ಶುಕ್ರವಾರ, ಜನವರಿ 24, 2020
17 °C
ಮಲೆನಾಡಿನ ರೈತರ ಆತಂಕದ ಪ್ರಶ್ನೆ

ಅಡಿಕೆ: ಮತ್ತೆ ಅಧ್ಯಯನ ಏಕೆ?

ಪ್ರಜಾವಾಣಿ ವಾರ್ತೆ/ ಪ್ರಕಾಶ ಕುಗ್ವೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ:  ಅಡಿಕೆ ದುಷ್ಪರಿಣಾಮದ ಬಗ್ಗೆ ಅಧ್ಯಯನ ನಡೆಸುವಂತೆ ಕೇಂದ್ರ ಆರೋಗ್ಯ ಇಲಾಖೆ, ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ಬರೆದ ಪತ್ರ, ಮಲೆನಾಡಿನಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಅಡಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದು, ನೆಮ್ಮದಿಯ ನಿದ್ದೆ ಹಾರಿ ಹೋಗಿದೆ.ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ; ಅಡಿಕೆಯಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ ಎಂಬುದು ಹಲವಾರು ಸಂಶೋಧನೆಗಳಿಂದ ದೃಢಪಟ್ಟಿದ್ದರೂ, ಮತ್ತೇಕೆ ಅಧ್ಯಯನ? ಎಂದು ಬೆಳೆಗಾರರು ಪ್ರಶ್ನಿಸುತ್ತಿದ್ದಾರೆ. ಈ ಮಧ್ಯೆ ಅಡಿಕೆ ಬೆಳೆಯನ್ನೇ ಕೇಂದ್ರ ಸರ್ಕಾರ ನಿಷೇಧಿಸಲು ಹೊರಟಿದೆ ಎಂಬ ವ್ಯವಸ್ಥಿತ ಅಪಪ್ರಚಾರ ಆರಂಭವಾಗಿದ್ದು, ಬೆಳೆಗಾ­ರರು ದಿಕ್ಕೇ ತೋಚದಂತಾಗಿದ್ದಾರೆ.ರಾಜ್ಯದಲ್ಲಿ 1,50,000 ಹೆಕ್ಟೇರ್‌ ಪ್ರದೇಶದಲ್ಲಿ 2 ಲಕ್ಷ ಟನ್‌ ಅಡಿಕೆ ಉತ್ಪಾದನೆಯಾಗುತ್ತಿದೆ. ದೇಶದ ಒಟ್ಟು ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ಅಗ್ರಸ್ಥಾನದಲ್ಲಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 20 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಆದರೆ, ಅಡಿಕೆ ಬೆಳೆಗಾರರು ಮಾತ್ರ ಸಮಸ್ಯೆಗಳಿಂದ ಮುಕ್ತವಾಗಿಲ್ಲ.ಅಡಿಕೆಯನ್ನು ಕಾಡುವ ವಿವಿಧ ರೋಗಗಳು, ಕೂಲಿಕಾರ್ಮಿಕರ ಕೊರತೆ, ಏರುತ್ತಿರುವ ಉತ್ಪಾದನಾ ವೆಚ್ಚ ಮತ್ತಿತರರ ಸಮಸ್ಯೆಗಳ ವಿಷವಿರ್ತುಲ­ದಲ್ಲಿ ಅಡಿಕೆ ಬೆಳೆಗಾರರು ಬಂದಿ­ಯಾಗಿದ್ದಾರೆ. ಇವುಗಳ ಮಧ್ಯೆ ಈಗ ಅಡಿಕೆ ಆರೋಗ್ಯಕ್ಕೆ ಹಾನಿ ಎಂಬ ವಿಷಯದ ಚರ್ಚೆ, ಅಡಿಕೆ ಬೆಳೆಗಾರರನ್ನು ಚಿಂತಾಕ್ರಾಂತರನ್ನಾಗಿಸಿದೆ.ರಂಗಕರ್ಮಿ ಕೆ.ವಿ.ಸುಬ್ಬಣ್ಣ ಹೇಳಿದಂತೆ ಅಡಿಕೆಯ ಮಾನ ಕಳೆದ ಗುಟ್ಕಾವನ್ನು ರಾಜ್ಯ ಸರ್ಕಾರ ಈ ವರ್ಷ ನಿಷೇಧಿಸಿದರೂ ಅಷ್ಟಾಗಿ ತಲೆಕೆಡಿಸಿ­ಕೊಳ್ಳದ ಬೆಳೆಗಾರರು, ಕೇಂದ್ರ ಆರೋಗ್ಯ ಇಲಾಖೆಯ ಈ  ಆದೇಶ ನಂತರ ಈಗ ಮುಂದೇನು? ಎಂದು ಯೋಚಿಸುತ್ತಿದ್ದಾರೆ.2007ರಲ್ಲಿ ಇದೇ ರೀತಿ ಅಡಿಕೆ ಬೆಳೆ ಬಗ್ಗೆ ಅನುಮಾನ ವ್ಯಕ್ತವಾದಾಗ ಈ ಭಾಗದ ಅಡಿಕೆ ಬೆಳೆಗಾರರು ಹೈಕೋರ್ಟ್ ಮೊರೆ ಹೋಗಿದ್ದರು. ಅದೇ ವರ್ಷ ಏಪ್ರಿಲ್ 4ರಂದು ನ್ಯಾಯಾಧೀಶ ಎಚ್‌.ವಿ.ಜಿ.ರಮೇಶ್‌, ಅಡಿಕೆ ಹಾನಿಕಾರವಲ್ಲ; ಅಡಿಕೆ ಜಗಿಯುವುದರಿಂದ ಅನೇಕ ರೋಗಗಳು ವಾಸಿಯಾಗುತ್ತವೆ ಎಂದು ತೀರ್ಪು ನೀಡಿದ್ದರು. ಇದಕ್ಕೆ ಅವರು ಅಡಿಕೆ ಬಗ್ಗೆ ನಡೆದ ಹಲವು ವೈಜ್ಞಾನಿಕ ಸಂಶೋಧನೆಗಳನ್ನು ಉಲ್ಲೇಖಿಸಿ ತೀರ್ಪು ನೀಡಿದ್ದರು.ಇದಕ್ಕೂ ಮೊದಲು 2004ರಲ್ಲಿ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅಡಿಕೆ ಹಾನಿಕರ ಎಂಬ ಹುಯಿಲು ಎದ್ದಾಗ ಅಂದಿನ ಆರೋಗ್ಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ, ಮೈಸೂರು ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐಎಂ) ಪರೀಕ್ಷೆಗೆ ಅಡಿಕೆ ಕಳುಹಿಸಿದ್ದರು. ಅಡಿಕೆ ಹಾನಿಕಾರಕವಲ್ಲ ಎಂದು ಆ ಸಂಸ್ಥೆ ವರದಿ ನೀಡಿತ್ತು. ಅದರ ಪ್ರಕಾರ, ಪ್ರತಿ 100ಗ್ರಾಂ ಅಡಿಕೆಯಲ್ಲಿ ಕಾರ್ಬೋಹೈಡ್ರೇಟ್‌ 46.2 ಗ್ರಾಂ, ಪ್ರೋಟೀನ್‌ 4.2ಗ್ರಾಂ, ಫ್ಯಾಟ್ 4.2ಗ್ರಾಂ, ಕ್ಯಾಲ್ಸಿಯಂ 48 ಮಿ.ಗ್ರಾಂ., ಫಾಸ್ಪರಸ್‌ 111 ಮಿ.ಗ್ರಾಂ, ಕಬ್ಬಿಣಾಂಶ 1.4 ಮಿ.ಗ್ರಾಂ, ವಿಟಮಿನ್‌ ಎ, ವಿಟಮಿನ್‌ ಬಿ6 ಅಂಶಗಳಿವೆ. ಹಾಗೆಯೇ, ಟಿ.ಎಂ.ಎ. ಪೈ ಔಷಧ ಸಂಶೋಧನಾ ಕೇಂದ್ರ 2000ರಲ್ಲಿ ಸಂಶೋಧನೆ ನಡೆಸಿ ಅಡಿಕೆ ಜತೆ ಬೆಲ್ಲ, ಎಣ್ಣೆ ಮಿಶ್ರಣ ಮಾಡಿ ಗಾಯಕ್ಕೆ ಹಚ್ಚಿದರೆ ಬೇಗ ವಾಸಿಯಾಗುತ್ತದೆ ಎಂಬುದನ್ನೂ ಕಂಡುಕೊಳ್ಳಲಾಗಿದೆ. 1982ರಲ್ಲಿ ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಮನುಷ್ಯನ ನರ ವ್ಯವಸ್ಥೆಯನ್ನು ಹೆಚ್ಚು ಚಟುವಟಿಕೆಯಿಂದ ಇಡಲು ಅಡಿಕೆ ಸಹಾಯ ಮಾಡುತ್ತದೆ ಎಂದು ವರದಿ ನೀಡಿದೆ. 1969ರಲ್ಲೇ ಬ್ರಿಟಿಷ್‌ ವೈದ್ಯ ಡಾ.ಅಮಾನ್‌, ಅಡಿಕೆಯಲ್ಲಿ ಮಲಬದ್ಧತೆ ನಿವಾರಿಸುವ, ಮೂತ್ರಪಿಂಡದ ಕಲ್ಲು ಕರಗಿಸುವ, ಕಾಮಾಲೆ ಹೋಗಲಾಡಿಸುವ ಗುಣಗಳಿವೆ ಎಂದು ಹೇಳಿದ್ದರು.ಮಧುಮೇಹ, ರಕ್ತದೊತ್ತಡ, ಬಾಯಿ ಹುಣ್ಣು, ವಸಡುಗಳ ವೃಣ, ತುರಿ, ಕಜ್ಜಿ, ಬಾಯಿಯ ದುರ್ಗಂಧ, ದಂತಕ್ಷಯ, ಬಾಣಂತಿಯರು ಮತ್ತು ಗರ್ಭಿಣಿಯರ ಆರೈಕೆಗೆ ಬೇಕಾಗುವ ಔಷಧಗಳನ್ನು ಅಡಿಕೆಯಿಂದ ತಯಾರಿಸಬಹುದು ಎಂಬ ವರದಿಗಳಿವೆ.‘ರೋಗದ ಹೆಸರಿನ ಮೂಲಕ ನಾಟಿ ವೈದ್ಯ ಪದ್ಧತಿಯಿಂದ ತಯಾರಿಸುವ ನಿರ್ದಿಷ್ಟ  ಹೆಸರಿಲ್ಲದ ಹಲವು ರೀತಿಯ ಅಡಿಕೆಯ ಔಷಧೀಯ ಉತ್ಪನ್ನಗಳು ಹಿಂದೆ ಪ್ರಚಲಿತದಲ್ಲಿದ್ದವು. ಅಡಿಕೆಯಲ್ಲಿ ದಿಢೀರನೆ ಹೆಚ್ಚಿದ ಗುಟ್ಕಾ ಸಂಸ್ಕೃತಿಯಿಂದ ಇದರ ವೈವಿಧ್ಯತೆಗೆ ಪೆಟ್ಟು ಬಿತ್ತು’ ಎನ್ನುತ್ತಾರೆ ನವಿಲೆ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಅಡಿಕೆ ಸಂಶೋಧನಾ ಕೇಂದ್ರದ ಆರ್ಥಿಕ ಸಾಮಾಜಿಕ ಮತ್ತು ಮೌಲ್ಯವರ್ಧನೆ ಸಹ ಮುಖ್ಯ ಸಂಶೋಧಕ ಡಾ.ಎಂ.ಎಸ್‌.ವಿಘ್ನೇಶ್‌.

ಪ್ರತಿಕ್ರಿಯಿಸಿ (+)