ಸೋಮವಾರ, ಜೂನ್ 14, 2021
28 °C

ಅಟ್ಟಹಾಸದ ಚಿತ್ರಣ (ಚಿತ್ರ: ಸೈಲೆನ್ಸ್)

ಕೆ.ಎಂ. ಸತೀಶ್ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ದಂಡುಪಾಳ್ಯ ತಂಡದ ಹೆಸರು ಕೇಳಿದರೆ ಒಂದು ಕಾಲದಲ್ಲಿ ಬೆಂಗಳೂರು ನಗರ ಬೆಚ್ಚಿ ಬೀಳುತ್ತಿತ್ತು. ಈ ತಂಡ ನಡೆಸಿದ ಕಳ್ಳತನ, ಡಕಾಯಿತಿ, ಅತ್ಯಾಚಾರ ಹಾಗೂ ಕೊಲೆಗಳು ಗಟ್ಟಿ ಗುಂಡಿಗೆಯವರನ್ನೂ ಅಧೀರರನ್ನಾಗಿಸುತ್ತವೆ. ಈ ತಂಡದ ಪೈಶಾಚಿಕ ಕೃತ್ಯಗಳನ್ನು ಆಧರಿಸಿದ ಚಿತ್ರ `ಸೈಲೆನ್ಸ್~.ನಾಯಕ ರವಿಚಂದ್ರ (ಕುಮಾರ್) ಕೆಲಸದ ಸಲುವಾಗಿ ಜಪಾನ್‌ಗೆ ಹೋಗಿರುತ್ತಾನೆ. ಈ ವೇಳೆ ನಾಯಕನ ಮನೆಗೆ ನುಗ್ಗುವ ದಂಡುಪಾಳ್ಯ ತಂಡ, ಅವನ ಅಪ್ಪ ಅಮ್ಮನನ್ನು (ರಮೇಶ್ ಭಟ್, ಪದ್ಮಜಾರಾವ್) ಬರ್ಬರವಾಗಿ ಕೊಂದು ಹಾಕುತ್ತದೆ.

 

ಇದೇ ತಂಡ ನಾಯಕಿ ಸ್ನೇಹಾಳ (ನಿಶಾ ಶೆಟ್ಟಿ) ಮೇಲೆ ಸಾಮೂಹಿಕ ಅತ್ಯಾಚಾರ ನಡೆಸುತ್ತದೆ. ವಿಕೃತ ಕಾಮಿಯೊಬ್ಬ ಬ್ಲೇಡ್‌ನಿಂದ ಕತ್ತು ಕೊಯ್ದು, ಆಕೆ ನೋವಿನಿಂದ ನರಳುತ್ತ್ದ್ದಿದರೆ ತನ್ನ ವಿಕೃತ ವಾಂಛೆಯನ್ನು ತೀರಿಸಿಕೊಳ್ಳುತ್ತಾನೆ. ಹೀಗೆ ಮನೆ ಮಂದಿಯನ್ನೆಲ್ಲಾ ಕೊಲ್ಲುವ ಹಂತಕರ ಮೇಲೆ ನಾಯಕ ಸೇಡು ತೀರಿಸಿಕೊಳ್ಳುವುದೇ ಚಿತ್ರದ ಕಥಾವಸ್ತು.ಚಿತ್ರದ ಮೊದಲ ಭಾಗ ನಾಯಕ ರವಿಚಂದ್ರ ದಂಡುಪಾಳ್ಯ ತಂಡವನ್ನು ಹುಡುಕುವುದರಲ್ಲಿ ಕಳೆಯುತ್ತದೆ. ಹುಡುಕಾಟದ ನಡುವೆ ಬಿಡುವು ಸಿಕ್ಕಾಗೆಲ್ಲ ಆತ ಕಂಠಪೂರ್ತಿ ಕುಡಿಯುತ್ತಾನೆ. ನಡುವೆ ಎರಡು ಫೈಟ್‌ಗಳಿವೆ.ಪೊಲೀಸರಿಗೆ ಸೆರೆಸಿಕ್ಕ ಹಂತಕರನ್ನು ಠಾಣೆಯಿಂದ ಯಾಮಾರಿಸಿ ಕರೆತರುವ ರವಿಚಂದ್ರ, ಅವರಿಗೆ ಹಂಪಿಯಲ್ಲಿ ಇರುವ ನಿಧಿಯನ್ನು ಕೊಳ್ಳೆ ಹೊಡೆಯುವ ಆಸೆ ಹುಟ್ಟಿಸುತ್ತಾನೆ. ಪೊಲೀಸರ ಕಣ್ತಪ್ಪಿಸಿಕೊಂಡು ಓಡುವ ಇವರೆಲ್ಲರೂ ಕಾಡಿನ ಮಧ್ಯೆ ಇರುವ ಒಂದು ಭೂತ ಬಂಗಲೆ ಪ್ರವೇಶಿಸುತ್ತಾರೆ.ಅಲ್ಲಿ ಹಂತಕರ ತಂಡದ ಒಬ್ಬೊಬ್ಬರನ್ನೇ ನಾಯಕ ಕೊಂದು ಮುಗಿಸುತ್ತಾನೆ. ಎದೆ ನಡುಗಿಸುವಂತಹ ಪೈಶಾಚಿಕತೆಯುಳ್ಳ ದಂಡುಪಾಳ್ಯ ಗ್ಯಾಂಗ್ ಯಾವ ರೀತಿ ಹತ್ಯೆಗೊಳಗಾಗುತ್ತದೆ ಎಂಬುದನ್ನು ತೆರೆಯ ಮೇಲೆ ನೋಡಬೇಕು.ನಿರ್ದೇಶಕ ವೇಣುಗೋಪಾಲ್ ಆಯ್ದುಕೊಂಡಿರುವ ಕಥೆ ಚೆನ್ನಾಗಿದೆ, ಸಮಕಾಲೀನವಾಗಿದೆ. ದಂಡುಪಾಳ್ಯ ಹಂತಕರ ಅಮಾನುಷ ಕೃತ್ಯಗಳನ್ನು ಪ್ರೇಕ್ಷಕರಿಗೆ ದಾಟಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಚಿತ್ರ ಪ್ರೇಕ್ಷಕರ ಕುತೂಹಲವನ್ನು ಹಿಡಿದಿಡುತ್ತದೆ. ಆದರೆ, ಮಧ್ಯಂತರದ ನಂತರ ಚಿತ್ರಕಥೆಯ ಜಾಡು ಸ್ವಲ್ಪ ಬದಲಾಗುತ್ತದೆ.ಸಂಗಮೇಶ್ ಹಾಗೂ ಬಿರಾದಾರ್ ಅವರ ಹಾಸ್ಯ ಸನ್ನಿವೇಶಗಳು ಕಚಗುಳಿ ಇಡುವಂತಿದ್ದರೂ, ಈ ಹಾಸ್ಯ ಚಿತ್ರದ ಓಟಕ್ಕೆ ತೊಡರುಗಾಲಿನಂತಿದೆ.

ನಾಯಕ ಕುಮಾರ್ ಹಾಡು ಹಾಗೂ ಫೈಟ್‌ನಲ್ಲಿ ಚೆನ್ನಾಗಿ ನಟಿಸಿದ್ದಾರೆ.ಆದರೆ ಅಭಿನಯದಲ್ಲಿನ್ನೂ ಪಳಗಬೇಕು. ನಾಯಕಿ ನಿಶಾ ಶೆಟ್ಟಿ ಚಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಥ್ರಿಲ್ಲರ್ ಮಂಜು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಎಂ.ಆರ್.ಚವಾಣ್ ಛಾಯಾಗ್ರಹಣ ಕಣ್ಣಿಗೆ ತಂಪು. ದಂಡುಪಾಳ್ಯ ಗ್ಯಾಂಗ್‌ನ ಸದಸ್ಯೆ ಲಕ್ಷ್ಮಿ (ಸುರೇಖ ಪಲ್ಲವಿ) ಅಭಿನಯ ಚೆನ್ನಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.