ಅಡಿಕೆ ಬೆಳೆಗಾರರ ಮೊಗದಲ್ಲಿ ಸಂತಸ

ಶನಿವಾರ, ಜೂಲೈ 20, 2019
28 °C

ಅಡಿಕೆ ಬೆಳೆಗಾರರ ಮೊಗದಲ್ಲಿ ಸಂತಸ

Published:
Updated:

ತೀರ್ಥಹಳ್ಳಿ: ನಡುಗಾಲದ ಮಳೆ ಬಿಡುವು ನೀಡಿದ್ದರಿಂದ ಅಡಿಕೆ ಬೆಳೆಗಾರರಲ್ಲಿ ಸಂತಸ ಮೂಡಿಸಿದೆ. ಅಡಿಕೆ ಬೆಳೆಗೆ ಇನ್ನಿಲ್ಲದಂತೆ ಕಾಡುವ ಕೊಳೆರೋಗ ನಿಯಂತ್ರಣಕ್ಕೆ ಬೋರ್ಡೊದ್ರಾವಣ ಸಿಂಪಡಿಸಲು ಇಂದು ರೈತರು ನಾಮುಂದು ತಾಮುಂದು ಎಂದು ಮುಂದಾಗಿರುವುದರಿಂದ ಅಡಿಕೆ ಮರವನೇರಿ ಔಷಧಿ ಸಿಂಪಡಿಸುವ ಕುಶಲಕರ್ಮಿಗಳಿಗೆ ಇನ್ನಿಲ್ಲದ ಬೇಡಿಕೆ ನಿರ್ಮಾಣವಾಗಿದೆ.

ವಿಸ್ತಾರಗೊಳ್ಳುತ್ತಿರುವ ಅಡಿಕೆ ತೋಟಗಳಿಗೆ ಕಡಿಮೆ ಸಂಖ್ಯೆಯಲ್ಲಿ ಇರುವ ಕುಶಲಕರ್ಮಿಗಳು ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ಬೆಳಗಾಗುತ್ತಿದ್ದಂತೆಯೇ ಔಷಧಿ ಸಿಂಪಡಿಸುವ ಕೊನೆಗಾರರ (ಕುಶಲಕರ್ಮಿಗಳ) ಮನೆಗಳಿಗೆ ಎಡತಾಕುವ ರೈತರು ಬಗೆಬಗೆಯಲ್ಲಿ ಮಳೆ ಬಿಡುವಿನ ವೇಳೆ ಔಷಧಿ ಸಿಂಪಡಿಸಲು ಕೊನೆಗಾರರನ್ನು ಒತ್ತಾಯಿಸುತ್ತಿದ್ದಾರೆ.

ಬಹಳ ಸೂಕ್ಷ್ಮ ಮತ್ತು ಜಾಗರೂಕತೆಯಿಂದ ಅಡಿಕೆ ಮರವನೇರಿ ಔಷಧಿ ಸಿಂಪಡಿಸುವ ಕೆಲಸ ಮಾಡಬೇಕಿದ್ದರಿಂದ ಅನುಭವಿ ಕುಶಲಕರ್ಮಿಗಳಿಗೆ ಬೇಡಿಕೆ ಹೆಚ್ಚು. ಅಂಥ ಕೊನೆಗಾರರನ್ನು ಹೇಗಾದರೂ ಮಾಡಿ ಮಳೆ ಇಲ್ಲದ ವಾತಾವರಣದಲ್ಲಿ ಔಷಧಿ ಸಿಂಪಡಿಸಿಕೊಂಡು ಬೆಳೆಯನ್ನು ಕೊಳೆರೋಗದಿಂದ ಉಳಿಸಿಕೊಳ್ಳುವ ತವಕ ರೈತರದ್ದು.

ಕಳೆದ ಒಂದು ವಾರದಿಂದ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮಳೆ ಕಡಿಮೆಯಾಗಿದೆ. ಮಲೆನಾಡಿನಲ್ಲಿ ಎಡೆಬಿಡದೇ ಮಳೆ ಸುರಿದರೆ ಕೊಳೆರೋಗದ ನಿಯಂತ್ರಣ ಕಷ್ಟಸಾಧ್ಯದ ಕೆಲಸ. ತಾಲ್ಲೂಕಿನ ಆಗುಂಬೆ ಭಾಗದ ರೈತರು ಕೊಳೆ ರೋಗ ಕಾಣದೇ ಬೆಳೆಯನ್ನು ಉಳಿಸಿಕೊಂಡ ಉದಾಹರಣೆಗಳು ಕಡಿಮೆ. ಈ ಭಾಗದ ರೈತರು ಬೆಳೆ ಉಳಿಸಿಕೊಳ್ಳಲು ಕನಿಷ್ಠ ಮೂರು, ನಾಲ್ಕು ಬಾರಿ ಔಷಧಿ ಸಿಂಪಡಿಸಬೇಕು. ಹಾಗಾಗಿ, ಇಂಥ ಮಳೆ ಬಿಡುವಿನ ವಾತಾವರಣವನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಹಜವಾಗಿಯೇ ಮುಂದಾಗುತ್ತಿದ್ದಾರೆ.

ಕೊಳೆರೋಗ ನಿಯಂತ್ರಣಕ್ಕೆ ಈಗ ಹಲವು ಮಾದರಿಯ ಔಷಧಿ ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಸುಮಾರು ನೂರು ವರ್ಷಗಳ ಹಿಂದೆ ಬ್ರಿಟಿಷ್ ವಿಜ್ಞಾನಿ ಕೋಲ್‌ಮನ್ ಕಂಡುಹಿಡಿದ ಬೋರ್ಡೋದ್ರಾವಣ ಪರಿಣಾಮಕಾರಿಯಾಗಿ ಉಳಿದಿದೆ. ತೋಟಗಾರಿಕಾ ಇಲಾಖೆ ಕೂಡ ಇದನ್ನೇ ಕೊಳೆರೋಗದ ನಿಯಂತ್ರಣಕ್ಕೆ ಬಳಸಲು ಶಿಫಾರಸು ಮಾಡುತ್ತದೆ. ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಗಟಾರ್‌ಯಂತ್ರ (ಕೈಪಂಪ್) ಈಗ ಕಡಿಮೆ ಆಗುತ್ತಿದೆ. ಔಷಧಿ ಸಿಂಪಡಿಸಲು ಈಗ ಯಂತ್ರಗಳು ಲಭ್ಯವಿದೆ. ಮರವನೇರಲೂ ಯಂತ್ರಗಳು ಲಭ್ಯವಿದ್ದರೂ ಅದರ ಬಳಕೆ ತೀರಾಕಡಿಮೆ. ಹಾಗಾಗಿ, ಅಡಿಕೆ ಮರವನ್ನೇರಿ ಔಷಧಿ ಸಿಂಪಡಿಸಲು ಕೊನೆಗಾರರನ್ನೇ ಸಾಮಾನ್ಯವಾಗಿ ರೈತರು ನಂಬಿಕೊಂಡಿದ್ದಾರೆ.

ಅಡಿಕೆ ತೋಟಗಳು ವಿಸ್ತಾರವಾದಂತೆ ಕೊನೆ ಕೀಳುವ, ಔಷಧಿ ಸಿಂಪಡಿಸುವ ಕುಶಲಕರ್ಮಿಗಳ ಸಂಖ್ಯೆ ಹೆಚ್ಚಾಗಲಿಲ್ಲ. ಕೆಲವು ಕುಟುಂಬಗಳು ಮಾತ್ರ ಈ ಉದ್ಯೋಗವನ್ನು ಪಾರಂಪರಿಕವಾಗಿ ಉಳಿಸಿಕೊಂಡು ಬಂದಿವೆ. ಕೆಲಸ ಮಾಡುವಾಗ ಸಂಭವಿಸುವ ಅಪಘಾತಗಳಿಗೆ ಮ್ಯಾಮ್ಕೊಸ್ ಸಂಸ್ಥೆ ವಿಮೆ ಸೌಲಭ್ಯವನ್ನು ಒದಗಿಸಿದೆ. ಕೊನೆ ಕಸುಬು ಮಾಡುವ ಕುಶಲಕರ್ಮಿಗಳಿಗೆ ತರಬೇತಿ ನೀಡಿ ಪ್ರೊತ್ಸಾಹಿಸುತ್ತಿದೆ.

ಬತ್ತದ ಗದ್ದೆಗಳು, ಹಕ್ಲು, ಬಯಲು, ಗುಡ್ಡಗಳು ಕ್ರಮೇಣ ಅಡಿಕೆ ತೋಟಗಳಾಗಿ ಪರಿವರ್ತನೆ ಆಗುವ ಸಂದರ್ಭದಲ್ಲಿ ಅತ್ಯಂತ ಶ್ರಮದಾಯಕ ಹಾಗೂ ಜಾಣ್ಮೆಯ ಕೆಲಸವಾಗಿ ಉಳಿದಿರುವ ಕೊನೆಗಾರರ ಸಂಖ್ಯೆ ಕಡಿಮೆ ಇರುವುದು ಅಡಿಕೆ ಬೆಳೆಗಾರರ ಸಮಸ್ಯೆ ಹೆಚ್ಚಿಸಿದೆ.

ಸಹಾಯಧನದ ಮೈಲುತುತ್ತಕ್ಕೆ ಅರ್ಜಿ

ತೀರ್ಥಹಳ್ಳಿ: ಅಡಿಕೆ ಕೊಳೆರೋಗಕ್ಕೆ ಸಿಂಪಡಿಸಲು ಬೋರ್ಡೋದ್ರಾವಣಕ್ಕೆ ಬಳಸುವ ಮೈಲುತುತ್ತವನ್ನು ರಿಯಾಯಿತಿ ದರದಲ್ಲಿ ವಿತರಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತೀರ್ಥಹಳ್ಳಿ ತೋಟಗಾರಿಕಾ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿಯಲ್ಲಿ ಸಮಗ್ರ ರೋಗ ಪೀಡೆ ನಿರ್ವಹಣೆ ಕಾರ್ಯಕ್ರಮದಲ್ಲಿ ರೈತರು ನೇರವಾಗಿ ಮೈಲುತುತ್ತ ಖರೀದಿಸಿ ಶೇ 50ರ ಸಹಾಯಧನದಲ್ಲಿ ಪ್ರತಿ ಫಲಾನುಭವಿಗೂ ಗರಿಷ್ಠ 1 ಸಾವಿರ (ಹೆಕ್ಟೇರ್‌ಗೆ) ವರೆಗೆ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯ ಮಾರ್ಗ ಸೂಚಿಯಂತೆ ಸಹಾಯಧನವನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ ಐಸಿಎಸ್/ಎನ್‌ಇಎಸ್‌ಟಿ ಮುಖಾಂತರ ಜಮಾ ಮಾಡಲಾಗುವುದು. ಅನುದಾನ ಲಭ್ಯವಿರುವ ವರೆಗೂ ಅರ್ಜಿ ಸ್ವೀಕರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಜುಲೈ 9ರಿಂದ ಸಂಬಂಧಿಸಿದ ಕಸಬಾ ಹಾಗೂ ಆಗುಂಬೆ ಹೋಬಳಿ ರೈತರು ಪಟ್ಟಣದ ಕುಶಾವತಿಯಲ್ಲಿರುವ ಹಿರಿಯ ಸಹಾಯಕ ತೋಟಗಾರಿಕಾ ಇಲಾಖಾ ಕಚೇರಿ, ಅಗ್ರಹಾರ ಹೋಬಳಿ ರೈತರು ಕೋಣಂದೂರಿನ ರೈತ ಸಂಪರ್ಕ ಕೇಂದ್ರ, ಮಂಡಗದ್ದೆ ಹೋಬಳಿ ರೈತರು ತೂದೂರು ರೈತ ಸಂಪರ್ಕ ಕೇಂದ್ರ, ಮುತ್ತೂರು ಹೋಬಳಿ ರೈತರು ದೇವಂಗಿ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry