ಮಂಗಳವಾರ, ನವೆಂಬರ್ 19, 2019
23 °C

`ಅಡಿಕೆ ಬೆಳೆಗಾರರಿಗೆ ಶೀಘ್ರ ಪ್ಯಾಕೇಜ್ ಘೋಷಣೆ'

Published:
Updated:

ಶಿವಮೊಗ್ಗ: ಅಡಿಕೆ ಬೆಳೆಗಾರರಿಗೆ ಸದ್ಯದಲ್ಲೇ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡುವ ಬಗ್ಗೆ ಪ್ರಧಾನ ಮಂತ್ರಿ ಮನಮೋಹನ್‌ಸಿಂಗ್ ಭರವಸೆ ನೀಡಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.ಕೇಂದ್ರದ ಸಚಿವರಾದ ಆಸ್ಕರ್ ಫರ್ನಾಂಡಿಸ್, ಕೆ.ಎಚ್. ಮುನಿಯಪ್ಪ ಅವರನ್ನು ಒಳಗೊಂಡ ರಾಜ್ಯದ 9 ಸಂಸತ್ ಸದಸ್ಯರ ನಿಯೋಗ ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರನ್ನು ಮಂಗಳವಾರ ಭೇಟಿ ಮಾಡಿ, ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಭರವಸೆ ನೀಡಿದರು ಎಂದರು.ಸಾಲಮನ್ನಾ ಸಾಧ್ಯತೆಗಳನ್ನು ಪ್ರಧಾನಿ ಅವರು ಅಲ್ಲಗಳೆದಿದ್ದು, ಪ್ಯಾಕೇಜ್ ಘೋಷಿಸುವ ಬಗ್ಗೆ ಸಹಮತ ವ್ಯಕ್ತಪಡಿಸಿದರು. ಹಾಗೆಯೇ, ಕೃಷಿ ಸಚಿವ ಶರದ್ ಪವಾರ್ ಕೂಡ ಈ ಬಗ್ಗೆ ವಿವರವಾದ ಪ್ರಸ್ತಾವ ಕಳುಹಿಸಲು ಸೂಚಿಸಿದ್ದಾರೆ. ಅಲ್ಲದೇ, ವಿದೇಶಗಳಿಂದ ಕಳ್ಳ ಸಾಗಾಣೆಯಲ್ಲಿ ಬರುವ ಕಡಿಮೆ ದರ್ಜೆಯ ಅಡಿಕೆಗೆ ಆಮದು ಶುಲ್ಕ ಹೇರುವಂತೆ ಕೋರಿ ಕೈಗಾರಿಕಾ ಮತ್ತು ವಾಣಿಜ್ಯ ಸಚಿವ ಆನಂದಶರ್ಮ ಅವರಿಗೂ ಮನವಿ ಮಾಡಲಾಯಿತು. ಈ ಎಲ್ಲರಿಂದಲೂ ಆಶಾದಾಯಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.ಇದು ಪಕ್ಷಾತೀತ ನಿಯೋಗ. ರೈತರ ಹಿತದೃಷ್ಟಿಯಿಂದ ಎಲ್ಲಾ ಪಕ್ಷಗಳು ಒಟ್ಟು ಸೇರಿ ಮಾಡಿದ ಪ್ರಯತ್ನ ಎಂದು ಅವರು ಹೇಳಿದರು.

ಈ ಹಿಂದೆ ತಾವು ಗೋರಕ್‌ಸಿಂಗ್ ವರದಿಯನ್ನು ಭಾಗಶಃ ವಿರೋಧಿಸಿದ್ದು ನಿಜ. ಈಗಲೂ ಅದಕ್ಕೆ ಬದ್ಧವಾಗಿದ್ದು, ಸಾಂಪ್ರದಾಯಿಕ ಅಡಿಕೆ ಬೆಳೆಗಾರರ ದೃಷ್ಟಿಯಿಂದ ಅ ವರದಿ ಅನುಷ್ಠಾನಗೊಳ್ಳಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್, ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ, ಪದಾಧಿಕಾರಿಗಳಾದ ಎಸ್. ದತ್ತಾತ್ರಿ, ಡಿ.ಎಸ್. ಅರುಣ್, ಎಚ್.ಸಿ. ಬಸವರಾಜಪ್ಪ, ಮಹೇಂದ್ರಪ್ಪ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)