ಅಡಗಿದ ವಿಟ್ನಿ ಹ್ಯೂ ಸ್ಟನ್ ದನಿ

7

ಅಡಗಿದ ವಿಟ್ನಿ ಹ್ಯೂ ಸ್ಟನ್ ದನಿ

Published:
Updated:

ಲಾಸ್ ಏಂಜಲೀಸ್ (ಪಿಟಿಐ): ಎಂಬತ್ತರ ದಶಕದಲ್ಲಿ ಪಾಶ್ಚಾತ್ಯ ಸಂಗೀತದ ದಂತಕಥೆಯಾಗಿದ್ದ ಗಾಯಕಿ ಹಾಗೂ ಗ್ರ್ಯಾಮಿ ಪ್ರಶಸ್ತಿ ವಿಜೇತೆ ವಿಟ್ನಿ ಹ್ಯೂಸ್ಟನ್ (48) ಇಲ್ಲಿನ ಹೋಟೆಲ್ ಒಂದರಲ್ಲಿ ಶನಿವಾರ ಮಧ್ಯಾಹ್ನ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.ಈ ಸಾವಿನ ಹಿಂದೆ ಕ್ರಿಮಿನಲ್ ಸಂಚು ಇರುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ಕಾಲದಲ್ಲಿ ಕೀರ್ತಿಯ ಉತ್ತುಂಗಕ್ಕೇರಿದ್ದ ವಿಟ್ನಿ ಮಾದಕ ವ್ಯಸನದಿಂದಾಗಿ ಅಪಕೀರ್ತಿಗೆ ಒಳಗಾಗಿದ್ದರು. ಅವರು ಇದುವರೆಗೂ ಕೋಟ್ಯಂತರ ಡಾಲರ್ ಮೌಲ್ಯದ ಆಲ್ಬಮ್‌ಗಳು ಮತ್ತು ವಿಡಿಯೊಗಳನ್ನು ಮಾರಾಟ ಮಾಡಿದ್ದಾರೆ ಎಂದು ಅವರ ವೆಬ್‌ಸೈಟ್ ತಿಳಿಸಿದೆ.1963ರ ಆಗಸ್ಟ್ 9ರಂದು ನ್ಯೂಜೆರ್ಸಿಯ ನೆವಾರ್ಕ್‌ನಲ್ಲಿ ಜನಿಸಿದ ವಿಟ್ನಿ, ಕ್ರೈಸ್ತ ಭಕ್ತಿಗೀತೆಗಳನ್ನು ಹಾಡುವಲ್ಲಿ ಖ್ಯಾತರಾಗಿದ್ದರು. ಅವರ ತಾಯಿ ಸಿಸ್ಸಿ ಹ್ಯೂಸ್ಟನ್ ಕೂಡ ಕ್ರೈಸ್ತ ಭಕ್ತಿಗೀತೆಗಳ ಗಾಯಕಿಯಾಗಿದ್ದರು. ಆರಂಭದಲ್ಲಿ ಚರ್ಚ್‌ಗಳಲ್ಲಿ ಹಾಡಲು ಆರಂಭಿಸಿದ್ದ ವಿಟ್ನಿ ಬಳಿಕ ನ್ಯೂಯಾರ್ಕ್‌ನ ನಿಶಾ ಕ್ಲಬ್‌ಗಳಲ್ಲಿ ಹಾಡುವ ಮೂಲಕ ತಮ್ಮ ವೃತ್ತಿಯನ್ನು ಮುಂದುವರಿಸಿದರು. ಅಲ್ಲಿ ಅವರ ಪ್ರತಿಭೆಯನ್ನು ಗುರುತಿಸಿದ ಖ್ಯಾತ ಸಂಗೀತ ನಿರ್ಮಾಪಕ ಕ್ಲೈವ್ ಡೇವಿಸ್ ಆಕೆಯ ಕೀರ್ತಿ ಎಲ್ಲೆಡೆ ಹರಡಲು ಕಾರಣರಾದರು.1985ರಲ್ಲಿ ಬಿಡುಗಡೆಯಾದ ವಿಟ್ನಿ ಅವರ ಮೊದಲ ಆಲ್ಬಮ್ `ವಿಟ್ನಿ ಹ್ಯೂಸ್ಟನ್~ ಅತಿ ಹೆಚ್ಚು ಮಾರಾಟವಾಗಿತ್ತು. ಎರಡು ಎಮ್ಮಿ ಪ್ರಶಸ್ತಿ, ಆರು ಬಾರಿ ಗ್ರ್ಯಾಮಿ ಪ್ರಶಸ್ತಿ, 30 ಬಿಲ್‌ಬೋರ್ಡ್ ಸಂಗೀತ ಪ್ರಶಸ್ತಿ, 22 ಅಮೆರಿಕನ್ ಮ್ಯೂಸಿಕ್ ಪ್ರಶಸ್ತಿ ಸೇರಿದಂತೆ ತಮ್ಮ ವೃತ್ತಿ ಬದುಕಿನುದ್ದಕ್ಕೂ ಒಟ್ಟು 415 ಪ್ರಶಸ್ತಿಗಳನ್ನು ಪಡೆಯುವ ಮೂಲಕ ಅವರು ಗಿನ್ನಿಸ್ ದಾಖಲೆ ಮೂಡಿಸಿದ್ದರು.ವಿವಾದಿತ ನಟ ಬಾಬ್ಬಿ ಬ್ರೌನ್ ಅವರನ್ನು ವರಿಸುವ ಮೂಲಕವೂ ವಿಟ್ನಿ ಭಾರಿ ಸುದ್ದಿ ಮಾಡಿದ್ದರು. ಸಂಗೀತ ಲೋಕದ ಖ್ಯಾತಿಯು ಅವರನ್ನು `ದಿ ಬಾಡಿಗಾರ್ಡ್~ ಮತ್ತು `ವೆಯ್ಟಿಂಗ್ ಟು ಎಕ್ಸ್‌ಹೇಲ್~ ಚಿತ್ರಗಳಲ್ಲಿ ನಟಿಸುವ ಅವಕಾಶವನ್ನು ಒದಗಿಸಿಕೊಟ್ಟಿತು. ಆದರೆ ಕೊನೆಕೊನೆಗೆ ಅವರು ಮಾದಕ ವ್ಯಸನಕ್ಕೆ ತುತ್ತಾದರಲ್ಲದೆ ಅವರ ಆಲ್ಬಮ್ ಮಾರಾಟದಲ್ಲಿ ಏಕಾಏಕಿ ಕುಸಿತ ಕಂಡುಬಂದಿತ್ತು. ಕೊಕೇನ್ ಸೇವನೆಯಿಂದಾಗಿ ಅವರ ಧ್ವನಿಯೂ ಬದಲಾಗಿ ಸಂಗೀತ ಪ್ರೇಮಿಗಳನ್ನು ಸೆಳೆಯುವಲ್ಲಿ ವಿಫಲವಾಗಿತ್ತು.`ಸೇವಿಂಗ್ ಆಲ್ ಮೈ ಲವ್ ಫಾರ್ ಯು~ ವಿಟ್ನಿ ಅವರಿಗೆ ಮೊದಲ ಗ್ರ್ಯಾಮಿ (ಅತ್ಯುತ್ತಮ ಮಹಿಳಾ ಗಾಯಕಿ) ಪ್ರಶಸ್ತಿಯನ್ನು ದೊರಕಿಸಿಕೊಟ್ಟಿತ್ತು. `ಹೌ ವಿಲ್ ಐ ನೋ~, `ಯು ಗಿವ್ ಗುಡ್ ಲವ್~, `ಗ್ರೇಟೆಸ್ಟ್ ಲವ್ ಆಫ್ ಆಲ್~ ಮುಂತಾದವು ವಿಟ್ನಿ  ಖ್ಯಾತ ಹಾಡುಗಳಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry