ಮಂಗಳವಾರ, ಮಾರ್ಚ್ 9, 2021
29 °C

ಅಡಿಪಾಯಕ್ಕೆ ಜೆಸಿಬಿ ಅಗೆತ

ಬಿ.ವಿ.ಎಂ.ಸಿ Updated:

ಅಕ್ಷರ ಗಾತ್ರ : | |

ಅಡಿಪಾಯಕ್ಕೆ ಜೆಸಿಬಿ ಅಗೆತ

ಹಳ್ಳಿಗಳಲ್ಲಿ ಹೊಲ ಗದ್ದೆಯಲ್ಲಿ ಕೆಲಸ ಮಾಡಲು ಕೂಲಿ ಕಾರ್ಮಿಕರ ಕೊರತೆ ಇರಬಹುದು. ಆದರೆ, ನಗರ, ಪಟ್ಟಣ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ವಿಭಾಗದಲ್ಲಿನ ಅಗತ್ಯ ಕೆಲಸಗಳಿಗೆ ಕಾರ್ಮಿಕರು ದಂಡಿಯಾಗಿ ದೊರಕುತ್ತಾರೆ!ಗ್ರಾಮೀಣ ಭಾಗದ ಶ್ರಮಜೀವಿಗಳಲ್ಲಿ ಬಹಳಷ್ಟು ಮಂದಿ ನೆರೆಹೊರೆಯ ನಗರ ಪಟ್ಟಣಗಳಿಗೆ ಹೆಚ್ಚಿನ ಕೂಲಿಯ ಕೆಲಸಗಳನ್ನು ಅರಸಿ ಹೋಗುತ್ತಲೇ ಇದ್ದಾರೆ. ಉತ್ತರ ಕರ್ನಾಟಕದಂತಹ ದೂರ ಪ್ರದೇಶಗಳಿಂದಲೂ ಬೆಂಗಳೂರಿ, ಮಂಗಳೂರು ಕಡೆಗೆ ಹೆಚ್ಚಿನ ದುಡಿಮೆಯ ಆಸೆಯಿಂದ ವಲಸೆ ಬರುವವರ ಸಂಖ್ಯೆಯೂ ದೊಡ್ಡದೇ ಇದೆ. ಇಂತಹವರಲ್ಲಿ ಬಹಳಷ್ಟು ಮಂದಿಗೆ ತಕ್ಷಣಕ್ಕೆ ದೊರಕುವ ಕೆಲಸ ಎಂದರೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಭೂಮಿ ಅಗೆಯುವುದು, ಮಣ್ಣು ಹೊರುವುದು, ಇಟ್ಟಿಗೆ ಸಾಗಿಸುವುದು, ಕ್ರಾಂಕೀಟ್‌ ಮಿಶ್ರಣ ಮಾಡುವುದು, ಗೋಡೆಗಳಿಗೆ ನೀರು ಹೊಯ್ಯುವುದು, ಕಡೆಗೆ ಏನಿಲ್ಲವೆಂದರೂ ಕಟ್ಟಡ ನಿರ್ಮಾಣದ ಜಾಗದಲ್ಲಿ ಕಾವಲು ಕಾಯುವುದು... ಇಂತಹ ಕೆಲಸಗಳೇ ಕಾಯುತ್ತಿರುತ್ತವೆ.ಆದರೆ, ಇತ್ತೀಚೆಗೆ ಯಂತ್ರಗಳೂ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸುತ್ತಿರುವುದರಿಂದ ಈ ಶ್ರಮಜೀವಿಗಳಿಗೆ ಕೆಲವು ಕೆಲಸಗಳು ಕೈಬಿಟ್ಟುಹೋಗುತ್ತಿವೆ. ಅಂತಹುದರಲ್ಲಿ ಮೊದಲನೆಯದು ಅಡಿಪಾಯಕ್ಕಾಗಿ ಭೂಮಿ ಅಗೆಯುವ ಕೆಲಸ.

ನಿವೇಶನ ಚಿಕ್ಕದಿರಲಿ, ದೊಡ್ಡದಿರಲಿ ಅಡಿಪಾಯಕ್ಕಾಗಿ ಭೂಮಿ ಅಗೆಯಲು ‘ಜೆಸಿಬಿ’ಗಳ ಬಳಕೆ ಹೆಚ್ಚುತ್ತಿದೆ. ವೇಗವಾಗಿ ಕೆಲಸ ಆಗಬೇಕು ಎಂಬುದೇ ಇದಕ್ಕೆ ಕಾರಣ.ಅಡಿಪಾಯದ ಕಲ್ಲು ಕಟ್ಟಡ ಕಟ್ಟಲು ಎರಡೂವರೆಯಿಂದ ಮೂರು ಅಡಿ ಅಗಲ ಮತ್ತು ಆಳವಾಗಿ ಭೂಮಿ ಅಗೆತ ಮಾಡಬೇಕು. ಏನಿಲ್ಲವೆಂದರೂ ಇದು 30 ಅಡಿ ಅಗಲ, 40 ಅಡಿ ಉದ್ದದ ನಿವೇಶನದಲ್ಲಿ (10 ಚದರಡಿ ಕಟ್ಟಡಕ್ಕೆ) 130ರಿಂದ 150 ಅಡಿಗಳಷ್ಟು ಉದ್ದದವರೆಗೂ ಅಗೆಯಬೇಕು. ಅಲ್ಲದೇ, ನಿವೇಶನದ ಒಂದು ಮೂಲೆಯಲ್ಲಿ ನೆಲದಡಿಯ ನೀರು ಸಂಗ್ರಹ ತೊಟ್ಟಿಗಾಗಿ (ಸಂಪ್‌) ಆರರಿಂದ ಏಳು ಅಡಿ ಆಳ, 10 ಅಡಿ ಉದ್ದ ಮತ್ತು ಕನಿಷ್ಠ ನಾಲ್ಕು ಅಡಿ ಅಗಲವಾಗಿ ಅಗೆತ ಮಾಡಿಸಬೇಕು ಎನ್ನುತ್ತಾರೆ ಮೈಸೂರಿನ ಕಟ್ಟಡ ನಿರ್ಮಾಣ ಗುತ್ತಿಗೆದಾರ ಹೊನ್ನೇಗೌಡ.ಇಬ್ಬರು ದೃಢಕಾಯ ವ್ಯಕ್ತಿಗಳು ದಿನದಲ್ಲಿ 7ರಿಂದ 8 ಗಂಟೆ ಕಾಲ ಹಾರೆ, ಗುದ್ದಲಿಗಳ ಜತೆ ಶ್ರಮಿಸಿದರೆ 30 ಅಡಿ ಅಗಲ, 40 ಅಡಿ ಉದ್ದದ ನಿವೇಶನದಲ್ಲಿ ತಳಪಾಯಕ್ಕೆ ಭೂಮಿ ಅಗೆಯಲು ಕನಿಷ್ಠ ನಾಲ್ಕರಿಂದ ಐದು ದಿನವಾದರೂ ಬೇಕು. ಆದರೆ, ಇಷ್ಟೇ ಕೆಲಸವನ್ನು ಒಂದು ಮಧ್ಯಮ ಗಾತ್ರದ ಜೆಸಿಬಿ ಯಂತ್ರ ಕೇವಲ ನಾಲ್ಕು ಗಂಟೆಗಳಲ್ಲಿ ಪೂರೈಸಿಕೊಡುತ್ತದೆ ಎಂಬುದು ಅವರ ಅನುಭವ ಮಾತು.

ಇದಕ್ಕಾಗಿ ಖರ್ಚಾಗುವ ಹಣದಲ್ಲೂ ಅಂತಹ ವ್ಯತ್ಯಾಸವೇನಿಲ್ಲ ಎನ್ನುತ್ತಾ ಲೆಕ್ಕದ ಪುಸ್ತಕವನ್ನು ಮುಂದಿಡುತ್ತಾರೆ.ಒಬ್ಬ ಕೂಲಿಕಾರ್ಮಿಕನಿಗೆ ದಿನಕ್ಕೆ ₨250ರಂತೆ ಇಬ್ಬರು ಕಾರ್ಮಿಕರು  ಐದರಿಂದ ಆರು ದಿನಗಳ ಕಾಲ ಕೆಲಸ ಮಾಡಿದರೆ ಒಟ್ಟು ₨2,000ರಿಂದ ₨2,500ದಷ್ಟು ಕೂಲಿ ಕೊಡಬೇಕಾಗುತ್ತದೆ. ‘ಜೆಸಿಬಿ’ ಯಂತ್ರದಲ್ಲಿ ಇದೇ ಕೆಲಸ ಮಾಡಿಸಲು ಗಂಟೆಗೆ ₨650ರಿಂದ ₨700ರಷ್ಟು ಬಾಡಿಗೆ ಇದೆ. ನಾಲ್ಕು ಗಂಟೆಗಳಿಗಾದರೆ ಕನಿಷ್ಠ ₨2,600ರಿಂದ ಗರಿಷ್ಠ ₨2,800ದಷ್ಟಾಗುತ್ತದೆ. ಅಂದರೆ, ವೆಚ್ಚದ ವಿಚಾರಕ್ಕೆ ಬಂದರೆ ‘ಜೆಸಿಬಿ’ಯಲ್ಲಿನ ಕೆಲಸ ಸ್ವಲ್ಪವೇ ದುಬಾರಿ ಎನಿಸುತ್ತದೆ. ಆದರೆ, ನಮಗೆ ಬಹಳ ವೇಗವಾಗಿ ಕೆಲಸವಾಗುತ್ತದೆ. ಇಲ್ಲಿ ಅದುವೇ ಬಹಳ ಮುಖ್ಯವಾದ ಸಂಗತಿ ಎನ್ನುತ್ತಾರೆ.ಆದರೆ, ಜೆಸಿಬಿ ಬಳಕೆಯಿಂದ ಅಡಿಪಾಯ ಅಗೆಯುವ ಕೆಲಸ ಎಲ್ಲಿಯೂ ಕಾರ್ಮಿಕರಿಗೆ ದೊರೆಯುತ್ತಿಲ್ಲ ಎಂದು ಹೇಳುವಂತಿಲ್ಲ. ‘ಜೆಸಿಬಿ’ ಕೆಲಸ ಏನಿದ್ದರೂ ಹೊಸ ಬಡಾವಣೆಗಳಲ್ಲಿ, ಅದೂ ಅಕ್ಕಪಕ್ಕದಲ್ಲಿ ಖಾಲಿ ನಿವೇಶನಗಳಿದ್ದೆಡೆ ಮಾತ್ರ ಸರಾಗ ಸಾಗುತ್ತದೆ. ಮೂರೂ ದಿಕ್ಕಿನಲ್ಲೂ ಕಟ್ಟಡಗಳಿದ್ದರೆ ಅಂತಹ ಇಕ್ಕಟ್ಟಿನ ಜಾಗದಲ್ಲಿ ‘ಜೆಸಿಬಿ’ಗೆ ಪ್ರವೇಶವೇ ಇರದು. ಅಲ್ಲೇನಿದ್ದರೂ ಮಾನವ ಶಕ್ತಿಯ ಮೇಲೆಯೇ ಅವಲಂಬನೆ. ಹಾಗಾಗಿ, ಈಗಲೂ ಅಡಿಪಾಯಕ್ಕೆ ಭೂಮಿ ಅಗೆಯುವ ಕೆಲಸಗಳು ಕೂಲಿ ಕಾರ್ಮಿಕರಿಗೆ ಅಲ್ಲಲ್ಲಿ ಲಭಿಸುತ್ತಲೇ ಇವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.