ಅಡುಗೆ ಅನಿಲಕ್ಕೆ ಮೀಟರ್ ಸಂಖ್ಯೆ ತೊಂದರೆ ಸರಿಪಡಿಸಲು ಕ್ರಮ

7

ಅಡುಗೆ ಅನಿಲಕ್ಕೆ ಮೀಟರ್ ಸಂಖ್ಯೆ ತೊಂದರೆ ಸರಿಪಡಿಸಲು ಕ್ರಮ

Published:
Updated:

ಬೆಂಗಳೂರು: ಪಡಿತರ ಚೀಟಿಯ ಬೆರಳಚ್ಚು ಪ್ರತಿಯೊಂದಿಗೆ ಅಡುಗೆ ಅನಿಲ ಸಂಪರ್ಕ ಮತ್ತು ವಿದ್ಯುತ್ ಮೀಟರ್ ಸಂಖ್ಯೆ ನೀಡುವುದನ್ನು ಕಡ್ಡಾಯ ಮಾಡಿರುವುದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಕೂಡಲೇ ಈ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಯುವ ಕಾಂಗ್ರೆಸ್ ಮತ್ತು ಮಾಜಿ ಮೇಯರ್‌ಗಳ ನಿಯೋಗ ಆಹಾರ ಮತ್ತು ನಾಗರಿಕ ಸರಬರಾಜು ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಗುರುವಾರ ಮನವಿ ಮಾಡಿದೆ.ವಿದ್ಯುತ್ ಮೀಟರ್‌ನ ಆರ್.ಆರ್.ಸಂಖ್ಯೆ ಮತ್ತು ಪಡಿತರ ಚೀಟಿಯನ್ನು ಅಡುಗೆ ಅನಿಲ ಪೂರೈಸುವ ಏಜೆನ್ಸಿಗಳಿಗೆ ನೀಡದೆ ಇದ್ದರೆ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಕಡಿತ ಮಾಡಲಾಗುತ್ತದೆ ಎಂಬ ಇಲಾಖೆಯ ಆದೇಶದಿಂದ ಜನ ಆತಂಕಗೊಂಡಿದ್ದಾರೆ. ಎಪಿಎಲ್ ಕಾರ್ಡ್‌ಗಳಿಗೆ ಆಹಾರ ಧಾನ್ಯಗಳನ್ನು ನೀಡದ ಕಾರಣ ಸಾವಿರಾರು ಜನ ಪಡಿತರ ಚೀಟಿಗಳನ್ನು ನವೀಕರಿಸಿಕೊಂಡಿಲ್ಲ.ಈ ಮಧ್ಯೆ ಗ್ರಾಹಕರಿಂದ ಆರ್.ಆರ್.ಸಂಖ್ಯೆ ಮತ್ತು ಪಡಿತರ ಚೀಟಿಗಳನ್ನು ಪಡೆದುಕೊಂಡು ಸಂಬಂಧಪಟ್ಟವರಿಗೆ ತಲುಪಿಸುತ್ತೇವೆ ಎನ್ನುವ ಏಜೆನ್ಸಿಗಳೂ ಹುಟ್ಟಿಕೊಂಡಿವೆ. ಓದು- ಬರಹ ಬಾರದ ಗ್ರಾಹಕರೂ ಇದ್ದಾರೆ. ಅವರೆಲ್ಲ ಸರ್ಕಾರದ ಈ ಕ್ರಮದಿಂದ ಆತಂಕಗೊಂಡಿದ್ದಾರೆ ಎಂದು ನಿಯೋಗದ ನೇತೃತ್ವ ವಹಿಸಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ರಾಮಚಂದ್ರಪ್ಪ ಮನವರಿಕೆ ಮಾಡಿಕೊಟ್ಟರು.ನಕಲಿ ಪಡಿತರ ಚೀಟಿಗಳು ಇರುವ ಬಗ್ಗೆ ದಾಖಲೆಗಳು ಇದ್ದರೆ ಇಲಾಖೆಯ ಅಧಿಕಾರಿಗಳ ಮೂಲಕವೇ ಪತ್ತೆಹಚ್ಚಿ, ರದ್ದುಪಡಿಸಲು ಅಭ್ಯಂತರವಿಲ್ಲ. ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಬೇಕು. ಒಂದು ವೇಳೆ ಸಿಬ್ಬಂದಿ ಕೊರತೆ ಇದ್ದರೆ ಖಾಸಗಿಯವರಿಗೆ ಇದರ ಜವಾಬ್ದಾರಿ ವಹಿಸಿ ಎಂದು ಆಗ್ರಹಿಸಿದರು.ಈ ಸಮಸ್ಯೆ ಗಂಭೀರವಾಗಿದ್ದು, ಕೂಡಲೇ ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ಕಾಂಗ್ರೆಸ್ ಉಗ್ರ ಹೋರಾಟ ನಡೆಸಲಿದೆ ಎಂದು ಅವರು ಎಚ್ಚರಿಸಿದರು. ಮಾಜಿ ಮೇಯರ್‌ಗಳಾದ ಜೆ.ಹುಚ್ಚಪ್ಪ, ಕೆ.ಎಚ್.ಎನ್.ಸಿಂಹ, ಯುವ ಕಾಂಗ್ರೆಸ್‌ನ ನಗರ ಘಟಕದ ಅಧ್ಯಕ್ಷ ಮನೋಹರ ಮೊದಲಾದವರು ನಿಯೋಗದಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry