ಅಡುಗೆ ಅನಿಲ: ಪರದಾಟ

7

ಅಡುಗೆ ಅನಿಲ: ಪರದಾಟ

Published:
Updated:

ಮದ್ದೂರು: ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಪರಿಣಾಮ ಸಾವಿರಕ್ಕೂ ಹೆಚ್ಚು ಜನರು ಸಿಲಿಂಡರ್‌ಗಾಗಿ ಸರದಿ ಸಾಲಿನಲ್ಲಿ ನಿಂತು ಗ್ಯಾಸ್ ಏಜೆನ್ಸಿ ಮಾಲೀಕರ ವಿರುದ್ಧ ಶನಿವಾರ ಆಕ್ರೋಶ ವ್ಯಕ್ತಪಡಿಸಿದರು.ಶುಕ್ರವಾರ ರಾತ್ರಿಯಿಂದ ತಮ್ಮ ಸಿಲಿಂಡರ್‌ಗಳೊಂದಿಗೆ ಸರತಿ ಸಾಲಿನಲ್ಲಿ ನಿಂತ ಸಾವಿರಕ್ಕೂ ಹೆಚ್ಚು ಜನರು ಗ್ಯಾಸ್ ಏಜೆನ್ಸಿ ವಿರುದ್ಧ ಧಿಕ್ಕಾರ ಮೊಳಗಿಸಿದರು. ಕಳೆದ ಒಂದು ವಾರದಿಂದ ಸಿಲಿಂಡರ್ ಪೂರೈಕೆ ಮಾಡುವಲ್ಲಿ ಶ್ರೀವೆಂಕಟೇಶ್ವರ ಇಂಡೇನ್ ಗ್ಯಾಸ್ ಏಜೆನ್ಸಿ ಗ್ರಾಹಕರನ್ನು ಸತಾಯಿಸುತ್ತಿದೆ. ಪ್ರತಿನಿತ್ಯ ಕೆಲವು ಗ್ರಾಹಕರಿಗೆ ವಿತರಿಸಿ ಇನ್ನುಳಿದ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿಕೊಂಡು ಜನರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಸರತಿ ಸಾಲಿನಲ್ಲಿದ್ದ ಗ್ರಾಹಕರು ಆರೋಪಿಸಿದರು.ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಏಜೆನ್ಸಿ ಮಾಲೀಕ ಚಂದ್ರಶೇಖರ್, ಗ್ರಾಹಕರನ್ನು ಸಮಾಧಾನಪಡಿಸಿದರು. ಕಳೆದ ಒಂದು ವಾರದ ಹಿಂದೆ ಗ್ಯಾಸ್ ಫಿಲ್ಲಿಂಗ್ ಸೆಂಟರ್‌ನಲ್ಲಿ ಕಾರ್ಮಿಕರ ಮುಷ್ಕರ ನಡೆದಿದ್ದರಿಂದ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಶಕ್ತಿ ಮೀರಿ ಸಿಲಿಂಡರ್ ಪೂರೈಸಲು ಪ್ರಯತ್ನಿಸುತ್ತಿದ್ದೇವೆ.ದಿನಕ್ಕೆ ಕೇವಲ ಒಂದು ಲೋಡ್ ಮಾತ್ರ ಸಿಲಿಂಡರ್ ಬರುತ್ತಿದ್ದು, ಇನ್ನೆರಡು ದಿನದೊಳಗೆ ಸಮಸ್ಯೆ ಬಗೆ ಹರಿಯಲಿದೆ ಎಂದರು. ಶನಿವಾರ ಕೇವಲ 500 ಮಂದಿಗೆ ಸಿಲಿಂಡರ್ ಸಿಕ್ಕಿದೆ. ಜನರು ಸರತಿ ಸಾಲಿನಲ್ಲಿ ನಿಲ್ಲುವುದು ಮುಂದುವರಿದಿದ್ದು,  ಅವ್ಯವಸ್ಥೆ ವಿರುದ್ಧ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry