ಅಡಿಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್

ಭಾನುವಾರ, ಜೂಲೈ 21, 2019
22 °C

ಅಡಿಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್

Published:
Updated:

ತರೀಕೆರೆ: ಹಳದಿ ರೋಗ ಬಾಧೆಯಿಂದ ಸಂಕಷ್ಟದಲ್ಲಿರುವ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ನಬಾರ್ಡ್ ಮೂಲಕ ರೂ. 300 ಕೋಟಿ ವಿಶೇಷ ಪ್ಯಾಕೇಜ್ ನೀಡಲು ಪ್ರಧಾನಿ ಕೇಂದ್ರದ ಕೃಷಿ ಮತ್ತು ಹಣಕಾಸು ಸಚಿವರ ಜತೆ ಚರ್ಚೆ ನಡೆಸಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ಸಚಿನ್‌ಮೀಗಾ ತಿಳಿಸಿದರು.ತಾಲ್ಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯ ನಿರ್ಮಿಸುತ್ತಿರುವ ನಫೀಷಾ-ಶಫೀಷಾ ಶಾದಿ ಮಹಲ್‌ಗೆ  ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ಅವರ ಸಂಸದರ ಅನುದಾನದಲ್ಲಿ ಮೂರು ಲಕ್ಷ ಹಣದ ಚೆಕ್ ವಿತರಿಸಿ ಅವರು ಮಾತನಾಡಿದರು.ಸಾಲ ಮಾಡಿದ ರೈತರಿಗೆ ಸಾಲ ವಸೂಲಿಗಾಗಿ ಬ್ಯಾಂಕ್ ಸಿಬ್ಬಂದಿ ಜಮೀನು ಹರಾಜು, ಬಲವಂತ ವಸೂಲು ಕಾರಣದಿಂದಾಗಿ ರೈತರು ಆತ್ಯಹತ್ಯೆಕೊಳ್ಳುತ್ತಿದ್ದಾರೆ. ತರೀಕೆರೆ ತಾಲ್ಲೂಕಿನಲ್ಲಿ 33ಜನ ರೈತರು, ಕೊಪ್ಪ, ಶೃಂಗೇರಿ ಮತ್ತು ಎನ್.ಆರ್.ಪುರದಲ್ಲಿ 52, ಚಿಕ್ಕಮಗಳೂರು ತಾಲ್ಲೂಕಿನಲ್ಲಿ 61, ಕಡೂರು ತಾಲ್ಲೂಕಿನಲ್ಲಿ 36 ಮತ್ತು ಮೂಡಿಗೆರೆ ತಾಲ್ಲೂಕಿನಲ್ಲಿ 22 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಂಕಿ ಅಂಶ ನೀಡಿದರು.ಕೇಂದ್ರ ಸರ್ಕಾರವು  ಅಡಿಕೆ ಪ್ಯಾಕೇಜ್ ಅನ್ನು ಅನುಷ್ಠಾನಗೊಳಿಸುವವರೆಗೆ ರಾಷ್ಟ್ರೀಕೃತ ಹಾಗೂ ಗ್ರಾಮೀಣ ಬ್ಯಾಂಕುಗಳು ಅಡಿಕೆ ಬೆಳೆಗಾರ ರೈತರಿಂದ ಬಲತ್ಕಾರ ವಸೂಲು ಮತ್ತು ಅವರ ಆಸ್ತಿ ಹರಾಜು ಪ್ರಕ್ರಿಯೆಗೆ ತಡೆ ನೀಡುವಂತೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಆತ್ಮಹತ್ಯೆ ಮಾಡಿಕೊಂಡ ರೈತರ ವಿವರ ನೀಡುವಂತೆ ಸೂಚಿಸಿದ್ದರ ಮೇರೆಗೆ ಇದೇ  14ರಂದು ನ್ಯಾಯಾಲಯಕ್ಕೆ ವಿವರ ಒದಗಿಸಲಾಗುವುದು ಎಂದರು.ಮಾಜಿ ಶಾಸಕ ಟಿ.ಎಚ್.ಶಿವಶಂಕರಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಪಿ.ಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯ ಎಲ್.ಎ.ಅನ್ಬು ಬ್ಲಾಕ್ ಕಾಂಗ್ರೆಸ್ ಅಬ್ದುಲ್ ಘನಿ ಅನ್ವರ್, ಕಾಂಗ್ರೆಸ್ ಮುಖಂಡರಾದ ಆರ್.ಮಂಜುನಾಥ್, ಜಿ.ಎಚ್. ಶ್ರೀನಿವಾಸ್, ಶಾಂತವೀರಪ್ಪ, ಅಮ್ಜದ್‌ಖಾನ್, ಶಾದಿ ಮಹಲ್ ಕಮಿಟಿ ಮುಖಂಡರಾದ ಸಯ್ಯದ್, ಖಲೀಂ, ಎ.ಜಿ.ಶಿರಾಜ್, ಶಬ್ಬೀರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry