ಭಾನುವಾರ, ಏಪ್ರಿಲ್ 18, 2021
24 °C

ಅಡಿಕೆಗೆ ಹಳದಿ ರೋಗ : ಗ್ರಾಮಸ್ಥರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಪ್ಪಿನಂಗಡಿ:  ಎಲ್ಲೆಡೆ ಅಡಿಕೆಗೆ ಹಳದಿ ರೋಗ ಬಾಧಿಸುತ್ತಿದೆ ಆದರೆ ಕೃಷಿಕರ ಸಮಸ್ಯೆಗೆ ಸ್ಪಂದಿಸಬೇಕಾದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ಕಡೆಗೆ ತಿರುಗಿಯೂ ನೋಡುತ್ತಿಲ್ಲ, ಕನಿಷ್ಠ ಗ್ರಾಮ ಸಭೆಗೆ ಬಂದು ಅಹವಾಲು ಕೇಳುವ ಔದಾರ್ಯತೆ ತೋರುತ್ತಿಲ್ಲ ಎಂದು 34-ನೆಕ್ಕಿಲಾಡಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ತೋಟಗಾರಿಕೆ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಮಿತಾ ಹರೀಶ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಗ್ರಾಮ ಸಭೆಯಲ್ಲಿ ಅಧಿಕಾರಿ ವಿರುದ್ಧ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣ ಅಧಿಕಾರಿಗೆ ದೂರು ನೀಡುವ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.  ಸಭೆಯಲ್ಲಿ ಕೃಷಿ ಇಲಾಖೆಯ ಭರಮಣ್ಣ ಅವರು ಇಲಾಖಾ ಮಾಹಿತಿ ನೀಡುತ್ತಿದ್ದಂತೆ ಗ್ರಾಮಸ್ಥರು ಅಡಿಕೆಗೆ ರೋಗ ಬಾಧೆ ಇದೆ. ಸಮಸ್ಯೆಗೆ ಪರಿಹಾರ ಏನು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು ಅಡಿಕೆ ನಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ. ಅದಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ ಎಂದರು. ಮತ್ತೆ ಗ್ರಾಮಸ್ಥರು ತೋಟಗಾರಿಕೆ ಇಲಾಖೆಯವರು ಮಾಹಿತಿ ನೀಡುವಂತೆ ಆಗ್ರಹಿಸಿದರು. ಆದರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿರಲಿಲ್ಲ. ಇದರಿಂದ ಆಕ್ರೋಶಿತರಾದ ಗ್ರಾಮಸ್ಥರು ತೋಟಗಾರಿಕೆ ಅಧಿಕಾರಿಯನ್ನು ಭೇಟಿ ಆಗಲು ಪುತ್ತೂರು ಕಚೇರಿಗೆ ಹೋದರೆ ಅಲ್ಲಿಯೂ ಸಿಗುವುದಿಲ್ಲ. ಗ್ರಾಮ ಸಭೆಯಲ್ಲಿಯೂ ಅವರ ಭೇಟಿ ಸಾಧ್ಯವಾಗುತ್ತಿಲ್ಲ, ಹಾಗಾದರೆ ಅಡಿಕೆ ಕೃಷಿಕರ ಸಮಸ್ಯೆ ಆಲಿಸುವವರೇ ಇಲ್ಲವೇ ಎಂದು ಪ್ರಶ್ನಿಸಿ, ತೋಟಗಾರಿಕಾ ಇಲಾಖೆ ಅಧಿಕಾರಿ ವಿರುದ್ಧ ನಿರ್ಣಯ ಅಂಗೀಕರಿಸಬೇಕು ಮತ್ತು ರೈತರ ಸಮಸ್ಯೆಗಳ ನಿರ್ಣಯ ಅಂಗೀಕರಿಸಿ ಇಲಾಖೆಗೆ ಕಳುಹಿಸಿಕೊಡಬೇಕು ಎಂದು ಆಗ್ರಹಿಸಿದರು.ವೈದ್ಯರ ನೇಮಕಕ್ಕೆ ಆಗ್ರಹ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆಸ್ಪತ್ರೆ ಆಗಿ ಮೇಲ್ದರ್ಜೆಗೆ ಏರಿದೆ. ಆದರೆ ಇಲ್ಲಿ ಒಬ್ಬ ವೈದ್ಯರು ಮಾತ್ರ ಇದ್ದಾರೆ. ಸಿಬ್ಬಂದಿ ಕೊರತೆ ಇದೆ. ಹಲವು ಬಾರಿ ಆರೋಗ್ಯ ಇಲಾಖೆಯನ್ನು ಕೇಳಿಕೊಳ್ಳಲಾಗಿದೆ. ಆದರೆ ಸಮಸ್ಯೆ ಪರಿಹಾರ ಆಗಿಲ್ಲ. ಮುಂದಿನ ದಿನಗಳಲ್ಲಿ ಇಲ್ಲಿಗೆ ಕನಿಷ್ಠ ಇನ್ನೂ ಒಬ್ಬ ವೈದ್ಯರನ್ನು ನೇಮಕ ಮಾಡುವಂತೆ ನಿರ್ಣಯ ಅಂಗೀಕರಿಸಲಾಯಿತು.ಸರ್ಕಾರಿ ಭೂಮಿ ಅತಿಕ್ರಮಣ: ನೆಕ್ಕಿಲಾಡಿಯಲ್ಲಿ ನೂರಾರು ಮಂದಿ ನಿವೇಶನ ಇಲ್ಲದೆ ಇದ್ದಾರೆ. ಪಂಚಾಯಿತಿಗೆ ಅರ್ಜಿ ಸಲ್ಲಿಸಿದರೆ ನಿವೇಶನದ ಕೊರತೆಯನ್ನು ಹೇಳುತ್ತಿದ್ದಾರೆ. ಆದರೆ ನೆಕ್ಕಿಲಾಡಿ ಶಾಲಾ ಬಳಿಯಲ್ಲಿ ಭೂಮಾಲೀಕರೊಬ್ಬರು ತನ್ನ ಜಾಗದ ಅಗಳದ ಹೊರಗೆ ರಸ್ತೆ ಬದಿಯಲ್ಲಿ ಇರುವ 4 ಎಕರೆಗೂ ಅಧಿಕ ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಇದನ್ನು ಸರ್ಕಾರ ವಶಕ್ಕೆ ತೆಗೆದುಕೊಂಡು ನಿವೇಶನ ರಹಿತರಿಗೆ ಹಂಚುವ ಬಗ್ಗೆ ಕಾನೂನು ಕ್ರಮ ಜರಗಿಸಬೇಕು ಎಂಬ ಆಗ್ರಹ ಸಭೆಯಲ್ಲಿ ವ್ಯಕ್ತವಾಗಿ ಅದರಂತೆ ನಿರ್ಣಯ ಅಂಗೀಕರಿಸಲಾಯಿತು. ಅಂಗವಿಕಲ ವೇತನ, ವೃದ್ಧಾಪ್ಯವೇತನ ಇತ್ಯಾದಿ ಸೌಲಭ್ಯ ಪಡೆಯುವವರಿಗೆ ಸರ್ಕಾರ ನಿಗದಿಪಡಿಸಿದ 6 ಸಾವಿರ ಆದಾಯ ಮಿತಿಯನ್ನು 21 ಸಾವಿರಕ್ಕೆ ಏರಿಕೆ ಮಾಡಬೇಕು, ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕಸ ವಿಲೆವಾರಿಗೆ ತೊಟ್ಟಿ ಇಲ್ಲದೆ ಎಲ್ಲೆಂದರಲ್ಲಿ ಕಸವನ್ನು ರಾಶಿ ಹಾಕುತ್ತಿದ್ದಾರೆ. ಇದರ ವಿಲೇವಾರಿಗೆ ಕಸದ ತೊಟ್ಟಿ ಇಡಬೇಕು ಮತ್ತು ನೆಕ್ಕಿಲಾಡಿಯಲ್ಲಿ ಇರುವ ಸಾರ್ವಜನಿಕ ಶೌಚಾಲಯವನ್ನು ದುರಸ್ಥಿ ಮಾಡಬೇಕು ಎಂಬ ಆಗ್ರಹಿಸಿದರು. ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಸಹಾಯಕ ಎಂಜಿನಿಯರ್ ನಾರಾಯಣ ನಾಯ್ಕಿ, ಮೆಸ್ಕಾಂ ಕಿರಿಯ ಎಂಜಿನಿಯರ್ ಶೇಷಪ್ಪ ಪೂಜಾರಿ, ಆರೋಗ್ಯ ಇಲಾಖೆಯ ಇಗ್ನೇಷಿಯಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಭಾರತಿ, ಕಿರಿಯ ಎಂಜಿನಿಯರ್ ಸಜ್ಜನ್‌ಕುಮಾರ್, ಜಲಾನಯನ ಇಲಾಖೆಯ ದಯಾನಂದ ಇಲಾಖಾ ಮಾಹಿತಿ ನೀಡಿದರು. ಗ್ರಾಮಸ್ಥರಾದ ವಿನ್ಸೆಂಟ್ ಫೆರ್ನಾಂಡಿಸ್, ಅಬ್ದುಲ್ ರಹಿಮಾನ್, ರೂಪೇಶ್ ಕುಮಾರ್, ಮಲ್ಲೇಶ್ ಕುಮಾರ್, ಸಂಜೀವ ಗಾಣಿಗ ಸಮಸ್ಯೆಗಳನ್ನು ಸಭೆಯ ಗಮನ ಸೆಳೆದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೇಶವ ಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ಉಮೇಶ್ ಶೆಣೈ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಸ್ಕರ್ ಆಲಿ, ಕಾರ್ಯದರ್ಶಿ ಶಿವಪ್ರಕಾಶ್ ಅಡ್ಪಂಗಾಯ ಮಾತನಾಡಿದರು. ಸದಸ್ಯರಾದ ಶಾಂತಾರಾಮ ರಾವ್, ಅಬ್ದುಲ್ ಹಮೀದ್, ಇಬ್ರಾಹಿಂ, ಕಿಶೋರ್, ಸುಜಾತಾ ರೈ, ಲತಾ, ದೇವಕಿ, ತುಳಸಿ ಈಶ್ವರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.