ಮಂಗಳವಾರ, ನವೆಂಬರ್ 19, 2019
22 °C
ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರ, ಲಿಂಗಾಯತರ ಮತಗಳೇ ನಿರ್ಣಾಯಕ

ಅಡಿಕೆ ನಾಡಿನಲ್ಲಿ ಗುಟ್ಟು ಬಿಡದ ಮತದಾರ

Published:
Updated:

ಹೊಳಲ್ಕೆರೆ: ಅಡಿಕೆ ನಾಡು, ಅರೆ ಮಲೆನಾಡು ಎಂದೆಲ್ಲಾ ಕರೆಯಿಸಿಕೊಳ್ಳುವ ಹೊಳಲ್ಕೆರೆ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯ ಕಾವು ನಿಧಾನವಾಗಿ ಏರತೊಡಗಿದೆ. 2008ರಲ್ಲಿ ನಡೆದ ಕ್ಷೇತ್ರ ಮರುವಿಂಗಡಣೆಯಲ್ಲಿ ಭರಮಸಾಗರ ಕ್ಷೇತ್ರ ಹೊಳಲ್ಕೆರೆ ಜತೆ  ವಿಲೀನವಾಗುವುದರೊಂದಿಗೆ ದೊಡ್ಡ ಕ್ಷೇತ್ರವಾಗಿ ಹೊರಹೊಮ್ಮಿತು.

ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರದಲ್ಲಿ ಸಾಧು ಲಿಂಗಾಯತ, ಕುಂಚಿಟಿಗ ಲಿಂಗಾಯತ, ಮಾದಿಗ, ಭೋವಿ, ಲಂಬಾಣಿ, ನಾಯಕ, ಕುರುಬ, ಗೊಲ್ಲ ಜಾತಿಗಳು ಪ್ರಬಲವಾಗಿವೆ. ತಾಲ್ಲೂಕಿನ ಕಸಬಾ, ಬಿ. ದುರ್ಗ, ತಾಳ್ಯ, ರಾಮಗಿರಿ ಹೋಬಳಿಗಳು ಸೇರಿದಂತೆ, ಭರಮಸಾಗರದ 3 ಹೋಬಳಿಗಳು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತವೆ.ಹೊಸದುರ್ಗ ಮಾರ್ಗದಲ್ಲಿ ಎನ್.ಜಿ. ಹಳ್ಳಿ, ರಾಮಗಿರಿ ಭಾಗದ ಕಣಿವೆ ಹಳ್ಳಿ, ಚನ್ನಗಿರಿ ಮಾರ್ಗದ ದುಮ್ಮಿ, ದಾವಣಗೆರೆ ಮಾರ್ಗದ ಬಂಡೆ ಬೊಮ್ಮೇನಹಳ್ಳಿ, ಎಚ್.ಡಿ. ಪುರ ಮಾರ್ಗದ ಕೊಳಾಳು, ಉತ್ತರದಲ್ಲಿ ಭರಮಸಾಗರದ ಆಚೆಯವರೆಗೆ ಕ್ಷೇತ್ರ ವಿಶಾಲವಾಗಿ ಹರಡಿಕೊಂಡಿದ್ದು, ಸುಮಾರು 493 ಹಳ್ಳಿಗಳಿವೆ. ತೋಟದ ಸೀಮೆಯಾಗಿರುವ ತಾಲ್ಲೂಕು ಮಲೆನಾಡಿನ ಸೆರಗಿಗೆ ಹೊಂದಿಕೊಂಡಿರುವುದರಿಂದ ಮಳೆ ಆಗೊಮ್ಮೆ, ಈಗೊಮ್ಮೆ ಬಂದೇ ಬರುತ್ತದೆ.

ಇದರಿಂದ ಸಾಮಾನ್ಯವಾಗಿ ಆರ್ಥಿಕವಾಗಿ ಸಬಲರಾಗಿರುವ ಕ್ಷೇತ್ರದ ಜನ ಸಾಕ್ಷರತೆಯಲ್ಲೂ ಮುಂದಿದ್ದಾರೆ. ಈ ಮೂಲಕ ಪ್ರಜ್ಞಾವಂತ ಮತದಾರರು ಹೆಚ್ಚಿರುವ ಕ್ಷೇತ್ರವಾದ ಇಲ್ಲಿ ಚುನಾವಣೆ ಎದುರಿಸುವುದು ಅಷ್ಟು ಸುಲಭದ ಮಾತಲ್ಲ.ಸ್ವಾತಂತ್ರ್ಯಾ ನಂತರ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ 7 ಬಾರಿ, ನೇಗಿಲು ಹೊತ್ತ ರೈತನ ಚಿಹ್ನೆ ಹೊಂದಿದ್ದ ಜನತಾ ಪಕ್ಷ 3 ಸಲ, ಬಿಜೆಪಿ 2 ಬಾರಿ, ಎಸ್‌ಡಬ್ಲ್ಯುಎ ಒಮ್ಮೆ ಗೆದ್ದಿವೆ. ಇದೇ ತಾಲ್ಲೂಕಿನ ಆವಿನಹಟ್ಟಿಯ ಎ.ವಿ. ಉಮಾಪತಿ 1989 ಮತ್ತು 2004 ರಲ್ಲಿ ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು.

ಉಳಿದಂತೆ ಜಿ. ದುಗ್ಗಪ್ಪ, ಜಿ. ಶಿವಪ್ಪ, ಬಿ. ಪರಮೇಶ್ವರಪ್ಪ, ಕೆ. ಸಿದ್ದರಾಮಪ್ಪ, ಜಿ. ಶಿವಲಿಂಗಪ್ಪ, ತಾಳ್ಯದ ಜಿ.ಸಿ. ಮಂಜುನಾಥ್, ತುಪ್ಪದಹಳ್ಳಿಯ ಯು.ಎಚ್. ತಿಮ್ಮಣ್ಣ, ಶಿವಪುರ ಪಿ. ರಮೇಶ್ ಮತ್ತು ಕಳೆದ ಬಾರಿ ಎಂ. ಚಂದ್ರಪ್ಪ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.ಬದ್ಧವೈರಿಗಳ ಕಾಳಗ: ಹಿಂದೆ ಭರಮಸಾಗರದಲ್ಲಿ ಮಾಜಿ ಶಾಸಕರಾದ ಎಂ. ಚಂದ್ರಪ್ಪ ಮತ್ತು ಎಚ್. ಆಂಜನೇಯ ರಾಜಕೀಯವಾಗಿ ಬದ್ಧ ವೈರಿಗಳಾಗಿದ್ದರು. ಕ್ಷೇತ್ರ ವಿಲೀನವಾದ ನಂತರ ಇಲ್ಲಿಯೂ ಅವರೇ ಎದುರಾಳಿಗಳು. 2008ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಂ. ಚಂದ್ರಪ್ಪ, ಕಾಂಗ್ರೆಸ್‌ನ ಎಚ್. ಆಂಜನೇಯ ವಿರುದ್ಧ 15,368 ಮತಗಳಿಂದ ಜಯ ಸಾಧಿಸಿದ್ದರು. ಇವರಿಬ್ಬರೂ ಕಳೆದ ಐದು ವರ್ಷಗಳಿಂದಲೂ ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ.

ಕಳೆದ ಬಾರಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಎಂ. ಚಂದ್ರಪ್ಪ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲಿನ ನಿಷ್ಠೆಯಿಂದ ಅವಧಿ ಪೂರ್ಣಗೊಳ್ಳುವ ಮೊದಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆಜೆಪಿಗೆ ಸೇರ್ಪಡೆಯಾಗಿದ್ದಾರೆ. ರಾಜೀನಾಮೆ ನೀಡಿದ ದಿನದಿಂದಲೇ ಕ್ಷೇತ್ರ ಸುತ್ತುತ್ತಿರುವ ಅವರು ಅಭಿವೃದ್ಧಿ ಮಂತ್ರ ಹಿಡಿದು ಪ್ರಚಾರ ನಡೆಸುತ್ತಿದ್ದಾರೆ.

ಹಿಂದುಳಿದ ಜಾತಿಗಳೊಂದಿಗೆ ಲಿಂಗಾಯಿತ ಮತಗಳ ಮೇಲೆ ಹೆಚ್ಚು ಕಣ್ಣಿಟ್ಟಿರುವ ಅವರು, ಮತಬೇಟೆಗಾಗಿ ಕ್ಷೇತ್ರದಲ್ಲಿ ಸುತ್ತುತ್ತಿದ್ದಾರೆ. ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿರುವ ನನ್ನನ್ನು ಜನ ಕೈಬಿಡಲಾರರು ಎಂಬ ಆತ್ಮವಿಶ್ವಾಸ ಚಂದ್ರಪ್ಪ ಅವರದ್ದು.ಕಳೆದ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸೋತಿದ್ದ ಎಚ್. ಆಂಜನೇಯ ಈ ಬಾರಿಯೂ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದು ಪ್ರಬಲ ಎದುರಾಳಿ ಆಗಿದ್ದಾರೆ. ಈಗಾಗಲೇ ಟಿಕೆಟ್ ಖಚಿತ ಮಾಡಿಕೊಂಡಿರುವ ಅವರು ಪ್ರಚಾರ ನಿರತರಾಗಿದ್ದಾರೆ.

ರಾಜ್ಯದಲ್ಲಿ ಎದ್ದಿರುವ ಕಾಂಗ್ರೆಸ್ ಅಲೆ, ಬಿಜೆಪಿಯ ಭ್ರಷ್ಟಾಚಾರ, ಒಳಜಗಳಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೊರಟಿರುವ ಅವರು, ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿ ಇದ್ದಾರೆ. ಬೆಸ್ಕಾಂ ಎಇಇ ಆಗಿದ್ದ ಎಂ. ಮಹಾದೇವಪ್ಪ ರಾಜಕಾರಣದ ಮೇಲಿನ ಆಸೆಯಿಂದ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ, ಜೆಡಿಎಸ್‌ನಿಂದ ಸ್ಪರ್ಧಿಸಲು ಮುಂದಾಗಿದ್ದು, ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.ಉದ್ಯಮಿ ಹಾಗೂ ಸಮಾಜಸೇವಕ ಶಶಿಶೇಖರ ನಾಯ್ಕ ಕೂಡ ಕ್ಷೇತ್ರಕ್ಕೆ ಹೆಜ್ಜೆ ಇಟ್ಟಿದ್ದು, ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದಾರೆ. ಜಿ.ಇ. ಮಂಜುನಾಥ್, ದೇವೇಂದ್ರ ನಾಯ್ಕ, ಕುಮಾರ ನಾಯ್ಕ, ವೆಂಕಟೇಶ ನಾಯ್ಕ, ಈಶ್ವರ ನಾಯ್ಕ ಎಂಬುವರೂ ರೇಸ್‌ನಲ್ಲಿ ಇದ್ದಾರೆ.ಗೂಳಿಹಟ್ಟಿ ರುದ್ರೇಶ್ ಕೂಡ ಜೆಡಿಎಸ್ ಟಿಕೆಟ್ ನನಗೇ ಸಿಗುತ್ತದೆ ಎಂದು ಕ್ಷೇತ್ರದಲ್ಲಿ ಸಂಚಾರ ಆರಂಭಿಸಿದ್ದಾರೆ. ಬಿಜೆಪಿಗೆ ಅಭ್ಯರ್ಥಿಗಳನ್ನು ಹುಡುಕುವುದೇ ಕಷ್ಟವಾಗಿದ್ದು, ಬಿಎಸ್‌ಆರ್ ಕಾಂಗ್ರೆಸ್‌ನಿಂದ ಶ್ರೀನಿವಾಸ್ ಎಂಬುವರು ಅಭ್ಯರ್ಥಿ ಎಂದು ಹೇಳಲಾಗುತ್ತಿದೆ.ಆದರೆ ಬುದ್ದಿವಂತ ಮತದಾರ ಮಾತ್ರ ಯಾವುದೇ ಗುಟ್ಟು ಬಿಟ್ಟುಕೊಡದೆ ಅಭ್ಯರ್ಥಿಗಳಲ್ಲಿ ತಳಮಳ ಸೃಷ್ಟಿಸುತ್ತಿದ್ದಾನೆ.

ಪ್ರತಿಕ್ರಿಯಿಸಿ (+)