ಅಡ್ಡಗೋಡೆ ಕೆಡವಿದ ರೈತರು

7

ಅಡ್ಡಗೋಡೆ ಕೆಡವಿದ ರೈತರು

Published:
Updated:

ಸಿಂದಗಿ: ಮಳೆಯಿಲ್ಲದೇ ಕಂಗಾಲಾದ ರೈತರು ತಮ್ಮ ಬೆಳೆಗಳಿಗೆ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆ ಮೂಲಕ ಹರಿದು ಬರಬೇಕಿದ್ದ ನೀರು ಬಾರದೇ ಇದ್ದ ಕಾರಣ ಆಕ್ರೋಶಗೊಂಡು ಮುಖ್ಯ ಕಾಲುವೆಯಲ್ಲಿ ಕಟ್ಟಿದ್ದ ಅಡ್ಡಗೋಡೆಯನ್ನು ಗುರುವಾರ ಕೆಡವಿದ ಘಟನೆ ಸಿಂದಗಿ ಬಳಿ ನಡೆದಿದೆ.ಓತಿಹಾಳಿ, ಕನ್ನೊಳ್ಳಿ ಭಾಗದ ನೂರಾರು ರೈತರು, ಕಾಲುವೆಗೆ ಅಡ್ಡಗೋಡೆ ಕಟ್ಟಿ ಅಕ್ರಮವಾಗಿ ನೀರು ಪಡೆದುಕೊಳ್ಳುತ್ತಿರುವುದನ್ನು ಪತ್ತೆ ಹಚ್ಚಿ ಅಂಥ ಗೋಡೆಗಳನ್ನು ಗುರುವಾರ ಕೆಡವಿದರು.ಬಂದಾಳ, ಗಣಿಹಾರ, ಮನ್ನಾಪೂರ, ಸಿಂದಗಿ ಬಳಿ ಕಾಲುವೆಗೆ ಅಡ್ಡಗೋಡೆ ಕಟ್ಟಲಾಗಿತ್ತು. ಗಣಿಹಾರ, ಬಂದಾಳ ಗ್ರಾಮದ ಮಹಿಳೆಯರಾದಿಯಾಗಿ ರೈತರು, ಕನ್ನೊಳ್ಳಿ, ಓತಿಹಾಳ ರೈತರಿಗೆ ಅಡ್ಡಿಪಡಿಸಿ, ಮೊದಲಿಗೆ ಸಿಂದಗಿ ಬಳಿ ಮಾಜಿ ಶಾಸಕ ಶರಣಪ್ಪ ಸುಣಗಾರ ನೇತೃತ್ವದಲ್ಲಿ ಕಾಲುವೆಗೆ ದೊಡ್ಡ ಪ್ರಮಾಣದಲ್ಲಿ ಕಟ್ಟಿರುವ ಅಡ್ಡಗೋಡೆ ಕೆಡವಬೇಕು ಎಂದು ಒತ್ತಾಯಿಸಿದರು ಎನ್ನಲಾಗಿದೆ. ಆಗ ತಕ್ಷಣವೇ ರೈತರು ಸಿಂದಗಿ ಬಳಿ ಬಂದು ಕಾಲುವೆಗೆ ಅಡ್ಡಲಾಗಿ ಕಟ್ಟಲಾಗಿದ್ದ ಗೋಡೆ ಕೆಡುವಿ ದೊಡ್ಡ, ದೊಡ್ಡ ಕಲ್ಲುಗಳನ್ನು ನೀರಿಗೆ ತಳ್ಳಿದರು.ಮಾಜಿ ಶಾಸಕರು ತಮ್ಮ ತೋಟದ ಹತ್ತಿರ ಕಾಲುವೆಗೆ ಅಕ್ರಮವಾಗಿ ಅಡ್ಡಗೋಡೆ ಕಟ್ಟಿ ಈ ನೀರನ್ನು ಅನ್ಯ ರೈತರಿಗೂ ಬಳಸಲು ಅವಕಾಶ ನೀಡದೇ ತಮ್ಮ ತೋಟದ ಬಾವಿಯಲ್ಲಿ ಸಂಗ್ರಹಿಸಿಕೊಳ್ಳುತ್ತಿರುವುದು ನಾಚಿಕೆಗೇಡು ವಿಷಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಕಾಲುವೆ ನೀರು ದುರ್ಬಳಕೆಯಾಗುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದರೂ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಅಕ್ರಮ ನೀರು ಬಳಕೆಯನ್ನು ತಡೆಯದಿದ್ದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry