ಅಡಿಕೆಗೆ ವೈಜ್ಞಾನಿಕ ಬೆಲೆ ನೀಡಲು ಆಗ್ರಹ

7

ಅಡಿಕೆಗೆ ವೈಜ್ಞಾನಿಕ ಬೆಲೆ ನೀಡಲು ಆಗ್ರಹ

Published:
Updated:

ಚಿತ್ರದುರ್ಗ: ಗುಟ್ಕಾ ತುಂಬಲು ಬಳಸುವ ಪ್ಲಾಸ್ಟಿಕ್ ಪ್ಯಾಕೆಟ್ ನಿಷೇಧಿಸಬೇಕು ಎನ್ನುವ ಸುಪ್ರೀಂಕೋರ್ಟ್ ಆದೇಶದಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ.ಪ್ಲಾಸ್ಟಿಕ್ ನಿಷೇಧ ಕೇವಲ ಗುಟ್ಕಾಗೆ ಮಾತ್ರ ಏಕೆ ಸೀಮಿತ ಮಾಡಬೇಕು. ಕುಡಿಯುವ ನೀರು ಸಹ ಪ್ಲಾಸ್ಟಿಕ್ ಬಾಟಲ್‌ನಲ್ಲಿ ದೊರೆಯುತ್ತದೆ. ಇದೇ ರೀತಿ ಹಲವಾರು ಆಹಾರ ಉತ್ಪನ್ನಗಳು ಪ್ಲಾಸ್ಟಿಕ್‌ನಲ್ಲಿ ದೊರೆಯುತ್ತವೆ. ಇವುಗಳೆನ್ನೆಲ್ಲ ಕೈಬಿಟ್ಟು ಕೇವಲ ಗುಟ್ಕಾ ಮೇಲೆ ಮಾತ್ರ ಏಕೆ ಕೆಂಗಣ್ಣು ಎಂದು ರೈತರು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.ಭೀಮಸಮುದ್ರ, ಹೊಳಲ್ಕೆರೆ ಮತ್ತಿತರ ಭಾಗಗಳಿಂದ ಆಗಮಿಸಿದ್ದ ರೈತರು, ಸರ್ಕಾರ ಮತ್ತು ನ್ಯಾಯಾಲಯದ ಆದೇಶಗಳಿಂದ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟಗಳನ್ನು ಬಿಚ್ಚಿಟ್ಟರು.ಸರ್ಕಾರ ಮತ್ತು ನ್ಯಾಯಾಲಯದ ಆದೇಶಗಳು ರೈತರ ಮೇಲೆ ಗದಾಪ್ರಹಾರ ಬೀಸುತ್ತಿವೆ. ಅಡಿಕೆ ಬೆಳೆಯಲು 6-8 ವರ್ಷಗಳು ಬೇಕಾಗುತ್ತದೆ. ಒಂದೆಡೆ ಸರ್ಕಾರ ಅಡಿಕೆ ಬೆಳೆಯಲು ಪ್ರೋತ್ಸಾಹ ನೀಡುತ್ತದೆ. ಸಬ್ಸಿಡಿ ಸಹ ನೀಡುತ್ತದೆ. ಆದರೆ, ವೈಜ್ಞಾನಿಕ ಬೆಲೆ ನೀಡುವ ಬಗ್ಗೆ ಚಿಂತಿಸುವುದಿಲ್ಲ ಎಂದು ಹೊಳಲ್ಕೆರೆ ತಾಲ್ಲೂಕಿನ ಮುತ್ತಗದೂರು ಗ್ರಾಮದ ಬಸವಂತಪ್ಪ ದೂರಿದರು.ಇಂದು ಪ್ರತಿಯೊಂದು ವಸ್ತುಗಳು ಪ್ಲಾಸ್ಟಿಕ್‌ನಲ್ಲಿ ದೊರೆಯುತ್ತಿರುವುದರಿಂದ ರಾಷ್ಟ್ರಾದ್ಯಂತ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧಿಸಿದರೆ ನಾವು ಸಹ ಸ್ವಾಗತಿಸುತ್ತೇವೆ.ಕಾನೂನು ಎಲ್ಲರಿಗೂ ಒಂದೇ ಆಗಲಿ. ಪ್ರಸ್ತುತ ಖರೀದಿದಾರರು, ದಲಾಲರು ಅಂಗಡಿ ಮುಚ್ಚಿಕೊಂಡು ಕುಳಿತಿದ್ದಾರೆ. ವ್ಯಾಪಾರ ಮಾಡದೆ ನಮ್ಮ ಮನೆಯಲ್ಲಿ ಅಡಿಕೆ ಇಟ್ಟುಕೊಂಡಿದ್ದೇವೆ ಎಂದು ಅಳಲು ತೋಡಿಕೊಂಡರು.ಅಡಿಕೆ ನಮಗೆ ಜೀವನಾಧಾರ. ಆದರೆ, ಪ್ರಸ್ತುತ ಪರಿಸ್ಥಿತಿಯಿಂದ ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲವನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ. ಅಡಿಕೆ ಖರೀದಿಸುವವರೇ ಇಲ್ಲದೆ ಹೋದರೆ ನಮಗೆ ಯಾರು ದಿಕ್ಕು ಎಂದರು.ಕ್ಯಾಂಪ್ಕೋ ಅಥವಾ ಸಹಕಾರ ಸಂಘಗಳ ಮೂಲಕ ನ್ಯಾಯೋಚಿತ ಬೆಲೆಯಲ್ಲಿ ಅಡಿಕೆ ಖರೀದಿಸಬೇಕು. ಚಾಲಿ ಅಡಿಕೆಗೆ ಕ್ವಿಂಟಲ್‌ಗೆ ರೂ 12 ಸಾವಿರ ಮತ್ತು ಕೆಂಪು ಅಡಿಕೆಗೆ ರೂ 15-16 ಸಾವಿರಗೆ ಖರೀದಿಸಬೇಕು ಎಂದು ಚಿತ್ರಲಿಂಗಪ್ಪ ಒತ್ತಾಯಿಸಿದರು.ರಾಜ್ಯದಲ್ಲಿ 22 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಈ ಪ್ರದೇಶದಲ್ಲಿನ ರೈತರು ಪ್ರಸ್ತುತ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರೈತರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry