ಮಂಗಳವಾರ, ನವೆಂಬರ್ 19, 2019
26 °C

ಅಟೊ ಟೆಕ್

Published:
Updated:

ಬೆಟ್ಟ ಇಳಿಯಲೊಂದು ತಂತ್ರಜ್ಞಾನ

ಚಕ್ರ ಕಂಡು ಹಿಡಿದುಬಿಟ್ಟರೆ ಸಾಕೇ. ಅದನ್ನು ನಿಯಂತ್ರಿಸಿದರೆ ಮಾತ್ರ ಅದು ವಾಹನವಾಗುತ್ತದೆ. ಕಚ್ಚಾ ಸ್ವರೂಪದ ವಾಹನಗಳೇ ಇತ್ತೀಚಿನವರೆಗೂ ಇದ್ದದ್ದು. 18ನೇ ಶತಮಾನದ ನಂತರವಷ್ಟೇ ಯಾಂತ್ರಿಕ ವಾಹನಗಳ ಶೋಧವಾಗಿದ್ದು. ಅದಕ್ಕೂ ಮುಂಚೆ ಕೈಗಾಡಿ, ಕುದುರೆಗಾಡಿ, ಎತ್ತಿನಗಾಡಿಗಳೇ ವಾಹನವನ್ನು ಆವರಿಸಿಕೊಂಡಿದ್ದವು. ಆದರೆ ಯಾಂತ್ರಿಕ ವಾಹನಗಳ ಶೋಧ ಆರಂಭದಲ್ಲಿ ನೌಕೆ, ನಂತರ ರೈಲಿನ ಮೂಲಕ ಈಗಿನ ಬೈಕ್, ಕಾರ್‌ಗಳವರೆಗೂ ಶೋಧ ಮುಂದುವರೆದದ್ದು ಮಾತ್ರ ವಿಶೇಷವೇ ಸರಿ.ಆದರೆ ಶೋಧಕ್ಕೆ ಕೊನೆಯೇ ಇಲ್ಲ ಅಲ್ಲವೇ. ಅಂತೆಯೇ ತಂತ್ರಜ್ಞಾನದ ಅಳವಡಿಕೆಯಲ್ಲೂ ದಿನೇ ದಿನೇ ಹೊಸ ಹೊಸ ಅಳವಡಿಕೆ ಆಗುತ್ತಲೇ ಇದೆ. ವಾಹನಗಳಿವೆ 2ವ್ಹೀಲ್‌ಡ್ರೈವ್ ನಂತರ (ಹಿಂದಿನ ಅಥವಾ ಮುಂದಿನ ಎರಡು ಚಕ್ರಗಳ ಚಾಲನೆ) 4 ವ್ಹೀಲ್‌ಡ್ರೈವ್ ಶೋಧ ಆಯಿತು. ಎಂತಹ ಕೆಟ್ಟ ರಸ್ತೆಯಲ್ಲೂ ವಾಹನ ಚಾಲನೆ ಇದರ ಉದ್ದೇಶ. ಅದಕ್ಕೆ ತಕ್ಕಂತೆ ಅಗತ್ಯ ಟಯರ್‌ಗಳ ಶೋಧವೂ ಆಯಿತು. ಟಯರ್‌ಗಳಲ್ಲಂತೂ ಸಾವಿರಾರು ವಿಭಾಗ, ಉಪ ವಿಭಾಗಗಳಿವೆ. ಆದರೆ ಇದೀಗ ಹೊಸ ಆವಿಷ್ಕಾರವಾಗಿದೆ. ಅದೇ ಹಿಲ್ ಡಿಸೆಂಟ್ ತಂತ್ರಜ್ಞಾನ. ಅಂದರೆ ಸುಲಭವಾಗಿ ಬೆಟ್ಟ ಇಳಿಯುವ ತಂತ್ರವಿದು!ಹಿಲ್ ಡಿಸೆಂಟ್

ಇದೊಂದು ಅಚ್ಚರಿ ಮೂಡಿಸುವ ತಂತ್ರಜ್ಞಾನ. ಅಂದರೆ ಕಾರ್‌ನಲ್ಲೇ ಬೆಟ್ಟ ಇಳಿಯುವ ವಿಧಾನವಿದು. ಚಾರಣ ಮಾಡುವವರಿಗೆ ತಿಳಿದಿರಬಹುದು, ಬೆಟ್ಟ ಹತ್ತುವುದಕ್ಕಿಂತ, ಇಳಿಯುವುದು ಕಷ್ಟ. ಭೂಮಿಯ ಗುರುತ್ವ ಬಲ ಜೋರಾಗೇ ನಮ್ಮನ್ನು ಕೆಳಗೆ ಎಳೆಯುವ ಮೂಲಕ ಬೆಟ್ಟ ಇಳಿಯುವುದನ್ನು ಕಷ್ಟ ಮಾಡುತ್ತದೆ. ಇದು ಇಷ್ಟು ಕಷ್ಟವಾಗಿರುವಾಗ, ಇನ್ನು ಕಾರನ್ನು ಇಳಿಸುವುದು ಸುಲಭದ ವಿಚಾರವೇ.ಅದಕ್ಕಾಗಿ ಈ ಹಿಲ್ ಡಿಸೆಂಟ್ ತಂತ್ರಜ್ಞಾನ ಅಳವಡಿತಗೊಂಡಿದೆ. ಸಂಪೂರ್ಣ ಯಾಂತ್ರಿಕವಾದ ಈ ವಿಧಾನದಲ್ಲಿ ಚಾಲಕ ಯಾವುದೇ ಗಿಯರ್ ಬದಲಿಸಬೇಕಿಲ್ಲ. ಈ ಕೆಲಸವನ್ನು ಕಂಪ್ಯೂಟರ್ ತಂತಾನೇ ಮಾಡುತ್ತದೆ. ಸಾಮಾನ್ಯವಾಗಿ ಮೊದಲ ಗಿಯರ್‌ಗಳು ಇದರಲ್ಲಿ ಬಳಕೆಯಾಗುತ್ತವೆ. ಜತೆಗೆ ತಂತಾನೇ ಬ್ರೇಕ್ ಸಹ ಬಳಕೆಯಾಗುತ್ತದೆ. ಹಾಗಾಗಿ ಬೆಟ್ಟ ಇಳಿಸುವ ಕೆಲಸ ಕಷ್ಟವೇನೂ ಅಲ್ಲ. ಬೆಟ್ಟ ಇಳಿಸುವಾಗ ಚಕ್ರಕ್ಕೆ ಸಿಗುವ ಕಲ್ಲುಗಳ ಮಧ್ಯೆ ಚಕ್ರ ತಾಗಿಕೊಳ್ಳದಂತೆ ಚಾಲನೆ ಮಾಡಿಸುವ ಕಂಪ್ಯೂಟರ್ ಪ್ರೋಗ್ರಾಮಿಂಗ್ ಇರುವುದು ಅಚ್ಚರಿ.

ಆಲ್ ವ್ಹೀಲ್ ಡ್ರೈವ್

2ವ್ಹೀಲ್‌ಡ್ರೈವ್ ಹಾಗೂ 4ವ್ಹೀಲ್‌ಡ್ರೈವ್ ಈಗ ಹಳೆಯದಾಗಿ ಬಿಟ್ಟಿತು. ಈಗ ಆಲ್ ವ್ಹೀಲ್ ಡ್ರೈವ್‌ನ ಸರದಿ. 2ವ್ಹೀಲ್‌ಡ್ರೈವ್‌ನಲ್ಲಿ ಎಂಜಿನ್‌ನಿಂದ ಸಂಪರ್ಕ ಪಡೆದ ಆಕ್ಸಿಲ್ ಒಂದು ಹಿಂದಿನ ಎರಡೂ ಚಕ್ರಗಳನ್ನು ತಿರುಗುವಂತೆ ಮಾಡುತ್ತದೆ. 4 ವ್ಹೀಲ್‌ಡ್ರೈವ್‌ನಲ್ಲಿ ನಾಲ್ಕೂ ಚಕ್ರಗಳು ಆಕ್ಸಿಲ್‌ನ ಮೂಲಕ ಚಾಲನೆ ಪಡೆಯುತ್ತವೆ.

ಆದರೆ ಆಲ್ ವ್ಹೀಲ್‌ಡ್ರೈವ್ ವಿಶೇಷವಾದದ್ದು. ಇಲ್ಲಿ ಎಲ್ಲ ಚಕ್ರಗಳಿಗೂ ಚಾಲನೆ ಸಿಗುವುದಾದರೂ, ಪ್ರತಿ ಚಕ್ರಕ್ಕೂ ಸ್ವತಂತ್ರ ಚಾಲನೆ ಸಿಗುತ್ತದೆ. ಹಾಗಾಗಿ ಎಂತಹ ಕಡು ಕಷ್ಟದ ರಸ್ತೆಯಲ್ಲೂ ಚಕ್ರಕ್ಕೆ ಉತ್ತಮ ಚಾಲನೆ ಸಿಗುತ್ತದೆ. ಅಲ್ಲದೇ, ಸ್ವತಂತ್ರ ಚಾಲನೆಗೆ ಕಂಪ್ಯೂಟರ್ ಚಿಪ್ ನಿಯಂತ್ರಣವಿದೆ. ಹಾಗಾಗಿ ಚಕ್ರವೊಂದಕ್ಕೆ ಬಂಡೆಯೋ, ಕಲ್ಲೋ ತಾಗಿದರೆ, ಆ ಚಕ್ರಕ್ಕೆ ಮಾತ್ರ ಹೆಚ್ಚಿನ ಶಕ್ತಿ ದೊರೆತು ಸುಲಭವಾದ ಚಾಲನೆ ಸಾಧ್ಯವಾಗುತ್ತದೆ.

ಪ್ರತಿಕ್ರಿಯಿಸಿ (+)