮುಂದಕ್ಕೆ ಸಾಗಿದಾಗ ರಸ್ತೆಯ ಕೆಳಗಿನಿಂದ ಸಾಗಿದ್ದ ಮೋರಿಯೊಂದು ಕಣ್ಣಿಗೆ ಬಿತ್ತು. ಆ ಮೋರಿಯಲ್ಲಿ ಹರಿಯುತ್ತಿದ್ದ ನೀರು ಖಂಡಿತವಾಗಿಯೂ ಜಲಪಾತದ ಹಳ್ಳಕ್ಕೇ ಹರಿಯುತ್ತಿದೆ ಎಂಬುದು ಖಾತ್ರಿಯಾಗಿತ್ತು. ಮೋರಿಯಲ್ಲೇ ಇಳಿದು ಅಗಳಿನಲ್ಲಿ ಸಾಗಿದರೆ ಜಲಪಾತ ನೋಡಬಹುದು ಎಂದು ನಿರ್ಧರಿಸಿದೆವು.ಕಾಡುಕಲ್ಲುಗಳಿಂದ ನಿಸರ್ಗವೇ ನಿರ್ಮಿಸಿದ್ದ ಮೋರಿಯು ಇಳಿಜಾರಾಗಿದ್ದು ಇಳಿಯುವುದು ಸಾಹಸಮಯವಾಗಿತ್ತು. ನಾನು, ಪ್ರೇಮ್ ಕಣಿವೆಯಲ್ಲೇ ಇಳಿದು ಸುಮಾರು 100 ಮೀಟರ್ ಸಾಗಿದಾಗ ಜಲಪಾತದ ಅರೆಬರೆ ಚಿತ್ರ ಕಾಣುತ್ತಿತ್ತು. ಅಲ್ಲಿಂದ ಕೆಳಗೆ ಇಳಿಯುವುದು ಮಲೆನಾಡಿನಲ್ಲೇ ಹುಟ್ಟಿ ಬೆಳೆದ ನಮಗೆ ಅಷ್ಟೇನೂ ಕಷ್ಟವೂ ಆಗಿರಲಿಲ್ಲ.ಕಣಿವೆಯಿಂದ ಮತ್ತೆ ವಾಪಸ್ ಮೇಲಕ್ಕೆ ಏರಿ ಬಂದು ಮೇಲೆ ಉಳಿದಿದ್ದ ಗೆಳೆಯರ ಮನ ಒಲಿಸಿ ಅವರನ್ನೂ ಕರೆದುಕೊಂಡು ಇಳಿದೆವು. 15 ನಿಮಿಷದ ಹಾದಿ ಕ್ರಮಿಸಿದ ನಂತರ ಅತ್ಯಂತ ಸುಂದರವಾಗಿದ್ದ ಜಲಪಾತದ ಬುಡದಲ್ಲಿ ನಾವಿದ್ದೆವು. ಕಗ್ಗತ್ತಲ ಕಾನನದಿಂದ ರಭಸದಿಂದ ಬಂದ ನೀರು ಬೆಳ್ಳನೆ ಹಾಲಿನಂತೆ ಧುಮುಕಿ ಬೆಳಕು ಮೂಡಿಸಿತ್ತು.ಸುಮಾರು 60 ಅಡಿ ಎತ್ತರದ ಜಲಪಾತದಿಂದ ಜಿನುಗುತ್ತಿದ್ದ ನೀರಿಗೆ ಮೈಯೊಡ್ಡಿ ಮೈಯೆಲ್ಲಾ ಒದ್ದೆಯಾಗಿತ್ತು.ಅಲ್ಲಿಂದ ಮುಂದೆ ಸಾಗಿದರೆ ಅದೇ ಹಳ್ಳ 50 ಮೀಟರ್‌ನಲ್ಲೇ ಮತ್ತೆರಡು ಸಣ್ಣ ಜಲಪಾತಗಳನ್ನೂ ಸೃಷ್ಟಿಸಿತ್ತು.ಈ ಹಳ್ಳಕ್ಕೆ ಈವರೆಗೂ ಬಹುಶಃ ಮನುಷ್ಯರ ಸೋಂಕು ತಗುಲಿಲ್ಲ ಎಂದು ನಂಬಬಹುದಾಗಿತ್ತು. ಹಳ್ಳದ ನೀರನ್ನು ಮನಸೋ ಇಚ್ಛೆ ಕುಡಿದು, ತಂದಿದ್ದ ತಿಂಡಿ ತಿಂದೆವು. ಒಂದು ಗಂಟೆ ಪ್ರಕೃತಿಯ ಬಗ್ಗೆ ಹರಟೆ ಹೊಡೆದು ಮತ್ತೆ ರಸ್ತೆಯತ್ತ ಹೆಜ್ಜೆ ಹಾಕಿದೆವು.ರಸ್ತೆಗೆ ತಲುಪುವಾಗ ನಿಲ್ಲಲು ತ್ರಾಣವೇ ಇಲ್ಲದೆ ಕುಸಿದು ಬೀಳುವಂತಾಯಿತು.ಆದರೆ ಮನಸ್ಸು ಮಾತ್ರ ಪ್ರಫುಲ್ಲಗೊಂಡಿತ್ತು. ಕಳಸದಲ್ಲಿ ಗೆಳೆಯರು ಕೇಳಿದರೆ ಯಾವ ಜಲಪಾತ ಎನ್ನುವುದು ಎಂಬ ತರ್ಕದಲ್ಲಿದ್ದಾಗ ಮನಸ್ಸಿನಲ್ಲಿ ಮೂಡಿದ ಹೆಸರು `ಸ್ವರ್ಣಧಾರಾ~. ಕಾರ್ಕಳ ಸಮೀಪದ ಕಡಾರಿಯಲ್ಲಿ ಹರಿಯುವ ಸ್ವರ್ಣ ನದಿಯೇ ಇಲ್ಲಿ ಜಲಪಾತ ಸೃಷ್ಟಿಸಿರುವುದರಿಂದ ಈ ಹೆಸರು ಸರಿ ಎನ್ನಿಸಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry