ಅಡವಿಆನಂದದೇವನಹಳ್ಳಿ: ಮೊಗದಲ್ಲಿ ಆನಂದವಿಲ್ಲ!

ಸೋಮವಾರ, ಮೇ 20, 2019
32 °C

ಅಡವಿಆನಂದದೇವನಹಳ್ಳಿ: ಮೊಗದಲ್ಲಿ ಆನಂದವಿಲ್ಲ!

Published:
Updated:

ಹಗರಿಬೊಮ್ಮನಹಳ್ಳಿ: “ಇನ್‌ಟೇಕ್ ಕಾಲುವೆ ಅಗಲ ಮಾಡ್ರಿ ಅಂತ ರೈತರು ಹೇಳಾಕ ನಿಂತು 5 ವರ್ಷ ಆತು. ಯಾವಾಗ ನೋಡಿದ್ರು ಎಂಐ (ಸಣ್ಣ ನೀರಾವರಿ ಇಲಾಖೆ)ನೋರು ರೊಕ್ಕ ಇಲ್ಲ. ಈ ವರ್ಷ ಬ್ಯಾಡ ತಡೀರಿ. ಮುಂದಿನ ವರ್ಷಾ ನೋಡಾನ ಅಂತಾರ. ಬಿಜೆಪಿ ಸರಕಾರದಾಗ ನೇಮರಾಜ ನಾಯ್ಕ ಸಾಹೇಬ್ರ ಕ್ಷೇತ್ರದ ಅಭಿವೃದ್ಧಿಗೆ ರೊಕ್ಕಾನ ಇಲ್ದಂಗಾತು ನೋಡ್ರಿ”.ತಾಲ್ಲೂಕಿನ ಅಡವಿ ಆನಂದದೇವನಹಳ್ಳಿ ಏತ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರು ಸ್ಥಳಕ್ಕೆ ಭೇಟಿ ನೀಡಿದ ಪ್ರಜಾವಾಣಿ ಎದುರು ನುಡಿದ ಮಾತುಗಳಲ್ಲಿ ಹತಾಶೆಯಿದೆ, ವ್ಯಂಗ್ಯವಿದೆ. ಪಕ್ಕದಲ್ಲಿಯೇ ವಿಪುಲ ಜಲರಾಶಿ ಇದ್ದರೂ ಕೃಷಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿಲ್ಲ ಎಂಬ ನೋವಿದೆ. ಸ್ಪಂದಿಸದ ಶಾಸಕ ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶವಿದೆ.  ಬಿಸಿಲಿಗೆ ಬಸವಳಿದು ದಣಿದು ಬಾಯಾರಿರುವ ನೆಲಕ್ಕೆ ತುಂಗಭದ್ರಾ ಹಿನ್ನೀರಿನ್ನು ಬಳಸಿಕೊಂಡು ನೀರುಣಿಸುವ ಮೂಲಕ ಗ್ರಾಮದ ನಾಲ್ಕು ನೂರು ಎಕರೆಗೂ ಹೆಚ್ಚು ಖುಷ್ಕಿ ಜಮೀನನ್ನು ನೀರಾವರಿಗೆ ಒಳಪಡಿಸುವ ಉದ್ದೇಶದಿಂದ ರೂಪಿತ ವಾದ ಇದಕ್ಕೆ 1980ರಲ್ಲಿ ಆಗಿನ ನೀರಾವರಿ ಸಚಿವ  ಡಿ.ಬಿ. ಚಂದ್ರೇಗೌಡ ಉದ್ಘಾಟಿಸಿದ್ದರು. ಈ ಯೋಜನೆ ಮಾಜಿ ಶಾಸಕ ಕೆ.ಚನ್ನಬಸವನಗೌಡರ ರಾಜಕೀಯ ಇಚ್ಛಾಶಕ್ತಿಯ ಪ್ರತೀಕ.ದಿನದ 24 ಗಂಟೆ ವಿದ್ಯುತ್ ಪೂರೈಸುವ ಎಕ್ಸ್‌ಪ್ರೆಸ್ ಫೀಡರ್ ಲೈನ್ ಅಳವಡಿಸಿರುವ, ಸುಸಜ್ಜಿತ ಪಂಪ್‌ಹೌಸ್ ಜೊತೆಗೆ ಗುಣಮಟ್ಟದ ರೈಸಿಂಗ್ ಮೇನ್ ಕಾಮಗಾರಿಗಳು ಯೋಜನೆಯನ್ನು ಬಲಪಡಿಸುತ್ತವೆ. ಆದರೆ, 400 ಎಕರೆ ಜಮೀನುಗಳಿಗೆ ನೀರು ಪೂರೈಸಲು ಅಗತ್ಯವಾಗಿರುವ 20 ಅಡಿ ಅಗಲದ ಬದಲಾಗಿ ಕಿರಿದಾದ ಇನ್‌ಟೇಕ್ ಕಾಲುವೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಶಾಪವಾಗಿ ಪರಿಣಮಿಸಿದೆ.ಪಂಪ್‌ಹೌಸ್ ಕೆಳಗೆ ಇರುವ ಬಾವಿ ಹೂಳಿನಿಂದ ತುಂಬಿ ರೈತರ ಗೋಳನ್ನು ಹೆಚ್ಚಿಸಿದೆ. ನದಿಯ ಹಿನ್ನೀರಿನ ಪಾತ್ರದಿಂದ ಬಾವಿಯತ್ತ ಚಲಿಸುವ ಹೂಳು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ.ರೈಸಿಂಗ್ ಮೇನ್ ಮೂಲಕ ಹರಿಯುವ ನೀರು ಸಂಗ್ರಹವಾಗುವ ತೊಟ್ಟಿ ಅದಕ್ಕೆ ಬಲಪಡಿಸಲೆಂದು ನಿರ್ಮಿಸಿರುವ ಕೆರೆ ಮತ್ತು ತೊಟ್ಟಿಯಿಂದ ಜಮೀನುಗಳಿಗೆ ನೀರು ಹರಿಸುವ ಕಾಲುವೆಗಳ ಎತ್ತರ ಹೆಚ್ಚಿಸಬೇಕು ಎಂಬ ರೈತರ ಬೇಡಿಕೆಗೆ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ ಎಂದು ಎಐಕೆಎಸ್ ಮುಖಂಡರಾದ ಅಡಿವೆಪ್ಪ ಮತ್ತು ಸಕ್ರಪ್ಪ ಕಿಡಿ ಕಾರುತ್ತಾರೆ.ನೀರು ಸಂಗ್ರಹವಾಗುವ ತೊಟ್ಟಿ, ಕೆರೆ ಮತ್ತು ಕಾಲುವೆಗಳ ಎತ್ತರ ಹೆಚ್ಚಿಸದಿದ್ದರೆ ನೀರು ಸೋರಿ ಮತ್ತೆ ನದಿಗೆ ಹರಿಯುತ್ತವೆ. ಹೊಲಗಳಿಗೆ ಹರಿಯಬೇಕಾಗಿರುವ ನೀರು ಮತ್ತೆ ಹೊಳೆಗೆ ಹರಿದರೆ ಕೃಷಿ ಚಟುವಟಿಕೆ ನಡೆಸುವುದಾದರೂ ಹೇಗೆ. ಯೋಜನೆ ಕಡತಗಳಲ್ಲಿ ಮಾತ್ರ ವ್ಯವಸ್ಥಿತವಾಗಿ ಅನುಷ್ಠಾನವಾದರೆ ರೈತರು ಬದುಕುವುದಾದರು ಹೇಗೆ ಎಂದು ರೈತರಾದ ಯು.ನಾಗಪ್ಪ ಮತ್ತು ಯು.ಮಹೇಶ್ ಪ್ರಶ್ನಿಸುತ್ತಾರೆ.

ಕಿರಿದಾದ ಇನ್‌ಟೇಕ್ ಕಾಲುವೆ, ಹೂಳು ತುಂಬಿರುವ ಬಾವಿ ಮತ್ತು ಕಡಿಮೆ ಎತ್ತರದ ನೀರಿನ ತೊಟ್ಟಿ ಮತ್ತು ಕಾಲುವೆಗಳು ರೈತರನ್ನು ಅಣಕಿಸುತ್ತ ನಿಂತಿವೆ.ಸಸಇದರ ಬಗ್ಗೆ ಅಧಿಕಾರಿಗಳ ಜಡ ವರ್ತನೆ ಹೀಗೆ ಮುಂದು ವರಿದರೆ ಕುಡುಗೋಲು, ಸಲಿಕೆ ಮತ್ತು ಗುದ್ದಲಿ ಗಳೊಂದಿಗೆ ರೈತರು ಸಣ್ಣ ನೀರಾವರಿ ಇಲಾಖೆಗೆ ಮುತ್ತಿಗೆ ಹಾಕುವುದಾಗಿ ಗ್ರಾ.ಪಂ.ಸದಸ್ಯ ಯು.ಹುಲುಗಪ್ಪ, ರೈತರಾದ ಜಿ.ಲಕ್ಷ್ಮಣ ಮತ್ತು ಕಲ್ಲಂ ಕೊಟ್ರೇಶ್ ಆಕ್ರೋಶ ವ್ಯಕ್ತಪಡಿಸುತ್ತಾರೆ.ತುಂಗಭದ್ರೆಯಿಂದ ಆವೃತವಾಗಿರುವ ತಾಲ್ಲೂಕಿನ ಪಶ್ಚಿಮ ಭಾಗಗಳಲ್ಲಿ ಚಾಲನೆಯಲ್ಲಿರುವ ಹತ್ತಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳ ರೈತರ ಸಮಸ್ಯೆಗಳು ಅಡವಿ ಆನಂದದೇವನಹಳ್ಳಿ ಏತ ನೀರಾವರಿ ಯೋಜನೆಯ ರೈತರ ವ್ಯಥೆಯನ್ನು ಹೋಲುತ್ತವೆ.ಸಮಸ್ಯೆಗಳ ಪರಿಹಾರಕ್ಕೆ ಹಗರಿಬೊಮ್ಮನಹಳ್ಳಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಶಾಖೆಯನ್ನು ತೆರೆದು ಆ ಮೂಲಕ ರೈತರು ಪದೇ ಪದೇ ಹಡಗಲಿಯ ಸಣ್ಣ ನೀರಾವರಿ ಇಲಾಖೆಗೆ ಅಲೆಯುವುದನ್ನು ತಪ್ಪಿಸಬಹುದು.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry