ಅಡಿಕೆ ಸಿಪ್ಪೆಯಲ್ಲಿ ಬಗೆಬಗೆ ಬೆಳೆ!

7

ಅಡಿಕೆ ಸಿಪ್ಪೆಯಲ್ಲಿ ಬಗೆಬಗೆ ಬೆಳೆ!

Published:
Updated:

ಕರಾವಳಿಯ ಗೋಟಡಿಕೆ ಬೆಳೆಗಾರರು ಮಳೆಗಾಲದಲ್ಲಿ ಖಾಲಿಬಿದ್ದ ಅಂಗಳದಲ್ಲಿ ಅಡಿಕೆ ಸಿಪ್ಪೆಯನ್ನು ಉಪಯೋಗಿಸಿ ಅಲಸಂದೆ, ಹೀರೇಕಾಯಿ, ಬೆಂಡೆ, ಸೌತೆ, ಇತ್ಯಾದಿ ತರಕಾರಿಗಳನ್ನು ಬೆಳೆದು ಅಂಗಳವನ್ನು ಸದುಪಯೋಗ ಮಾಡುವುದರ ಜೊತೆ ಉತ್ತಮ ಲಾಭಗಳಿಸಬಹುದು ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ವಿಟ್ಲಪಡ್ನೂರು ಗ್ರಾಮದ ಪ್ರಗತಿಪರ ಕೃಷಿಕ ಮೇಘಶ್ಯಾಮ ಅಂಗ್ರಿ.ಅಡಿಕೆ ಬೆಳೆಗಾರರಾದ ಇವರು ಹಲವಾರು ವರ್ಷಗಳಿಂದ ಮುಂಗಾರು ಮಳೆ ಬಿದ್ದ ತಕ್ಷಣ ತಮ್ಮ ಅಂಗಳದಲ್ಲಿ ಅಡಿಕೆ ಸಿಪ್ಪೆಯನ್ನು ಉಪಯೋಗಿಸಿ ಹಲವು ನಮೂನೆಯ ತರಕಾರಿಗಳನ್ನು ಬೆಳೆಸುತ್ತಿದ್ದು, ಈ ವರ್ಷ ಸುಮಾರು 400 ಹೀರೇಕಾಯಿ ಬಳ್ಳಿಗಳನ್ನು ಬೆಳೆಸಿ ಉತ್ತಮ ಫಸಲು ಪಡೆಯುತ್ತಿದ್ದಾರೆ. ಇವರು ತಮ್ಮ ಅಂಗಳದಲ್ಲಿ ಆರು ಅಡಿ ಅಂತರದಲ್ಲಿ ಎರಡು ಅಡಿ ಅಗಲಕ್ಕೆ ಅಡಿಕೆ ಸಿಪ್ಪೆಯನ್ನು ಸುಮಾರು ಒಂದು ಅಡಿ ದಪ್ಪದ ಸಾಲುಗಳನ್ನು ಮಾಡಿ ಮೇಲೆ ಫಲವತ್ತಾದ ಮಣ್ಣು ಹಾಗೂ ಸುಡುಮಣ್ಣು ಹರಡಿ ಸಾಲು ಮಡಿಗಳನ್ನು ನಿರ್ಮಿಸಿ ಬೀಜ ಬಿತ್ತಿರುವರು.ಬೀಜ ಮೊಳಕೆಯೊಡೆದು ಸಸಿಯಾದ ಕೂಡಲೇ ಹಟ್ಟಿಗೊಬ್ಬರ ಕೊಟ್ಟು ರೋಗಕೀಟಗಳಿಂದ ಪಾರಾಗಲು ಸಸಿಗಳಿಗೆ ಎರಡು ದಿವಸಕ್ಕೊಮ್ಮೆ ಸಾವಯವ ರೀತಿಯಲ್ಲಿ ತಯಾರಿಸಿದ ಕ್ರಿಮಿನಾಶಕ ಪಂಚಗವ್ಯ ಹಾಗೂ ಇತರ ಔಷಧಿಗಳನ್ನೂ ಸಿಂಪಡಿಸಿರುತ್ತಾರೆ. ಹೀರೇಕಾಯಿ ಸಸ್ಯವು ಬಳ್ಳಿಬಿಟ್ಟು ಮೇಲೆ ಹಬ್ಬಲು ಪ್ರಾರಂಭವಾದ ಕೂಡಲೇ ಗಟ್ಟಿಯಾದ ಕಂಬಗಳನ್ನು ಕೊಟ್ಟು, ಪ್ಲಾಸ್ಟಿಕ್ ಹಗ್ಗ ಹಾಗೂ ಸರಿಗೆಗಳನ್ನು ಉಪಯೋಗಿಸಿ ವಿಶಿಷ್ಟ ರೀತಿಯಲ್ಲಿ ಸುಮಾರು ಏಳೂವರೆ ಅಡಿ ಎತ್ತರಕ್ಕೆ ಚಪ್ಪರ ನಿರ್ಮಿಸಿರುತ್ತಾರೆ. ಪ್ರತಿ ವಾರ ಬುಡಕ್ಕೆ ಉತ್ತಮ ಮಣ್ಣು, ಗೊಬ್ಬರ, ಬಗ್ಗಡ, ಸುಡುಮಣ್ಣು ಮತ್ತಿತರ ರಸಗೊಬ್ಬರಗಳನ್ನು ಹದವರಿತು ನೀಡುವುದರಿಂದ ಬಳ್ಳಿ ಚೆನ್ನಾಗಿ ಹಬ್ಬಿ ಬೇಗನೆ ಹೂವು ಬಿಟ್ಟು ಕಾಯಿಕಚ್ಚಲು ಸಹಾಯಕ ಎನ್ನುತ್ತಾರೆ ಅವರು.ನಾಟಿಮಾಡಿ 25 ರಿಂದ 30 ದಿವಸಗಳಲ್ಲಿ ಹೂವು ಬಿಡಲು ಪ್ರಾರಂಭವಾಗುವ ಹೀರೇಕಾಯಿ ಬಳ್ಳಿಗಳಲ್ಲಿ ಮೊದಲು ಗಂಡುಹೂವುಗಳು ಕಂಡುಬಂದು ನಂತರ ಹೆಣ್ಣುಹೂವುಗಳಿಂದ ಕಾಯಿಕಚ್ಚಲು ಪ್ರಾರಂಭವಾಗುತ್ತದೆ. ಹೀರೆಕಾಯಿ ಸಸ್ಯವು ನಾಟಿ ಮಾಡಿದ ಒಂದೂವರೆ ತಿಂಗಳಲ್ಲಿ ಫಲಬಿಡಲು ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ 45 ದಿವಸದಲ್ಲಿ ತರಕಾರಿ ಕಟಾವಿಗೆ ಬರುತ್ತದೆ. ಪ್ರತೀ ಎರಡು ದಿವಸಕ್ಕೊಮ್ಮೆ ಕೊಯ್ಲು ಮಾಡಿ ಹತ್ತಿರದ ಮಾರುಕಟ್ಟೆಗೆ ಸಾಗಿಸುತ್ತಾರೆ.ಮೂರು ತಿಂಗಳ ಬೆಳೆಯಾದ ಹೀರೇಕಾಯಿಯನ್ನು ಜೂನ್‌ನಲ್ಲಿ ಬೀಜ ನಾಟಿ ಮಾಡಿದರೆ ಡಿಸೆಂಬರ್‌ವರೆಗೂ ಉತ್ತಮ ಇಳುವರಿ ಪಡೆಯಬಹುದು ಎನ್ನುತ್ತಾರೆ ಅವರು.

ಸದಾ ಉತ್ಸಾಹ ಹಾಗೂ ಕ್ರಿಯಾತ್ಮಕ ಮನೋಭಾವದ ಇವರು ತಮ್ಮ ಕೃಷಿ ಭೂಮಿಯಲ್ಲಿ ನೇಂದ್ರಬಾಳೆ ಗಿಡಗಳನ್ನು ಸಾಕಿ ಉತ್ತಮ ಇಳುವರಿ ಪಡೆದಿರುವರು. ಹೈನುಗಾರಿಕೆಯಲ್ಲಿಯೂ ತೊಡಗಿಸಿಕೊಂಡಿರುವ ಇವರು ರಾಸುಗಳ ಮೇವಿಗಾಗಿ ಉತ್ತಮ ಜಾತಿಯ ಹುಲ್ಲನ್ನೂ ಬೆಳೆಸಿರುವರು. ಇದಲ್ಲದೇ ಹವಾಮಾನಕ್ಕೆ ಅನುಗುಣವಾಗಿ ಹಲವಾರು ತರಕಾರಿಗಳನ್ನೂ ಬೆಳೆಯುತ್ತಿದ್ದಾರೆ. ಇವರ ಕೃಷಿಯ ಎಲ್ಲ ಚಟುವಟಿಕೆಗಳಿಗೆ ಇವರ ಪತ್ನಿ ಉಷಾ ತಮ್ಮ ಸಂಪೂರ್ಣ ಸಹಕಾರ ಹಾಗು ಪ್ರೋತ್ಸಾಹ ನೀಡುತ್ತಿದ್ದು ಸ್ಫೂರ್ತಿಯಾಗಿದ್ದಾರೆ.ಸಿಪ್ಪೆಯಿಂದ ಹಿಡಿದು ಎಲ್ಲವೂ ತರಕಾರಿಯಾಗಿ ಅಡುಗೆಯಲ್ಲಿ ಬಳಸಲ್ಪಡುವ ಬಹಳ ರುಚಿಯಾದ ಹೀರೇಕಾಯಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹಾಗೂ ದರವಿದೆ. ಬೇಡಿಕೆಗನ್ವಯ ಕಿಲೋ ಒಂದರ ರೂ. 10 - 15 ದರ ಇದೆ. ಪ್ರತೀ ಎರಡು ದಿವಸಕ್ಕೊಮ್ಮೆ ಮಾರುಕಟ್ಟೆಗೆ ಒಯ್ಯುವ ಇವರು ಉತ್ತಮ ಆದಾಯ ಪಡೆಯುತ್ತಿದ್ದಾರೆ.ಅಡಿಕೆ ಸಿಪ್ಪೆಯನ್ನು ಬಳಸುವುದರಿಂದ ತರಕಾರಿ ಗಿಡಗಳಿಗೆ ಉತ್ತಮ ಗೊಬ್ಬರವೂ ದೊರೆಯುತ್ತದೆ ಮತ್ತು ಉತ್ತಮ ಗಾತ್ರದ ಇಳುವರಿಯನ್ನೂ ಹೊಂದಬಹುದು. ಈ ರೀತಿ `ಕಸದಿಂದ ರಸ' ಎಂಬಂತೆ ಅಡಿಕೆ ಬೆಳೆಗಾರರು ತಮ್ಮಲ್ಲಿರುವ ಅಡಿಕೆ ಸಿಪ್ಪೆಯನ್ನು ಬಳಸಿಕೊಂಡು ಹಲವಾರು ತರಕಾರಿಗಳನ್ನು ಬೆಳೆಸಿ ಸದುಪಯೋಗಪಡಿಸಿಕೊಳ್ಳುವುದರ ಜೊತೆ ಉತ್ತಮ ಲಾಭವನ್ನೂ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ- 9196638748

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry