ಅಡಿಕೆ ಬೆಳೆ ನಿಷೇಧ ವಿರುದ್ಧ ನಿರ್ಣಯಕ್ಕೆ ಆಗ್ರಹ

7

ಅಡಿಕೆ ಬೆಳೆ ನಿಷೇಧ ವಿರುದ್ಧ ನಿರ್ಣಯಕ್ಕೆ ಆಗ್ರಹ

Published:
Updated:
ಅಡಿಕೆ ಬೆಳೆ ನಿಷೇಧ ವಿರುದ್ಧ ನಿರ್ಣಯಕ್ಕೆ ಆಗ್ರಹ

ಉಡುಪಿ: ಅಡಿಕೆ ಬೆಳೆಯನ್ನು ನಿಷೇಧಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿಲ್ಲ. ಆದರೂ ಕೆಲವರು ರಾಜಕೀಯ ಪ್ರೇರಿತರಾಗಿ ಅನಗತ್ಯವಾಗಿ ಗೊಂದಲ ಮೂಡಿಸಲು ಯತ್ನಿಸು­ತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ನಾಯಕ ಅನಂತ ಮೊವಾಡಿ ಹೇಳಿದರು.ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ರಜತಾದ್ರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಸದಸ್ಯ ಕಟಪಾಡಿ ಶಂಕರ ಪೂಜಾರಿ ಅವರು, ಅಡಿಕೆ ಬೆಳೆ ನಿಷೇಧದ ಬಗ್ಗೆ ಮಾತನಾಡಿ, ಅಡಿಕೆ ಬೆಳೆಯನ್ನು ನಿಷೇಧಿಸುವ ಪ್ರಸಾಪ ಕೇಂದ್ರ ಸರ್ಕಾರದ ಮುಂದಿದೆ ಎಂಬ ವಿಷಯ ಚರ್ಚೆಯಲ್ಲಿದೆ. ರೈತರ ಹಿತದೃಷ್ಟಿಯಿಂದ ಅಡಿಕೆ ಬೆಳೆಯನ್ನು ನಿಷೇಧಿಸುವುದರ ವಿರುದ್ಧ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಸದಸ್ಯ ಮಂಜುನಾಥ ಪೂಜಾರಿ, ಅಡಿಕೆಯನ್ನು ನಿಷೇಧ ಮಾಡಲಾ­ಗುತ್ತದೆ ಎಂದು ಸರ್ಕಾರ ಹೇಳಿಲ್ಲ. ಕೇಂದ್ರ ಆರೋಗ್ಯ ಸಚಿವರೇ ಅಡಿಕೆಯನ್ನು ನಿಷೇಧ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದಾಗ್ಯೂ ಕೆಲವರು ಅನಗತ್ಯವಾಗಿ ರೈತರಲ್ಲಿ ಗೊಂದಲ ಮೂಡಿಸಿ ಭಯ ಉಂಟು ಮಾಡು­ತ್ತಿದ್ದಾರೆ ಎಂದರು.ಅಡಿಕೆ ಬೆಳೆ ನಿಷೇಧದ ವಿರುದ್ಧ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಅಧ್ಯಕ್ಷ ಉಪೇಂದ್ರ ನಾಯಕ್‌ ತಿಳಿಸಿದರು. ಮಂಗಗಳಿಂದ ಆಗುವ ಬೆಳೆ ಹಾನಿಗೆ ಪರಿಹಾರ ನೀಡದಿರುವ ಬಗ್ಗೆ ಚರ್ಚೆ ನಡೆಯಿತು. ಮಂಗಗಳ ಉಪಟಳದಿಂದ ಜನರು ತೋಟಗಾರಿಕಾ ಬೆಳೆಗಳನ್ನು ಕೈಬಿಡುತ್ತಿದ್ದಾರೆ ಎಂದು ಸದಸ್ಯರು ಕೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಮಂಗಗಳ ಹಾವಳಿಯಿಂದ ನಷ್ಟವಾದರೆ ಪರಿಹಾರ ನೀಡಲು ಅವಕಾಶ ಇಲ್ಲ ಎಂದರು.‘ಮಂಗಗಳೂ ಕಾಡು ಪ್ರಾಣಿಗಳಾಗಿರುವುದರಿಂದ ಪರಿಹಾರ ನೀಡಬೇಕು ಎಂಬ ನಿರ್ಣಯ ಕೈಗೊಳ್ಳಬೇಕು’ ಎಂದು ಉಪಾಧ್ಯಕ್ಷೆ ಮಮತಾ ಆರ್‌ ಶೆಟ್ಟಿ ಹೇಳಿದರು. ನಮೂನೆ 9 ಮತ್ತು 11ರ ನಿಯಮವನ್ನು ಸರಳ ಮಾಡಿದ್ದರೂ ಇನ್ನೂ ಹಲವು ಗೊಂದಲಗಳಿವೆ ಎಂದು ಸದಸ್ಯರು ಹೇಳಿದರು. ಈ ಬಗ್ಗೆ ಸ್ಪಷ್ಟನೆ ಪಡೆಯಲು ತೀರ್ಮಾನಿಸಲಾಯಿತು.ಸ್ಥಾಯಿ ಸಮಿತಿ ಅಧ್ಯಕ್ಷರಾದ ಉದಯ ಎಸ್ ಕೋಟ್ಯಾನ್, ಗಣಪತಿ ಟಿ. ಶ್ರೀಯಾನ್, ಅರುಣ್ ಶೆಟ್ಟಿ ಪಾದೂರು, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಸ್‌.ಎ. ಪ್ರಭಾಕರ ಶರ್ಮಾ, ಉಪ ಕಾರ್ಯದರ್ಶಿ ಡಿ. ಪ್ರಾಣೇಶ್‌ ರಾವ್‌, ಮುಖ್ಯ ಯೋಜನಾಧಿಕಾರಿ ವಿಜಯ್‌ ಕುಮಾರ್‌ ಶೆಟ್ಟಿ, ಮುಖ್ಯ ಲೆಕ್ಕಾಧಿಕಾರಿ ತಿಮ್ಮಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry