`ಅಟಲ್‌ಜೀ ಜನಸ್ನೇಹಿ ಕೇಂದ್ರ ಸದ್ಬಳಕೆಯಾಗಲಿ'

7

`ಅಟಲ್‌ಜೀ ಜನಸ್ನೇಹಿ ಕೇಂದ್ರ ಸದ್ಬಳಕೆಯಾಗಲಿ'

Published:
Updated:
`ಅಟಲ್‌ಜೀ ಜನಸ್ನೇಹಿ ಕೇಂದ್ರ ಸದ್ಬಳಕೆಯಾಗಲಿ'

ಬೆಳಗಾವಿ: ಜನಸಾಮಾನ್ಯರಿಗೆ ಅನುಕೂಲವಾಗುವ ದಾಖಲಾತಿಗಳನ್ನು ಕಾಲಮಿತಿ ಒಳಗೆ ಒದಗಿಸುವ ಅಟಲ್ ಜೀ ಜನಸ್ನೇಹಿ ಕೇಂದ್ರಗಳ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಉಮೇಶ ಕತ್ತಿ ಹೇಳಿದರು.ನಗರದ ಹಳೆ ತಹಸೀಲ್ದಾರ ಕಚೆರಿಯಲ್ಲಿ ಅಟಲ್‌ಜಿ ಜನಸ್ನೇಹಿ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಫಲಾನುಭವಿಗಳಿಗೆ ಪ್ರಮಾಣಪತ್ರವನ್ನು ವಿತರಿಸಿದ ಅವರು, ರಾಜ್ಯದಲ್ಲಿ ಒಟ್ಟು 900 ಅಟಲ್‌ಜೀ ಜನಸ್ನೇಹಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಈಗ 27 ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 50 ಕೇಂದ್ರಗಳನ್ನು ಪ್ರಾರಂಭಿಸಲಾಗುವುದು. ಇದರಲ್ಲಿ ಕಂದಾಯ ಇಲಾಖೆ 36 ಸೇವೆಗಳು ಲಭ್ಯವಿವೆ ಎಂದು ಹೇಳಿದರು.ರಾಜ್ಯ ಸರ್ಕಾರವು ಜನರಿಗೆ ತ್ವರಿತ ಹಾಗೂ ಕಾಲಬದ್ಧ ಸೇವೆಯನ್ನು ಒದಗಿಸಲು ಬದ್ಧವಾಗಿದೆ. ಇದಕ್ಕಾಗಿ ಈಗಾಗಲೇ ಸಕಾಲ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಸಾರ್ವಜನಿಕರು ಈ ಯೋಜನೆಗಳ ಲಾಭವನ್ನು ಪಡೆಯಬೇಕು ಎಂದು ಮನವಿ ಮಾಡಿದರು.ಸಂಸದ ಸುರೇಶ ಅಂಗಡಿ, ಜಗತ್ತಿಗೆ ಶಾಂತಿ ಮಂತ್ರವನ್ನು ಭೋದಿಸಿ ಜನಪರ ಕಾಳಜಿ ಹೊಂದಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ಅವರ ಜನ್ಮದಿನದಂದು ಜನಸ್ನೇಹಿ ಕೇಂದ್ರಗಳನ್ನು ಪ್ರಾರಂಭಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಫಿರೋಜ್ ಸೇಠ್, ಜನರ ಮನೆಬಾಗಿಲೆಗೆ ಸರ್ಕಾರದ ಸೌಲಭ್ಯಗಳು ದೊರೆಯುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.ಶಾಸಕರಾದ ಅಭಯ ಪಾಟೀಲ ಹಾಗೂ ಸಂಜಯ ಪಾಟೀಲ ಹಾಜರಿದ್ದರು. ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಡಾ. ವಿ.ಎಸ್. ಚೌಗಲಾ ಸ್ವಾಗತಿಸಿದರು. ತಹಸೀಲ್ದಾರ ಪ್ರೀತಮ್ ನಸಲಾಪೂರ ವಂದಿಸಿದರು.ಅಟಲ್‌ಜೀ ಜನಸ್ನೇಹಿ ಕೇಂದಗಳಲ್ಲಿ ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ಜಾತಿ ದೃಢೀಕರಣ ಪತ್ರ (ಪ್ರವರ್ಗ-1), ಜಾತಿ ದೃಢೀಕರಣ ಪತ್ರ (ಎಸ್‌ಸಿ/ಎಸ್‌ಟಿ), ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ವೇತನ, ಅಂಗವಿಕಲರ ಪೋಷಣಾ ಭತ್ಯೆ, ವಿಧವಾ ವೇತನ, ಆದಾಯ ದೃಢೀಕರಣ ಪತ್ರ, ಸಣ್ಣ ಮತ್ತು ಅತಿ ಸಣ್ಣ ರೈತರ ದೃಢೀಕರಣ ಪತ್ರ, ಭೂರಹಿತ ದೃಢೀಕರಣ ಪತ್ರ, ಕೃಷಿ ಕುಟುಂಬದ ದೃಢೀಕರಣ ಪತ್ರ, ಗೇಣಿ ರಹಿತ ದೃಢೀಕರಣ ಪತ್ರ, ಕೃಷಿ ಕಾರ್ಮಿಕರ ದೃಢೀಕರಣ ಪತ್ರ, ಕೃಷಿ ದೃಢೀಕರಣ ಪತ್ರ, ಭೂ ಹಿಡುವಳಿ, ಕುಟುಂಬ ಸದಸ್ಯರ ಜೀವಿತ ದೃಢೀಕರಣ ಪತ್ರ,  ಸರ್ಕಾರಿ ಸೇವೆಗೆ ಸೇರಿಲ್ಲವೆಂಬ ದೃಢೀಕರಣ ಪತ್ರ, ನಿರುದ್ಯೋಗಿ ದೃಢೀಕರಣ ಪತ್ರ, ಪಹಣಿ ಪತ್ರಿಕೆ, ಹಕ್ಕು ಬದಲಾವಣೆಯ ಪ್ರತಿ (ಮುಟೇಶನ್ ಎಕ್ಸ್‌ಟ್ರಾಕ್ಟ್), ವಿಧವಾ ದೃಢೀಕರಣ ಪತ್ರ, ಜನಸಂಖ್ಯೆ ದೃಢೀಕರಣ ಪತ್ರ, ಕೆನೆಪದರ ಅಲ್ಲದ ದೃಢೀಕರಣ ಪತ್ರ,  ಅನುಕಂಪ ಆಧಾರಿತ ಕೆಲಸ ಪಡೆಯಲು ಆದಾಯ ದೃಢೀಕರಣ ಪತ್ರ, ಜನನ ಹಾಗೂ ಮರಣ ಪ್ರಮಾಣ ಪತ್ರ, ಜನನ ನೋಂದಣಿ, ಮರಣ ನೋಂದಣಿ ದಾಖಲಾತಿಗಳನ್ನು ನೀಡಲಾಗುತ್ತದೆ.ರಕ್ತದಾನ ಶಿಬಿರ

ಬೆಳಗಾವಿ
: `ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರು ವಿಶ್ವ ಕಂಡ ಧೀಮಂತ ನಾಯಕರಲ್ಲಿ ಒಬ್ಬರು. ಅವರ ಮುತ್ಸದ್ದೀತನ, ಮೇರು ವ್ಯಕ್ತಿತ್ವದ ಜೀವನ ನಮ್ಮ ಎಲ್ಲ ಕಾರ್ಯಕರ್ತರಿಗೂ ಆದರ್ಶವಾಗಿದೆ' ಎಂದು ಸಂಸದ ಸುರೇಶ ಅಂಗಡಿ ಹೇಳಿದರು.ವಾಜಪೇಯಿ ಜನ್ಮದಿನದ ಅಂಗವಾಗಿ ಬಿ.ಜೆ.ಪಿ. ಮಹಾನಗರ ಯುವ ಮೋರ್ಚಾ ಜಿಲ್ಲಾ ಘಟಕದ ವತಿಯಿಂದ ನಗರದ ಮಹಾವೀರ ಬ್ಲಡ್ ಬ್ಯಾಂಕ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿದ ಅವರು ಮಾತನಾಡಿದರು.ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕೈಗೊಂಡ ಜನಪರ ಕಾರ್ಯಗಳು ಇನ್ನೂ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿವೆ. ವಾಜಪೇಯಿ ದೇಶಕ್ಕೆ ಮಾದರಿ ಆಡಳಿತ ನೀಡಿದರು. ಅವರು ಎಲ್ಲ ಕಾರ್ಯಕರ್ತರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಬಿ.ಜೆ.ಪಿ. ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ. ಝಿರಲಿ, ವಾಜಪೇಯಿ ರಾಜಕೀಯ ಜೀವನದಲ್ಲಿ ಸಂತರಾಗಿದ್ದರು. ಉತ್ತಮ ಸಂಸದೀಯ ಪಟು, ವಾಗ್ಮಿಯಾಗಿ ಅಜಾತಶತ್ರು ನಾಯಕರು ಎನಿಸಿಕೊಂಡಿದ್ದಾರೆ ಎಂದು ಬಣ್ಣಿಸಿದರು.ಡಾ. ಯಲಬುರ್ಗಿ ಅವರು ರಕ್ತದಾನ ಮಹತ್ವದ ಬಗ್ಗೆ ತಿಳಿಸಿದರು. 137 ಬಾರಿ ರಕ್ತದಾನದ ಮಾಡಿದ ಪಕ್ಷದ ಉಪಾಧ್ಯಕ್ಷ ವಿನಾಯಕ ದೇಸಾಯಿ ಅವರನ್ನು ಇದೇ ಸಂದರ್ಭದಲ್ಲಿ ಸಂಸದ ಸುರೇಶ ಅಂಗಡಿ ಅವರು ಸತ್ಕರಿಸಿದರು.ಬೆಳಗಾವಿ ನಗರಾಭಿವದ್ಧಿ ಪ್ರಾಧಿಕಾರದ ಅಧ್ಯಕ್ಷ ಪರಮಾನಂದ ಗೊದ್ವಾನಿ, ಬಿ.ಜೆ.ಪಿ. ಯುವಮೋರ್ಚಾ ರಾಜ್ಯಪ್ರಧಾನ ಕಾರ್ಯದರ್ಶಿ ದೀಪಕ ಜಮಖಂಡಿ ಹಾಜರಿದ್ದರು. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಉಮೇಶ ಬಡವನಾಚೆ ಸ್ವಾಗತಿಸಿದರು. ಯುವ ಮೋರ್ಚಾ ರಾಜ್ಯ ಕಾರ‌್ಯಕಾರಣಿ ಸದಸ್ಯ ವಿರೇಶ ಕಿವಡಸಣ್ಣವರ ವಂದಿಸಿದರು. ಜಿಲ್ಲಾ ಕಾರ್ಯದರ್ಶಿ ಸಂಜೀವ ಹನಮಸಾಗರ ನಿರೂಪಿಸಿದರು.ರಾಜೇಂದ್ರ ಹರಕುಣಿ, ಬಾಬುಲಾಲ ರಾಜಪುರೋಹಿತ, ಸಂಜಯ ಜನಗೌಡ, ರುದ್ರಣ್ಣ ಚಂದರಗಿ, ಶಿವಾನಂದ ಮುಗಳಿಹಾಳ, ವಿಜಯಾ ಹಿರೇಮಠ, ಶೈಲಾ ಹಿರೇಮಠ, ಪ್ರೇಮಾ ಕಾಂಬಳೆ, ಸಂಜಯ ಬೆಳಗಾಂವಕರ, ಆರ್. ಎಸ್. ಮುತಾಲಿಕ, ರಾಹುಲ ಮುಚ್ಚಂಡಿ, ಶಶಿಭೂಷಣ ಪಾಟೀಲ ಹಾಜರಿದ್ದರು.`ಅಟಲ್‌ಜೀ ಜನಸ್ನೇಹಿ' ಕೇಂದ್ರ ಉದ್ಘಾಟನೆ

ಹುಕ್ಕೇರಿ:
  ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ `ಅಟಲ್‌ಜೀ ಜನಸ್ನೇಹಿ' ಕೇಂದ್ರದ ಮೂಲಕ ಸಾರ್ವಜನಿಕರ ಹಣ ಮತ್ತು ಸಮಯ ಉಳಿಸಲು ಸಾಧ್ಯವೆಂದು ಸಂಸದ ರಮೇಶ್ ಕತ್ತಿ ಹೇಳಿದರು.ಅವರು ಮಂಗಳವಾರ ತಾಲ್ಲೂಕು ಕಚೇರಿ (ಮಿನಿ ವಿಧಾನಸೌಧ)ಯಲ್ಲಿ `ಅಟಲ್‌ಜೀ ಜನಸ್ನೇಹಿ' ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಯೋಜನೆಯಡಿ ಜಾತಿ-ಆದಾಯ ಪ್ರಮಾಣ ಪತ್ರ, ಜಾತಿ ದೃಢಿಕರಣ ಪತ್ರ, ಸಂಧ್ಯಾ, ಅಂಗವಿಕಲ, ವಿಧವಾ ವೇತನ ಸೇರಿದಂತೆ ಒಟ್ಟು 36 ಸೇವೆ ಬರುತ್ತವೆ. ಜನರು ಪ್ರತಿ ಪ್ರಮಾಣ ಪತ್ರ ಪಡೆಯಲು ತಾಲ್ಲೂಕು ಕೇಂದ್ರಕ್ಕೆ ಬರುವುದು ತಪ್ಪುವುದರಿಂದ ಜನರಿಗೆ ನೆಮ್ಮದಿ ಸಿಗಿವುದು ಎಂದರು.ಸದ್ಯದ ಮಟ್ಟಿಗೆ ಈ ಕೇಂದ್ರಗಳಲ್ಲಿ ಮೊದಲಿನ ಪದ್ಧತಿ ಮುಂದುವರಿಯುವುದು. ಕೆಲ ಸಮಯದ ನಂತರ ಸರ್ಕಾರ ಆನ್‌ಲೈನ್ ವ್ಯವಸ್ಥೆ ಅಳವಡಿಸಲಿದ್ದು, ರಾಜ್ಯದ ವಿವಿಧ ಭಾಗದಿಂದ ಪ್ರಮಾಣ ಪತ್ರಗಳನ್ನು ಆನ್‌ಲೈನ್ ಮೂಲಕ ಪಡೆಯಲು ಸಾಧ್ಯ ಎಂದರು.ಸಾರ್ವಜನಿಕರಿಂದ ಬಂದ ಅರ್ಜಿಗಳನ್ನು ಕಂದಾಯ ಇಲಾಖೆಯವರು ಪರಿಶೀಲಿಸಿ ಕೇಂದ್ರದ ಪ್ರಗತಿ ರಾಜ್ಯದಲ್ಲಿ ಮೊದಲ ಸ್ಥಾನ ಇರುವಂತೆ ನೋಡಿಕೊಳ್ಳಬೇಕು ಎಂದರು. ಸಾರ್ವಜನಿಕರು ತಹಶೀಲ್ದಾರ ಕಚೇರಿಗೆ ಬರದೆ ಈ ಸೌಲಭ್ಯ ತಮ್ಮ ಹೋಬಳಿ ಮಟ್ಟದಲ್ಲಿ ಪಡೆಯಬೇಕು ಎಂದು ತಹಶೀಲ್ದಾರ ಎಸ್.ಎಸ್.ಬಳ್ಳಾರಿ ತಿಳಿಸಿದರು.ತಾ.ಪಂ. ಅಧ್ಯಕ್ಷೆ ಶೋಭಾ ಹಿರೆಕೋಡಿ, ಇಒ ಎ.ಬಿ. ಪಟ್ಟಣಶೆಟ್ಟಿ, ಪ.ಪಂ. ಅಧ್ಯಕ್ಷ ಜಯಗೌಡ ಪಾಟೀಲ, ಸದಸ್ಯರಾದ ರಂಗು ಬಾರಕೇರ, ವಹೀದಾ ನದಾಫ, ಗಂಗವ್ವ ಮದವಾಲೆ, ಜಿ.ಪಂ. ಸದಸ್ಯೆ ನಂದಾ ಸನ್ನಾಯಿಕ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಪರಗೌಡ ಪಾಟೀಲ, ಎ.ಪಿ.ಎಂ.ಸಿ. ಉಪಾಧ್ಯಕ್ಷ ಸುಭಾಷ ಪಾಟೀಲ, ಹು.ಗ್ರಾ.ವಿ.ಸ. ಸಂಘದ ಅಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ತಹಶೀಲ್ದಾರ ಎಸ್.ಎಸ್. ಬಳ್ಳಾರಿ, ಬಿ.ಎಸ್. ಪಾಟೀಲ, ಪಿ.ಕೆ. ದೇಶಪಾಂಡೆ, ಸಿ.ಎ. ಪಾಟೀಲ, ಉಸ್ತಾದ, ಮಹಾದೇವ ಸುಲದಾಳ, ಅಶೋಕ ಕಲ್ಲೋಳಿ ಇತರರಿದ್ದರು.ಮೂಡಲಗಿ ವರದಿ

ಅರಬಾವಿ ಮಂಡಲ ಬಿಜೆಪಿ ಘಟಕದ ಆಶ್ರಯದಲ್ಲಿ ಮಂಗಳವಾರ ಭಾರತದ ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರ ಜನ್ಮದಿನ ಆಚರಿಸಲಾಯಿತು. ಬಿಜೆಪಿ ಕಾರ್ಯಕರ್ತರು ಸ್ಥಳೀಯ ಅನಾಥ ಶಾಲೆಯ ಮಕ್ಕಳಿಗೆ ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿಯ ರೋಗಿಗಳಿಗೆ ಸಿಹಿ ಮತ್ತು ಹಣ್ಣು ಹಂಚಿದರು. ಪುರಸಭೆ ಸದಸ್ಯ ಮಲ್ಲಪ್ಪ ಮದಗುಣಕಿ, ವಾಜಪೇಯಿ ಅವರ ಬದುಕು ಎಲ್ಲರಿಗೂ ಆದರ್ಶವಾಗಿದೆ ಎಂದರು.ಅರಬಾಂವಿ ಬ್ಲಾಕ್ ಬಿಜೆಪಿ ಅಧ್ಯಕ್ಷ ಪ್ರಕಾಶ ಮಾದರ, ಹನಮಂತ ಸತರಡ್ಡಿ, ಮಹಾದೇವ ಶೆಕ್ಕಿ, ಶಿವಬೋಧ ಬೆಳಗಲಿ, ಈಶ್ವರ ಮುರಗೋಡ, ಕೇದಾರಿ ಭಸ್ಮೆ, ಮಹಾದೇವ ಗೋಕಾಕ, ಪಾಂಡು ಮಹೇಂದ್ರಕರ, ಶರೀಫ್ ಪಿರಜಾದೆ, ಶಿವಬಸು ಬಂಡಿವಡ್ಡರ, ಮಲ್ಲಪ್ಪ ನೇಮಗೌಡರ, ದೀಪಕ, ಮುತ್ತಪ್ಪ ಕೋರಿಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry