ಅಡಿಕೆ ತೋಟದಲ್ಲಿ ರುದ್ರಾಕ್ಷಿ ಫಸಲು

7

ಅಡಿಕೆ ತೋಟದಲ್ಲಿ ರುದ್ರಾಕ್ಷಿ ಫಸಲು

Published:
Updated:

ಈ ಅಡಿಕೆ ಕೃಷಿಕನ ತೋಟದಲ್ಲಿ ಅಡಿಕೆ ಮಾತ್ರವಲ್ಲ; ರುದ್ರಾಕ್ಷಿಯೂ ಬೆಳೆಯುತ್ತದೆ. ಅದೂ ಒಂದಲ್ಲ ಎರಡಲ್ಲ ಸಾವಿರಾರು... ಅಡಿಕೆಯಂತೆಯೇ ಅಂಗಳದಲ್ಲಿ ಒಣಗಿಸಿ ಬುಟ್ಟಿಗಳಲ್ಲಿ ತುಂಬಿರುವ ರುದ್ರಾಕ್ಷಿ ರಾಶಿಯನ್ನು ನೋಡಿದರೆ ಎಂಥವರಾದರೂ ಅಚ್ಚರಿ ಪಡಲೇಬೇಕು.ಇದು ದಕ್ಷಿಣ ಕನ್ನಡದ ಪುತ್ತೂರಿನ ಸಮೀಪ ವಡ್ಯ ಶಾಮ ಭಟ್ ಅವರ ತೋಟದಲ್ಲಿ ಕಂಡು ಬರುವ ದೃಶ್ಯ. ದಕ್ಷಿಣ ಭಾರತದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಫಸಲು ಕೊಡುವ ರುದ್ರಾಕ್ಷಿ ಮರಗಳು ಅಪರೂಪ.1996ರಲ್ಲಿ ಪ್ರೊ. ವಡ್ಯ ಶಾಮ ಭಟ್ ಮಣಿಪಾಲದಲ್ಲಿ ಕೆಲಸ ಮಾಡುತ್ತಿದ್ದರು. ರುದ್ರಾಕ್ಷಿ ಗಿಡ ಬೆಳೆಯಬೇಕೆಂದು ಅವರಿಗೆ ಮನಸ್ಸಾಯಿತು. `ಆದರೆ ದಕ್ಷಿಣ ಭಾರತದಲ್ಲಿ ಇದನ್ನು ಬೆಳೆಸುವುದು ಅಸಾಧ್ಯ, ಬೆಳೆದರೂ ರುದ್ರಾಕ್ಷಿ ಕಾಯಿ ದೊರೆಯಲಾರದು~ ಎಂದು ಯಾರೋ ಹೆದರಿಸಿದರು.

 

ಇದನ್ನೇ ಒಂದು ಸವಾಲಾಗಿ ಸ್ವೀಕರಿಸಿದ ಅವರು ನೇಪಾಳದ ವಿದ್ಯಾರ್ಥಿಗಳ ಮೂಲಕ ಕೆಲವು ರುದ್ರಾಕ್ಷಿ ಗಿಡಗಳನ್ನು ಅಲ್ಲಿಂದ ತರಿಸಿದರು. ಕೆಲವು ಗಿಡಗಳನ್ನು ಸ್ನೇಹಿತರಿಗೆ, ವಿದ್ಯಾ ಸಂಸ್ಥೆಗಳಿಗೆ ಹಂಚಿದರು. ಎರಡು ಗಿಡಗಳನ್ನು ವಡ್ಯದ ತೋಟದಲ್ಲಿ ನೆಟ್ಟರು.ಇಂದು ಎರಡೂ ಗಿಡಗಳು ದೊಡ್ಡ ಮರಗಳಾಗಿ ಬೆಳೆದು ನಿಂತಿವೆ. ಪ್ರತೀ ವರ್ಷ ಪ್ರತೀ ಮರವೂ ಐದು ಸಾವಿರಕ್ಕೂ ಹೆಚ್ಚು ರುದ್ರಾಕ್ಷಿಗಳನ್ನು ನೀಡುತ್ತದೆ.ಜೋಪಾನ: ರುದ್ರಾಕ್ಷಿ ಗಿಡಗಳನ್ನು ಅತ್ಯಂತ ಜೋಪಾನವಾಗಿ ಸಾಕಬೇಕು. ಮೊದಲ ಮೂರು ನಾಲ್ಕು ವರ್ಷ ನೀರು ಮಾತ್ರ ಕೊಡಬೇಕು. ಗಿಡ ಸ್ವಲ್ಪ ದೊಡ್ಡದಾದಂತೆ ಸ್ವಲ್ಪ ಸ್ವಲ್ಪ ಸಾವಯವ ಗೊಬ್ಬರ ನೀಡುತ್ತಾ ಹೋಗಬೇಕು. ಬೇರಾವ ರಾಸಾಯನಿಕ ಗೊಬ್ಬರವೂ ರುದ್ರಾಕ್ಷಿ ಮರಕ್ಕೆ ಸೂಕ್ತವಲ್ಲ.ಏಳು ವರ್ಷಕ್ಕೆ ಅದು ಫಸಲು ನೀಡಲು ಪ್ರಾರಂಭಿಸುತ್ತದೆ. ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ರುದ್ರಾಕ್ಷಿ ಮರದಲ್ಲಿ ಬಿಳಿ ಬಣ್ಣದ ಹೂವುಗಳು ಕಂಡು ಬರುತ್ತವೆ. ಫೆಬ್ರುವರಿ- ಮಾರ್ಚ್ ವೇಳೆಗೆ ಕಾಯಿ ಕಾಣಿಸುತ್ತದೆ. ಇವು ಏಪ್ರಿಲ್- ಮೇ ತಿಂಗಳುಗಳಲ್ಲಿ ಪಕ್ವಗೊಂಡು ನೀಲಿ ಬಣ್ಣದ ಹಣ್ಣುಗಳಾಗುತ್ತವೆ. ಕಡು ನೀಲಿ ಬಣ್ಣದ ಹಣ್ಣುಗಳು ನೋಡಲು ಅತ್ಯಂತ ಮನಮೋಹಕ. ಏಪ್ರಿಲ್-ಮೇ ತಿಂಗಳಲ್ಲಿ ಮರದಿಂದ ಉದುರಲಾರಂಭಿಸುತ್ತವೆ.ಹಣ್ಣುಗಳನ್ನು ಕೊಯ್ಯುವ ಕ್ರಮವಿಲ್ಲ. ನಿತ್ಯ ಮರದಿಂದ ಬೀಳುವ ನೂರಾರು ಹಣ್ಣುಗಳನ್ನು ಹೆಕ್ಕಿ ಸಂಗ್ರಹಿಸಿ ಸಿಪ್ಪೆ ಸುಲಿದು ಬ್ರಷ್‌ನಿಂದ ಚೆನ್ನಾಗಿ ತೊಳೆದು ಸ್ವಚ್ಛ ಮಾಡಬೇಕು.ನಂತರ ಐದು ದಿನ ಎಳ್ಳೆಣ್ಣೆ ಇಲ್ಲವೇ ಶ್ರೀಗಂಧದ ಎಣ್ಣೆಯಲ್ಲಿ ಮುಳುಗಿಸಿ ಇಡಬೇಕು. ಬಳಿಕ ತೀವ್ರವಲ್ಲದ ಬಿಸಿಲಿನಲ್ಲಿ ಒಣಗಿಸಿ ಸಂಗ್ರಹಿಸಿ ಇಡಬೇಕು. ಸಂಸ್ಕರಣೆಯಿಂದ ಗುಣಮಟ್ಟ ಹೆಚ್ಚಿ ದೀರ್ಘ ಕಾಲ ಬಾಳಿಕೆ ಬರುವ ಉತ್ತಮ ರುದ್ರಾಕ್ಷಿ ಸಿಗುತ್ತದೆ. ಇವುಗಳ ಮೇಲೆ ಇರುವ ರೇಖೆಯನ್ನು ಗುರುತಿಸಿ ಏಕಮುಖಿ, ದ್ವಿಮುಖಿ, ತ್ರಿ ಮುಖಿ ಇತ್ಯಾದಿ ಹೆಸರುಗಳಿಂದ ಗುರುತಿಸಲಾಗುತ್ತದೆ. ಏಕ ಮುಖಿ ರುದ್ರಾಕ್ಷಿ ಸರ್ವ ಶ್ರೇಷ್ಠ. ಅತ್ಯಂತ ಹೆಚ್ಚು ಬೆಲೆ ಬಾಳುತ್ತದೆ. ಆದರೆ ದೊರಕುವುದು ಮಾತ್ರ ದುರ್ಲಭ.`ನನ್ನ ಮರಗಳಲ್ಲಿ ಇದುವರೆಗೆ ದೊರಕಿರುವ ರುದ್ರಾಕ್ಷಿಗಳಲ್ಲಿ ಪಂಚ ಮುಖಿಯೇ ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಆದರೆ ಅಪರೂಪದ ಆನೆ ಸೊಂಡಿಲಿನ ಗಣೇಶ ರುದ್ರಾಕ್ಷಿ  ಕೆಲವು ದೊರೆತಿವೆ. ಷಟ್‌ಮುಖಿ, ಸಪ್ತ ಮುಖಿ, ಅಷ್ಟ ಮುಖಿ ರುದ್ರಾಕ್ಷಿಗಳು ಕೆಲವು ದೊರೆತಿವೆ.ತೀರ ಅಪರೂಪವಾಗಿ ಒಂದೆರಡು ಏಕಾದಶಮುಖಿಗಳೂ ದೊರೆತಿವೆ~ ಎನ್ನುತಾರೆ ವಡ್ಯ ಶಾಮ ಭಟ್. ಏಕಾದಶ, ಏಕ ಮುಖಿಗೆ ಸಂಗ್ರಾಹಕರು ಲಕ್ಷಗಟ್ಟಲೆ ಬೆಲೆ ಕೊಡಲೂ ಸಿದ್ಧರಿರುತ್ತಾರೆ ಎಂದು ರುದ್ರಾಕ್ಷಿ ಮಾರುಕಟ್ಟೆಯ ಕುರಿತು ಅವರು ವಿವರಿಸುತ್ತಾರೆ.`ರುದ್ರಾಕ್ಷಿ  ಹಣ್ಣುಗಳನ್ನು ಬಿತ್ತಿ ಗಿಡಗಳನ್ನು ಮಾಡಿಕೊಳ್ಳಬಹುದು. ಶೇ 30 ರಿಂದ 60 ಪ್ರಮಾಣದಲ್ಲಿ ಇವು ಮೊಳಕೆ ಒಡೆಯುತ್ತವೆ. ನಂತರ ಒಂದು ವರ್ಷದ ವರೆಗೆ ಎಚ್ಚರಿಕೆಯಿಂದ ನಿತ್ಯ ನೀರುಣಿಸಿದರೆ ಗಿಡಗಳನ್ನು ನೆಡಲು ಸಿದ್ಧಮಾಡಿಕೊಳ್ಳಬಹುದು~ ಎನ್ನುವ ಅವರು ಈಗ ರುದ್ರಾಕ್ಷಿ ಗಿಡಗಳನ್ನೂ ತಯಾರು ಮಾಡುತ್ತಿದ್ದಾರೆ. ಗಿಡ ಬಯಸಿ ಬರುವ ಕೃಷಿಕರಿಗೆ ಮಾರಾಟ ಮಾಡುತ್ತಿದ್ದಾರೆ. ದೂರದ ಮಧ್ಯಪ್ರದೇಶ, ದೆಹಲಿ, ಕೇರಳಗಳಿಂದಲೂ ಆಸಕ್ತರು ಗಿಡ ಹುಡುಕಿಕೊಂಡು ಬಂದು ಒಯ್ಯುತ್ತಿದ್ದಾರೆ. ಭಟ್ಟರ ಸಂಪರ್ಕ ಸಂಖ್ಯೆ 94815 07506.  ಧಾರ್ಮಿಕ ಮಹತ್ವ

ಆಸ್ತಿಕರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿರುವ ರುದ್ರಾಕ್ಷಿ ಪರಿಶುದ್ಧತೆ, ಶಕ್ತಿಯ ಸಂಕೇತ. ಪೂಜಿಸಿ ಕೊರಳಲ್ಲಿ ಧರಿಸುತ್ತಾರೆ, ಜಪಮಾಲೆಯಂತೆ ಉಪಯೋಗಿಸುತ್ತಾರೆ. ಇದರಿಂದ ಶಾರೀರಿಕ ಆರೋಗ್ಯ, ಮಾನಸಿಕ ಸ್ಥಿರತೆ, ಮನಸ್ಸಿನ ಸ್ವಾಸ್ತ್ಯ ಉಂಟಾಗುತ್ತದೆ ಎಂಬ ನಂಬಿಕೆಯಿದೆ.ಶಿವ ಪುರಾಣ, ದೇವಿ ಭಾಗವತಗಳಲ್ಲಿ ರುದ್ರಾಕ್ಷದ ಉಲ್ಲೆೀಖವಿದೆ. ತ್ರಿಪುರಾಸುರರ ಸಂಹಾರಕ್ಕೆಂದು ಸಾವಿರ ವರ್ಷ ಧ್ಯಾನಸ್ಥ ಶಿವ ಕಣ್ಣು ತೆರೆದಾಗ ಉದುರಿದ ಆನಂದಬಾಷ್ಪವೇ ರುದ್ರಾಕ್ಷಿ . ಕಣ್ಣುಗಳಿಂದ (ಅಕ್ಷ) ಉದುರಿದ ಹನಿಗಳು ಹಿಮಾಲಯ ಪ್ರದೇಶದಲ್ಲಿ ಬಿದ್ದುದರಿಂದ ಅಲ್ಲಿ ಈ ವೃಕ್ಷಗಳು ಸೃಷ್ಟಿಯಾದವು ಎಂಬ ಕಥೆ ಪ್ರಚಲಿತದಲ್ಲಿ ಇದೆ. ವೈಜ್ಞಾನಿಕವಾಗಿ ಎಲಿಯೋ ಕಾರ್ಪುಸ್ ಜೆನಿತ್ರುಸ್ ಎಂಬ ವರ್ಗಕ್ಕೆ ಸೇರಿದೆ. 50 ರಿಂದ 100 ಅಡಿ ಎತ್ತರ ಬೆಳೆಯುತ್ತದೆ. ನೇಪಾಳದ ರುದ್ರಾಕ್ಷಿ ಜಗತ್ಪ್ರಸಿದ್ಧ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry