ಅಟಲ್‌ಜಿ ಜನಸ್ನೇಹಿ ಕೇಂದ್ರಗಳಾದ `ನೆಮ್ಮದಿ'

7

ಅಟಲ್‌ಜಿ ಜನಸ್ನೇಹಿ ಕೇಂದ್ರಗಳಾದ `ನೆಮ್ಮದಿ'

Published:
Updated:

ಬೆಂಗಳೂರು: `ನಿಮ್ಮ ಸೇವೆಯೇ ನಮ್ಮ ಧ್ಯೇಯ' ಎಂಬ ಘೋಷ ವಾಕ್ಯದೊಂದಿಗೆ ಆರಂಭವಾಗಿರುವ `ಅಟಲ್‌ಜಿ ಜನಸ್ನೇಹಿ' ಕೇಂದ್ರಗಳನ್ನು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಂಗಳವಾರ ಲೋಕಾರ್ಪಣೆ ಮಾಡಿದರು.ಇದುವರೆಗೆ `ನೆಮ್ಮದಿ' ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೇಂದ್ರಗಳ ಹೆಸರನ್ನು ಬದಲಾಯಿಸಿ `ಅಟಲ್‌ಜಿ ಜನಸ್ನೇಹಿ ಕೇಂದ್ರ' ಎಂದು ಮರು ನಾಮಕರಣ ಮಾಡಿದ್ದು, ವಿಧಾನಸೌಧದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಶೆಟ್ಟರ್ ಅವರು ಈ ಕೇಂದ್ರಗಳಲ್ಲಿ ದೊರೆಯುವ 36 ಸೇವೆಗಳಿಗೆ ಚಾಲನೆ ನೀಡಿದರು.ಇದುವರೆಗೆ ಇ - ಆಡಳಿತ ಇಲಾಖೆಯ ಅಧೀನದಲ್ಲಿ 723 ನೆಮ್ಮದಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದವು. ಈಗ ಹೊಸದಾಗಿ 177 ಕೇಂದ್ರಗಳನ್ನು ತೆರೆಯಲಾಗಿದೆ. ಈ ಎಲ್ಲ ಕೇಂದ್ರಗಳನ್ನು ಅಟಲ್‌ಜಿ ಜನಸ್ನೇಹಿ ಕೇಂದ್ರಗಳು ಎಂದು ಕರೆಯಲಾಗುತ್ತದೆ.ಈ ಸಂದರ್ಭದಲ್ಲಿ ಮಾತನಾಡಿದ ಶೆಟ್ಟರ್, ರಾಜ್ಯದಲ್ಲಿನ ಒಟ್ಟು 900 ಕೇಂದ್ರಗಳಲ್ಲಿ ಸಾರ್ವಜನಿಕರಿಗೆ 36 ಸೇವೆಗಳು ಲಭ್ಯವಾಗಲಿವೆ. ವ್ಯವಸ್ಥೆಯಲ್ಲಿ ಬದಲಾವಣೆ ತರುವ ಉದ್ದೇಶದಿಂದ ಈ ಕೇಂದ್ರಗಳಿಗೆ ಹೊಸ ರೂಪ ನೀಡಿ, ನಿರ್ವಹಣೆಯ ಜವಾಬ್ದಾರಿಯನ್ನು ಕಂದಾಯ ಇಲಾಖೆಗೆ ವಹಿಸಲಾಗಿದೆ. ಏನಾದರೂ ಲೋಪದೋಷಗಳು ಕಂಡುಬಂದರೆ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.ನೆಮ್ಮದಿ ಕೇಂದ್ರಗಳು ಹಿಂದೆ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಹೀಗಾಗಿ ಜನರಿಗೆ ಉತ್ತಮ ಸೇವೆ ನೀಡುವಲ್ಲಿ ನೆಮ್ಮದಿ ಕೇಂದ್ರಗಳು ವಿಫಲವಾದವು. ಈಗ ಸರ್ಕಾರದ ನಿಯಂತ್ರಣದಲ್ಲಿ, ಅಂದರೆ ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುವುದರಿಂದ ಸಮಸ್ಯೆ ಉಂಟಾಗದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಅಗತ್ಯ ವ್ಯವಸ್ಥೆ: ಜನಸ್ನೇಹಿ ಕೇಂದ್ರಗಳಿಗೆ ಯುಪಿಎಸ್ ಒದಗಿಸಲಾಗಿದೆ. ಇದರಿಂದಾಗಿ ವಿದ್ಯುತ್ ಕೈಕೊಟ್ಟರೂ, ಸೇವೆಗಳಿಗೆ ತೊಂದರೆಯಾಗದು ಎಂದು ಕಂದಾಯ ಸಚಿವರೂ ಆದ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.ನಿಗದಿತ ಸಮಯದಲ್ಲಿ ದಾಖಲೆಗಳನ್ನು ಕೊಡುತ್ತೇವೆ ಎಂದು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ಉದ್ದೇಶದಿಂದ ಜನಸ್ನೇಹಿ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರತಿ ಕೇಂದ್ರಕ್ಕೆ ನಾಲ್ಕು ಜನ ಸಿಬ್ಬಂದಿ ನೀಡಲಾಗಿದೆ. ಅಗತ್ಯವಾದ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಯಾವುದೇ ಕೇಂದ್ರದಲ್ಲಿ ಸಮಸ್ಯೆ ಉಂಟಾದರೆ ತಕ್ಷಣ ಸ್ಪಂದಿಸುವ ಉದ್ದೇಶದಿಂದ `ಸಹಾಯವಾಣಿ' ಆರಂಭಿಸಲಾಗಿದೆ ಎಂದರು.ಹೋಬಳಿ ಮಟ್ಟದಲ್ಲಿ 601, ತಾಲ್ಲೂಕು ಮಟ್ಟದಲ್ಲಿ 176 ಹಾಗೂ ಜನಸಂಖ್ಯೆ ಹೆಚ್ಚಾಗಿರುವ ನಗರಗಳಲ್ಲಿ 123 ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಈ ಕೇಂದ್ರಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡಲು 62 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದರು.ಕಾನೂನು ಸಚಿವ ಎಸ್.ಸುರೇಶ್‌ಕುಮಾರ್, ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್, ಸಂಸದ ಪಿ.ಸಿ.ಮೋಹನ್, ಮೇಯರ್ ಡಿ.ವೆಂಕಟೇಶಮೂರ್ತಿ, ಸರ್ಕಾರದ ಮುಖ್ಯಕಾರ್ಯದರ್ಶಿ ಎಸ್.ವಿ.ರಂಗನಾಥ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಲತಾ ಕೃಷ್ಣರಾವ್, ಪ್ರಾದೇಶಿಕ ಆಯುಕ್ತ ಕೆ.ಶಿವರಾಂ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾ.ಕೆ.ವಿ.ರಾಜು ಸೇರಿದಂತೆ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕನಸಾಗಿ ಉಳಿದ ನದಿ ಜೋಡಣೆ..

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆಶಯದಂತೆ ನದಿಗಳ ಜೋಡಣೆ ಆಗಿದ್ದರೆ ಬರಗಾಲ, ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ನೀರಿನ ಸಮಸ್ಯೆ ಇರುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಭಿಪ್ರಾಯಪಟ್ಟರು.

ವಾಜಪೇಯಿ ಮತ್ತೊಂದು ಅವಧಿಗೆ ಪ್ರಧಾನಿ ಆಗಿದ್ದರೆ ಗಂಗಾ - ಕಾವೇರಿ ನದಿಗಳ ಜೋಡಣೆ ಆಗುತ್ತಿತ್ತು. ಕಾವೇರಿ ವಿವಾದ ಕೂಡ ಇರುತ್ತಿರಲಿಲ್ಲ. ತಮಿಳುನಾಡಿನೊಂದಿಗೆ ಹೋರಾಟ ನಡೆಸಬೇಕಾದ ಅಗತ್ಯ ಕೂಡ ಬೀಳುತ್ತಿರಲಿಲ್ಲ ಎಂದು ಅವರು ನುಡಿದರು

ಲಭ್ಯ ಸೇವೆಗಳು

ಜನನ ಮತ್ತು ಮರಣ ಪ್ರಮಾಣ ಪತ್ರ, ಪಹಣಿ, ಹಕ್ಕು ಬದಲಾವಣೆ ಪ್ರತಿ, ನಿವಾಸಿ ಪ್ರಮಾಣ ಪತ್ರ, ವಾಸ ಸ್ಥಳ ಪ್ರಮಾಣ ಪತ್ರ, ವಿಧವಾ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನಿರುದ್ಯೋಗಿ ಪ್ರಮಾಣ ಪತ್ರ, ಜೀವಂತ ಪ್ರಮಾಣ ಪತ್ರ ಸೇರಿದಂತೆ ಒಟ್ಟು 36 ಸೇವೆಗಳು ಜನಸ್ನೇಹಿ ಕೇಂದ್ರಗಳಲ್ಲಿ ಲಭ್ಯವಾಗಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry