ಸೋಮವಾರ, ಮಾರ್ಚ್ 8, 2021
31 °C

ಅಡಿಕೆ ತೋಟದ ಇಲಿ, ಅಳಿಲಿಗೆ ನಾಯ್ಕರ ಬಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡಿಕೆ ತೋಟದ ಇಲಿ, ಅಳಿಲಿಗೆ ನಾಯ್ಕರ ಬಲೆ

ಎಂದಿನಂತೆ ಈ ವರ್ಷವೂ ಶಿವಮೊಗ್ಗ ಕೃಷಿ ಕಾಲೇಜಿನ ಅಂತಿಮ ಬಿಎಸ್‌ಸಿ ವಿದ್ಯಾರ್ಥಿಗಳ ಗ್ರಾಮೀಣ ಅನುಭವ ಶಿಬಿರ ಭದ್ರಾವತಿ ತಾಲ್ಲೂಕಿನ ಅರದೊಟ್ಟಲು, ದಾಸರಕಲ್ಲಹಳ್ಳಿ, ನಾಗತಿಬೆಳಗಲು, ಅಗಸನಹಳ್ಳಿ ಹಾಗೂ ತಟ್ಟಿಹಳ್ಳಿಯಲ್ಲಿ ಒಂದು ತಿಂಗಳು ನಡೆಯಿತು. ಇದು ಅವರ ಪಠ್ಯಕ್ರಮದ ಒಂದು ಭಾಗ.



ಶಿಬಿರದಲ್ಲಿ ರೈತರಿಗೆ ಸುಧಾರಿತ ಕೃಷಿ ಬಗೆಗಿನ ಮಾಹಿತಿಯನ್ನು ಗುಂಪು ಚರ್ಚೆ ಹಾಗೂ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಡಲಾಗುತ್ತಿತ್ತು. ಆಶ್ಚರ್ಯ ಎಂಬಂತೆ ನಾಗತಿಬೆಳಗಲು ಗ್ರಾಮದ ರೈತರೊಬ್ಬರು ತಾವು ಕಂಡುಕೊಂಡ ಉಪಾಯವೊಂದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದಾಗ ಆಶ್ಚರ್ಯಪಡುವ ಸರದಿ ವಿದ್ಯಾರ್ಥಿಗಳದಾಗಿತ್ತು.



ಆ ರೈತರೇ ನಂಜುಂಡೇ ನಾಯ್ಕರು. `ಅವಶ್ಯಕತೆಯೇ ಸಂಶೋಧನೆಯ ಮೂಲ~ ಎನ್ನುವ ನಾಣ್ಣುಡಿಯಂತೆ ನಾಯ್ಕರು ತಮ್ಮ ಅಡಿಕೆ ತೋಟದಲ್ಲಿ ವಿಪರೀತ ಉಪದ್ರವ ಕೊಡುತ್ತಿದ್ದ ಅಳಿಲು, ಇಲಿಗಳ ಸಮಸ್ಯೆಗೇ ತಾವೇ ಪರಿಹಾರ ಹುಡುಕಿಕೊಂಡಿದ್ದರು. ಅದಕ್ಕಾಗಿ ಸಾಕಷ್ಟು ಶ್ರಮಪಟ್ಟು ಸಂಶೋಧನೆ ಮಾಡಿದ್ದರು. ಅದರ ಫಲವೇ ಅಳಿಲು ಬಲೆ.



ಅವರೇ ಹೇಳಿದಂತೆ, ಅವರ ಎರಡೂ ಕಾಲು ಎಕರೆ ಅಡಿಕೆ ತೋಟದಲ್ಲಿ ಅನೇಕ ವರ್ಷಗಳಿಂದ ಅಳಿಲು, ಇಲಿಗಳ ಕಾಟ ಹೆಚ್ಚುತ್ತ ಬಂದಿತ್ತು. ಹೀಗಾಗಿ ತೋಟದ ಲಾಭ ವಾರ್ಷಿಕ 50- 60 ಸಾವಿರ ರೂಪಾಯಿಯಿಂದ 10 ಸಾವಿರ ರೂಪಾಯಿಗೆ ಇಳಿದಿತ್ತು. ಇದು ಸಹಜವಾಗಿಯೇ ಅವರನ್ನು ಚಿಂತೆಗೀಡು ಮಾಡಿತ್ತು.



ಅಳಿಲುಗಳನ್ನು ನಿಯಂತ್ರಿಸಲು ಪಕ್ಷಿ ಬಲೆ ಬಳಸಿ ವಿಫಲರಾಗಿದ್ದರು. ಆದರೂ ಛಲ ಬಿಡಲಿಲ್ಲ. ಹೊಸ ಹೊಸ ಪ್ರಯೋಗ ಮಾಡುತ್ತಲೇ ಬಂದರು. ಕೊನೆಗೂ ಪರಿಣಾಮಕಾರಿ ಬಲೆ ತಯಾರಿಸಿಯೇ ಬಿಟ್ಟರು. ಅದಕ್ಕೆ ಬಳಸಿದ್ದು ಸುಮಾರು 1.25 ಮೀಟರ್ ಉದ್ದ, 2.5 ಮಿಮಿ ದಪ್ಪದ ಕಬ್ಬಿಣದ ತಂತಿ ಹಾಗೂ ಅದರ ಉದ್ದಕ್ಕೂ ಸಮಾನಾಂತರದಲ್ಲಿ ಕಟ್ಟಿದ 2 ಮಿಮಿ ದಪ್ಪದ 34 ರಿಂದ 36 ಪ್ಲಾಸ್ಟಿಕ್ ದಾರಗಳು (ಗೊಲೆ). ಈ ಗೊಲೆಗಳನ್ನು ತಂತಿಗೆ ಚಾಚುವಂತೆ ಕಟ್ಟಿ ಮರಕ್ಕೆ ಬಿಗಿದರು. ಅವು ಮರದ ಮೇಲೆ ಓಡಾಡುವ ಅಳಿಲುಗಳಿಗೆ ನೇಣಿನ ಕುಣಿಕೆಗಳಂತಾದವು.



ನಾಯ್ಕರೇ ವಿವರಿಸುವಂತೆ ಅಡಿಕೆ ತೋಟದಲ್ಲಿ ತೆಂಗಿನ ಮರಗಳು ಇದ್ದರೆ ಅಡಿಕೆಗೆ ಅಳಿಲು ಕಾಟ ಬಹಳ. ಅವು ಸಾಮಾನ್ಯವಾಗಿ ತೆಂಗಿನ ಮರದ ಸುಳಿಯಲ್ಲಿ ಗೂಡು ಮಾಡಿ ರಾತ್ರಿ ವೇಳೆ ವಿಶ್ರಮಿಸುತ್ತವೆ. ಹಗಲಿನಲ್ಲಿ ಕೆಳಗಿಳಿದು ಬಂದು ಅಡಕೆ ಮರಗಳನ್ನು ಏರುತ್ತವೆ. ಎಳೆ ಅಡಿಕೆ ಕಾಯಿಗಳನ್ನು ಕಚ್ಚಿ ಒಳಗಿನ ಸಿಹಿ ನೀರು ಮತ್ತು ತಿರುಳನ್ನು ಭಕ್ಷಿಸುತ್ತವೆ. ಅಂಥ ಕಾಯಿಗಳು ಉದುರುತ್ತವೆ. ಅಲ್ಲದೆ, ಮೇಲೇರಿದ ಅಳಿಲುಗಳು ಅಡಿಕೆ ಮರದಿಂದ ಪಕ್ಕದ ಮರಕ್ಕೆ ಗರಿಗಳನ್ನು ಹಿಡಿದು ಜಿಗಿದು ಆ ಮರಕ್ಕೂ ಹಾನಿ ಮಾಡುತ್ತವೆ. ಸಂಜೆ ಕೆಳಗಿಳಿದು ಪುನಃ ತೆಂಗಿನ ಮರ ಏರಿ ವಿಶ್ರಾಂತಿ ಪಡೆಯುತ್ತವೆ.



ಅಳಿಲುಗಳ ಈ ಚರ್ಯೆ ಅರಿತ ನಾಯ್ಕರು ಅವುಗಳನ್ನು ನಿಯಂತ್ರಿಸಲು ತೆಂಗಿನ ಮರಕ್ಕೆ ತಾವು ನಿರ್ಮಿಸಿದ ಬಲೆ ಕಟ್ಟಿದ್ದಾರೆ. ಮರ ಏರುವ ಅಥವಾ ಇಳಿಯುವ ಅಳಿಲುಗಳು ಕಬ್ಬಿಣದ ತಂತಿಗೆ ಸಮಾನಾಂತರದಲ್ಲಿ ಚಾಚಿರುವಂತೆ ಕಟ್ಟಿರುವ ಗೊಲೆಗಳಿಗೆ ಸಿಕ್ಕಿ ಚೀರುತ್ತಾ ಸಾಯುತ್ತವೆ. ಹಾಗೇ ಸತ್ತವು ಹದ್ದು ಅಥವಾ ಕಾಗೆಗಳಿಗೆ ಆಹಾರವಾಗುತ್ತವೆ. ಈ ವಿಧಾನದಲ್ಲಿ 3-4 ತಿಂಗಳಲ್ಲಿ ಅವರ ಹೊಲದ ಸುಮಾರು 500 ಅಳಿಲುಗಳು ನಾಶವಾಗಿವೆ. ಈಗ ಅವರ ತೋಟ ಅಳಿಲು ಮುಕ್ತವಾಗಿದೆ. ಪಕ್ಕದ ತೋಟದ ರೈತರೂ ಇದರ ಪ್ರಯೋಜನ ಪಡೆದಿದ್ದಾರೆ.



ವಿಧಾನ

ಅವರು ಹೇಳುವ ಪ್ರಕಾರ ಅಳಿಲು ಬಲೆ ಬಳಸುವ ಕ್ರಮ ಹೀಗೆ. ತೆಂಗಿನ ಮರಗಳ ಸುತ್ತಲೂ ನೆಲದ ಮೇಲೆ ಅರ್ಧ ಕಿಲೊದಷ್ಟು ಮೆಕ್ಕೆಜೋಳ ಅಥವಾ ಜೋಳದ ಕಾಳನ್ನು ಚೆಲ್ಲಬೇಕು. ಇದನ್ನು 5- 6 ದಿನ ತಪ್ಪದೆ ಮಾಡಬೇಕು. ಕಾಳಿನ ಆಕರ್ಷಣೆಯಿಂದ ಬರುವ ಅಳಿಲುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾಗ ಕೂಗು ಹಾಕಿ ಅಥವಾ ತಗಡಿನ ಶಬ್ದ ಮಾಡಿ ಗಾಬರಿಗೊಳಿಸಬಹುದು. ಭೀತಿಗೊಂಡ ಅಳಿಲುಗಳು ತೆಂಗಿನ ಮರ ಹತ್ತಲು ಮುಂದಾಗಿ ಗೊಲೆಗಳಲ್ಲಿ ಸಿಕ್ಕಿಕೊಳ್ಳುತ್ತವೆ. ತಪ್ಪಿಸಿಕೊಳ್ಳಲು ಯತ್ನಿಸಿದಷ್ಟೂ ಗೊಲೆಯ ಕುಣಿಕೆ ಬಿಗಿಯಾಗಿ ಉಸಿರು ಕಟ್ಟಿ ಸಾಯುತ್ತವೆ.



ಅನೇಕ ಸಲ ಇಲಿಗಳೂ ಈ ಬಲೆಗೆ ಬಿದ್ದು ಸತ್ತಿದ್ದನ್ನು ನಾಯ್ಕರು  ನೆನಪಿಸಿಕೊಳ್ಳುತ್ತಾರೆ. ಈ ವಿಧಾನದಲ್ಲಿ ರಾಸಾಯನಿಕ ವಿಷ ಬಳಸದೇ ಅಳಿಲು ನಿಯಂತ್ರಿಸಬಹುದು. ಆದರೆ ತಂತಿಗೆ ಕಟ್ಟಿದ ಗೊಲೆಗಳು ಪ್ರತಿದಿನವೂ ಚಾಚಿರುವಂತೆ ನೋಡಿಕೊಳ್ಳಬೇಕು. ಒಂದೆರಡು ದಿನ ನೋಡಿಕೊಂಡರೆ ಇದರ ಅನುಕರಣೆ ಕಷ್ಟವೇನಲ್ಲ.



ಇಲಿಗೂ ಕಾದಿದೆ...

ಇದೇ ರೀತಿ ನಂಜುಂಡೇ ನಾಯ್ಕರ ಮತ್ತೊಂದು ಶೋಧನೆ ತೆಂಗಿನ ಮರದಲ್ಲಿನ ಎಳೆಕಾಯಿಗಳನ್ನು ತಿನ್ನುವ ಇಲಿಗಳನ್ನು ನಿಯಂತ್ರಿಸುವುದು. ಮೆಕ್ಕೆ ಜೋಳ ಚೆಲ್ಲಿ ಅಳಿಲು ಆಕರ್ಷಿಸುವಂತೆ ಇಲ್ಲಿ ತೆಂಗಿನ ಮರದ ಸುತ್ತಲೂ 4-5 ದಿನ ಹಿಟ್ಟಿನ ಕಾಳು ಮಾಡಿ ಹಾಕಬೇಕು. 6 ನೇ ದಿನ ಹಿಟ್ಟಿನ ಜೊತೆಗೆ ಬಿಳಿ ಸಿಮೆಂಟನ್ನು ಕಲೆಸಿ ಮರದ ಸುತ್ತ ಹರಡಬೇಕು.



ಸುಲಭದಲ್ಲಿ ಸಿಗುವ ಆಹಾರದ ರುಚಿ ಕಂಡ ಇಲಿಗಳು ಸಿಮೆಂಟು ಮಿಶ್ರಿತ ಹಿಟ್ಟು ಸೇವಿಸುತ್ತವೆ. ಆಗ ಸಿಮೆಂಟು ಜಠರ ರಸದೊಂದಿಗೆ ಬೆರೆತು ಗಟ್ಟಿಯಾಗಿ ಆಹಾರ ಅನ್ನ ನಾಳದಲ್ಲಿ ಸರಿಯಾಗಿ ಚಲಿಸುವುದಿಲ್ಲ. ಇದರಿಂದ ನಾಳದಲ್ಲಿ ಗಾಯವಾಗಿ ರಕ್ತದೊಂದಿಗೆ ಕಲ್ಮಷಗಳು ಬೆರೆತು ಇಲಿಗಳು ಸಾಯುತ್ತವೆ. ಈ ವಿಧಾನವೂ ಸಹ ಸುಲಭ. ಯಾವುದೇ ರಾಸಾಯನಿಕ ವಿಷಗಳ ಬಳಕೆ, ಅವುಗಳ ದುಷ್ಪರಿಣಾಮದ ಭಯ ಇಲ್ಲಿಲ್ಲ.

ನಂಜುಂಡೇ ನಾಯ್ಕರನ್ನು ಸಂಪರ್ಕಿಸಲು 81976 13371.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.