ಭಾನುವಾರ, ಜನವರಿ 19, 2020
28 °C

ಅಡಿಕೆ ‘ದುಷ್ಪರಿಣಾಮ’: ಅಧ್ಯಯನಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡಿಕೆ ‘ದುಷ್ಪರಿಣಾಮ’: ಅಧ್ಯಯನಕ್ಕೆ ಸೂಚನೆ

ಬೆಂಗಳೂರು: ಅಡಿಕೆ ತಿನ್ನುವುದರಿಂದ ಹಾಗೂ ಯಾವುದೇ ಆಹಾರ ಉತ್ಪನ್ನದಲ್ಲಿ ಬಳಸುವುದ­ರಿಂದ ಆಗಬಹುದಾದ ದುಷ್ಪರಿಣಾಮ­ಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿ ವರದಿ ನೀಡುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.ಆರೋಗ್ಯ ಇಲಾಖೆ ನಿರ್ದೇಶಕ ಅಮಲ್‌ ಪುಷ್ಪ್‌ ಅವರು ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದ ನಿರ್ದೇಶಕಿ ಡಾ.ಸಂಧ್ಯಾ ಕಾಬ್ರಾ ಅವರಿಗೆ ಪತ್ರ ಬರೆದು, ಅಡಿಕೆ ಹಾನಿಕಾರಕ ಎನ್ನುವುದರ ಬಗ್ಗೆ ವೈಜ್ಞಾನಿಕ ಸಾಕ್ಷ್ಯಗಳೇನಾದರೂ ಇವೆಯೇ ಎನ್ನುವುದನ್ನು ಪತ್ತೆ ಮಾಡಲು ತಿಳಿಸಿದ್ದಾರೆ. 2006ರ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಕಾಯ್ದೆಯ ಪ್ರಕಾರ ಯಾವುದೇ ಆಹಾರ ಪದಾರ್ಥ­ದಲ್ಲಿ ಅಡಿಕೆಯನ್ನು ಬಳಸಿದರೆ ಜನರ ಆರೋಗ್ಯದ ಮೇಲೆ ಏನಾದರೂ ದುಷ್ಪರಿಣಾಮ­­ವಾಗಬಹುದೇ ಎನ್ನುವುದನ್ನೂ ಪರಿಶೀಲಿಸಲು ಕೇಳಿಕೊಳ್ಳಲಾಗಿದೆ.‘ತಂಬಾಕು ಹಾಗೂ ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಸುಪ್ರೀಂಕೋರ್ಟ್‌ಗೆ ಇಲಾಖೆ 2011ರಲ್ಲಿ ಸಲ್ಲಿಸಿದ ವರದಿಯ ಹಿನ್ನೆಲೆಯಲ್ಲಿ ಕೋರ್ಟ್‌ ಸಲಹೆಯಂತೆ ಸಭೆ ನಡೆಸಲಾಗಿದೆ’ ಎಂದು ಪುಷ್ಪ್‌ ಅವರು ಕಾಬ್ರಾ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.ಪ್ರಮಾಣ ಪತ್ರದಲ್ಲಿ ಏನಿದೆ?: ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ಅಧ್ಯಯನದ ಆಧಾರದ ಮೇಲೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ‘ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕರ’ ಎಂದು ಹೇಳಲಾಗಿದೆ.‘ಅಡಿಕೆ ಸೇವನೆಯಿಂದ ಬಾಯಿ ಕ್ಯಾನ್ಸರ್‌, ಅನ್ನನಾಳದ ಕ್ಯಾನ್ಸರ್‌, ಗಂಟಲು ಕ್ಯಾನ್ಸರ್‌, ಕರುಳು ಕ್ಯಾನ್ಸರ್‌, ನಪುಂಸಕತ್ವ ಬರುತ್ತದೆ. ಹೃದ್ರೋಗ, ನರದೌರ್ಬಲ್ಯ, ಮಧುಮೇಹ, ಅತಿ ತೂಕ, ಮಾನಸಿಕ ಅಸ್ವಸ್ಥತೆ, ಮೂತ್ರಪಿಂಡ ಕಾಯಿಲೆ ಬರುತ್ತದೆ ಎಂದು ಭಾರತ ಮತ್ತು ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ನಡೆಸಲಾದ ಸಂಶೋಧನೆ­ಯಿಂದ ದೃಢಪಟ್ಟಿದೆ’ ಎಂದು ವರದಿ ಹೇಳಿದೆ.ಇದೇ ಮೊದಲಲ್ಲ: ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬ ವರದಿ ಬರುತ್ತಿರುವುದು ಇದೇ ಮೊದ­ಲಲ್ಲ. ಅಡಿಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲು ಅಟಲ್‌ ಬಿಹಾರಿ ವಾಜ­ಪೇಯಿ ಸರ್ಕಾರ 2002ರಲ್ಲಿ ಆಗಿನ ರಾಷ್ಟ್ರೀಯ ತೋಟಗಾರಿಕೆ ಆಯುಕ್ತ ರತ್ನಂ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಅದು ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದೇ ವರದಿ ನೀಡಿತ್ತು.ಸುಪ್ರೀಂಕೋರ್ಟ್‌ಗೆ ಅಡಿಕೆ ಬೆಳೆಗಾರರು: ಅಡಿಕೆ ತಿನ್ನುವುದರಿಂದ ಕ್ಯಾನ್ಸರ್‌ ಬರುವುದಿಲ್ಲ ಎಂದು ನವದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾ­ಲಯದ ಜೀವ ವಿಜ್ಞಾನ ಸಂಸ್ಥೆಯ ಕ್ಯಾನ್ಸರ್‌ ಜೀವವಿಜ್ಞಾನ ಪ್ರಯೋಗಾಲಯ ನಡೆಸಿದ ಸಂಶೋಧನಾ ವರದಿ ಯನ್ನು ಆಧಾರವಾಗಿರಿಸಿ­ಕೊಂಡು ಸುಪ್ರೀಂಕೋರ್ಟ್‌ ಮೊರೆ ಹೋಗಲಾ­ಗುತ್ತದೆ. ಸೋಮವಾರ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಲಾಗು­ವುದು ಎಂದು ಕಿಸಾನ್‌ ಖೇತ್‌ ಮಜ್ದೂರ್ ಕಾಂಗ್ರೆಸ್‌ ಉಪಾಧ್ಯಕ್ಷ ಸಚಿನ್‌ ಮೀಗಾ ತಿಳಿಸಿದ್ದಾರೆ.ಏನಿದು ಪ್ರಕರಣ?

ಅಂಕುರ್‌ ಗುಟ್ಕಾ ಮತ್ತು ಆಸ್ತಮಾ ಸೊಸೈಟಿ ಆಫ್‌ ಇಂಡಿಯಾ ನಡುವಿನ ಪ್ರಕರಣ ಇದು. ಗುಟ್ಕಾ ಆರೋಗ್ಯಕ್ಕೆ ಹಾನಿಕರ ಎಂದು ಆಸ್ತಮಾ ಸೊಸೈಟಿ ಜೈಪುರ ಹೈಕೋರ್ಟ್‌ನಲ್ಲಿ 2008ರಲ್ಲಿ ಪ್ರಕರಣ ದಾಖಲು ಮಾಡಿತ್ತು. ನಂತರ ಈ ಪ್ರಕರಣ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತು. ಆಗ ಕೋರ್ಟ್‌, ‘ಗುಟ್ಕಾ, ಪಾನ್‌ ಮಸಾಲ, ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿ ವರದಿ ನೀಡುವಂತೆ’ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನು ಕೇಳಿಕೊಂಡಿತು.

2011ರ ಮಾರ್ಚ್‌ನಲ್ಲಿ ಆರೋಗ್ಯ ಇಲಾಖೆ ಸುಮಾರು 3 ಸಾವಿರ ಪುಟಗಳ 3 ಸಂಪುಟಗಳ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತು. ಮೊದಲ ಸಂಪುಟದಲ್ಲಿ ಗುಟ್ಕಾ, ಪಾನ್‌ ಮಸಾಲ, ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ವಿವರಿಸಲಾಗಿದೆ. ಇದನ್ನು ಪರಿಗಣಿಸಿದ ನ್ಯಾಯಾಲಯ ಗುಟ್ಕಾ ನಿಷೇಧಿಸಿದೆ.

ಎರಡನೇ ಸಂಪುಟದಲ್ಲಿ ಅಡಿಕೆ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿವರಗಳಿವೆ. ದೇಶದಲ್ಲಿ ಗುಟ್ಕಾ ನಿಷೇಧಿಸಿದ ನಂತರ ಗುಟ್ಕಾ ಕಂಪೆನಿಗಳು ಪಾನ್‌ ಮಸಾಲ ಮತ್ತು ತಂಬಾಕನ್ನು ಬೇರೆ ಬೇರೆಯಾಗಿ ಮಾರಾಟ ಮಾಡುತ್ತಿರುವ ಬಗ್ಗೆ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ಮುಂದುವರಿಯುತ್ತಿದೆ. ಜನವರಿ ಮೊದಲ ವಾರದಲ್ಲಿ ಈ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ಬರಲಿದೆ.

 

ಸಿಗರೇಟ್‌ ಕಂಪೆನಿಗಳ ಲಾಬಿ

‘ಹಲವು ಶತಮಾನ­ಗಳಿಂದಲೂ ಭಾರತ­ದಲ್ಲಿ ಅಡಿಕೆ ಸೇವನೆ ಮಾಡ­ಲಾಗು­ತ್ತಿದೆ. ಇದು ನಮ್ಮ ಸಂಸ್ಕೃತಿಯ ಒಂದು ಭಾಗ­ವಾಗಿದೆ. ಗುಟ್ಕಾ ಚಾಲ್ತಿಗೆ ಬಂದ ನಂತರ ದೇಶದಲ್ಲಿ ಸಿಗರೇಟ್‌ ವ್ಯಾಪಾರ ಕಡಿಮೆ­ಯಾಗಿದೆ. ಇದರಿಂದ ಅಡಿಕೆ ನಿಷೇಧ ಮಾಡಿ­ಸಲು ಸಿಗರೇಟ್‌ ಲಾಬಿ ಕೆಲಸ ಮಾಡುತ್ತಿದೆ’ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸ­ದಾನಂದ ಗೌಡ, ಕಾಂಗ್ರೆಸ್‌ ಮುಖಂಡ ಸಚಿನ್‌ ಮೀಗಾ ಅಭಿಪ್ರಾಯಪಡುತ್ತಾರೆ.

ಪ್ರತಿಕ್ರಿಯಿಸಿ (+)