ಅಡಗಿ ಮನಿ ಬಿಟ್ರ, ಬೇರೆ ಗೊತ್ತಿಲ್ರಿ ನಮಗ

7

ಅಡಗಿ ಮನಿ ಬಿಟ್ರ, ಬೇರೆ ಗೊತ್ತಿಲ್ರಿ ನಮಗ

Published:
Updated:
ಅಡಗಿ ಮನಿ ಬಿಟ್ರ, ಬೇರೆ ಗೊತ್ತಿಲ್ರಿ ನಮಗ

ಯಾದಗಿರಿ: “ನಿಮಗ ನೋಡ್ರಿ ಎಲ್ಲಾ ತಿಳದೈತಿ. ನಮಗ ಅಡಗಿ ಮನಿ ಬಿಟ್ರ ಬ್ಯಾರೆ ಏನೂ ಗೊತ್ತಿಲ್ರಿ. ಚರ್ಚೆ ಮಾಡಬೇಕಂದ್ರ ನಮಗ ಏನೂ ತಿಳುದುಲ್ಲ. ನಮ್ಮ ಯಜಮಾನ್ರಿಗೆ ಮೀಟಿಂಗಿಗೆ ಬರಾಕ ಅವಕಾಶ ಮಾಡಬೇಕ್ರಿ”

ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವಂತೆ ಒತ್ತಾಯಗಳು ಹೆಚ್ಚುತ್ತಿರುವಾಗಲೇ ಯಾದಗಿರಿ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿರುವ ಮಹಿಳಾ ಸದಸ್ಯರು ಮಾತ್ರ ಅಧಿಕಾರ ಚಲಾಯಿಸಲು ಯಜಮಾನರು ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ.ಸೋಮವಾರ ಕರೆಯಲಾಗಿದ್ದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹೊಸ ನಿಯಮವನ್ನು ಜಾರಿಗೊಳಿಸಿದ್ದು, ಸದಸ್ಯೆಯರಿಗೆ ಬಿಸಿತುಪ್ಪವಾಗಿ ಪರಿಣಮಿಸಿತು. ಪಂಚಾಯತ್ ರಾಜ್ ಕಾಯ್ದೆ 180 ರ ಪ್ರಕಾರ ಚುನಾಯಿತ ಪ್ರತಿನಿಧಿಗಳು, ಪದನಿಮಿತ್ತ ಸದಸ್ಯರು, ಅಧಿಕಾರಿಗಳು, ಮಾಧ್ಯಮದವರಿಗೆ ಮಾತ್ರ ಸಾಮಾನ್ಯ ಸಭೆಯಲ್ಲಿ ಅವಕಾಶವಿದೆ. ಸಾರ್ವಜನಿಕರಿಗೆ ಅವಕಾಶ ನೀಡುವುದಿಲ್ಲ ಎಂದು ಸಿಇಒ ಗೋವಿಂದರಾಜು ತಿಳಿಸಿದರು.ಇದರಿಂದ ತೀವ್ರ ಗಲಿಬಿಲಿಗೊಂಡ ಸದಸ್ಯೆಯರ ಗಂಡಂದಿರು, ಸಭೆಗೆ ಹೋಗದಂತೆ ತಮ್ಮ ಪತ್ನಿಯರಿಗೆ ಸಲಹೆ ಮಾಡಿದರು. ಪತಿ ವಾಕ್ಯವನ್ನು ಪರಿಪಾಲಿಸಿದ ಸದಸ್ಯೆಯರು ಸಭೆಯಿಂದ ಹೊರಗೆ ಉಳಿದರು. ನಿಗದಿಯಂತೆ ಬೆಳಿಗ್ಗೆ 11 ಗಂಟೆಗೆ ಸಭೆ ಆರಂಭವಾಗಬೇಕಿತ್ತು. ಆದರೆ ಪಟ್ಟು ಹಿಡಿದ ಸದಸ್ಯರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಕೊಠಡಿಯಲ್ಲಿ ಕುಳಿತು, ಸಿಇಒ ಅವರ ಮೇಲೆ ಒತ್ತಡ ಹೇರುವ ತಂತ್ರವನ್ನು ಅನುಸರಿಸಿದರು.ಮುಕ್ಕಾಲು ಗಂಟೆಯಾದರೂ ಪ್ರತಿಪಕ್ಷದ ನಾಯಕ ಎಚ್.ಸಿ. ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಹನುಮೇಗೌಡ ಮರಕಲ್, ದೇವರಾಜ ನಾಯಕ, ಸದಸ್ಯ ಸಿದ್ಧನಗೌಡ ಪೊಲೀಸ್‌ಪಾಟೀಲ ಅವರನ್ನು ಹೊರತುಪಡಿಸಿ, ಬೇರೆ ಯಾವ ಸದಸ್ಯರು ಸಭಾಂಗಣಕ್ಕೆ ಆಗಮಿಸಲಿಲ್ಲ. ಸದಸ್ಯೆಯರ ಯಜಮಾನರಿಗೆ ಅವಕಾಶ ನೀಡಲು ಅಧ್ಯಕ್ಷರ ಕೊಠಡಿಯಿಂದ ಪದೇ ಪದೇ ಸಿಇಒ ಅವರಿಗೆ ಮನವಿಗಳು ಬರುತ್ತಲೇ ಇದ್ದವು.ಈ ಬಗ್ಗೆ ಸಭೆಯಲ್ಲಿ ಹಾಜರಿದ್ದ ಹನುಮೇಗೌಡ ಮರಕಲ್, ದೇವರಾಜ ನಾಯಕ, ಸಿದ್ಧನಗೌಡ ಪೊಲೀಸ್‌ಪಾಟೀಲರು, ಸಿಇಒ ಅವರ ಜೊತೆ ಚರ್ಚಿಸಿದರು. ಆದರೆ ಸಿಇಒ ಗೋವಿಂದರಾಜು ಮಾತ್ರ, “ಕಾಯ್ದೆಯ ಪ್ರಕಾರ ಸಭೆ ನಡೆಸುವುದು ತಮ್ಮ ಕರ್ತವ್ಯ. ಹಾಗಾಗಿ ಸಾರ್ವಜನಿಕರಿಗೆ ಅವಕಾಶ ನೀಡಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.ಕೊನೆಗೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ನಾಗನಗೌಡ ಸುಬೇದಾರ, ಸಭಾಂಗಣಕ್ಕೆ ಆಗಮಿಸಿದರು. ಸ್ವಾಗತ ಕೋರಿದ ನಂತರ ಸಭೆ ಆರಂಭಿಸುವಂತೆ ಉಪಾಧ್ಯಕ್ಷರಿಗೆ, ಸಿಇಒ ಕೋರಿದರು. ಈ ಹಂತದಲ್ಲಿ ಮಾತನಾಡಿದ ಉಪಾಧ್ಯಕ್ಷ ಸುಬೇದಾರ, ಸಾರ್ವಜನಿಕರಿಗೆ ಅವಕಾಶ ಇಲ್ಲದೇ ಇರುವುದರಿಂದ ಸದಸ್ಯೆಯರು ಸಭೆಗೆ ಬರುತ್ತಿಲ್ಲ. ಕೋರಂ ಇಲ್ಲದ ಕಾರಣ ಸಭೆಯನ್ನು ಮುಂದೂಡಿ ಎಂದು ಮನವಿ ಮಾಡಿದರು.ಅಷ್ಟರಲ್ಲಿಯೇ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅನಸೂಯಾ ಬೋರಬಂಡ್ ಸೇರಿದಂತೆ 13 ಸದಸ್ಯೆಯರು, ಕಾಂಗ್ರೆಸ್ ಸದಸ್ಯರು ಹಾಗೂ ಸದಸ್ಯೆಯರ ಗಂಡಂದಿರು ಸಭಾಂಗಣವನ್ನು ಪ್ರವೇಶಿಸಿದರು.ಆರಂಭದಲ್ಲಿ ಮಾತನಾಡಿದ ಸದಸ್ಯ ಶರಣೀಕ್‌ಕುಮಾರ ದೋಖಾ, ಈ ಬಾರಿ ಸಾರ್ವಜನಿಕರಿಗೆ ಅವಕಾಶ ನೀಡಿ. ಮುಂದಿನ ಸಭೆಯಲ್ಲಿ ಕಟ್ಟುನಿಟ್ಟಿನಿಂದ ಈ ನಿಯಮವನ್ನು ಜಾರಿಗೊಳಿಸಿ ಎಂದು ಸಲಹೆ ಮಾಡಿದರು.ಇದಕ್ಕೆ ಉತ್ತರಿಸಿದ ಸಿಇಒ ಗೋವಿಂದರಾಜು, ಕಾಯ್ದೆ ಪ್ರಕಾರ ತಾವು ಸಭೆಯನ್ನು ನಡೆಸಬೇಕು. ಅಲ್ಲದೇ ಗುಲ್ಬರ್ಗ ಜಿಲ್ಲಾ ಪಂಚಾಯಿತಿಯಲ್ಲಿ ಘಟನೆಯ ನಂತರ ಸರ್ಕಾರದಿಂದಲೂ ನಿರ್ದೇಶನವಿದೆ. ಸಭೆಯಲ್ಲಿ ಭಾಗವಹಿಸಲು ಇಚ್ಛಿಸುವ ಸಾರ್ವಜನಿಕರು ಅರ್ಜಿ ಕೊಟ್ಟು ಅನುಮತಿ ಪಡೆಯಬೇಕು. ಆದರೆ ಈ ಸಭೆಯಲ್ಲಿ ಭಾಗವಹಿಸಲು ಯಾವ ಸಾರ್ವಜನಿಕರು ಅರ್ಜಿ ಸಲ್ಲಿಸಿಲ್ಲ. ಹಾಗಾಗಿ ಜಿಲ್ಲಾ ಪಂಚಾಯಿತಿ ಸದಸ್ಯರು, ಪದನಿಮಿತ್ತ ಸದಸ್ಯರು, ಅಧಿಕಾರಿಗಳು, ಮಾಧ್ಯಮದವರನ್ನು ಹೊರತುಪಡಿಸಿ, ಬೇರೆಯವರು ಸಭಾಂಗಣದಿಂದ ಹೊರಗೆ ಹೋಗಬೇಕು ಎಂದು ಮನವಿ ಮಾಡಿದರು.ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯೆ ಶ್ಯಾಮಲಾ ಕಮತಗಿ, “ನಮಗ ಅಡಗಿ ಮನಿ ಬಿಟ್ಟ ಏನೂ ಗೊತ್ತಿಲ್ಲ. ಇಲ್ಲಿ ಏನ ಚರ್ಚೆ ಮಾಡಬೇಕು ಅನ್ನೋದು ತಿಳಿದುಲ್ಲ. ನಮ್ಮ ಯಜಮಾನರಿಗೆ ಅವಕಾಶ ಕೊಡಬೇಕು” ಎಂದು ಒತ್ತಾಯಿಸಿದರು.ಆದರೆ ಇದಕ್ಕೆ ಸಿಇಒ ಒಪ್ಪಲಿಲ್ಲ. ಹೀಗಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅನಸೂಯಾ ಬೋರಬಂಡ್, ಸಭೆಯನ್ನು ಮುಂದೂಡುವಂತೆ ಸೂಚಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ನಾಯಕ ಎಚ್.ಸಿ. ಪಾಟೀಲ, ಸಾಮಾಜಿಕ ನ್ಯಾಯ ಸ್ಥಾಯ ಸಮಿತಿ ಅಧ್ಯಕ್ಷ ದೇವರಾಜ ನಾಯಕ, ಜಿಲ್ಲೆಯಲ್ಲಿ ಬರಗಾಲವಿದೆ. ಯಾದಗಿರಿ ತಾಲ್ಲೂಕನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಿಲ್ಲ. ಈ ಬಗ್ಗೆ ಚರ್ಚೆ ಮಾಡಬೇಕಾಗಿದೆ. ಜನರು ನಮ್ಮನ್ನು ಕೇಳುತ್ತಾರೆ. ಸಭೆ ನಡೆಸಿ ಎಂದು ಪಟ್ಟು ಹಿಡಿದರು.ಆದರೆ ಸದಸ್ಯೆಯರು ಇದಕ್ಕೆ ಸಮ್ಮತಿಸದೇ ಹೋದರು. ಈ ಹಂತದಲ್ಲಿ ಸಲಹೆ ನೀಡಿದ ಎಚ್.ಸಿ. ಪಾಟೀಲ, ಸದಸ್ಯೆಯರ ಯಜಮಾನರಿಗೆ ಸಭೆಯಲ್ಲಿ ಅವಕಾಶ ನೀಡುವಂತೆ ಠರಾವು ಪಾಸು ಮಾಡಿ, ಸರ್ಕಾರಕ್ಕೆ ಕಳುಹಿಸಿ ಎಂದರು. ಸಿಇಒ ಸಹ ಇದಕ್ಕೆ ಒಪ್ಪಿಗೆ ನೀಡಿದರು.“ತಮಗೆ ಏನೂ ತಿಳಿಯುವುದಿಲ್ಲ. ನಮ್ಮ ಯಜಮಾನರಿಗೆ ಸಭೆಯಲ್ಲಿ ಅವಕಾಶ ನೀಡಿ” ಎನ್ನುವ ಒಂದೇ ಕಾರ್ಯಸೂಚಿಯೊಂದಿಗೆ ಸಭೆಗೆ ಆಗಮಿಸಿದ್ದ ಸದಸ್ಯೆಯರು ಇದಾವುದಕ್ಕೂ ಒಪ್ಪಿಗೆ ಸೂಚಿಸಲಿಲ್ಲ.ಅಷ್ಟರಲ್ಲಿಯೇ ಸಭಾಂಗಣದಲ್ಲಿ ಹಾಜರಿದ್ದ ಸದಸ್ಯೆಯರ ಯಜಮಾನರು, ಸಭೆಯಿಂದ ಹೊರಬರುವಂತೆ ತಮ್ಮ ಪತ್ನಿಯರಿಗೆ ಕೈಮಾಡಿ ಕರೆದರು. ಪತಿ ವಾಕ್ಯ ಪರಿಪಾಲಿಸಿದ ಸದಸ್ಯೆಯರು ಕ್ಷಣಾರ್ಧದಲ್ಲಿಯೇ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry