ಮಂಗಳವಾರ, ಮೇ 18, 2021
24 °C

ಅಡಿಕೆಗೆ ಕೊಳೆ ರೋಗ; ಹತೋಟಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಜಿಲ್ಲೆಯಲ್ಲಿ ಒಂದು ವಾರದಿಂದ ಮಳೆಯಾಗುತ್ತಿದ್ದು, ಪ್ರಮುಖವಾಗಿ ಕಳೆದ ವರ್ಷ ಕೊಳೆ ಬಂದಿರುವ ಪ್ರದೇಶಗಳಿಗೆ ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗೆ ಕಾಯಿ ಕೊಳೆ ರೋಗ ಪ್ರಾರಂಭವಾಗುವ ಸಂಭವ ಇದೆ ಎಂದು ನವಿಲೆ ಕೃಷಿ ಮಹಾ ವಿದ್ಯಾಲಯದ ಅಡಿಕೆ ಸಂಶೋಧನಾ ಪ್ರಾಂಶುಪಾಲ ಡಾ.ಕೆ.ಎಸ್.ಶೇಷಗಿರಿ ತಿಳಿಸಿದ್ದಾರೆ.ಕೊಳೆರೋಗ ಲಕ್ಷಣಗಳನ್ನು ಗುರುತಿಸುವುದು ಸುಲಭ. ಈ ಸಮಯದಲ್ಲಿ ಸಾಮಾನ್ಯವಾಗಿ ಎಳೆ ಕಾಯಿಗಳ ತೊಟ್ಟಿನ ಭಾಗಗಳಲ್ಲಿ ನೀರಿನಿಂದ ತೊಯ್ದ ಬೂದುಬಣ್ಣದ ಮಚ್ಚೆಗಳು ಕಂಡು ಬರುತ್ತವೆ. ಈ ಮಚ್ಚೆಗಳು ನಂತರ ಇಡೀ ಕಾಯಿಗಳಿಗೆ ಹರಡಿ ಕಾಯಿ ಹಸಿರು ಬಣ್ಣ ಕಳೆದುಕೊಂಡು, ಕ್ರಮೇಣ ಗೊನೆಗಳಿಂದ ಉದುರುವುದು ಅಲ್ಲದೆ ಹಿಂಗಾರದ ಮೊಗ್ಗುಗಳೂ  ಕೊಳೆಯುತ್ತವೆ. ರೋಗವು ಹೆಚ್ಚಾದಾಗ ಶಿಲೀಂದ್ರ ರೋಗಾಣುಗಳು ಸುಳಿಗೆ ಹರಡಿ ಇಡೀ ತೊಂಡೆ ಸಹ ತುಂಡಾಗಿ ಬೀಳಬಹುದು ಎಂದು ಅವರು ತಿಳಿಸಿದ್ದಾರೆ.ರೋಗ ನಿರ್ವಹಣೆಗೆ ಕ್ರಮ

ಈ ರೋಗದ ನಿವಾರಣೆಗೆ ತೋಟಗಳಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡಬೇಕು. ರೋಗಪೀಡಿತ ಉದುರಿದ ಕಾಯಿಗಳನ್ನು ಆರಿಸಿ ನಾಶಪಡಿಸಬೇಕು. ತೋಟದಲ್ಲಿರುವ ಇತರೆ ಬೆಳೆಗಳ (ಕೋಕೋ, ಮೆಣಸು, ಲವಂಗ, ಏಲಕ್ಕಿ ಮತ್ತು ದಾಲ್ಚಿನ್ನಿ) ಮತ್ತು ತೋಟದ ಸುತ್ತಲೂ ಇರುವ ನೆರಳು ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ಗಾಳಿಯಾಡುವಂತೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.ತಟಸ್ಥಗೊಳಿಸಿದ ಶೇ 1ರಬೋರ್ಡೋ ದ್ರಾವಣವನ್ನು (ಶೇ.25 ರಷ್ಟು ತಾಮ್ರದ ಅಂಶ ವಿರುವ ಮೈಲುತುತ್ತ) ಗೊನೆಗಳಿಗೆ ಸಿಂಪಡಿಸಬೇಕು. ಬುಡಭಾಗದಲ್ಲಿ ಉದುರಿರುವ ರೋಗ ಪೀಡಿತ ಕಾಯಿಗಳಿದ್ದಲ್ಲಿ, ಬುಡಭಾಗವನ್ನು ಇದೇ ಶೀಲೀಂದ್ರ ನಾಶಕದಿಂದ ನೆನೆಸಬೇಕು. ಬೋರ್ಡೋ ದ್ರಾವಣ ಸಿಂಪಡಿಸುವ ವೇಳೆ ಬಿಸಿಲಿನ ವಾತಾವರಣವಿದ್ದರೆ ಒಳ್ಳೆಯದು ಎಂದು ಅವರು ಸಲಹೆ ಮಾಡಿದ್ದಾರೆ.ಬೋರ್ಡೋ ದ್ರಾವಣಕ್ಕೆ ಬದಲಾಗಿ ಪ್ರತಿ 1ಲೀಟರ್ ನೀರಿಗೆ 3ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಅಥವಾ 2ಗ್ರಾಂ ಮೆಟಲಾಕ್ಸಿಲ್ ಜತೆಗೆ ಮ್ಯೋಂಕೋಜೆಬ್ 72 ಡಬ್ಲೂಪಿ ಮಿಶ್ರಣವನ್ನು ಸೂಕ್ತ ಅಂಟಿನೊಂದಿಗೆ ಬೆರಸಿ ಗೊನೆಗಳಿಗೆ ಸಿಂಪಡಿಸ ಬೇಕು.ಬೋರ್ಡೋದ್ರಾವಣ ಸಿಂಪಡಿಸುವಾಗ ಸುಳಿಭಾಗಕ್ಕೆ ಔಷಧ ಬೀಳುವಂತೆ ಸಿಂಪಡಿಸಿದರೆ ಸುಳಿಕೊಳೆ ರೋಗ ಬಾಧೆ ಕಡಿಮೆಯಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.