ಅಟ್ಟ ಹತ್ತಿದವನಿಗಾದ ಜ್ಞಾನೋದಯ

7
ಕವಿತೆ

ಅಟ್ಟ ಹತ್ತಿದವನಿಗಾದ ಜ್ಞಾನೋದಯ

Published:
Updated:
ಅಟ್ಟ ಹತ್ತಿದವನಿಗಾದ ಜ್ಞಾನೋದಯ

ಅಟ್ಟ ಹತ್ತುವವನ ಬೆನ್ನ ಹಿಂದೆ

ನೂರು ಮತ್ಸರಗಳ ಚಿಗುರೊಡೆವ ಬೊಂಬೆಗಳು

ಗಾಡುಫಾದರುಗಳು ಹೆಗಲ ಮೇಲೆ ಹೊತ್ತು

ಒಮ್ಮೆಗೇ ಅಟ್ಟ ಹತ್ತಿಸಿದರೊ

ಅಥವಾ

ಒಂದೊಂದೇ ಮೆಟ್ಟಿಲುಗಳ

ಏಣಿ ಹಾಕಿ ಹತ್ತಿಸಿದರೊ

ಎಂಬ ಗುಟ್ಟು ಒಡೆಯುವುದೇ ಇಲ್ಲಿ ಕೆಲಸ

ಕಾಲದಿಂದ ತಮ್ಮ ಏಣಿಗೆ

ಇದೊಂದೇ ಮೆಟ್ಟಿಲು ಎಂದು

ಮೇಲೆ ಅಟ್ಟಕ್ಕೆ ದೃಷ್ಟಿ ನೆಟ್ಟು

ಕತ್ತು ನೋಯಿಸಿಕೊಳ್ಳುತ್ತಾರೆ.

ಅಟ್ಟದ ಸಮೀಪಕ್ಕೆ ಹತ್ತಿದವರಿಗೂ

ಕೋರ್ಟಿನ ಕಡೆ ಮುಖ ಮಾಡೇ ಮಲಗಿಸುವ

ಸಂಚು ಮಾಡುತ್ತಾರೆ.

ಒಬ್ಬರ ಮುಖ ಕಂಡರೆ ಒಬ್ಬರಿಗಾಗದೆ

ಅಟ್ಟ ಹತ್ತಿ ಬಂದು

ಹಲವರ ಜಾತಕಗಳ ಬಿಚ್ಚಿಟ್ಟು

ಕಾಲೆಳೆವ ಆಟದ ಪಟ ಮಾಡಿಕೊಂಡು

ದಾಳ ಕೈಲಿ ಹಿಡಿದು

ಸ್ಫೋಟಕ್ಕೆ ಕಾದ ಸಿಡಿಗುಂಡುಗಳ

ಎದೆಯ ಗೂಡಲ್ಲಿ ಕೂಡಿಟ್ಟು

ಎತ್ತಿ ಒಗೆಯುವುದಕ್ಕೆ ಸಮಯ ಕಾಯುತ್ತಾರೆ.

ಮೋಡಗಳಾಚೆಗಿನ ದೇವತಾರೂಪಿಗಳಿಗೆ

ಕಣ್ಣಿದ್ದರೂ ಅಹವಾಲುಗಳಿಗೆ ಕಿವುಡು.

ಸಲಾಮುಗಳಿಗೆ ಕೊಂಚ ಸುಪ್ರೀತವಾದರೂ

ಹೋಮಕುಂಡಗಳೆದುರು ಕೂತು

ಚಾಡಿ ಮಂತ್ರಗಳ ಉರಿಸಿ

ಹವಿಸ್ಸು ಕೊಡುವವರೇ ಇವರಿಗೆ ಇಷ್ಟ.

ತಥಾಸ್ತು ಎನ್ನುವ ಮಾತು ಬೇರೆ...

ಫೈಲುಗಳ ಹಾಳೆ ತಿರುವಿದಂತೆ

ಇಲ್ಲಿ ಒಬ್ಬೊಬ್ಬರ ಮನಸುಗಳನೂ

ತಿರುವಿ ಓದಬೇಕು.

ಗಾಳಿಯಲಿ ತೇಲಿಸಿ

ಗುರಿಮುಟ್ಟಿಸುವ ಸಂದೇಶಗಳ ತಿಳಿದು

ಪ್ರತಿತಂತ್ರ ಹೆಣೆಯಬೇಕು.

ಅಲುಗಾಡುವ ಅಟ್ಟ, ಕುರ್ಚಿಯ ಮೇಲೇ

ಸ್ಥಿರವಾಗಿ ಕೂರುವುದ ಕಲಿಯಬೇಕು.

ಬಲೆ ಹೆಣೆವ ಜೇಡವನು

ಅದೇ ಬಲೆಯಲಿ ಸಿಕ್ಕಿಸಬೇಕು.

ಹೋಮ ಮಾಡುವವರ ಜೊತೆಗೇ ಇದ್ದು

ಬಿಸಿ ತಟ್ಟದಂತೆ ತಣ್ಣಗಿದ್ದು

ಕುರ್ಚಿ ಅಲುಗಿಸುವ ಕೈಗಳು ದಣಿವವರೆಗೂ

ಕೈಲಿ ಸುತ್ತಿಗೆ ಮೊಳೆ ಹಿಡಿದೇ ಇರಬೇಕು...

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry