`ಅಡಿಕೆ ಬೆಳೆಗಾರರಲ್ಲಿ ಆತಂಕ ಬೇಡ'

7

`ಅಡಿಕೆ ಬೆಳೆಗಾರರಲ್ಲಿ ಆತಂಕ ಬೇಡ'

Published:
Updated:

ಶಿರಸಿ: `ಅಡಿಕೆ ಬೆಲೆಯ ಸ್ಥಿರತೆ ಬಗ್ಗೆ ಬೆಳೆಗಾರರಲ್ಲಿ ಆತಂಕ ಬೇಡ. ಸಹಕಾರಿ ಸಂಸ್ಥೆಗಳು ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಕಾಪಾಡುತ್ತವೆ' ಎಂದು ಸಹಕಾರಿ ಸಂಸ್ಥೆಗಳು ಪ್ರಮುಖರು ಬೆಳೆಗಾರರಿಗೆ ಭರವಸೆ ನೀಡಿದ್ದಾರೆ.ನಗರದ ಪಂಚವಟಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ಅಡಿಕೆ ವಹಿವಾಟು ಸಂಸ್ಥೆ ಮುಖ್ಯಸ್ಥರಾದ ಕ್ಯಾಂಪ್ಕೋ ಸಂಸ್ಥೆ ಅಧ್ಯಕ್ಷ ಕೊಂಕೋಡಿ ಪದ್ಮನಾಭ, ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಅಧ್ಯಕ್ಷ ಶಾಂತಾರಾಮ ಹೆಗಡೆ,  ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ಜಂಟಿಯಾಗಿ ಮಾಹಿತಿ ನೀಡಿದರು.`ಪ್ರಸಕ್ತ ವರ್ಷ ಅಡಿಕೆ ಉತ್ಪಾದನೆ ಕುಂಠಿತವಾಗಿದ್ದು, ಅಡಿಕೆ ಬೆಳೆಯುವ ದಾವಣಗೆರೆ, ಬೀರೂರು ಪ್ರದೇಶಗಳಲ್ಲಿ ಸಾಕಷ್ಟು ಮರಗಳು ನಾಶವಾಗಿವೆ. ಕೇರಳದಲ್ಲಿ ಅಡಿಕೆ ಮರದ ಜಾಗವನ್ನು ರಬ್ಬರ್ ಆಕ್ರಮಿಸಿದೆ. ಮುಂದಿನ ಹಂಗಾಮಿನಲ್ಲಿ ಅಡಿಕೆ ಮಾರುಕಟ್ಟೆಯಲ್ಲಿ ಪ್ರಸ್ತುತ ಇರುವ ದರವನ್ನು ಕಾಪಾಡುವ ಭರವಸೆ ಇದೆ' ಎಂದು ಕೊಂಕೋಡಿ ಪದ್ಮನಾಭ ಹೇಳಿದರು.`ಗುಟಕಾ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ಯಾವುದೇ ಹಾನಿ ಇಲ್ಲ. ಗುಟಕಾ ನಿಷೇಧಗೊಂಡರೆ ಅಡಿಕೆ ದರ ಕುಸಿಯಬಹುದು ಎಂಬುದು ಮಾಧ್ಯಮ ವರದಿಯಾಗಿತ್ತು ಅಷ್ಟೆ. ಅಡಿಕೆ ಕ್ಯಾನ್ಸರ್‌ದಾಯಕವಲ್ಲ, ಆದರೆ ತಂಬಾಕಿನ ದುಷ್ಪರಿಣಾಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಬಾಂಗ್ಲಾ ಮತ್ತು ನೇಪಾಳದಿಂದ ಅಡಿಕೆ ಆಮದು ಆಗುವ ಕುರಿತಂತೆ ಕಟ್ಟುನಿಟ್ಟಿನ ಕ್ರಮ ಕೈಕೊಳ್ಳಲಾಗಿದೆ.

ಅಡಿಕೆ ಆಮದಿನ ವಿಷಯಕ್ಕೆ ಸಂಬಂಧಿಸಿ ಕೇಂದ್ರ ಹಣಕಾಸು ಇಲಾಖೆ ಹಾಗೂ ವಿದೇಶಿ ವ್ಯವಹಾರ ನಿರ್ದೇಶನಾಲಯದ ಜೊತೆ ನಿಕಟ ಸಂಪರ್ಕ ಇಟ್ಟುಕೊಳ್ಳಲಾಗಿದೆ. ಅಕ್ರಮ ಅಡಿಕೆ ನುಸುಳುವ ಬಗ್ಗೆ ಬಾಂಗ್ಲಾ ದೇಶಕ್ಕೆ ನೋಟಿಸ್ ನೀಡಲಾಗಿದೆ.

ಪರಿಣಾಮ ಕಾನೂನು ಬಾಹಿರ ಅಡಿಕೆ ಸಂಸ್ಕರಣಾ ಘಟಕಗಳು ಬಂದ್ ಆಗುವ ಮೂಲಕ ಬಾಂಗ್ಲಾದಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಗೊಂಡಿದೆ' ಎಂದರು.ಸಾಂಪ್ರದಾಯಿಕ ಸಂಸ್ಕರಣೆ ಮುಂದುವರಿಸಿ: `ಅಡಿಕೆ ಬೆಳೆಗಾರರು ಸಾಂಪ್ರದಾಯಿಕ ಸಂಸ್ಕರಣೆ ಮುಂದುರಿಸಬೇಕು. ಕೆಂಪಡಿಕೆಗೂ ಚಾಲಿ ಅಡಿಕೆ ದರವೇ ಇದ್ದು, ಒಟ್ಟಾರೆ ಬೆಳೆಯಲ್ಲಿ ಎರಡೂ ಮಾದರಿಗಳನ್ನು ಸಮಾನವಾಗಿ ಸಿದ್ಧಪಡಿಸಬಹುದು. ಗಾಳಿಮಾತಿಗೆ ಕಿವಿಗೊಟ್ಟು ವಿಚಲಿತರಾಗುವುದು ಬೇಡ. ಅಡಿಕೆಯನ್ನು ಹಂತ ಹಂತವಾಗಿ ಅಗತ್ಯಕ್ಕೆ ತಕ್ಕಂತೆ ಮಾರಾಟ ಮಾಡುವದು ಉತ್ತಮವಾಗಿದೆ.ಮಾರುಕಟ್ಟೆಯಲ್ಲಿ ದರ ತುಸು ವ್ಯತ್ಯಾಸವಾದರೆ ಅದು ತಾತ್ಕಾಲಿಕ ಮಾತ್ರ. ಅಡಿಕೆ ತೋಟದಲ್ಲಿ ನಡುವೆ ಉತ್ತಮ ಬೇಡಿಕೆ ಇರುವ ಕೊಕ್ಕೋ ಮತ್ತಿತರ ಅಂತರ್ ಬೆಳೆ ಬೆಳೆಯಬಹುದು' ಎಂದರು.

`ಇತ್ತೀಚೆಗೆ ನಡೆಸಿದ ಕೃಷಿ ಯಂತ್ರ ಮೇಳದಲ್ಲಿ ಸುಮಾರು 1.5ಲಕ್ಷ ರೈತರು ಭಾಗವಹಿಸಿದ್ದು, 150ಕ್ಕೂ ಹೆಚ್ಚು ಕಂಪನಿಗಳ ಕೃಷಿ ಯಂತ್ರೋಪಕರಣ ಪ್ರದರ್ಶನಗೊಂಡಿವೆ.

2015ರಲ್ಲಿ ಇನ್ನಷ್ಟು ವ್ಯಾಪಕವಾಗಿ 75 ಎಕರೆ ಪ್ರದೇಶದಲ್ಲಿ ಪ್ರದರ್ಶನ ಆಯೋಜಿಸಿ ಜಗತ್ತಿನ ಬೇರೆ ಬೇರೆ ಭಾಗಗಳ ಯಂತ್ರಗಳನ್ನು ತರಿಸುವ ಯೋಚನೆ ಇದೆ' ಎಂದು ಕೊಂಕೋಡಿ ಪದ್ಮನಾಭ ಹೇಳಿದರು.

`ಕೊಕ್ಕೋ ಬೆಳೆಗೆ ಕೇಂದ್ರ ಸರ್ಕಾರ ಕನಿಷ್ಠ ಬೆಲೆ ನಿಗದಿಪಡಿಸಬೇಕು.

ದೇಶದಲ್ಲೇ ಸಾಕಷ್ಟು ಕೊಕ್ಕೋ ಬೆಳೆಯಲಾಗುತ್ತಿದ್ದು, ಕೊಕ್ಕೋ ಆಮದು ನಿಲ್ಲಿಸಬೇಕು. ಕ್ಯಾಂಪ್ಕೋ ಸಂಸ್ಥೆ ಚಾಕಲೇಟ್ ಫ್ಯಾಕ್ಟರಿ ವಿಸ್ತರಣೆಗೆ ಮತ್ತೆ ರೂ 30ಕೋಟಿ ವಿನಿಯೋಗಿಸಲಿದೆ. ಕ್ಯಾಂಪ್ಕೋ ಫ್ಯಾಕ್ಟರಿಗೆಂದು ರಾಜ್ಯ ಸರ್ಕಾರ ಹೊಸ ವಿದ್ಯುತ್ ವಿತರಣಾ ಘಟಕ ಆರಂಭಿಸಲಿದೆ' ಎಂದರು.ಪತ್ರಿಕಾಗೋಷ್ಠಿಯಲ್ಲಿ ಆರ್.ಎನ್.ಹೆಗಡೆ ಗೋರ್ಸಗದ್ದೆ, ಸೀತಾರಾಮ ಭಟ್ಟ ಕೆರೇಕೈ, ಭಾಸ್ಕರ ಹೆಗಡೆ ಕಾಗೇರಿ, ತಟ್ಟೀಸರ, ನೆಲೆಮಾವು ಸೊಸೈಟಿ ಅಧ್ಯಕ್ಷರು ಉಪಸ್ಥಿತರಿದ್ದರು.`ಕೃಷಿಗೆ ಮರಳುವ ಕಾಲ ದೂರವಿಲ್ಲ'

`ಕೃಷಿಕರು ದಯವಿಟ್ಟು ಜಮೀನು ಮಾರಾಟ ಮಾಡಬೇಡಿ. ದುಡಿಯಲು ಸಾಧ್ಯವಾದಷ್ಟು ಬೆಳೆ ಬೆಳೆಯಿರಿ. ಜಮೀನು ಮಾರಾಟ ಮಾಡುವ ನಿರ್ಧಾರ ಕೈಕೊಂಡು ಪಶ್ಚಾತ್ತಾಪ ಪಡುವ ಕಾಲ ಎದುರಾಗುವದು ಬೇಡ. ಮಕ್ಕಳಲ್ಲಿ ಕೃಷಿ ಬಗ್ಗೆ ಆಸಕ್ತಿ ಮೂಡಿಸಿ. ಕಾಲಚಕ್ರ ತಿರುಗುತ್ತದೆ. ನಗರ ಅರಸಿ ಹೋದವರು ಕೃಷಿಗೆ ಮರಳುವ ಕಾಲ ದೂರವಿಲ್ಲ' ಎಂದು ಪದ್ಮನಾಭ ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry