ಗುರುವಾರ , ಮೇ 13, 2021
24 °C

ಅಡ್ಡದಾರಿಯ ಸಂಪಾದನೆ ಅವಮಾನಕ್ಕೆ ದಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಕಾಯಕವೇ ಕೈಲಾಸ~ ಎನ್ನುವ ಮಾತು ಸತ್ಯವಾದರೂ ಅದಕ್ಕೆ ತಕ್ಕ ನಡಾವಳಿಕೆ ತುಂಬಾ ಕಡಿಮೆ. ಬಹುಜನರು ಭಾವಿಸಿರುವುದು  `ಕಾಸಿದ್ದರೆ ಕೈಲಾಸ~ ಎಂದು. ಈ ಲೋಕದಲ್ಲಿ ತಪ್ಪು ಮಾಡಿದವರು ಸತ್ತನಂತರ ನರಕಕ್ಕೆ ಹೋಗುವರು. ಅಲ್ಲಿ ಚಿತ್ರ ವಿಚಿತ್ರ ಯಾತನೆಯನ್ನು ಯಮ ಕೊಡುವನು ಎನ್ನುವ ನಂಬಿಗೆ ಪರಂಪರಾಗ ತವಾಗಿ ಬೆಳೆದು ಬಂದಿದೆ.ಅದೇ ರೀತಿ ಈ ಲೋಕದಲ್ಲಿ ಪುಣ್ಯದ ಕಾರ್ಯಗಳನ್ನು ಮಾಡಿದ ವರು ಸತ್ತನಂತರ ನೇರವಾಗಿ ಕೈಲಾಸಕ್ಕೆ ಹೋಗು ವರು. ಅಲ್ಲಿ ಶಿವ-ಪಾರ್ವತಿಯರು ಅವರನ್ನು ಆದರದಿಂದ ಸ್ವಾಗತಿಸಿ ಸತ್ಕರಿಸುವರು ಎನ್ನುವ ಭಾವನೆ ಇದೆ.ಶರಣರು ಇಂಥ ಕಾಲ್ಪನಿಕ, ಪೌರಾಣಿಕ ನರಕ, ಕೈಲಾಸಗಳಿಗೆ ಮನ್ನಣೆ ನೀಡಿದವರಲ್ಲ. ಅವರ ದೃಷ್ಟಿಯಲ್ಲಿ ನರಕ ಮತ್ತು ಕೈಲಾಸ ಎ್ಲ್ಲಲೂ   ಇಲ್ಲ. ಅವಿರುವುದು ನಾವು ಬದುಕಿರುವ ಲೋಕದಲ್ಲೇ. ಯಾರು ಸಾತ್ವಿಕರಾಗಿ ಸರ್ವರ ಒಳಿತಿಗಾಗಿ ಶ್ರಮಿಸುವರೋ ಅವರು ಕೈಲಾಸ ಅಂದರೆ ಸಂತೋಷ ಅನುಭವಿಸುವರು.

ಇದಕ್ಕೆ ಬದಲಾಗಿ ಹೀನಾತಿ ಹೀನ ಕೆಲಸ ಮಾಡುತ್ತ ಲೋಕಕಂಠಕ ರಾಗಿರುವವರು ಇಲ್ಲಿಯೇ ನೋವು, ಸಂಕಟ ಅನು ಭವಿಸುವರು. ಅದೇ ನರಕ ಎನ್ನುವುದು ಶರಣರ ದೃಢ ನಿಲವು. ಸಂತೋಷವೇ ಸ್ವರ್ಗ, ಸಂಕಟವೇ ನರಕ.ಹಣ, ಸಂಪತ್ತು ಯಾರಿಗೆ ಬೇಡ? ಅದು ಎಲ್ಲರಿಗೂ ಬೇಕು. ಆದರೆ ಅದನ್ನು ಯಾವ ಮಾರ್ಗದಲ್ಲಿ ಎಷ್ಟು ಗಳಿಸಬೇಕು ಎನ್ನುವ ವಿವೇಕ ಮುಖ್ಯವಾದುದು. ಎಷ್ಟೋ ಜನರು ಕಾನೂನಿನ ಕಣ್ಮುಚ್ಚಿ, ನೈತಿಕತೆಯನ್ನು ಗಾಳಿಗೆ ತೂರಿ, ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ರಾಶಿ ರಾಶಿ ಹಣ ಕೂಡಿಡುವರು. ಅದೇ ತಮ್ಮ ವೈಭವದ ಜೀವನಕ್ಕೆ ತಳಹದಿ ಎಂದು ಭಾವಿಸಿ ಏನೇಲ್ಲಾ ಭೋಗ ಸಾಮಗ್ರಿಗಳನ್ನು ಕೊಂಡು ಅನುಭವಿಸುವರು.

 

ಅದೇ ಕೈಲಾಸವೆಂದು ಭಾವಿಸುವರು. ಆದರೆ ಅದೇ ಮುಂದೊಂದು ದಿನ ತಮಗೆ ಶೂಲವಾಗುವುದು ಎನ್ನುವ ಪರಿಜ್ಞಾನ ಅವರಿಗಿರುವುದಿಲ್ಲ.ಕೆಲವರು ಹೇಳುವ ಹಾಗೆ  `ಹಣ ಬುದ್ಧಿ ವಂತರ ಸೇವಕ, ದಡ್ಡರ ಯಜಮಾನ~. ಹೌದು ಬುದ್ಧಿವಂತರಾದವರು ಹಣವನ್ನು ಕೂಡಿಡು ವುದಕ್ಕಿಂತ ಅದನ್ನು ವಿನಿಯೋಗಿಸಿ ಒಳಿತಿನ ಕಾರ್ಯ ಮಾಡುವರು.ಆ ಹಣ ತಮ್ಮ ಮೇಲೆ ಯಜಮಾನಿಕೆ ಸಾಧಿಸಲು ಬಿಡದೆ ತಾವೇ ಅದನ್ನು ತಮ್ಮ ಗುಲಾಮನನ್ನಾಗಿಸಿಕೊಂಡು ಸತ್ಕಾರ್ಯ ಗಳಿಗೆ ಸದ್ಬಳಕೆ ಮಾಡುವರು. ತೀರಾ ಬುದ್ಧಿವಂತ ರೆನ್ನುವ ದಡ್ಡರು ಹಣವನ್ನು ಸೇವಕನನ್ನಾಗಿ ಮಾಡಿಕೊಳ್ಳದೆ ಅದಕ್ಕೆ ತಾವೇ ಸೇವಕರಾಗಿ ತಮ್ಮ ಸ್ವಂತಿಕೆಯನ್ನೇ ಕಳೆದುಕೊಂಡು ದುಃಖ ಅನುಭವಿಸುವರು.ಧನದ ದಾಹ ಹೆಚ್ಚಾದಾಗ ಸತ್ಯದ ಮೇಲೆ ಸವಾರಿ ಮಾಡುವರು. ಯಾರಾದರೂ ನ್ಯಾಯ ನಿಷ್ಠುರತೆಯ ಮಾತನಾಡಿದರೆ ಅದು ಅವರಿಗೆ ಹಿಡಿಸದು. ಆ ಮಾತುಗಳು ಕಹಿಯಾಗಿ ಹಿತೋಕ್ತಿ ಹೇಳಿದವರನ್ನೇ ವೈರಿಗಳೆಂದು ಭಾವಿಸಿ ಅವರ ದಮನ ಮಾಡಲು ತಮ್ಮ ಹಣವನ್ನೇ ಬಳಕೆ ಮಾಡಿಕೊಳ್ಳುವರು.

 

ಆದರೆ ಮುಂದೊಂದು ದಿನ ತಾವೇ ದಂಡನೆಗೆ ಗುರಿಯಾಗಬಹುದು ಎನ್ನುವ ಸತ್ಯವನ್ನು ಮರೆಯುವರು. ಯಾರೇ ಆಗಲಿ ತಾವು ಮಾಡುವ ಒಳಿತಿನ ಕಾರ್ಯದಲ್ಲಿ ತೃಪ್ತಿಯನ್ನು ಅನುಭವಿಸಬೇಕು. ಅದರಿಂದ ಇತರರಿಗೂ ತೃಪ್ತಿಯಾಗಬೇಕು. ಒಬ್ಬರಿಗೆ ಒಳಿತು ಬಯಸಲು ಹಣವೇ ಬೇಕೆಂದಿಲ್ಲ.ಗಾಂಧಿಜಿಯವರು ಸ್ವಾತಂತ್ರ್ಯ ಹೋರಾಟ ಮಾಡುವಾಗ ಕೈಯಲ್ಲಿ ಕಾಸಿರಲಿಲ್ಲ. ಆತ್ಮ ಬಲವಿತ್ತು. ಭಾರತದಿಂದ ಬ್ರಿಟಿಷರನ್ನು ಹೊಡೆ ದೋಡಿಸಬೇಕೆಂಬ ಸಂಕಲ್ಪವಿತ್ತು. ಭಾರತ ಮಾತೆ ಯನ್ನು ಬಂಧಮುಕ್ತಗೊಳಿಸುತ್ತೇನೆ ಎನ್ನುವ ಛಲವಿತ್ತು. ಅದು ಕಾರಣವಾಗಿಯೇ ಅವರಿಗೆ ಹಣ ಮುಖ್ಯವಾಗದೆ ಆದರ್ಶ ಮುಖ್ಯ ಅಸ್ತ್ರ ವಾಗಿತ್ತು.ಬಹಳ ಹಿಂದಿನ ಮಾತೇಕೆ; ಮೊನ್ನೆ ಮೊನ್ನೆ ಅಣ್ಣಾ ಹಜಾರೆಯವರು ಜನಲೋಕ ಪಾಲ ಮಸೂದೆಯ ವಿಷಯವಾಗಿ ಉಪವಾಸ ಸತ್ಯಾಗ್ರಹ ಮಾಡಿದಾಗ ಅವರಲ್ಲಿ ಬಾಬಾ ರಾಮ ದೇವ ಅವರಲ್ಲಿದ್ದಂತೆ ಹಣವಿರಲಿಲ್ಲ, ಮನೋಬಲವಿತ್ತು. ಅದೇ ಅವರಿಗೆ ದೊಡ್ಡ ಆಸ್ತಿ. ನಿಜಕ್ಕೂ ಇವತ್ತು ಬೇಕಾಗಿರುವುದು ಇಂಥ ಆಸ್ತಿಯೇ.ಪ್ರತಿಯೊಬ್ಬ ವ್ಯಕ್ತಿಯೂ ರಾತ್ರಿ ಮಲಗುವ ಮುನ್ನ ನಾನು ಇಂದು ಎಷ್ಟು ಒಳಿತಿನ ಕೆಲಸ ಮಾಡಿದ್ದೇನೆ, ಎಷ್ಟು ಪಾಪದ ಕೆಲಸ ಮಾಡಿದ್ದೇನೆ ಎಂದು ಕ್ಷಣಕಾಲ ಚಿಂತನೆ ಮಾಡಬೇಕು. ಅಂತೆಯೇ ಬೆಳಗ್ಗೆ ಏಳುವಾಗ ಇಂದಿನ ದಿನವನ್ನು ಸತ್ಕಾರ್ಯಗಳಲ್ಲೇ ಸಾರ್ಥಕಪಡಿಸಿಕೊಳ್ಳುತ್ತೇನೆ ಎನ್ನುವ ಸಂಕಲ್ಪ ಮಾಡಬೇಕು.`ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದು~ ಎನ್ನುವ ಮಾತಿಗೆ ಅನುಗುಣವಾಗಿ ಗಳಿಕೆ ಸಹ ಪ್ರಾಮಾಣಿಕ ದುಡಿಮೆಯಿಂದ ಬಂದುದಾಗಿರಬೇಕು. ಆಗಲೇ ಬದುಕಿನ ಸ್ವಾರಸ್ಯ ಅನುಭವಿಸಲು ಸಾಧ್ಯ. ಎಷ್ಟೋ ಜನರು ಇತರರ ಪ್ರಗತಿಯನ್ನು ಕಂಡು ಮತ್ಸರಿಸುವರು.

ಹಾಗೆ ಮತ್ಸರಿಸದೆ ತಾವು ಪರಿಶ್ರಮದಿಂದ, ಪ್ರಾಮಾಣಿಕ ದುಡಿಮೆಯಿಂದ ಮೇಲೆ ಬಂದೇ ಬರುತ್ತೇವೆ ಎನ್ನುವ ಭಾವನೆ ಬೆಳೆಸಿಕೊಂಡರೆ ಆ ವ್ಯಕ್ತಿ ಬದುಕಿನಲ್ಲಿ ನೆಮ್ಮದಿ ಕಂಡುಕೊಳ್ಳಲು ಸಾಧ್ಯ. ಅದನ್ನು ಬಿಟ್ಟು ಮತ್ಸರ ಮನೋಭಾವನೆ ಬೆಳಸಿಕೊಂಡು ವಾಮ ಮಾರ್ಗದಿಂದ ಸಂಪಾದನೆ ಮಾಡಲಾರಂಭಿಸಿದರೆ ಅದೇ ಹಾವಾಗಿ ಕಚ್ಚುವುದು.ನೆಮ್ಮದಿಯನ್ನು ಕಿತ್ತುಕೊಳ್ಳುವುದು. ಅಯ್ಯೋ ಹೀಗಾಯ್ತಲ್ಲ ಎಂದು ಕೊನೆಗಾಲದಲ್ಲಿ ಕೊರಗಿದರೆ ಪ್ರಯೋಜ ನವಿಲ್ಲ. ಅದಕ್ಕೆ ಬದಲು ಉತ್ತಮರ ಸಂಗವನ್ನು ಬೆಳೆಸಿಕೊಂಡು, ಕಾಯಕ ಶ್ರದ್ಧೆಯ ಮೂಲಕ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳಬೇಕು.ದೇವರು ಪ್ರತಿಯೊಬ್ಬರಿಗೂ ದೇಹ, ಮನಸ್ಸು, ಬುದ್ಧಿಯನ್ನು ಕರುಣಿಸಿದ್ದಾನೆ. ಅವುಗಳ ಮೂಲಕ ವ್ಯಕ್ತಿ ಬೆಳೆಯಬೇಕು. ಬೆಳೆಯುವ ಆತುರದಲ್ಲಿ ಇತರರ ಬೆಳವಣಿಗೆಗೆ ಕಲ್ಲು ಹಾಕಬಾರದು. ತಾನೂ ಬದುಕಿ ಇತರರನ್ನೂ ಬದುಕಿಸುವುದೇ ಬದುಕಿನ ಪರಮೋದ್ದೆೀಶ.ಇಂಥ ಉದ್ದೆೀಶ ಇಟ್ಟುಕೊಂಡು ಹೆಜ್ಜೆ ಹಾಕುವವರು ತಾತ್ಕಾಲಿ ಕವಾಗಿ ನೋವು ಅನುಭವಿಸಬಹುದು. ಇತರರ ಹಾಗೆ ಆರ್ಥಿಕವಾಗಿ ಸಬಲರಾಗದಿರಬಹುದು. ದೊಡ್ಡ ದೊಡ್ಡ ಮನೆ ಕಟ್ಟಲಾಗದಿರಬಹುದು. ಐಷಾ ರಾಮಿ ವಾಹನಗಳನ್ನು ಕೊಳ್ಳಲು ಸಾಧ್ಯವಾಗದಿರಬಹುದು.ಆದರೆ ಅವರೆಂದೂ ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿದುಕೊಳ್ಳುವುದಿಲ್ಲ, ಬಳಿಸಿಕೊಳ್ಳುವುದಿಲ್ಲ. ಅಪಹಾಸ್ಯಕ್ಕೆ ಗುರಿಯಾಗುವುದಿಲ್ಲ. ಕಾಲಕ್ರಮೇಣ ಎಲ್ಲರ ಪ್ರೀತಿ, ಗೌರವಕ್ಕೆ ಅರ್ಹರಾಗುವರು. ಸತ್ತ ಮೇಲೂ ಬದುಕುಳಿಯುವರು. ಅದಕ್ಕೆ ಕಾರಣವಾದದ್ದು ಅವರ ಸರಳತೆ, ಪ್ರಾಮಾಣಿಕತೆ, ವಿನಯ, ವಿವೇಕ, ಜನಪರ ಕಾಳಜಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.