ಶನಿವಾರ, ಮೇ 15, 2021
22 °C

ಅಡುಗೆ ಅನಿಲ ಟ್ಯಾಂಕರ್ ಪಲ್ಟಿ: ಸಂಚಾರ ಅಸ್ತವ್ಯಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಮಂಗಳೂರಿನಿಂದ ಕುಣಿಗಲ್ ಸಮೀಪದ ಸೋಲೂರಿಗೆ ಅಡುಗೆ ಅನಿಲವನ್ನು ಸಾಗಿಸುತ್ತಿದ್ದ ಟ್ಯಾಂಕರ್ ಆಲೂರು ತಾಲ್ಲೂಕು ಸಮೀಪದ  ಹೊಳೆತಿಮ್ಮನಹಳ್ಳಿಯಲ್ಲಿ ಮಂಗಳವಾರ ಪಲ್ಟಿಯಾದ ಪರಿಣಾಮ ಅನಿಲ ಸೋರಿಕೆಯಾಗಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿ ಆಯಿತು. ಈ ಸಂದರ್ಭದಲ್ಲಿ ಟ್ಯಾಂಕರ್‌ನ ತಳಭಾಗದಲ್ಲಿ ತೂತಾಗಿ ಅನಿಲ ಸೋರಿಕೆ ಆರಂಭವಾಯಿತು.ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಇತರ ವಾಹನಗಳು ಸಮೀಪ ಬಾರದಂತೆ ತಡೆದರು. ಘಟನಾ ಸ್ಥಳದ 100 ಮೀಟರ್ ಸುತ್ತಮುತ್ತಲಿನ ಮನೆಯವರು ಅಡುಗೆ ಇತ್ಯಾದಿ ಕೆಲಸಕ್ಕೆ ಬೆಂಕಿ ಹಚ್ಚದಂತೆ ಸೂಚನೆ ನೀಡಲಾಯಿತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮವಾಗಿ ಸತತವಾಗಿ ನೀರು ಸುರಿಯಲು ಆರಂಭಿಸಿದರು. ಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಮುಂಜಾನೆಯಿಂದಲೇ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಯಿತು.ಅನಿಲ ಸೋರಿಕೆಯಾಗುತ್ತಿದ್ದರೂ ಅದನ್ನು ನಿಯಂತ್ರಿಸಲು ಭಾರತ್ ಗ್ಯಾಸ್‌ನ ಸೋಲೂರು ಘಟಕದಿಂದ ಎಂಜಿನಿಯರ್‌ಗಳನ್ನು ಕರೆಸಬೇಕಾಗಿತ್ತು. ಮಧ್ಯಾಹ್ನ  3 ಗಂಟೆ ಸುಮಾರಿಗೆ ಎಂಜಿನಿಯರ್‌ಗಳಾದ ರಾಜೀವ್, ಕರಿಯಪ್ಪ ಹಾಗೂ ಬನಾತ್ ಫರ್ನಾಂಡಿಸ್ ಸ್ಥಳಕ್ಕೆ ಬಂದು ಸೋರಿಕೆಯನ್ನು ತಡೆದರು. ಆದರೆ ರಾತ್ರಿಯವರೆಗೂ ಟ್ಯಾಂಕರನ್ನು ಎತ್ತಿ ನಿಲ್ಲಿಸಲು ಸಾಧ್ಯವಾಗಲಿಲ್ಲ. ರಸ್ತೆಗೆ ಅಡ್ಡವಾಗಿ ಟ್ಯಾಂಕರ್ ಬಿದ್ದಿದ್ದರಿಂದ ಇತರ ವಾಹನಗಳು ಸಂಚರಿಸಲೂ ಆಗದಂಥ ಸ್ಥಿತಿ ನಿರ್ಮಾಣವಾಗಿತ್ತು.ವಾಹನಗಳನ್ನು ಸಂಚಾರವನ್ನು ನಿರ್ಬಂಧಿಸಿದ್ದರಿಂದ ಹೆದ್ದಾರಿಯ ಎರಡು ಕಡೆ ರಾತ್ರಿಯವರೆಗೂ ವಾಹನಗಳ ದೊಡ್ಡ ಸಾಲು ನಿರ್ಮಾಣವಾಯಿತು. ಕೆಲವು ಗಂಟೆಗಳ ಬಳಿಕ ವಾಹನಗಳು ಸುತ್ತ ಮುತ್ತಲಿನ ಹಳ್ಳಿಗಳ ಮೂಲಕ ಸಂಚರಿಸಿದವು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.